ಜನಗಣತಿ ಜೊತೆಯಲ್ಲಿ ಜಾತಿ ಗಣತಿಯನ್ನೂ ನಡೆಸುವ ಕೇಂದ್ರ ಸರ್ಕಾರದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಆದರೆ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವು ಅಭಿನಂದಿಸುವುದಿಲ್ಲ. ನಮ್ಮ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅಭಿನಂದಿಸುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ತಮ್ಮ ಅಧಿಕೃತ ನಿವಾಸ ಕಾವೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, “ರಾಹುಲ್ ಗಾಂಧಿ ಅವರು ಸತತ ಎರಡು ವರ್ಷಗಳ ಕಾಲ ಜಾತಿ ಗಣತಿಗೆ ಆಗ್ರಹಿಸುತ್ತ ಬಂದಿದ್ದಾರೆ. ನಮ್ಮ ಪಕ್ಷದ ಪ್ರಣಾಳಿಕೆಯಲ್ಲೂ ನಾವು ಜಾತಿ ಗಣತಿ ಮಾಡುತ್ತೇವೆ ಎಂದು ಘೋಷಿಸಿದ್ದೇವೆ. ರಾಹುಲ್ ಗಾಂಧಿ ಅವರ ಸತತ ಆಗ್ರಹದಿಂದಲೇ ಇದೆಲ್ಲ ಸಾಧ್ಯವಾಗಿದೆ. ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದು ಕೇಂದ್ರ ಸರ್ಕಾರ ಜಾತಿ ಗಣತಿಗೆ ಮುಂದಾಗಿದೆ” ಎಂದರು.
“ಶೇ.50ರಷ್ಟಿರುವ ಮೀಸಲಾತಿ ಗಡಿಯನ್ನು ವಿಸ್ತರಿಸಬೇಕಿದೆ. ಹೀಗಾಗಿ ಕೇಂದ್ರ ಸರ್ಕಾರ ಜಾತಿ ಗಣತಿ ಜೊತೆಗೆ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನೂ ನಡೆಸಬೇಕು. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಈ ಶೇ.50 ರಷ್ಟು ಮೀಸಲಾತಿ ನಿಗದಿಯಾಗಿದೆ. ಇದಕ್ಕೆ ವೈಜ್ಞಾನಿಕ ಕಾರಣಗಳು ಇಲ್ಲ” ಎಂದು ಹೇಳಿದರು.
“ನಮ್ಮ ಪಕ್ಷ ಯಾವತ್ತಿಗೂ ಜಾತಿ ಗಣತಿ ಪರವಾಗಿದೆ. ಈ ಬಗ್ಗೆ ಎಐಸಿಸಿ ಪ್ರತ್ಯೇಕ ಸಭೆಯನ್ನು ಮಾಡಿ ದೇಶದಲ್ಲಿ ಜಾತಿ ಗಣತಿ ನಡೆಯಬೇಕು ಎಂಬ ನಿರ್ಧಾರವನ್ನು ಪ್ರಕಟಿಸಿದೆ. ರಾಹುಲ್ ಗಾಂಧಿ ಪದೇ ಪದೆ ಜಾತಿ ಗಣತಿ ನಡೆಯಬೇಕು ಎಂದು ಹೇಳುತ್ತಿರುವ ಉದ್ದೇಶ ಎಲ್ಲ ಸಮುದಾಯಕ್ಕೂ ರಾಜಕೀಯ ಪ್ರಾತಿನಿಧ್ಯ, ಶೈಕ್ಷಣಿಕ ಮೀಸಲಾತಿ ಸಿಗಬೇಕು ಎಂಬುದೇ ಆಗಿದೆ” ಎಂದರು.
“ಬರುವ ನವೆಂಬರ್‌ನಲ್ಲಿ ಬಿಹಾರ್ ಚುನಾವಣೆ ಇದೆ. ಹೀಗಾಗಿ ಜನಗಣತಿ ಜೊತೆಯಲ್ಲಿ ಜಾತಿ ಗಣತಿ ಮಾಡುತ್ತೇವೆ ಎಂದು ಹೇಳಿ ಕೇಂದ್ರ ಸರ್ಕಾರ ಸಮಾಧಾನಪಡಿಸುವುದಲ್ಲ. ನಮ್ಮ ರಾಹುಲ್ ಗಾಂಧಿಯವರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ, ಜಾತಿ ಗಣತಿ ಯಾವಾಗ ಆರಂಭವಾಗುತ್ತದೆ? ಯಾವಾಗ ಮುಗಿಯುತ್ತದೆ? ಹಾಗೂ ಎಂದು ಜಾರಿಯಾಗುತ್ತದೆ? ಈ ಬಗ್ಗೆ ಕೇಂದ್ರ ಸರ್ಕಾರ ದೇಶಕ್ಕೆ ಖಾತ್ರಿ ಕೊಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್; ಇಲ್ಲಿ ಸರ್ಕಾರ ಜೀವಂತವಿದೆಯೇ?
“ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಉಲ್ಲೇಖಿಸಲಾದ ಮತ್ತೊಂದು ಪ್ರಮುಖ ವಿಷಯವಿದೆ. ಅದು ಆರ್ಟಿಕಲ್ 15 (5) ಅಡಿಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿ. ಎನ್‌ಡಿಎ-ಬಿಜೆಪಿ ಸರ್ಕಾರವು ಇದನ್ನು ಜಾರಿಗೆ ತರಲು ಮುಂದಾಗಬೇಕು ಎಂದು ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಈ ಬಗ್ಗೆಯೂ ಕೇಂದ್ರ ಸರ್ಕಾರ ಕ್ರಮಕೈಗೊಳ್ಳಬೇಕು” ಎಂದರು.
