ಈ ದಿನ ಸಂಪಾದಕೀಯ | ಬಿಜೆಪಿ ಎಂಬ ಗ್ರೇಟ್ ಇಂಡಿಯನ್ ವಾಶಿಂಗ್ ಮಶೀನ್!

Date:

Advertisements
ಅಧಿಕಾರ ಹಿಡಿಯಲು, ಎದುರಾಳಿಗಳನ್ನು ಮಟ್ಟ ಹಾಕಲು ಯಾವ ಅಡ್ಡದಾರಿಯನ್ನು ಹಿಡಿಯಲೂ ತಯಾರು, ಎಷ್ಟು ಕೆಳಗೆ ಬೇಕಾದರೂ ಕುಸಿಯಲು ತಯಾರೆಂದು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಬಾರಿ ಬಾರಿಗೆ ರುಜುವಾತು ಮಾಡಿ ತೋರಿಸಿದೆ. ತಾನು ಪ್ರತಿಪಾದಿಸುವುದಾಗಿ ಸಾರಿದ್ದ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದೆ. 

ಕಳೆದ ವಾರದ ಜೂನ್ 27. ವಿದೇಶ ಪ್ರವಾಸಗಳು, ತಾಸುಗಳಿಗೊಮ್ಮೆ ತರಹೇವಾರಿ ವೇಷಭೂಷಣಗಳು, ಚುನಾವಣಾ ಭಾಷಣಗಳು ಹಾಗೂ ದ್ವೇಷ ಭಾಷಣಗಳ ಸರದಾರರೇ ಆಗಿ ಹೋಗಿರುವ ಪ್ರಧಾನಮಂತ್ರಿಯವರು ಭೋಪಾಲ್ ನಲ್ಲಿದ್ದರು. ಯಥಾಪ್ರಕಾರ ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಭಾಷಣ. ‘ಮಹಾರಾಷ್ಟ್ರದ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ 70 ಸಾವಿರ ಕೋಟಿ ರುಪಾಯಿಗಳ ಹಗರಣದಲ್ಲಿ ಸಿಲುಕಿದೆ’ ಎಂಬ ಆಪಾದನೆ ಮಾಡಿದರು.

ಅಷ್ಟೇ ಅಲ್ಲ, ವಿರೋಧ ಪಕ್ಷಗಳ ಪ್ರತಿಯೊಬ್ಬ ಭ್ರಷ್ಟ ಕಳಂಕಿತ ನಾಯಕನನ್ನೂ ಮಟ್ಟ ಹಾಕುವುದಾಗಿ ತಮ್ಮ ಎಂದಿನ ಗರ್ಜಿಸುವ ಹಾವಭಾವದ ಶೈಲಿಯಲ್ಲಿ ಸಾರಿದರು.

ಆದರೆ ನಾಲ್ಕೇ ನಾಲ್ಕು ದಿನಗಳು. ಜುಲೈ 2ರಂದು ಈ ಆಪಾದನೆಯ ಮುಖ್ಯ ಆರೋಪಿ ಅಜಿತ್ ಪವಾರ್ ಅವರನ್ನು ಬಿಜೆಪಿಗೆ ಸೇರಿಸಿಕೊಂಡು ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರದ ಉಪಮುಖ್ಯಮಂತ್ರಿ ಹುದ್ದೆಯನ್ನೂ ಅವರೊಂದಿಗೆ ಬಂದಿರುವ ಇತರೆ ಶಾಸಕರಿಗೆ ಮಂತ್ರಿ ಸ್ಥಾನಗಳನ್ನೂ ನೀಡಿದೆ. ಈ ಶಾಸಕರ ಮೇಲೆಯೂ ಭ್ರಷ್ಟಾಚಾರದ ಗಂಭೀರ ಆರೋಪಗಳಿವೆ ಮತ್ತು ಆದಾಯತೆರಿಗೆ, ಜಾರಿ ನಿರ್ದೇಶನಾಲಯದಂತಹ ಕೇಂದ್ರೀಯ ಏಜೆನ್ಸಿಗಳನ್ನು ಇವರ ಮೇಲೆ ಛೂ ಬಿಟ್ಟದ್ದು ಇದೇ ‘ಮೋಶಾ’ ಜೋಡಿಯ ಕೇಂದ್ರ ಸರ್ಕಾರ.

