ದೇಶ ಸ್ವಾತಂತ್ರ್ಯದ ಬಳಿಕ ಮೊದಲ ಬಾರಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರ ಜನಗಣತಿಯೊಂದಿಗೆ ಜಾತಿ ಗಣತಿ ಸಹ ಮಾಡುವ ದಿಟ್ಟ ನಿರ್ಧಾರ ಕೈಗೊಂಡಿರುವುದು ಐತಿಹಾಸಿಕವಾಗಿದೆ. ಇದು ಸರ್ವ ಸಮುದಾಯದವರಿಗೂ ಸಾಮಾಜಿಕ ನ್ಯಾಯ ಕಲ್ಪಿಸಲು ಪೂರಕವಾದ ಕ್ರಾಂತಿಕಾರಿ ಕ್ರಮ ಎನಿಸಿದೆ ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಬೀದರ್ ದಕ್ಷಿಣ ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಹೇಳಿದ್ದಾರೆ.
ʼ1931ರ ಬಳಿಕ ಇದೇ ಮೊದಲ ಬಾರಿಗೆ ದೇಶದಲ್ಲಿ ಜಾತಿ ಗಣತಿ ನಡೆಯುತ್ತಿರುವುದು ಸ್ವಾಗತಾರ್ಹ. ಕೇಂದ್ರದ ಈ ನಿರ್ಧಾರದ ಹಿಂದೆ ಸಮಾಜದ ಎಲ್ಲ ಸಮುದಾಯಗಳ ಹಿತ ಅಡಗಿದೆ. ಜನಗಣತಿ ಜೊತೆಗೆ ಜಾತಿವಾರು ನಿಖರ ಮಾಹಿತಿ ಸಂಗ್ರಹಿಸುತ್ತಿರುವುದು ಸಾಮಾಜಿಕ, ಆರ್ಥಿಕ ರಚನೆ ಜೊತೆಗೆ ನಮ್ಮ ಒಕ್ಕೂಟ ವ್ಯವಸ್ಥೆಯನ್ನು ಸಹ ಮತ್ತಷ್ಟು ಬಲಪಡಿಸಲಿದೆʼ ಎಂದು ಗುರುವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ʼಸ್ವಾತಂತ್ರ್ಯ ನಂತರ ನಡೆದಿರುವ ಎಲ್ಲ ಜನಗಣತಿ ಸಂದರ್ಭದಲ್ಲಿ ಜಾತಿ ಸೇರಿಸಲಿಲ್ಲ. ಈ ಹಿಂದೆ ದೀರ್ಘ ಕಾಲ ಆಡಳಿತದಲ್ಲಿದ್ದ ಕಾಂಗ್ರೆಸ್ ಪಕ್ಷ ಸತತವಾಗಿ ಜಾತಿ ಗಣತಿಗೆ ವಿರೋಧಿಸಿದೆ. ಕಾಂಗ್ರೆಸ್ ಸದಾ ಓಟ್ ಬ್ಯಾಂಕ್ ರಾಜಕೀಯ, ತುಷ್ಠೀಕರಣ ರಾಜಕೀಯ ಮಾಡುತ್ತಿದ್ದರಿಂದ ಈ ಕಾರ್ಯ ಕೈಗೊಂಡಿಲ್ಲ. ಆದರೆ ಎನ್‌ಡಿಎ ಸರ್ಕಾರ ಎಲ್ಲ ಜನಾಂಗದವರ ಅಭಿವೃದ್ಧಿ ಧ್ಯೇಯದಿಂದ ಈಗ ಮಹತ್ವದ ನಿರ್ಧಾರ ಕೈಗೊಂಡಿದೆ. ಬಿಜೆಪಿ ಸದಾ ಎಲ್ಲ ಜಾತಿಗಳ ವಿಕಾಸ ಬಯಸುತ್ತದೆ ಎಂಬುದಕ್ಕೆ ಈ ನಿರ್ಧಾರ ಸಾಕ್ಷಿʼ ಎಂದು ಬಣ್ಣಿಸಿದ್ದಾರೆ.
ʼಸಮಾಜದ ಸರ್ವ ಸಮುದಾಯದ ಹಿತದಿಂದ ಕೇಂದ್ರ ಸರ್ಕಾರ ಜಾತಿ ಗಣತಿಗೆ ನಿರ್ಧರಿಸಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕದ್ದುಮುಚ್ಚಿ ಅವೈಜ್ಞಾನಿಕವಾಗಿ ಜಾತಿ ಗಣತಿ ನಡೆಸಿ ಸಮಾಜದಲ್ಲಿ ಅನಗತ್ಯ ಗೊಂದಲ ಸೃಷ್ಟಿಸಿದೆ. ಕೇಂದ್ರ ಸರ್ಕಾರ ಈಗ ವೈಜ್ಞಾನಿಕವಾಗಿ ಹಾಗೂ ನಿಖರವಾಗಿ ಸಮೀಕ್ಷೆ ನಡೆಸಿ ವಾಸ್ತವ ಅಂಕಿ-ಅಂಶ ಜನರ ಮುಂದಿಡಲಿದೆ. ಇದು ಎಲ್ಲ ಸಮುದಾಯಗಳ ಆರ್ಥಿಕ ವಿಕಾಸಕ್ಕೆ ಪೂರಕವಾಗಲಿದೆʼ ಎಂದರು.
ಈ ಸುದ್ದಿ ಓದಿದ್ದೀರಾ? ಭಾರತದಲ್ಲಿ ಮೊದಲಿಗೆ ಜಾತಿಗಣತಿ ನಡೆದದ್ದು ಯಾವಾಗ? ಅಂಬೇಡ್ಕರ್ ಏನು ಹೇಳಿದ್ದರು?
ʼಜನಗಣತಿ ಮಾಡುವುದು ಸಂವಿಧಾನಬದ್ಧವಾಗಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುತ್ತದೆ. ಆದರೆ ರಾಜ್ಯದಲ್ಲಿ ಆರ್ಥಿಕ, ಸಾಮಾಜಿಕ ಸಮೀಕ್ಷೆ ಹೆಸರಿನಲ್ಲಿ ಅವೈಜ್ಞಾನಿಕ ಜಾತಿ ಗಣತಿಯನ್ನು ನಡೆಸಿ ಸಮಾಜದಲ್ಲಿ ಜಗಳ ಹಚ್ಚುವ ಕೆಲಸ ಮಾಡಲಾಗಿದೆ. ಕೆಲವೇ ತಿಂಗಳಲ್ಲಿ ಕೇಂದ್ರ ಸರ್ಕಾರದ ಸಮಗ್ರ ಗಣತಿ ನಡೆಸಿ ವಾಸ್ತವ ಅಂಕಿ-ಅಂಶ ದೇಶದ ಮುಂದಿಡಲಿದೆ. ಆಗ ರಾಜ್ಯ ಸರ್ಕಾರ ತನ್ನ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ನಡೆಸಿದ ಸಮೀಕ್ಷಾ ವರದಿಯ ನಿಜ ಬಣ್ಣ ಸಹ ಬಯಲಾಗಲಿದೆʼ ಎಂದು ಬೆಲ್ದಾಳೆ ಹೇಳಿದ್ದಾರೆ.