ಕಾಶ್ಮೀರದ ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ಭಯೋತ್ಪಾದಕರು ನಡೆಸಿದ ಹೇಯ, ನೀಚ ಕೃತ್ಯಕ್ಕೆ ಭಾರತ ಪ್ರತೀಕಾರ ತೀರಿಸಿಕೊಳ್ಳಲಿದೆ. ದಾಳಿ ನಡೆಸಿದ ಭಯೋತ್ಪಾದಕರನ್ನು ಸುಮ್ಮನೆ ಬಿಡುವುದಿಲ್ಲ. ದಾಳಿಯಲ್ಲಿ ಭಾಗಿಯಾದ ಪ್ರತಿಯೊಬ್ಬನನ್ನು ಹುಡುಕಿ ಹೊಡೆಯುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.
ನವದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೋಡೋಫಾ ಉಪೇಂದ್ರನಾಥ ಬ್ರಹ್ಮ ಅವರ ರಸ್ತೆಯನ್ನು ಲೋಕಾರ್ಪಣೆ ಮಾಡಿ ಪ್ರತಿಮೆಯನ್ನು ಅನಾವರಣಗೊಳಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, “ಪಹಲ್ಗಾಮ್‌ನಲ್ಲಿ ನಾಗರಿಕರನ್ನು ಕೊಂದ ಪ್ರತಿಯೊಬ್ಬ ಉಗ್ರನನ್ನೂ ಶಿಕ್ಷಿಸಲಾಗುವುದು. ನರೇಂದ್ರ ಮೋದಿ ಸರ್ಕಾರವು ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲಿದೆ” ಎಂದು ತಿಳಿಸಿದರು.
ಪಹಲ್ಗಾಮ್ ದಾಳಿಯ ಬಗ್ಗೆ ಇದು ಅಮಿತದ ಶಾ ಅವರ ಮೊದಲ ಸಾರ್ವಜನಿಕ ಹೇಳಿಕೆಯಾಗಿದೆ. “140 ಕೋಟಿ ಭಾರತೀಯರು ಮಾತ್ರವಲ್ಲದೆ ಇಡೀ ಜಗತ್ತು ಭಯೋತ್ಪಾದನೆಯ ವಿರುದ್ದದ ಹೋರಾಟದಲ್ಲಿ ಭಾರತದೊಂದಿಗೆ ನಿಂತಿದೆ. ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡುವವರೆಗೆ ನಮ್ಮ ಹೋರಾಟ ಮುಂದುವರಿಯುತ್ತದೆ. ಭಯೋತ್ಪಾದನೆಯಲ್ಲಿ ತೊಡಗಿರುವವರನ್ನು ಖಂಡಿತವಾಗಿಯೂ ಶಿಕ್ಷಿಸುತ್ತೇವೆ’ ಎಂದು ಅವರು ಹೇಳಿದ್ದಾರೆ.
ಬಿಹಾರದ ಮಧುಬನಿ ಜಿಲ್ಲೆಯಲ್ಲಿ ಪಂಚಾಯತ್ ರಾಜ್ ದಿನದ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 13000 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ, ಶಂಕುಸ್ಥಾಪನೆ ಮಾಡಿದ್ದರು. ಇದಾದ ನಂತರ ತಮ್ಮ ಭಾಷಣದಲ್ಲಿ ಪಹಲ್ಗಾಮ್ ದಾಳಿಯ ಕುರಿತು ಪ್ರತಿಕ್ರಿಯಿಸಿ, “ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಅಮಾಯಕ ನಾಗರಿಕರನ್ನು ಕೊಂದ ಕ್ರೂರತೆಯಿಂದ ಇಡೀ ರಾಷ್ಟ್ರವು ದುಃಖಿತವಾಗಿದೆ; ಕೋಟ್ಯಂತರ ನಾಗರಿಕರು ದುಃಖಿತರಾಗಿದ್ದಾರೆ. ಇಡೀ ದೇಶವು ಎಲ್ಲಾ ಸಂತ್ರಸ್ತ ಕುಟುಂಬಗಳ ದುಃಖದಲ್ಲಿ ಜೊತೆಗಿದೆ. ಚಿಕಿತ್ಸೆ ಪಡೆಯುತ್ತಿರುವ ಕುಟುಂಬ ಸದಸ್ಯರು ಬೇಗನೆ ಗುಣಮುಖರಾಗುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಹೇಳಿದ್ದರು.