ಸ್ನೇಹಿತರೊಂದಿಗೆ 10 ಸಾವಿರ ರೂ.ಗಳಿಗೆ 5 ಬಾಟಲ್ ಮದ್ಯ ಕುಡಿಯುವ ಪಂದ್ಯ ಕಟ್ಟಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಕೋಲಾರದ ಮುಳಬಾಗಿಲಿನಲ್ಲಿ ನಡೆದಿದೆ.
21 ವರ್ಷದ ಕಾರ್ತಿಕ್ ಮೃತಪಟ್ಟ ಯುವಕ. ಈತ ಸುಬ್ರಮಣಿ, ವೆಂಕಟ ರೆಡ್ಡಿ ಸೇರಿ ಇನ್ನೂ ಮೂವರೊಂದಿಗೆ ನೀರು ಬೆರಸದೆ 5 ಬಾಟಲ್ ಮದ್ಯ ಕುಡಿಯುವ ಪಂದ್ಯ ಕಟ್ಟಿದ್ದ. ವೆಂಕಟ ರೆಡ್ಡಿ ಎಂಬಾತ ನೀನು ನೀರಿಲ್ಲದೆ 5 ಬಾಟಲ್ ಮದ್ಯ ಸೇವಿಸಿದರೆ 10 ಸಾವಿರ ರೂ. ನೀಡುವುದಾಗಿ ತಿಳಿಸಿದ್ದ. ಕಾರ್ತಿಕ್ 5 ಬಾಟಲ್ ಮದ್ಯ ಸೇವಿಸಿದ ನಂತರ ತೀವ್ರ ಅಸ್ವಸ್ಥನಾಗಿದ್ದಾನೆ.
ನಂತರ ಆತನನ್ನು ಮುಳಬಾಗಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಚಿಕಿತ್ಸೆ ನೀಡುವ ಸಂದರ್ಭದಲ್ಲಿ ಕಾರ್ತಿಕ್ ಮೃತಪಟ್ಟಿದ್ದಾನೆ. ಕಾರ್ತಿಕ್ ಒಂದು ವರ್ಷದ ಹಿಂದಷ್ಟೆ ಮದುವೆಯಾಗಿದ್ದ. ಈತನ ಪತ್ನಿ 8 ದಿನಗಳ ಹಿಂದಷ್ಟೆ ಮಗುವಿಗೆ ಜನ್ಮ ನೀಡಿದ್ದರು.
ನಂಗಲಿ ಠಾಣೆ ಪೊಲೀಸರು ವೆಂಕಟ ರೆಡ್ಡಿ, ಸುಬ್ರಮಣಿ ಸೇರಿ 6 ಮಂದಿ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಉಳಿದವರಿಗಾಗಿ ಶೋಧ ನಡೆಸಲಾಗಿದೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಮರ್ಯಾದೆಗೇಡು ಹತ್ಯೆಗಳು ನಿಲ್ಲಬೇಕಿದ್ದರೆ ಜಾತಿವಿನಾಶ ಆಗಲೇಬೇಕು
ವಿಶ್ವ ಆರೋಗ್ಯ ಸಂಸ್ಥೆ ವರದಿಯ ಪ್ರಕಾರ ಪ್ರತಿ ವರ್ಷ ಜಗತ್ತಿನಾದ್ಯಂತ ಮದ್ಯಪಾನ ಸೇವಿಸಿ 26 ಲಕ್ಷ ಮೃತಪಡುತ್ತಿದ್ದಾರೆ. ಇದು ಶೇಕಡಾವಾರು 4.7 ರಷ್ಟಿದೆ.
ಮದ್ಯಪಾನ ಸೇವಿಸುವುದರಿಂದ ಆರೋಗ್ಯಕ್ಕೆ ಉಪಯುಕ್ತ ಎಂದು ನಾವು ಹೇಳುವುದಿಲ್ಲ. ಇತ್ತೀಚಿನ ಹಲವು ವರದಿಗಳು ಇದನ್ನು ಬಹಿರಂಗಪಡಿಸಿವೆ. ನೀವು ಒಂದು ಹನಿ ಮದ್ಯಪಾನ ಸೇವಿಸಿದರೂ ನಿಮ್ಮ ಆರೋಗ್ಯಕ್ಕೆ ತೊಂದರೆ ಶುರುವಾಗುತ್ತದೆ. ಹೆಚ್ಚು ಕುಡಿದಷ್ಟು ನಿಮ್ಮ ಆರೋಗ್ಯಕ್ಕೆ ತೀವ್ರ ಹಾನಿಯಾಗುತ್ತದೆ ಅತಿಯಾದ ಮದ್ಯಪಾನದಿಂದ ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಯೂರೋಪಿನ ಘಟಕದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.