ನಿಜಕ್ಕೂ ಜಾತಿಗಣತಿ ನಡೆಸುತ್ತದಾ ಬಿಜೆಪಿ; ಸಿದ್ಧವಿರುವ ವರದಿ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ ಕಾಂಗ್ರೆಸ್‌?

Date:

Advertisements

ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ ಜಾತಿಗಣತಿ ವಿಚಾರ ಭಾರೀ ಸದ್ದು ಮಾಡುತ್ತಿದೆ. ಕೇಂದ್ರ ಸರ್ಕಾರ ಜನಗಣತಿ ಜೊತೆಗೆ ಜಾತಿಗಣತಿ ನಡೆಸುವುದಾಗಿ ಘೋಷಿಸಿದೆ. ಇದು ತಮ್ಮ ಹೋರಾಟಕ್ಕೆ ಸಿಕ್ಕ ವಿಜಯವೆಂದು ಕಾಂಗ್ರೆಸ್‌, ಆರ್‌ಜೆಡಿ ಸೇರಿದಂತೆ ವಿಪಕ್ಷಗಳು ಸಂಭ್ರಮಿಸುತ್ತಿವೆ. ಆದರೆ, ಜಾತಿಗಣತಿ ನಡೆಯುವುದು ಯಾವಾಗ? ಜಾತಿಗಣತಿ ವಿರುದ್ಧವಿದ್ದ ಬಿಜೆಪಿ ಇದ್ದಕ್ಕಿದ್ದಂತೆ ಜಾತಿಗಣತಿ ನಡೆಸಲು ನಿರ್ಧರಿಸಿದ್ದೇಕೆ? ಇದೇ ಸಂದರ್ಭದಲ್ಲಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಕಾಂಗ್ರೆಸ್ ಪಕ್ಷ, ಸಿದ್ದವಿರುವ ಕಾಂತರಾಜ ಆಯೋಗದ ವರದಿಯನ್ನು ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ? ವಸ್ತುಸ್ಥಿತಿ ಹೀಗಿರುವಾಗ ಹೋರಾಟಕ್ಕೆ ಸಿಕ್ಕ ಜಯ ಎಂಬ ಕಾಂಗ್ರೆಸ್ಸಿಗರ ಸಂಭ್ರಮಕ್ಕೆ ಅರ್ಥವಿದೆಯೇ?

ಕರ್ನಾಟಕದಲ್ಲಿ ಜಾತಿ ಸಮೀಕ್ಷೆಯನ್ನು ಕಾಂಗ್ರೆಸ್‌ ಸರ್ಕಾರವೇ ಮಾಡಿಸಿದ್ದರೂ, ಜಾತಿಗಣತಿ ವಿಚಾರದಲ್ಲಿ ವಿಳಂಬ ಧೋರಣೆ ತಳೆಯುತ್ತಲೇ ಬಂದಿದೆ. ಕಳೆದ ದಶಕದಲ್ಲಿ, ಕರ್ನಾಟಕದಲ್ಲಿ ಜಾತಿ ಸಮೀಕ್ಷೆ ನಡೆಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಮೊದಲ ಅವಧಿಯಲ್ಲಿ, 2015ರಲ್ಲಿ ಕಾಂತರಾಜ ಆಯೋಗವನ್ನು ರಚಿಸಿದರು. ಆಯೋಗವು ಅಂದಿನ ಸರ್ಕಾರದ ಅವಧಿ ಮುಗಿಯುವುದರಲ್ಲಿ ವರದಿಯನ್ನು ಸಿದ್ದಪಡಿಸಿತ್ತು. ಆದರೆ, ವರದಿ ಸ್ವೀಕರಿಸುವಲ್ಲಿ ವಿಳಂಬ ಮಾಡಿತು. ಆದಾಗ್ಯೂ, ಜೆಡಿಎಸ್‌ ಜೊತೆಗಿನ ಮೈತ್ರಿಯೊಂದಿಗೆ ಕಾಂಗ್ರೆಸ್‌ ಪಕ್ಷವೇ ಸರ್ಕಾರವನ್ನು ರಚಿಸಿತು. ಆದರೂ, ವರದಿ ಸ್ವೀಕಾರವಾಗಲಿಲ್ಲ.

