ಮಂಗಳೂರು ನಗರದ ಬಜಪೆಯಲ್ಲಿ ಗುರುವಾರ ರಾತ್ರಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ನಾಲ್ಕರಿಂದ ಐದು ಮಂದಿಯ ಗುಂಪೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದು, ಮುಂಜಾಗ್ರತಾ ಕ್ರಮವಾಗಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಈ ಬಗ್ಗೆ ಆದೇಶ ಹೊರಡಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್, ‘
ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ ಕಲಂ: 163ರಲ್ಲಿ ಪ್ರದತ್ತವಾದ ಅಧಿಕಾರವನ್ನು ಬಳಸಿಕೊಂಡು ದಿನಾಂಕ 2025ರ ಮೇ 2 ಬೆಳಗ್ಗೆ ಆರು ಗಂಟೆಯಿಂದ ಮೇ 6ರ ಸಂಜೆ ಆರು ಗಂಟೆಯವರೆಗೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ” ಎಂದು ತಿಳಿಸಿದ್ದಾರೆ.
- ಈ ನಿಷೇಧ್ಞಾಜೆಯ ಅವಧಿಯಲ್ಲಿ ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ, ಜಾಲತಾಣಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದು, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಕೃತ್ಯ ಎಸಗುವುದು ಅಥವಾ ಕೃತ್ಯ ಎಸಗಲು ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಲಾಗಿದೆ.
- ನಿಷೇಧಿತ ಪ್ರದೇಶದಲ್ಲಿ ಸಾರ್ವಜನಿಕರು ಐದು ಅಥವಾ ಅದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಗುಂಪು ಸೇರುವುದು ಅಥವಾ ತಿರುಗಾಡುವುದನ್ನು ನಿಷೇಧಿಸಲಾಗಿದೆ.
- ನಿಷೇಧಿತ ಪ್ರದೇಶದಲ್ಲಿ ಯಾವುದೇ ರೀತಿಯ ಶಸ್ತ್ರಾಸ್ತ್ರ, ದೊಣ್ಣೆ, ಕತ್ತಿ, ಬಂದೂಕು, ಲಾಠಿಗಳನ್ನು ಅಥವಾ ದೈಹಿಕವಾಗಿ ಹಿಂಸೆಯನ್ನು ಉಂಟು ಮಾಡುವ ಯಾವುದೇ ವಸ್ತುಗಳನ್ನು ಒಯ್ಯುವುದು ಅಥವಾ ಹೊಂದುವುದನ್ನು ನಿಷೇಧಿಸಲಾಗಿದೆ.
- ಪಟಾಕಿಗಳನ್ನು ಸಿಡಿಸುವುದು ಅಥವಾ ಯಾವುದೇ ಆಸಿಡ್ ಅಥವಾ ಸ್ಫೋಟಕ ವಸ್ತುಗಳನ್ನು ಒಯ್ಯುವುದನ್ನು ನಿಷೇಧಿಸಲಾಗಿದೆ.
- ವ್ಯಕ್ತಿಗಳ, ಶವಗಳ ಅಥವಾ ಆಕೃತಿ ಹಾಗೂ ಪ್ರತಿಕೃತಿಗಳ ಪ್ರದರ್ಶನ ಮಾಡುವುದನ್ನು ನಿಷೇಧಿಸಲಾಗಿದೆ.
- ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಅಥವಾ ವೇಗದಿಂದ ಒಗೆಯುವ ಸಾಧನಗಳ ಅಥವಾ ಉಪಕರಣಗಳ ಒಯ್ಯುವಿಕೆಯನ್ನು, ಶೇಖರಿಸುವುದನ್ನು ಅಥವಾ ತಯಾರಿಸುವುದನ್ನು ನಿಷೇಧಿಸಲಾಗಿದೆ.
- ಸರ್ಕಾರಿ ಸಂಸ್ಥೆಗಳು/ಸಂಘಟನೆಗಳು ಹಾಗೂ ಕಾರ್ಯನಿರತ ಅಧಿಕಾರಿ/ಸಿಬ್ಬಂದಿಗಳ ವಿರುದ್ಧ ನಿಂದಿಸುವಂತಹ, ಅವಹೇಳನಕಾರಿಯಾದಂತಹ ಯಾವುದೇ ಘೋಷಣೆಗಳು/ಭಾಷಣಗಳು, ಪ್ರತಿಭಟನೆಗಳು, ಅವಾಚ್ಯ ಶಬ್ದಗಳ ಬಳಕೆ, ಪ್ರಚೋದನಕಾರಿ ಭಾಷಣ, ಗಾಯನ ಇತ್ಯಾದಿ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ಈ ನಿಷೇಧಾಜ್ಞೆಯು ಜಾರಿಯಲ್ಲಿರುವ ಪ್ರದೇಶದಲ್ಲಿ ಸರ್ಕಾರದಿಂದ ಅಥವಾ ಸರ್ಕಾರದ ಆದೇಶದಂತೆ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯವಾಗುವುದಿಲ್ಲ. ಮತ್ತು ಪೊಲೀಸ್ ಅಧಿಕಾರಿಗಳು, ಬ್ಯಾಂಕ್ ಭದ್ರತಾ ಸಿಬ್ಬಂದಿಗಳು ಕರ್ತವ್ಯ ನಿರ್ವಹಣೆಯ ವೇಳೆ ಲಾಠಿ/ ಶಸ್ತ್ರಾಸ್ತ್ರ ಮತ್ತು ಸಂಪರ್ಕ ಉಪಕರಣಗಳನ್ನು ಉಪಯೋಗಿಸುವುದಕ್ಕೆ ಅನ್ವಯವಾಗುವುದಿಲ್ಲ ಎಂದು ನಿಷೇಧ್ಞಾಜೆಯ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ನೂತನ ಭಾರತೀಯ ನ್ಯಾಯ ಸುರಕ್ಷಾ ಸಂಹಿತೆಯ 163ನೇ ಕಲಂ ಅಡಿ ನಿಷೇಧಾಜ್ಞೆ ಜಾರಿ
ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (BNSS) 2023, ಸೆಕ್ಷನ್ 163, ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುರಕ್ಷತೆಯನ್ನು ಕಾಪಾಡಲು ಸಂಬಂಧಿಸಿದೆ. ಇದು ಸಾರ್ವಜನಿಕ ತೊಂದರೆ ಅಥವಾ ಅಪಾಯಕಾರಿ ಸಂದರ್ಭಗಳನ್ನು ತಡೆಗಟ್ಟಲು ಆದೇಶಗಳನ್ನು ಜಾರಿಗೊಳಿಸುವ ಅಧಿಕಾರವನ್ನು ಮ್ಯಾಜಿಸ್ಟ್ರೇಟ್‌ಗಳಿಗೆ ನೀಡುತ್ತದೆ. ಈ ವಿಭಾಗವು ಹಿಂದಿನ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) 1973ರ ಸೆಕ್ಷನ್ 144ರ ಹೊಸ ರೂಪವಾಗಿದೆ.

