ಬೆಂಗಳೂರು ನಗರದಲ್ಲಿ ಗುರುವಾರ ಸಂಜೆ ಗುಡುಗು-ಮಿಂಚು ಸಹಿತ ಭಾರೀ ಗಾಳಿ ಮಳೆ ಆರಂಭವಾಗಿದ್ದರಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು, ನಗರದ ಹಲವು ಕಡೆ ತಗ್ಗು ಪ್ರದೇಶಗಳಲ್ಲಿ ಹಾಗೂ ಹಲವು ಭಾಗಗಳ ರಸ್ತೆಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ.
ಮಳೆಯಿಂದಾಗಿ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಬಿಎಂಟಿಸಿ ಬಸ್ಸುಗಳು ತಡವಾಗಿ ಸಂಚರಿಸುತ್ತಿದ್ದು, ಕೆಲಸಕ್ಕೆ ತೆರಳಿದ್ದ ಒಂದಷ್ಟು ಉದ್ಯೋಗಿಗಳಿಗೆ ಮನೆ ತಲುಪಲು ಅಡ್ಡಿಯಾಯಿತು. ಕೆಲಸ ಬಿಡುವ ವೇಳೆಗೆ ಸುರಿದ ಮಳೆಯಿಂದ, ಕಾರ್ಮಿಕರ ದಿನದಂದೂ ಕೆಲಸಕ್ಕೆ ತೆರಳಿದ್ದ ಕೆಲಸಗಾರರು ಸಮಯಕ್ಕೆ ಸರಿಯಾಗಿ ಮನೆಗೆ ತೆರಳದಂತೆ ಅಡ್ಡಿಯಾಯಿತು.
ಭಾರೀ, ಗಾಳಿ ಮಳೆಗೆ ಕತ್ರಿಗುಪ್ಪೆಯ ಎಂ ಎಂ ಬಾರ್ ಬಳಿ ಆಟೋದ ಮೇಲೆ ಮರ ಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ವಿಚಾರ ತಿಳಿದು ಪೊಲೀಸರು ಧಾವಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ನಗರದ ರಿಚ್ಮಂಡ್ ಟೌನ್, ಶಾಂತಿನಗರ, ಕಾರ್ಪೊರೇಷನ್, ಮೆಜೆಸ್ಟಿಕ್, ಕೆ ಆರ್ ಮಾರ್ಕೆಟ್, ರಾಜಾಜಿನಗರ, ಬಸವೇಶ್ವರ ನಗರ, ನಂದಿನಿ ಲೇಔಟ್ ನಾಗಸಂದ್ರ, ಕೆಂಗೇರಿ, ಜಯನಗರ, ಬನಶಂಕರಿ, ಜೆಪಿ ನಗರ ಸೇರಿದಂತೆ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದೆ. ಕೆಲವು ಕಡೆಗಳಲ್ಲಿ ಮರಗಳ ಕೊಂಬೆಗಳು, ಮರಗಳು ರಸ್ತೆಗುರುಳಿದ್ದು, ವಿದ್ಯುತ್ ತಂತಿ ಮೇಲೆಯೂ ಬಿದ್ದಿವೆ. ಇದರಿಂದ ಸಂಚಾರಕ್ಕೆ ಅಡ್ಡಿಯಾಗಿದ್ದು, ವಿದ್ಯುತ್ ವ್ಯತ್ಯಯವೂ ಉಂಟಾಗಿದೆ.
ಹೆಬ್ಬಾಳ ಪೊಲೀಸ್ ಠಾಣೆಯಿಂದ ವಿಮಾನ ನಿಲ್ದಾಣದ ಕಡೆಗೆ, ಆರ್ ಪಿ ರಸ್ತೆಯಿಂದ ಪಿ ಜಿ ಹಳ್ಳಿ ಕಡೆಗೆ, ವರ್ತೂರು ಕಡೆಯಿಂದ ಗುಂಜೂರು ಕಡೆಗೆ, ಭಾಷ್ಯಂ ವೃತ್ತದಿಂದ ಕಾವೇರಿ ಕಡೆಗೆ, ಉದಯ ಟಿ ವಿ ಜಂಕ್ಷನ್ ಕಡೆಯಿಂದ ಜಯಮಹಲ್ ರಸ್ತೆ ಕಡೆಗೆ, ಬಿಳೇಕಹಳ್ಳಿಯಿಂದ ಜೆಡಿ ಮರದ ಕಡೆಗೆ, ವೀರಸಂದ್ರ ಎರಡೂ ಬದಿ ರಸ್ತೆ, ಹೊಸ ರಸ್ತೆಯಿಂದ ಬಸಾಪುರ ಜಂಕ್ಷನ್ ಕಡೆಗೆ ಹಾಗೂ
ಹೊರಮಾವು ಕೆಳಸೇತುವೆಯಿಂದ ಕೆಆರ್ ಪುರದ ಕಡೆಗೆ ಭಾರೀ ಗಾಳಿ ಮಳೆ ಸುರಿಯುತ್ತಿದೆ. ಹಾಗಾಗಿ ನಿಧಾನಗತಿಯ ಸಂಚಾರವಿರುತ್ತದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿದ್ದೀರಾ? ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ಬೆಲೆ ಇಳಿಕೆ
ಅಲ್ಲದೆ, ʼಅನಗತ್ಯವಾಗಿ ಮನೆಯಿಂದ ಹೊರಗೆ ಹೋಗದಿರುವುದು ಹಾಗೂ ತಗ್ಗು ಪ್ರದೇಶಗಳಲ್ಲಿ, ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸದೇ ಇರುವುದು ಉತ್ತಮʼ ಎಂದು ಸಲಹೆ ನೀಡಿದ್ದಾರೆ.
ಮೇ 3ರವರೆಗೆ ಮಳೆ ಸಾಧ್ಯತೆ
ಟ್ರಫ್ ಇರುವುದರಿಂದ ಬೆಂಗಳೂರಲ್ಲಿ ಮೇ 1ರಿಂದ 3ರವರೆಗೆ ಸಾಧಾರಣ ಮಳೆಯಾಗಲಿದೆ. ಈ ಅವಧಿಯಲ್ಲಿ ನಗರದ ಗರಿಷ್ಠ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ಉಷ್ಣಾಂಶ 21 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಗುರುವಾರ ಮುನ್ಸೂಚನೆ ನೀಡಿದೆ.