ಬೆಂಗಳೂರಿನ ಕಾರ್ಯಕ್ರಮವೊಂದರಲ್ಲಿ ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ, ಇದಕ್ಕೇನೇ ಪಹಲ್ಗಾಮ್ ದಾಳಿ ನಡೆದಿದ್ದು ಎಂದು ಗಾಯಕ ಸೋನು ನಿಗಮ್ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ಬೆಂಗಳೂರಿನ ಈಸ್ಟ್ ಪಾಯಿಂಟ್ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದನು. ಅದಕ್ಕೆ ಸೋನು ನಿಗಮ್ ತಮ್ಮ ಹಾಡನ್ನು ಅರ್ಧಕ್ಕೆ ನಿಲ್ಲಿಸಿ, ತಮಗೆ ಕನ್ನಡ ಮೇಲಿರುವ ಪ್ರೀತಿ, ಇಲ್ಲಿನ ಜನರ ಮೇಲಿರುವ ಗೌರವದ ಬಗ್ಗೆ ಹೇಳಿಕೊಂಡರು.
ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ಆ ಪೈಕಿ ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ನೀವೆಲ್ಲ ನನ್ನನ್ನು ನಿಮ್ಮ ಕುಟುಂಬದವರಂತೆ ನೋಡಿಕೊಂಡಿದ್ದೀರಿ. ಪ್ರತಿ ಬಾರಿ ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದಾಗಲೂ, ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಒಂದು ಸಾಲು ಕನ್ನಡ ಹಾಡನ್ನಾದರೂ ಹಾಡಿರುತ್ತೇನೆ. ಆ ಹುಡುಗನ ವಯಸ್ಸಿಗಿಂತ ಮೊದಲಿನಿಂದಲೂ ನಾನು ಕನ್ನಡ ಹಾಡು ಹಾಡುತ್ತಿದ್ದೇನೆ. ಆದರೆ ಕನ್ನಡ, ಕನ್ನಡ ಎಂದು ಕಿರುಚಿಕೊಂಡು ಆ ಹುಡುಗ ಹೇಳಿದ್ದು ನನಗೆ ಇಷ್ಟವಾಗಲಿಲ್ಲ. ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡರು.
ಈದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್; ಇಲ್ಲಿ ಸರ್ಕಾರ ಜೀವಂತವಿದೆಯೇ?
ಸೋನು ನಿಗಮ್ ಮಾತಿಗೆ ಕನ್ನಡಪರ ಸಂಘಟನೆಗಳಿಂದ ಭಾರೀ ವಿರೋಧ ವ್ಯಕ್ತವಾಗಿದ್ದು, ಕನ್ನಡ ಹಾಡುವಂತೆ ಹೇಳಿದ್ದಕ್ಕೂ, ಭಯೋತ್ಪಾದಕರ ದಾಳಿಗೂ ಏನು ಸಂಬಂಧ? ಎಂದು ಆಕ್ರೋಶ ಹೊರಹಾಕಿದ್ದಾರೆ. ಸೋನು ನಿಗಮ್‌ರನ್ನು ಕನ್ನಡ ಚಿತ್ರೋದ್ಯಮದಿಂದ ದೂರ ಇಡಿ ಹಾಗೂ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಗಾಯಕನ ವಿರುದ್ಧ ಕನ್ನಡಿಗರು, ಕನ್ನಡ ಚಿತ್ರರಂಗದ ಕಲಾವಿದರು ಆಕ್ರೋಶ ಹೊರಹಾಕುತ್ತಿದ್ದಾರೆ. ಕನ್ನಡ ಪರ ಸಂಘಟನೆಗಳು ಸೋನು ನಿಗಮ್ ಕ್ಷಮೆ ಕೇಳಲು ಒತ್ತಾಯಿಸಿದ್ದಾರೆ. ಅವರನ್ನು ನಿಷೇಧ ಮಾಡುವ ಒತ್ತಾಯವೂ ಕೇಳಿ ಬಂದಿದೆ. ಕನ್ನಡಕ್ಕೆ ಸೋನು ನಿಗಮ್ ಸಾಕಷ್ಟು ಪ್ರೀತಿ ತೋರಿಸಿದ್ದಾರೆ. ಹೀಗಾಗಿ, ಮತ್ತೊಂದು ಅವಕಾಶ ನೀಡಬೇಕು ಎನ್ನುವ ಆಗ್ರಹವೂ ವ್ಯಕ್ತವಾಗಿದೆ.