Advertisements

ಅಜಿತ್ ಜೊತೆ ಬಿಜೆಪಿ ಸಂಗ ಬೆಳೆಸಿರುವ ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ ಪ್ರಫುಲ್ ಪಟೇಲ್ ಆಸ್ತಿಪಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಕಳೆದ ವರ್ಷವಷ್ಟೇ ಮುಟ್ಟುಗೋಲು ಹಾಕಿಕೊಂಡಿತ್ತು. ತಾವು ಈ ಹಿಂದೆ ಮಹಾರಾಷ್ಟ್ರದ ಲೋಕೋಪಯೋಗಿ ಸಚಿವರಾಗಿದ್ದಾಗ ಸಾವಿರ ಕೋಟಿ ರುಪಾಯಿಗಳ ಹಗರಣಕ್ಕಾಗಿ ಎರಡು ವರ್ಷ ಜೈಲಿನಲ್ಲಿದ್ದು ಹೊರಬಂದಿರುವವರು ಇದೇ ಪಕ್ಷದ ಮತ್ತೊಬ್ಬ ತಲೆಯಾಳು ಛಗನ್ ಭುಜಬಲ್. ಇಂತಹುದೇ ಮತ್ತೊಬ್ಬ ನಾಯಕ ಹಸನ್ ಮುಶ್ರಿಫ್. ಜಾರಿ ನಿರ್ದೇಶನಾಲಯ ಈತನ ಬೆನ್ನು ಬಿದ್ದಿತ್ತು. ಪ್ರಫುಲ್ ಪಟೇಲ್ ಗೆ ಕೇಂದ್ರ ಮಂತ್ರಿ ಸ್ಥಾನದ ಬಹುಮಾನದ ಮಾತಿದೆ. ಭುಜಬಲ್ ಮತ್ತು ಮುಶ್ರಿಫ್‌ರಿಗೆ ಈಗಾಗಲೇ ಮಂತ್ರಿ ಹುದ್ದೆಗಳು ದಕ್ಕಿವೆ.

ಮತ್ತೊಂದು ವಿಪರೀತ ವಿಡಂಬನೆಯನ್ನು ಇಲ್ಲಿ ಗಮನಿಸಲೇಬೇಕಿದೆ. ಅದೆಂದರೆ 2019ರಲ್ಲಿ ಅಜಿತ್ ಪವಾರ್ ಅವರನ್ನು ಇದೇ ರೀತಿ ರಾತ್ರೋರಾತ್ರಿ ಅಪಹರಿಸಿ ಬೆಳಗಿನ ಜಾವ ಉಪಮುಖ್ಯಮಂತ್ರಿಯ ಪ್ರಮಾಣವಚನ ಕೊಡಿಸಿತ್ತು ಬಿಜೆಪಿ. ಆ ಸಂದರ್ಭದಲ್ಲಿ ಅವರ ಮೇಲಿನ 70 ಸಾವಿರ ಕೋಟಿ ರುಪಾಯಿಗಳ ಆಪಾದನೆಯನ್ನು ಹಿಂಪಡೆಯಲಾಗಿದೆ ಎಂದು ಘೋಷಿಸಲಾಗಿತ್ತು. ಪವಾರ್ ಎನ್.ಸಿ.ಪಿ.ಗೆ ಮರಳಿದ ಕೂಡಲೇ ಈ ಆಪಾದನೆಗೆ ಜೀವ ಬರುತ್ತದೆ. ತೊರೆದ ತಕ್ಷಣವೇ ಅಡಗಿ ಹೋಗುತ್ತದೆ!

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಮನುಷ್ಯಪ್ರೀತಿ ಹಂಚುವ `ಮುಸ್ತಾಫಾ’ ಈ ಕಾಲದ ಅಗತ್ಯ

ಎಪ್ಪತ್ತು ಸಾವಿರ ಕೋಟಿ ರುಪಾಯಿಗಳು ಎಂಬುದು ಸಣ್ಣ ಮೊತ್ತವೇನೂ ಅಲ್ಲ.  ಅಷ್ಟೊಂದು ದೊಡ್ಡ ಮೊತ್ತದ ಅವ್ಯವಹಾರ ನಡೆದಿದ್ದು, ಆಪಾದಿತರನ್ನು ಮಟ್ಟ ಹಾಕುವುದಾಗಿ ಬಹಿರಂಗವಾಗಿ ಸಾರಿದವರು ಸಣ್ಣ ವ್ಯಕ್ತಿಯೇನೂ ಅಲ್ಲ.  ಪ್ರಧಾನಿಯವರೇ ಖುದ್ದು ಮಟ್ಟ ಹಾಕುವುದಾಗಿ ಹೇಳಿದ ವ್ಯಕ್ತಿ ಅವರದೇ ಪಕ್ಷದಲ್ಲಿ ನಾಲ್ಕೇ ದಿನಗಳಲ್ಲಿ ಉಪಮುಖ್ಯಮಂತ್ರಿಯಾಗುತ್ತಾನೆ.  ಎಂದರೆ ಅದಕ್ಕಿಂತ ದೊಡ್ಡ ಪವಾಡ ಉಂಟೇ?  

