ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಡುಪು ಮೈದಾನದಲ್ಲಿ ಕೇರಳದ ಮುಸ್ಲಿಂ ಯುವಕನನ್ನು ಸುಮಾರು ಐವತ್ತರಷ್ಟಿದ್ದ ಕೋಮುವಾದಿ ಗುಂಪು ಹೊಡೆದು ಹತ್ಯೆಗೈದಿದ್ದ ಘಟನೆಗೆ ಸಂಬಂಧಿಸಿದಂತೆ ಗುರುವಾರ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಬಿ.ರಮಾನಾಥ ರೈ, “ದ.ಕ. ಜಿಲ್ಲೆಯ ಎಲ್ಲ ‘ಟಾರ್ಗೆಟೆಡ್ ಮರ್ಡರ್’ಗಳ ಬಗ್ಗೆ ಸರ್ಕಾರ ಎಸ್‌ಐಟಿ ರಚಿಸಿದರೆ ವಾಸ್ತವಾಂಶ ಬಯಲಾಗಲಿದೆ” ಎಂದು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಅಶ್ರಫ್ ಹತ್ಯೆಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದ್ದು ಕಾರಣ ಎಂದು ಗುಲ್ಲೆಬ್ಬಿಸಲಾಗಿದೆ. ಪಾಕಿಸ್ತಾನ್ ಜಿಂದಾಬಾದ್ ಹೇಳಿದ್ದನ್ನು ಕೇಳಿದವರು ಯಾರು? ಒಂದೋ ಹತ್ಯೆ ಮಾಡಿದವರು ಅಥವಾ ಅಲ್ಲಿದ್ದ ಸಾಕ್ಷಿದಾರರು. ಹಾಗಾಗಿ, ಈ ಪ್ರಕರಣದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು. ಹಾಗಾದಲ್ಲಿ ಮಾತ್ರ ತಪ್ಪಿತಸ್ಥರಿಗೆ ಶಿಕ್ಷೆಯಾಗಬಹುದು” ಎಂದು ಅಭಿಪ್ರಾಯಿಸಿದರು.
“ಕುಡುಪುವಿನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಯುವಕ ಮೃತಪಟ್ಟಿರುವ ಪ್ರಕರಣದ ತನಿಖೆಗೆ ವಿಶೇಷ ತನಿಖಾ ಸಂಸ್ಥೆ (ಎಸ್‌ಐಟಿ) ರಚಿಸಬೇಕು. ಹತ್ಯೆಯ ಹಿಂದೆ ಯಾರಿದ್ದಾರೆ ಎಂದು ಪತ್ತೆ ಹಚ್ಚಿ ಕ್ರಮ ಕೊಂಡರೆ ಅದು ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಶಾಶ್ವತ ಶಾಂತಿ ನೆಲೆಸಲು ನೆರವಾಗಲಿದೆ” ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್; ಇಲ್ಲಿ ಸರ್ಕಾರ ಜೀವಂತವಿದೆಯೇ?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಬ್‌ದಾಳಿ, ಚರ್ಚ್‌ದಾಳಿಗಳ ಫಲಿತಾಂಶ, ಪರಿಣಾಮ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಧರ್ಮಾಧಾರಿತ ರಾಜಕೀಯ ಹತ್ಯೆಗಳಿಗೆ ಎರಡೂ ಧರ್ಮಗಳ ಮತೀಯವಾದಿ ಶಕ್ತಿಗಳು ಕಾರಣ. ಕುಡುಪುವಿನಲ್ಲಿ ನಡೆದಿರುವುದು ಕೋಮು ಘರ್ಷಣೆ ಅಲ್ಲ. ‘ಟಾರ್ಗೆಟೆಡ್ ಕಿಲ್ಲಿಂಗ್’. ಇದು ಅತ್ಯಂತ ಅಪಾಯಕಾರಿಯಾಗಿದ್ದು, ಗುಂಪು ಹಲ್ಲೆ ಪ್ರಕರಣದ ಮೂಲಕ ಅದರ ಪ್ರಾರಂಭವಾಗಿದೆ. ಇದನ್ನು ಮೊಳಕೆಯಲ್ಲೇ ಚಿವುಟಬೇಕಾದ ಅನಿವಾರ್ಯತೆ ಇದೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಶೀಘ್ರದಲ್ಲೇ ಸಿಎಂ ಬಳಿಗೆ ನಿಯೋಗ ಹೋಗಿ ಒತ್ತಾಯಿಸುತ್ತೇವೆ ಎಂದು ರಮಾನಾಥ ರೈ ತಿಳಿಸಿದರು.