“ಬಿಜೆಪಿಯವರ ಇತಿಹಾಸ ನೋಡಿದರೆ ಸಾಮಾಜಿಕ ನ್ಯಾಯಕ್ಕೆ ಅವರು ವಿರುದ್ಧವಾಗಿದ್ದಾರೆ. ಮಂಡಲ್ ಕಮಿಷನ್ ವರದಿ, ಹಾವನೂರ ಆಯೋಗದ ವರದಿ, ವೆಂಕಟಸ್ವಾಮಿ ಆಯೋಗದ ವರದಿ ಹಾಗೂ ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳನ್ನು ಬಿಜೆಪಿ ವಿರೋಧಿಸುತ್ತಲೇ ಬಂದಿದೆ. ಈಗ ನಮ್ಮ ಸರ್ಕಾರ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯನ್ನು ಬಿಜೆಪಿಯವರು ವಿರೋಧಿಸುತ್ತಿದ್ದಾರೆ. ರಾಜ್ಯದ ನಾಯಕರಿಗೆ ಮೋದಿ ಈಗಲಾದರೂ ಬುದ್ಧಿ ಮಾತು ಹೇಳಲಿ” ಎಂದು ತಿಳಿಸಿದರು.
“ಕೇಂದ್ರ ಸರ್ಕಾರ ಮಾಡಲು ಹೊರಟಿರುವ ಜಾತಿ ಗಣತಿಗೆ ನಮ್ಮ ವಿರೋಧವಿಲ್ಲ. ಆದರೆ, ಇದರ ಜೊತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಹಿಂದುಳಿದವರ ಬಗ್ಗೆಯೂ ಸಮೀಕ್ಷೆ ನಡೆಯಬೇಕು ಎಂಬುದು ನಮ್ಮ ಪಕ್ಷದ ನಿಲುವು” ಎಂದರು.
ಮೇ 9 ಕ್ಕೆ ಸಚಿವ ಸಂಪುಟ ಸಭೆ
“ಪ್ರಸಕ್ತ ಸಚಿವ ಸಂಪುಟದಲ್ಲಿ ಮಂಡಿಸಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯನ್ನು ಮೇ 9 ರಂದು ನಡೆಯುವ ಸಚಿವ ಸಂಪುಟದಲ್ಲಿ ಸಚಿವರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವದು” ಎಂದರು.
ಸಮೀಕ್ಷೆಯ ಬಗ್ಗೆ ಈ ಸರ್ಕಾರ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆಯೇ ಎಂಬ ಪ್ರಶ್ನೆ ಉತ್ತರಿಸಿದ ಮುಖ್ಯಮಂತ್ರಿಗಳು, “ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದ್ದು, ಸಚಿವರು ಅಂತಿಮ ಅಭಿಪ್ರಾಯ ಕೊಟ್ಟ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು” ಎಂದು ತಿಳಿಸಿದರು.
“ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿ ಏರಿಕೆಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವುದಾಗಿ ತಿಳಿಸಿದರು. ಮೀಸಲಾತಿ ಏರಿಕೆಯಾಗಬೇಕಾದರೆ ಸಂವಿಧಾನಕ್ಕೆ ಕೇಂದ್ರ ಸರ್ಕಾರ ತಿದ್ದುಪಡಿ ಮಾಡಬೇಕು. ರಾಜ್ಯ ಸರ್ಕಾರ ಕೇಂದ್ರಕ್ಕೆ ಎಷ್ಟು ಪ್ರಮಾಣದಲ್ಲಿ ಏರಿಕೆ ಮಾಡಬೇಕೆಂದು ತಿಳಿಸಬಹುದು. ಆಗ ಸಂವಿಧಾನ ತಿದ್ದುಪಡಿ ಮಾಡಿ ಏರಿಕೆ ಮಾಡಬಹುದು” ಎಂದರು.
ಕುಮಾರಸ್ವಾಮಿ ಸಚಿವರನ್ನು ಹೆದರಿಸಿ ವರದಿ ಪಡೆಯಲಿಲ್ಲ
“ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಯವರು ಜಾತಿ ಗಣತಿ ಹಾಗೂ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಹಾಡಿ ಹೊಗಳಿದ್ದು, ರಾಜ್ಯ ಸರ್ಕಾರದ ಸಮೀಕ್ಷೆಗೆ ಯಾವುದೇ ಪಾವಿತ್ರ್ಯತೆ ಇಲ್ಲ ಏನು ಹೇಳಿರುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಸಮ್ಮಿಶ್ರ ಸರ್ಕಾರದಲ್ಲಿ ಪುಟ್ಟರಂಗಶೆಟ್ಟಿ ಹಿಂದುಳಿದ ವರ್ಗಗಳ ಸಚಿವರಾಗಿದ್ದಾಗ ಜಾತಿ ಗಣತಿ ವರದಿ ಪಡೆಯಲು ದಿನಾಂಕ ನಿಗದಿ ಮಾಡಿದಾಗ ಅವರನ್ನು ಅಮಾನತು ಮಾಡುವುದಾಗಿ ಹೆದರಿಸಿ ವರದಿಯನ್ನು ಪಡೆಯಲಿಲ್ಲ” ಎಂದರು.