ಬಿಜೆಪಿಯ ಬಳಿ ದೈತ್ಯ ವಾಶಿಂಗ್ ಮಶೀನ್ ಉಂಟು. ಗಂಗಾಜಲವನ್ನೇ ಬಳಸಲಾಗುವ ಈ ವಾಷಿಂಗ್ ಮಶೀನಿಗೆ ಹಾಕಿದರೆ ಭ್ರಷ್ಟಾತಿಭ್ರಷ್ಟರೂ, ಕಡು ಪಾತಕಿಗಳೂ ಪವಿತ್ರರಾಗಿ ಹೊರ ಬರುತ್ತಾರೆ ಎಂಬ ವ್ಯಂಗ್ಯವೊಂದು ಚಾಲ್ತಿಯಲ್ಲಿದೆ. ಅತಿರಂಜಿತ ಎನಿಸಿದರೂ ಅಸತ್ಯವೇನೂ ಅಲ್ಲ.

ಭಾರತೀಯ ರಾಜಕಾರಣದ ಮಹಾರಥಿಗಳಲ್ಲಿ ಒಬ್ಬರಾದ ಶರದ್ ಪವಾರ್ ಅವರ ಪಕ್ಷವನ್ನು ಮೋಶಾ ಜೋಡಿ ಈ ಹಂತದಲ್ಲಿ ಒಡೆದದ್ದಾದರೂ ಯಾಕೆ?

ಬಿಜೆಪಿ ಕೈಗೊಂಬೆ ಶಿಂಧೆ ಸರ್ಕಾರಕ್ಕೆ ಬಹುಮತದ ಕೊರತೆಯೇನೂ ಇರಲಿಲ್ಲ. ತನ್ನ ಸರ್ಕಾರದ ಸ್ಥಿರತೆಗೇನೂ ಧಕ್ಕೆ ಒದಗಿರಲಿಲ್ಲ. ಮುಂದಿನ ವರ್ಷ ನಡೆಯಲಿರುವ ಲೋಕಸಭಾ ಚುನಾವಣೆಗಾಗಿ ‘ಮೋಶಾ’ ನಡೆಸಿರುವ ‘ತಯಾರಿ’ಯಿದು. ಈ ಮುನ್ನ ಬಿಹಾರದಲ್ಲಿ ನಿತೀಶ್ ಬಿಜೆಪಿಯ ಸಂಗ ತೊರೆದು ಆರ್.ಜೆ.ಡಿ. ಜೊತೆ ಕೈ ಜೋಡಿಸಿದ್ದರು. ಮಹಾರಾಷ್ಟ್ರದಲ್ಲೂ ಹಿನ್ನಡೆ ಎದುರಾಗಿದೆ. ಈ ಎರಡೂ ರಾಜ್ಯಗಳ ಒಟ್ಟು ಲೋಕಸಭಾ ಸ್ಥಾನಗಳ ಸಂಖ್ಯೆ 88. ಈ ಸಂಖ್ಯೆ ಕೈ ಕೊಟ್ಟರೆ ಎಂಬ ಗಾಬರಿ ಬಿಜೆಪಿಯದು.

ವರ್ಷದ ಹಿಂದೆ ಶಿವಸೇನೆಯನ್ನು ಒಡೆದು ಸರ್ಕಾರ ರಚಿಸಿದ್ದಾಯಿತು. ಆದರೆ ಮುಂಬರುವ ಲೋಕಸಭಾ ಚುನಾವಣೆಗಳಲ್ಲಿ ಹೆಚ್ಚಿನ ಸೀಟುಗಳನ್ನು ಗೆದ್ದು ಮೋದಿಯವರನ್ನು ಪುನಃ ಪ್ರಧಾನಿ ಮಾಡಲು ಶಿಂಧೆ ಶಿವಸೇನೆಯ ಸಾಮರ್ಥ್ಯ ಸಾಲದು ಎಂಬ ಜ್ಞಾನೋದಯ ಆಗಿದೆ. ಹೀಗಾಗಿಯೇ ರಾಜ್ಯದ 200 ಪುರಸಭೆಗಳು ಮತ್ತು ಮುಂಬಯಿ ಪುಣೆ ಸೇರಿದಂತೆ 23 ಮಹಾನಗರ ಪಾಲಿಕೆಗಳಿಗೆ ಚುನಾವಣೆಗಳನ್ನು ಮುಂದೂಡುತ್ತ ಬಂದಿತ್ತು.

