- ಫೆಮಾ ಕಾಯ್ದೆಯ ನಾನಾ ಸೆಕ್ಷನ್ ಅಡಿ ಹೊಸ ಪ್ರಕರಣದಲ್ಲಿ ಟೀನಾ ಅಂಬಾನಿ ವಿಚಾರಣೆ
- ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದ ಇಡಿ ಕಚೇರಿಗೆ ಹಾಜರಾಗಿದ್ದ ಅನಿಲ್ ಅಂಬಾನಿ
ಭಾರತದ ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಸಹೋದರ ಅನಿಲ್ ಅಂಬಾನಿ ಅವರ ಪತ್ನಿ ಟೀನಾ ಅಂಬಾನಿ ಮಂಗಳವಾರ (ಜುಲೈ 4) ಜಾರಿ ನಿರ್ದೇಶನಾಲಯದ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ.
ಮಾಜಿ ಸಿನಿಮಾ ನಟಿಯೂ ಆದ ಟೀನಾ ಅವರು 1999 ರ ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಅಡಿಯಲ್ಲಿ ದಾಖಲಾಗಿರುವ ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣದಲ್ಲಿ ಇಡಿ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.
ಪತಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ಸಹ ಸೋಮವಾರ (ಜುಲೈ 3) ಪ್ರಕರಣ ಸಂಬಂಧ ಇಡಿ ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು. ಈಗ ಟೀನಾ ಅಂಬಾನಿ ಅವರು ವಿಚಾರಣೆಗೆ ಹಾಜರಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಮುಂಬೈನ ಬಲ್ಲಾರ್ಡ್ ಎಸ್ಟೇಟ್ ಪ್ರದೇಶದಲ್ಲಿರುವ ಇಡಿ ಕಚೇರಿಯಲ್ಲಿ 64 ವರ್ಷದ ಅನಿಲ್ ಅಂಬಾನಿ ವಿಚಾರಣೆ ನಡೆಸಲಾಗಿತ್ತು. ಫೆಮಾ ಕಾಯ್ದೆಯ ನಾನಾ ಸೆಕ್ಷನ್ ಅಡಿ ಹೊಸ ಪ್ರಕರಣವೊಂದು ದಾಖಲಾಗಿದ್ದು ಅದರ ಸಂಬಂಧ ಅಂಬಾನಿ ವಿಚಾರಣೆ ನಡೆದಿದೆ ಎಂದು ವರದಿಯಾಗಿದೆ.
ಯೆಸ್ ಬ್ಯಾಂಕ್ ಪ್ರವರ್ತಕ ರಾಣಾ ಕಪೂರ್ ಮತ್ತಿತರರ ವಿರುದ್ಧದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ 2020ರಲ್ಲಿ ಅನಿಲ್ ಅಂಬಾನಿ ಅವರನ್ನು ಇಡಿ ವಿಚಾರಣೆ ನಡೆಸಿತ್ತು.
2022ರ ಆಗಸ್ಟ್ ತಿಂಗಳಲ್ಲಿ ಅನಿಲ್ ಅಂಬಾನಿಗೆ ಆದಾಯ ತೆರಿಗೆ ಇಲಾಖೆ (ಐಟಿ) ನೋಟಿಸ್ ನೀಡಿತ್ತು. ಅಂಬಾನಿ ಹೊಂದಿರುವ ಎರಡು ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿರುವ ಹಣದ ಪೈಕಿ ₹814 ಕೋಟಿಗೂ ಹೆಚ್ಚು ಹಣದ ಮೂಲ ಮರೆಮಾಚಲಾಗಿದೆ. ಈ ಸಂಬಂಧ ₹420 ಕೋಟಿ ತೆರಿಗೆ ವಂಚನೆ ಆಗಿದೆ ಎಂದು ಆರೋಪಿಸಿ ಐಟಿ ಇಲಾಖೆ ಅನಿಲ್ ಅಂಬಾನಿಗೆ ಶೋಕಾಸ್ ನೋಟಿಸ್ ನೀಡಿತ್ತು.
ಆದರೆ 2023ರ ಮಾರ್ಚ್ ತಿಂಗಳಲ್ಲಿ ಐಟಿ ಇಲಾಖೆಯ ನೋಟಿಸ್‌ಗೆ ತಾತ್ಕಾಲಿಕ ತಡೆ ನೀಡಿತ್ತು.
ಈ ಸುದ್ದಿ ಓದಿದ್ದೀರಾ? ಜಮ್ಮು ಕಾಶ್ಮೀರ| ಜುಲೈ 11ರಂದು ವಿಶೇಷ ಸ್ಥಾನಮಾನ ರದ್ದು ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ
ಈಗ ವಿದೇಶ ವಿನಿಮಯ ನಿಯಮಗಳ ಉಲ್ಲಂಘನೆಯ ಆರೋಪಗಳಿರುವ ಹೊಸ ಪ್ರಕರಣವೊಂದು ದಾಖಲಾಗಿದ್ದು, ಆ ಸಂಬಂಧ ಅನಿಲ್ ಅಂಬಾನಿ ವಿಚಾರಣೆ ನಡೆಸಲಾಗುತ್ತಿದೆ. ಈ ಮಧ್ಯೆ ಟೀನಾ ಅಂಬಾನಿ ವಿಚಾರಣೆ ನಡೆಯುತ್ತಿದೆ.
ವಿಶ್ವದ ಆರನೇ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದ ಅನಿಲ್ ಅಂಬಾನಿಯ ಶ್ರೀಮಂತಿಕೆ ಈಗ ಕರಗಿದೆ. ಸದ್ಯ ರಿಲಾಯನ್ಸ್ ಕ್ಯಾಪಿಟಲ್, ರಿಲಾಯನ್ಸ್ ಇನ್ಫ್ರಾಸ್ಟ್ರಕ್ಚರ್, ರಿಲಾಯನ್ಸ್ ಪವರ್, ರಿಲಾಯನ್ಸ್ ಕಮ್ಯೂನಿಕೇಶನ್ಸ್ ಇತ್ಯಾದಿ ಕಂಪನಿಗಳನ್ನು ಒಳಗೊಂಡಿರುವ ರಿಲಾಯನ್ಸ್ ಎಡಿಎ ಗ್ರೂಪ್ ನ ಅಧ್ಯಕ್ಷ ಆಗಿದ್ದಾರೆ.