ಸಾಮಾಜಿಕ ಜಾಲತಾಣ ವೇದಿಕೆ ‘ಇನ್‌ಸ್ಟಾಗ್ರಾಮ್’ನಲ್ಲಿ ತನ್ನ ಫಾಲೋವರ್‌ಗಳ ಸಂಖ್ಯೆ ಕುಸಿದಿದೆ ಎಂಬ ಕಾರಣಕ್ಕೆ ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟರ್ ಮಿಶಾ ಅಗರ್ವಾಲ್ ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿರುವ ಬಾಲಿವುಡ್ ನಟಿ ತಾಪ್ಸಿ ಪನ್ನು, ‘ಇದು ನಾನು ಬಹಳ ದಿನಗಳಿಂದ ಆತಂಕ (ಭಯ) ಪಡುತ್ತಿರುವ ವಿಷಯವಾಗಿದೆ’ ಎಂದಿದ್ದಾರೆ.
25 ವರ್ಷ ಹರೆಯದ ಮಿಶಾ ಅಗರ್ವಾಲ್ ಅವರು ಈ ಡಿಜಿಟಲ್ ಯುಗದಲ್ಲಿ ಇನ್‌ಸ್ಟಾಗ್ರಾಮ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಕಂಟೆಂಟ್ ಕ್ರಿಯೇಟ್ ಮಾಡಿ, ವಿಡಿಯೋ ಮಾಡುವುದನ್ನೇ ವೃತ್ತಿಯಾಗಿ ಪರಿಗಣಿಸಿದ್ದರು. ಅದರಿಂದ, ಒಂದಷ್ಟು ಸಂಪಾದನೆಯನ್ನೂ ಮಾಡುತ್ತಿದ್ದಾರೆ. ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಮಿಲಿಯನ್ (10 ಲಕ್ಷ) ಅನುಯಾಯಿಗಳನ್ನು ಪಡೆಯಬೇಕು ಎಂಬುದು ಅವರ ಗುರಿಯಾಗಿತ್ತು. ಆದರೆ, ಇತ್ತೀಚೆಗೆ ಅವರು ಹಲವಾರು ಫಾಲೋವರ್‌ಗಳನ್ನು ಕಳೆದುಕೊಂಡಿದ್ದರು. ಅಂದರೆ, ಹಲವಾರು ಫಾಲೋವರ್‌ಗಳು ಅವರ ಖಾತೆಯನ್ನು ಅನ್‌ಲೈಕ್ ಮತ್ತು ಅನ್‌ಫಾಲೋ ಮಾಡಿದ್ದರು.
ಸಾಮಾಜಿಕ ಜಾಲತಾಣ ವೇದಿಕೆಯಲ್ಲಿ ಫಾಲೋವರ್‍ಸ್ ಕಳೆದುಕೊಂಡ ಮಿಶಾ ಅಗರ್ವಾಲ್ ಅವರು ಸೋಷಿಯಲ್ ಮೀಡಿಯಾ ಕಂಟೆಂಟ್ ಕ್ರಿಯೇಟ್ ಮಾಡುವ ತಮ್ಮ ವೃತ್ತಿಜೀವನವು ಅಂತ್ಯಗೊಳ್ಳುತ್ತಿದೆ ಎಂದು ಆತಂಕಗೊಂಡಿದ್ದರು. ಅದೇ ಕಾರಣಕ್ಕೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಸಂಬಂಧಿಗಳು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?