ನಂತರದಲ್ಲಿ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಅವರು ಕಾಂತರಾಜ ವರದಿಯಲ್ಲಿನ ಅಂಕಿಅಂಶಗಳು, ದತ್ತಾಂಶವನ್ನು ಬಳಸಿಕೊಂಡು ಮತ್ತೊಂದು ವರದಿ ಸಿದ್ದಪಡಿಸಿ, ಸಿದ್ದರಾಮಯ್ಯ ಅವರು ಎರಡನೇ ಅವಧಿಗೆ ಮುಖ್ಯಮಂತ್ರಿಯಾದ ಬಳಿಕ, 2023ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿತು. ಆದಾಗ್ಯೂ, ವರದಿಯನ್ನು ಸರ್ಕಾರ ಬಹಿರಂಗಗೊಳಿಸಲಿಲ್ಲ. ಸೋರಿಕೆಯಾದ ಕೆಲ ಮಾಹಿತಿಗಳ ಸದ್ದು ನಿಲ್ಲಲಿಲ್ಲ. ಹೀಗಿದ್ದರೂ, ವರದಿಯನ್ನು ಬಹಿರಂಗಗೊಳಿಸುವಲ್ಲಿ ಸರ್ಕಾರ ಹಿಂದೇಟು ಹಾಕುತ್ತಲೇ ಬರುತ್ತಿದೆ. ಇದರ ನಡುವೆ ಕೇಂದ್ರ ಸರ್ಕಾರ ಜಾತಿಗಣತಿ ನಡೆಸುತ್ತೇವೆ ಎಂದು ಹೇಳಿದೆ.

Advertisements

ಬಿಜೆಪಿ ಯಾಕೆ ಜಾತಿಗಣತಿ ನಡೆಸಲು ಮುಂದಾಗಿದೆ?

ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ, ಜಾತಿಗಣತಿಯನ್ನು ವಿರೋಧಿಸುತ್ತದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಈ ಹಿಂದೆ, ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವ ಮತ್ತು ಇತರ ಹಿಂದುಳಿತ ವರ್ಗ (ಇಬಿಸಿ) ಪ್ರಮಾಣವನ್ನು ಗುರುತಿಸಲು ಮಂಡಲ್ ಆಯೋಗವು ಸಮೀಕ್ಷೆ ನಡೆಸಿ ಸಿದ್ದಪಡಿಸಿದ್ದ ‘ಮಂಡಲ್ ವರದಿ’ಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್ ವರದಿಯು ಹಿಂದುತ್ವದ ಐಕ್ಯತೆಯನ್ನು ನಾಶ ಮಾಡುತ್ತದೆ ಎಂದು ಪ್ರತಿಪಾದಿಸಿತ್ತು. ಮಂಡಲ್ ಆಯೋಗವನ್ನು ಕಮಂಡಲೀಕರಣಗೊಳಿಸಿ, ವರದಿಯನ್ನು ನಗಣ್ಯಗೊಳಿಸಲು ಬಿಜೆಪಿ/ಸಂಘಪರಿವಾರವು ರಾಮಜನ್ಮಭೂಮಿ ವಿಚಾರವನ್ನು ಮುನ್ನೆಲೆಗೆ ತಂದಿತು. ಮಾತ್ರವಲ್ಲದೆ, ಇತ್ತೀಚೆಗೆ, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಅವರ ಸರ್ಕಾರವು ಜಾತಿಗಣತಿ ಮಾಡಿದಾಗ, ಅದನ್ನು ಬಿಜೆಪಿ ವಿರೋಧಿಸಿತು. ಆ ನಂತರ, ಒಪ್ಪಿಕೊಂಡು, ಮೌನಕ್ಕೆ ಜಾರಿತು.

ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಾತಿಗಣತಿ ವಿರುದ್ಧವಿರುವ ತನ್ನ ನಿಲುವನ್ನು ಬಿಜೆಪಿ ಬಹಿರಂಗಪಡಿಸಿತ್ತು. ಜಾತಿಗಣತಿಯನ್ನು ಸಂಪತ್ತಿನ ಹಂಚಿಕೆಗೆ ತಳುಕು ಹಾಕಿ, ಜಾತಿಗಣತಿಗೆ ಒತ್ತಾಯಿಸುವವರನ್ನು ಅರ್ಬನ್ ನಕ್ಸಲರು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಹೇಳಿದ್ದರು.

