ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಎಸ್‍ಡಿಪಿಐ, ಪಿಎಫ್‍ಐ ಮೇಲಿನ ಪ್ರೀತಿಯು ಸುಹಾಸ್ ಹತ್ಯೆಯಂಥ ದುಷ್ಕೃತ್ಯ, ಹಿಂದೂಗಳ ಬೆದರಿಕೆ ಮತ್ತು ಹತ್ಯೆಗೆ ಶಕ್ತಿ ಕೊಟ್ಟಿದೆ. ಇದರಿಂದ ದುಷ್ಟರಿಗೆ ಆನೆ ಬಲ ಬಂದಂತಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದರು.
ಮಾಧ್ಯಮಗಳ ಜೊತೆ ಇಂದು ಮಾತನಾಡಿದ ಅವರು, ನಿನ್ನೆ ರಾತ್ರಿ ಮಂಗಳೂರಿನಲ್ಲಿ ಹಿಂದೂ ಕಾರ್ಯಕರ್ತ ಸುಹಾಸ್ ಅವರ ಬರ್ಬರ ಹತ್ಯೆ ನಡೆದಿದೆ. ಇದು ಪೂರ್ವನಿಯೋಜಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ ಎಂದು ವಿವರಿಸಿದರು.
“ಕಾಶ್ಮೀರದಲ್ಲಿ ಹಿಂದೂಗಳ ಮಾರಣಹೋಮ ಆಗಿದೆ. ಇದನ್ನು ದೇಶ- ರಾಜ್ಯದ ಜನರು ಮರೆತಿಲ್ಲ. ಇದರ ನಡುವೆ ಹಿಂದೂ ಕಾರ್ಯಕರ್ತನ ಬರ್ಬರ ಹತ್ಯೆ ನಡೆದಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದ್ರೋಹಿಗಳು, ಕೊಲೆಗಡುಕರಿಗೆ ಏನು ಮಾಡಿದರೂ ನಡೆಯುತ್ತದೆ ಎಂಬ ಆತ್ಮವಿಶ್ವಾಸ ಹೆಚ್ಚಾಗಿದೆ. ಇದರ ಪರಿಣಾಮವಾಗಿ ಪದೇ ಪದೆ ಇಂಥ ಕೃತ್ಯ ನಡೆಯುತ್ತಿದೆ. ಹಿಂದೂ ಕಾರ್ಯಕರ್ತರ ಹತ್ಯೆ ನಡೆಯುತ್ತಿದೆ” ಎಂದು ದೂರಿದರು.
“ಹಿಂದೂ ಸಂಘಟನೆಗಳನ್ನು ಬೆದರಿಸುವ ಕೆಲಸ ನಡೆದಿದೆ. ಕರ್ನಾಟಕದಲ್ಲಿ ಹಿಂದೂ ಮುಖಂಡರ ಕಗ್ಗೊಲೆ ನಿರಂತರವಾಗಿ ನಡೆಯುತ್ತಿದೆ ಎಂದ ಅವರು, ಕರ್ನಾಟಕ ರಾಜ್ಯದಲ್ಲಿ ಗೃಹ ಸಚಿವರು ಬದುಕಿಲ್ಲವೇ? ಗುಪ್ತಚರ ಇಲಾಖೆ ಸತ್ತು ಹೋಗಿದೆಯೇ? ರಾಜ್ಯದ ಕಾನೂನು- ಸುವ್ಯವಸ್ಥೆ ಏನಾಗಿದೆ” ಎಂದು ಪ್ರಶ್ನಿಸಿದರು.
ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗಲೇ ಕಠಿಣ ಕ್ರಮ ಆಗಬೇಕಿತ್ತು: ಆರ್ ಅಶೋಕ್
ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದಾಗಲೇ ಕಾಂಗ್ರೆಸ್ ಸರ್ಕಾರ ಕಠಿಣ ಕ್ರಮ ವಹಿಸಿದ್ದರೆ ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಹತ್ಯೆ ಆಗುತ್ತಿರಲಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯ ಕೊಲೆಯ ಮೂಲಕ ಮಂಗಳೂರಿನಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿದೆ. ಮಂಗಳೂರು ಬಂದ್ ಮಾಡಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ 2013 ರಲ್ಲಿ ಅಧಿಕಾರದಲ್ಲಿದ್ದಾಗ 36 ಹಿಂದೂ ಕಾರ್ಯಕರ್ತರ ಹತ್ಯೆಯಾಗಿತ್ತು. ಪಾಪ್ಯುಲರ್ ಫ್ರಂಟ್ ಮೊದಲಾದ ಸಂಘಟನೆಗಳು ಇಂತಹ ಕೃತ್ಯಗಳನ್ನು ಮಾಡಿವೆ. ಪಾಕಿಸ್ತಾನ ಜಿಂದಾಬಾದ್ ಎಂದಾಗಲೇ ಕಠಿಣ ಕ್ರಮ ಕೈಗೊಂಡಿದ್ದರೆ ಇಂತಹ ಕೃತ್ಯ ನಡೆಯುತ್ತಿರಲಿಲ್ಲ” ಎಂದರು.
“ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಲಾಗುತ್ತದೆ. ಪಾಕಿಸ್ತಾನಕ್ಕೆ ಅಪಮಾನ ಮಾಡಲು ಧ್ವಜವನ್ನು ರಸ್ತೆಗೆ ಅಂಟಿಸಿದರೆ ಅದನ್ನು ಮಹಿಳೆಯರು ಎತ್ತಿಕೊಂಡು ಹೋಗುತ್ತಾರೆ. ಅಮಾಯಕ ಹಿಂದೂ ಕಾರ್ಯಕರ್ತರ ಬಳಿ ಯಾವುದೇ ಆಯುಧ ಇಲ್ಲವೆಂದು ತಿಳಿದು ದಾಳಿ ಮಾಡಲಾಗುತ್ತಿದೆ” ಎಂದು ಹೇಳಿದರು.
“ಸುಹಾಸ್ ಎಲ್ಲೆಲ್ಲಿ ಓಡಾಡುತ್ತಾನೆ, ಆತನ ಬಳಿ ಆಯುಧ ಇಲ್ಲವೆಂದು ತಿಳಿದಿದ್ದು ಹೇಗೆ? ಈ ವಿಚಾರದಲ್ಲಿ ಪೊಲೀಸ್ ಇಲಾಖೆಯಿಂದಲೇ ಮಾಹಿತಿ ಸೋರಿಕೆಯಾಗಿರುವ ಅನುಮಾನವಿದೆ. ಇಂತಹ ಘಟನೆ ನಡೆದಾಗ ಸಿಎಂ ಸಿದ್ದರಾಮಯ್ಯ ಸಬೂಬು ಹೇಳುವ ನಡೆ ತೋರುತ್ತಾರೆ. ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪಾಕಿಸ್ತಾನ ಜಿಂದಾಬಾದ್ ಎಂದರೂ ಏನೂ ಅನ್ನಿಸುವುದಿಲ್ಲ. ಅವರದ್ದು ಅಂತಹ ಎಮ್ಮೆ ಚರ್ಮ” ಎಂದು ಟೀಕಿಸಿದರು.