ದೇಶದಲ್ಲಿದ್ದುಕೊಂಡು ಪಾಕಿಸ್ತಾನಕ್ಕೆ ಜೈ ಎನ್ನುವವರನ್ನು ಗುಂಡಿಕ್ಕಿ ಕೊಲ್ಲಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಚ್ ವಿಶ್ವನಾಥ್ ಮೈಸೂರು ನಗರದಲ್ಲಿ ಹೇಳಿಕೆ ನೀಡಿದ್ದಾರೆ.
ಮೈಸೂರು ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ನಮ್ಮ ದೇಶದ ಅನ್ನ ತಿಂದು, ನೀರು ಕುಡಿದು ಶತ್ರು ರಾಷ್ಟ್ರಕ್ಕೆ ಜೈ ಎನ್ನುವ ದೇಶದ್ರೋಹಿಗಳಿಗೆ ಶಿಕ್ಷೆ ವಿಧಿಸಬೇಕೇ ಹೊರತು ಹಾಗೆಯೇ ಬಿಟ್ಟು ಕಳುಹಿಸಬಾರದು. ಸದ್ಯ ಯುದ್ಧದ ವಾತಾವರಣ ಇದ್ದು ಇಡೀ ದೇಶ ಪ್ರಧಾನಿ ನರೇಂದ್ರ ಮೋದಿ ಪರ ನಿಲ್ಲಬೇಕು” ಎಂದು ಹೇಳಿದರು.
“ಇದರ ಜತೆಗೆ ಕೇಂದ್ರ ಸರ್ಕಾರ ‘ಜನಗಣತಿಯೊಟ್ಟಿಗೆ ಜಾತಿಗಣತಿಯನ್ನೂ ನಡೆಸುವ ತೀರ್ಮಾನ ಕೈಗೊಂಡಿದ್ದು ಸ್ವಾಗತಾರ್ಹ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬೇಕಾದವರನ್ನು ಕೂರಿಸಿಕೊಂಡು ಗಣತಿ ಮಾಡಿಸಿದ್ದರಿಂದ ಎಡವಟ್ಟುಗಳು ಆಗಿವೆ. ಕಾಂತರಾಜ ಆಯೋಗದ ಮೂಲ ಪ್ರತಿಗಳು ಇಲ್ಲದೇ ಹೇಗೆ ಸಮೀಕ್ಷೆ ನಡೆಸಿದ್ದಾರೆ” ಎಂದು ಪ್ರಶ್ನಿಸಿದರು.
“ಸತ್ಯ ಹೇಳುವುದಾದರೆ ಜಾತಿಗಣತಿ ರಾಜಕೀಯ ಪ್ರೇರಿತವಾಗಿದೆ. ಸಮೀಕ್ಷೆ ನಡೆಸಿದ ತಂಡವು ಕೈಗೊಂಬೆಯಾಗಿ ನಡೆದುಕೊಂಡಿದೆ. ತಜ್ಞರಲ್ಲದ, ಅನುಭವ ಇರದ, ಅವೈಜ್ಞಾನಿಕ ಸಮೀಕ್ಷೆ ನಡೆಸಿ, ಇದೇ ಸರಿ ಎನ್ನುವ ಮಟ್ಟಕ್ಕೆ ಹೋಗಿದ್ದಾರೆ” ಎಂದು ಆರೋಪ ಮಾಡಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಖ್ಫ್ ತಿದ್ದುಪಡಿ ಕಾನೂನು ವಿರೋಧಿಸಿ ಮೇ. 3 ರಂದು ಬೃಹತ್ ಪ್ರತಿಭಟನೆ
“ರಾಜ್ಯದಲ್ಲಿ ಸರ್ಕಾರ ವಿಫಲವಾಗಿದ್ದು, ಯಾವುದೇ ವಿಚಾರಗಳಲ್ಲಿ ಪಕ್ವತೆ ಇರದೆ ಬೇಕಾಬಿಟ್ಟಿ ಕಾರ್ಯವೈಖರಿ ಮೂಲಕ ದುಂಡಾವರ್ತನೆಯಲ್ಲಿ ಮುಳುಗಿದೆ. ಜನಪರ ಕೆಲಸಗಳ ಕಡೆಗೆ, ಜನರ ಹಿತದ ಕಡೆಗೆ ಗಮನ ಹರಿಸುತಿಲ್ಲ. ರಾಜಕೀಯ ಲೆಕ್ಕಾಚಾರದಲ್ಲಿ ಇದೆಲ್ಲವೂ ನಡೆಯುತ್ತಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.