ಪ್ರತಿಪಕ್ಷಗಳ ನಾಯಕರ ಮೇಲೆ ಹಣಕಾಸು ಅವ್ಯವಹಾರದ ಆಪಾದನೆಗಳನ್ನು ಹೊರಿಸಿ ಹಣಿದು ಹಣ್ಣುಗಾಯಿ ನೀರುಗಾಯಿ ಮಾಡಿ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದು ಬಿಜೆಪಿಯ ಅನೂಚಾನ ಕಾರ್ಯವೈಖರಿಯೇ ಆಗಿ ಹೋಗಿದೆ.

ಅಧಿಕಾರ ಹಿಡಿಯಲು, ಎದುರಾಳಿಗಳನ್ನು ಮಟ್ಟ ಹಾಕಲು ಯಾವ ಅಡ್ಡದಾರಿಯನ್ನು ಹಿಡಿಯಲೂ ತಯಾರು, ಎಷ್ಟು ಕೆಳಗೆ ಬೇಕಾದರೂ ಕುಸಿಯಲು ತಯಾರೆಂದು ಬಿಜೆಪಿ ಇತ್ತೀಚಿನ ವರ್ಷಗಳಲ್ಲಿ ಬಾರಿ ಬಾರಿಗೆ ರುಜುವಾತು ಮಾಡಿ ತೋರಿಸಿದೆ. ತಾನು ಪ್ರತಿಪಾದಿಸುವುದಾಗಿ ಸಾರಿದ್ದ ನೈತಿಕ ಮೌಲ್ಯಗಳನ್ನು ಗಾಳಿಗೆ ತೂರಿದೆ. ಆದಾಯ ತೆರಿಗೆ ಇಲಾಖೆ, ಜಾರಿ ನಿರ್ದೇಶನಾಲಯ, ಸಿಬಿಐ ಅಸ್ತ್ರಗಳನ್ನು ಝಳಪಿಸಿ ವಿರೋಧಿಗಳನ್ನು ಮಣಿಸುತ್ತಿದೆ. ಇವು ಮೂರೂ ಕೆಲಸ ಮಾಡದೆ ಹೋದರೆ ಭಾರೀ ಹಣದ ಥೈಲಿಗಳ ಆಮಿಷ ಒಡ್ಡುತ್ತಿದೆ. ಚುನಾವಣೆಗಳನ್ನು ಗೆಲ್ಲಲು ಭ್ರಷ್ಟರು, ಕೊಲೆ ಆಪಾದಿತರನ್ನು, ಹಸಿ ಹಸಿ ಕೋಮುವಾದಿಗಳನ್ನು ಸೇರಿಸಿಕೊಳ್ಳಲು ಹಿಂದೆ ಮುಂದೆ ನೋಡುತ್ತಿಲ್ಲ. ಮಹಾರಾಷ್ಟ್ರದೊಂದಿಗೆ ಚುನಾವಣೆ ಎದುರಿಸಿದ ಹರಿಯಾಣದಲ್ಲಿ ಬಹುಮತ ಸಿಗದೆ, ರಾಜಕೀಯ ಎದುರಾಳಿಯಾಗಿದ್ದ ದುಷ್ಯಂತ್ ಚೌಟಾಲಾ ಅವರ ಜನನಾಯಕ ಜನತಾ ಪಾರ್ಟಿಯ ಜೊತೆ ಕೈ ಕಲೆಸಿತು. ದುಷ್ಯಂತ್‌ಗೆ ಉಪಮುಖ್ಯಮಂತ್ರಿ ಸ್ಥಾನ ನೀಡುವ ಜೊತೆಗೆ, ಭ್ರಷ್ಟಾಚಾರ ಹಗರಣದಲ್ಲಿ ಜೈಲಿನಲ್ಲಿದ್ದ ಆತನ ತಂದೆ ಅಜಯ್ ಚೌಟಾಲಾ ಅವರನ್ನು ‘ಫರ್ಲೋ’ ಮೇರೆಗೆ ಬಿಡುಗಡೆ ಮಾಡಿಸಲಾಯಿತು. ಚೌಟಾಲಾ ವಾಪಸು ಜೈಲಿಗೆ ಮರಳಿರುವ ವರದಿಗಳಿಲ್ಲ.  

‘ಪಾರ್ಟಿ ವಿತ್ ಎ ಡಿಫರೆನ್ಸ್’ ಎಂದು ಬಿಜೆಪಿ ಎದೆ ಬಡಿದುಕೊಂಡು ಹೇಳುತ್ತದೆ. ಈ ಮಾತುಗಳನ್ನು ‘ವಿದೌಟ್ ಎ ಡಿಫರೆನ್ಸ್’ ಎಂದು ಅಂಗರಚನೆಗೆ ತುರ್ತು ತಿದ್ದುಪಡಿ ಮಾಡಿಕೊಳ್ಳುವುದು ಒಳಿತು.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X