ಮಿಶಾ ಅವರ ಸಾವಿನ ಬಗ್ಗೆ ನಟಿ ತಾಪ್ಸಿ ಪನ್ನು ಆತಂಕ ವ್ಯಕ್ತಪಡಿಸಿದ್ದಾರೆ. ಇದೊಂದು ಹೃದಯವಿದ್ರಾವಕ ಘಟನೆ ಎಂದಿದ್ದಾರೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳ ಕುರಿತಾಗಿ ಹೆಚ್ಚುತ್ತಿರುವ ಯುವಜನರ ಗೀಳಿನ ಬಗ್ಗೆ ಕಳವಳ ಹೊರಹಾಕಿದ್ದಾರೆ. ಸಾಮಾಜಿಕ ಮಾಧ್ಯಮವು ಮಾನಸಿಕ ಆರೋಗ್ಯದ ಮೇಲೆ ಬೀರುವ ಪ್ರಭಾವಗಳ ಬಗ್ಗೆ ಗಮನ ಸೆಳೆದಿದ್ದಾರೆ.
“ಪ್ರಸ್ತುತ ದಿನಗಳಲ್ಲಿ ಸಾಮಾಜಿಕ ಮಾಧ್ಯಮಗಳ ಮೇಲೆ ಬಹಳಷ್ಟು ಜನರ ಗೀಳನ್ನು ನೋಡಿ ನಾನು ಬಹಳ ದಿನಗಳಿಂದ ಭಯಪಡುತ್ತಿದ್ದೇನೆ. ಇಂತಹದ್ದೊಂದು ದಿನ ಬರುತ್ತವೆ ಎಂಬ ಭಯ ಹಿಂದಿನಿಂದಲೂ ನನ್ನನ್ನು ಕಾಡುತ್ತಿತ್ತು” ಎಂದು ತಾಪ್ಸಿ ಪನ್ನು ಹೇಳಿದ್ದಾರೆ.
“ವರ್ಚುವಲ್ ಪ್ರೀತಿಯ ತೀವ್ರ ಅಗತ್ಯವು ನಿಮ್ಮ ಸುತ್ತಲಿನ ನಿಜವಾದ ಪ್ರೀತಿಯ ಕುರಿತು ನಿಮ್ಮನ್ನು ಕುರುಡಾಗಿಸುತ್ತದೆ ಎಂಬ ಭಯ ಕಾಡುತ್ತಲೇ ಇದೆ. ಈ ತ್ವರಿತ ತೃಪ್ತಿ, ಇಷ್ಟಗಳು ಹಾಗೂ ಕಾಮೆಂಟ್‌ಗಳು ನಿಮ್ಮನ್ನು ಹೆಚ್ಚು ಯೋಗ್ಯರನ್ನಾಗಿ ಮಾಡುವುದಿಲ್ಲ. ಬದಲಾಗಿ, ಮಾನಸಿಕ ರೋಗಿಯನ್ನಾಗಿಸುತ್ತದೆ. ಇಂತಹ ಘಟನೆಗಳನ್ನು ನೋಡುವುದು ಹೃದಯವನ್ನು ಹಿಂಡುತ್ತದೆ” ಎಂದಿದ್ದಾರೆ.
ನೆನಪಿಡಿ: ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ… ಆತ್ಮಹತ್ಯೆಗಳ ಕುರಿತು ಚರ್ಚಿಸುವುದು ಕೂಡ ಕೆಲವರಿಗೆ ಪ್ರಚೋದನೆ ನೀಡಬಹುದು. ಸಮಸ್ಯೆಗಳ ಬಗ್ಗೆ ಆಪ್ತರೊಂದಿಗೆ ಹಂಚಿಕೊಳ್ಳುವುದರಿಂದ, ಸಮಾಲೋಚನೆ ನಡೆಸುವುದರಿಂದ ಆತ್ಮಸ್ಥೈರ್ಯ ಹೆಚ್ಚುತ್ತದೆ. ಆತ್ಮಹತ್ಯೆಗಳನ್ನು ತಡೆಯಬಹುದು. ತುರ್ತು ಪರಿಸ್ಥಿತಿಯಿದ್ದರೆ ಕರೆ ಮೂಲಕ ವೈದ್ಯರನ್ನು ಸಂಪರ್ಕಿಸಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ಆರೋಗ್ಯ ಸಹಾಯವಾಣಿ 104.