ಭಾಲ್ಕಿ ತಾಲ್ಲೂಕಿನ ಖುದವಂತಪೂರ ಗ್ರಾಮದಲ್ಲಿ ಏ.29ರಂದು ನಡೆದ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ಹಮ್ಮಿಕೊಂಡಿದ್ದ ಮೆರವಣಿಗೆ ವೇಳೆ ಗಲಾಟೆ ಮಾಡಿ, ಹಲ್ಲೆಮಾಡಿ, ಜಾತಿನಿಂದನೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ ಹತ್ತು ಜನರ ವಿರುದ್ಧ ಬುಧವಾರ (ಏ.30) ಮೆಹಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾರ್ವಜನಿಕ ಮೆರವಣಿಗೆ ವೇಳೆ ಕಲ್ಲು ತೂರಾಟ, ಹೊಡೆದಾಟ, ಜಾತಿನಿಂದನೆ ಮತ್ತು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಅನಿತಾ ದತ್ತಾತ್ರಿ ಭಾಲ್ಕೆ ಎಂಬುವವರು ನೀಡಿದ ದೂರಿನ್ವಯ ಮೇಹಕರ್ ಪೊಲೀಸ್ ಠಾಣೆಯಲ್ಲಿ 10 ಜನರ ವಿರುದ್ಧ ಜಾತಿನಿಂದನೆ ಸೇರಿದಂತೆ ವಿವಿಧ ಪ್ರಕರಣಗಳು ಬುಧವಾರ ದಾಖಲಾಗಿವೆ.
ಘಟನೆ ವಿವರ: ಏ.29ರಂದು ಜಯಂತಿ ಸಮಿತಿಯಿಂದ ಡಾ.ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ವೇಳೆ ರಾತ್ರಿ 9 ಗಂಟೆ ಸುಮಾರಿಗೆ ಕಲ್ಲು ತೂರಾಟ ನಡೆಸಿ ಅಡ್ಡಿಪಡಿಸಿದ್ದಾರೆ. ಸ್ಥಳದಲ್ಲಿದ್ದ ಪೊಲೀಸರು ಸಾಂತ್ವನ ಪಡಿಸಿದರು. ಮರುದಿನ ಬೆಉ (ಏ.30) ರಂದು ಅದೇ ಕೋಪದಿಂದ ಪುನಃ ನನಗೆ ಹಾಗೂ ನನ್ನ ಗಂಡನಿಗೆ ಅವಾಚ್ಯ ಶಬ್ದಗಳಿಂದ ಬೈದು, ಹಲ್ಲೆ ಮಾಡಿದ್ದಾರೆ ಎಂದು ಅನಿತಾ ದತ್ತಾತ್ರಿ ದೂರಿನಲ್ಲಿ ಆರೋಪಿಸಿದ್ದಾರೆ.