ಮಂಗಳೂರಿನಲ್ಲಿ ನಡೆದ ದ್ವೇಷ ಹತ್ಯೆಯ ಹಿಂದೆ ಯಾರೇ ಇರಲಿ, ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಶುಕ್ರವಾರ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, “ಸುಹಾಸ್ ಶೆಟ್ಟಿಯವರನ್ನ ಘೋರವಾಗಿ ಹತ್ಯೆ ಮಾಡಲಾಗಿದ್ದು, ಇದೊಂದು ದುರ್ಘಟನೆ” ಎಂದು ವಿಷಾದ ವ್ಯಕ್ತಪಡಿಸಿದರು.
“ಮಂಗಳೂರಿನಲ್ಲಿ ಇತ್ತಿಚೆಗೆ ನಡೆದ ಹತ್ಯೆಗಳ ಹಿನ್ನೆಲೆಯಲ್ಲಿ ಪೊಲೀಸರು ಕೈಗೊಂಡಿರುವ ಕ್ರಮಗಳ ಕುರಿತಂತೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿದ್ದೇನೆ. ಮಂಗಳೂರಿನಲ್ಲಿ ದ್ವೇಷ ಹತ್ಯೆಗಳು ನಡೆಯುತ್ತಿರುವುದು ಖಂಡನೀಯ. ಈ ರೀತಿಯ ಹತ್ಯೆಗಳನ್ನ ನಿಯಂತ್ರಣಕ್ಕೆ ತರಲು ಎಲ್ಲಾ ಸಂಘಟನೆಗಳು, ಪಕ್ಷಗಳು ಸೇರಿ ಸಹಕರ ಅಗತ್ಯವಾಗಿದೆ” ಎಂದರು.
“ಅಶ್ರಫ್ ಎಂಬ ವ್ಯಕ್ತಿ ಹತ್ಯೆ ಹಿಂದೆಯೇ ಸುಹಾಸ್ ಶೆಟ್ಟಿಯವರ ಈ ಕೊಲೆ ಆಗಿದೆ. ಸುಹಾಸ್ ಕೂಡಾ ರೌಡಿ ಶೀಟರ್ ಆಗಿದ್ದರು. ಆದರೆ ಈ ರೀತಿಯ ಕೊಲೆ ಆಗಬಾರದು. ನಮಗೆ ಎಲ್ಲರೂ ಒಂದೇ. ಜಾತಿ ಧರ್ಮಯಾವುದೇ ಇರಲಿ. ಈ ರೀತಿಯ ಕೊಲೆಗಳು ಮರುಕಳಿಸಬಾರದು. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಹತ್ಯೆಯ ಹಿಂದೆ ಯಾರೇ ಇದ್ದರೂ ತನಿಖೆ ನಡೆಸಿ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು” ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಕರ್ನಾಟಕಕ್ಕೂ ಕಾಲಿಟ್ಟ ಮಾಬ್ ಲಿಂಚಿಂಗ್; ಇಲ್ಲಿ ಸರ್ಕಾರ ಜೀವಂತವಿದೆಯೇ?
ಮಂಗಳೂರಿನಲ್ಲಿ ವಾತಾವರಣ
“ಮಂಗಳೂರಿನಲ್ಲಿ ಬಹಳ ಗಂಭೀರವಾಗಿ ಭಯದ ವಾತಾವರಣ ಇದೆ. ಹೀಗಾಗಿ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ. ಇವತ್ತು ಸುಹಾಸ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಕ್ರಮಗಳನ್ನ ತೆಗೆದುಕೊಳ್ಳಲು ಸೂಚಿಸಲಾಗಿದೆ. ಬಿಜೆಪಿ ನಾಯಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸ್ವತಂತ್ರರು. ಬಿಜೆಪಿ ನಾಯಕರು
ಯಾರು ಕೂಡಾ ಜವಾಬ್ದಾರಿ ಮರೆತು ನಡೆದುಕೊಳ್ಳಬಾರದು. ಸಂಘರ್ಷಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಿದೆ. ಅನೇಕ ಮುಖಂಡರು ಇವತ್ತು ದಕ್ಷಿಣ ಕನ್ನಡ ಕ್ಕೆ ಭೇಟಿ ನೀಡುತ್ತಿದ್ದು, ಅಲ್ಲಿ ಮಾತಾಡುವಾಗ ಜವಾಬ್ದಾರಿ ಯಿಂದ ಮಾತಾಡಬೇಕು. ಯಾರನ್ನು ಕೂಡಾ ಓಲೈಸುವಂತೆ ಮಾತಾಡಬಾರದು. ನಾವು ಮಾತಾಡುವಾಗಾ ಏನು ಪರಿಣಾಮಗಳು ಆಗಲಿವೆ ಎಂಬುದನ್ನು ಯೋಚಿಸಿ ಮಾತನಾಡಲಿ” ಎಂದು ಸಚಿವ ದಿನೇಶ್ ಗುಂಡೂರಾವ್ ಮನವಿ ಮಾಡಿದರು.
“ಹತ್ಯೆ ತನಿಖೆಯಾಗಬೇಕು. ಯಾವುದೇ ಒತ್ತಡಗಳಿಲ್ಲದೇ ಪೋಲಿಸರಿಗೆ ಕ್ರಮ ತೆಗೆದುಕೊಳ್ಳುವಂತ ವಾತಾವರಣ ನಾವು ಕಲ್ಪಿಸಿಕೊಡಲಿದ್ದೇವೆ. ಯಾರು ಅಪರಾದ ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಬೇಕು. ಕಾನೂನು ಪ್ರಕಾರ ಕ್ರಮ ಆಗಲಿದೆ.
ಮಂಗಳೂರಿಗೆ ಸಾದ್ಯವಾದಗೆಲ್ಲಾ ಭೇಟಿ ಕೊಟ್ಟು ಅಗತ್ಯ ನಿರ್ದೇಶನಗಳನ್ನ ನೀಡಿದ್ದೇನೆ. ಅಧಿಕಾರಿಗಳು, ಪೊಲೀಸರ ಜೊತೆ ಸಭೆ ಮಾಡಿದ್ದೇನೆ. ಲ್ಯಾಂಡ್ ಮಾಫಿಯಾ, ಡ್ರಗ್ಸ್ ಕಂಟ್ರೋಲ್ ಮಾಡೋದಕ್ಕೆ ಅಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಈ ರೀತಿ ಘಟನೆಗಳು ಮೇಲ್ನೋಟಕ್ಕೆ ಕೋಮು ವೈಷ್ಯಮ್ಯ ಇರುವುದನ್ನ ತೋರಿಸುತ್ತದೆ. ತನಿಖೆಯಾದ ಬಳಿಕ ಕಾರಣ ಗೊತ್ತಾಗಲಿದೆ” ಎಂದು ವಿವರಿಸಿದರು.