ಹೀಗಿರುವಾಗ, ಈಗ ದಿಢೀರನೆ ಜಾತಿಗಣತಿ ನಡೆಸುತ್ತೇವೆಂದು ಬಿಜೆಪಿ ಹೇಳುತ್ತಿದೆ. ಈ ಘೋಷಣೆಯ ಹಿಂದೆ ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರ ಇರಬಹುದು. ಬಿಹಾರದ ಜನರನ್ನು ಬಿಜೆಪಿಯತ್ತ ಸೆಳೆಯಲು ಇಂತಹದ್ದೊಂದು ಘೋಷಣೆ ಮಾಡಿರಲೂಬಹುದು. ಆದರೂ, ಬಿಜೆಪಿ ನಡೆಸುವ ಜಾತಿಗಣತಿ ಹೇಗಿರಲಿದೆ? ಕಾಂಗ್ರೆಸ್ ಹೇಳುತ್ತಿರುವ ಅಥವಾ ಸಾಮಾಜಿಕ ನ್ಯಾಯದ ಉದ್ದೇಶಗಳಿಗೆ ಪೂರಕವಾಗಿರುತ್ತದೆಯೇ? ಈ ಪ್ರಶ್ನೆ ಕೇಳಿಕೊಳ್ಳದೆ ಸಂಭ್ರಮಿಸುವುದು ಮುಟ್ಟಾಳತನ.

ಇದನ್ನೂ ಓದಿ: ದಲಿತ ಸಂಘಟನೆ ಮತ್ತು ರಾಜಕೀಯ ಅಸ್ಮಿತೆ

ಬಹುಮುಖ್ಯ ವಿಚಾರವೆಂದರೆ, ಜಾತಿಗಣತಿ ಯಾಕೆ ಮಾಡಲಾಗುತ್ತದೆ? ಸಾಪೇಕ್ಷವಾದ ಹಿಂದುಳಿದಿರುವಿಕೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸಮುದಾಯಗಳಿಗೆ ಸಂಪನ್ಮೂಲ ಹಂಚುವುದಕ್ಕಾಗಿ. ಒಂದು ಸಮುದಾಯವು ಸಾಪೇಕ್ಷವಾಗಿ ಎಷ್ಟು ಹಿಂದುಳಿದಿದೆ ಎಂಬುದನ್ನು ತಿಳಿದುಕೊಳ್ಳಲು ಆರ್ಥಿಕ, ಸಾಮಾಜಿಕ ವರ್ಗೀಕರಣಕ್ಕೆ ನಿಮಯಗಳು, ಮಾನದಂಡಗಳು ಅಗತ್ಯ. ಅಂತಹ ಮಾನದಂಡಗಳನ್ನು ರೂಪಿಸದೆ, ಸಂಪನ್ಮೂಲ ಹಂಚಿಕೆಗೆ ಅಜೆಂಡಾಗಳೇ ಇಲ್ಲದೆ, ಜಾತಿಗಣತಿ ಮಾಡುವುದರಿಂದ ಉಪಯೋಗವಿಲ್ಲ ಎನ್ನುತ್ತಾರೆ ಚಿಂತಕ ಶಿವಸುಂದರ್.

ಅಂದಹಾಗೆ, ಯಾವುದೇ ಮಾನದಂಡಗಳಿಲ್ಲದೆ 2011ರಲ್ಲಿ ಜಾತಿಗಣತಿ ನಡೆದಿತ್ತು. ಆದರೆ, ಆ ಜಾತಿಗಣತಿಯ ಪರಿಪೂರ್ಣ ಅಂಶಗಳು ಬಹಿರಂಗ ಆಗಲಿಲ್ಲ. ಆ ಗಣತಿಯಲ್ಲಿ 11 ಲಕ್ಷ ಉಪಜಾತಿಗಳು ನೋಂದಣಿಯಾಗಿದ್ದವು. ಈ ಎಲ್ಲ ಉಪಜಾತಿಗಳನ್ನು ಹೇಗೆ ವರ್ಗೀಕರಣ ಮಾಡುವುದು? ಇಷ್ಟು ಜಾತಿಗಳಿಗೆ ಹೇಗೆ ಮೀಸಲಾತಿ ನೀಡುವುದು ಎಂಬುದನ್ನು ಕಂಡುಕೊಳ್ಳಲಾಗದೆ ಆ ವರದಿಯನ್ನೇ ಮುಚ್ಚಿಡಲಾಯಿತು.

ಇನ್ನೊಂದು ವಿಚಾರವೆಂದರೆ, ಬಿಹಾರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ರಾಜ್ಯಗಳ ಮಟ್ಟಿಗೆ ಜಾತಿಗಣತಿ ನಡೆದಿದೆ. ಇವುಗಳ ಸಾರ ಆಯಾ ರಾಜ್ಯಗಳಲ್ಲಿ ಒಬಿಸಿ ಮತ್ತು ದಲಿತರ ಸಂಖ್ಯೆ ಪ್ರಬಲ ಜಾತಿಗಳಿಗಿಂತ ಹೆಚ್ಚಿದೆ. ಈ ಸಮುದಾಯಗಳೇ ಬಹುಸಂಖ್ಯಾತರು ಎಂಬುದಾಗಿತ್ತು. ಅದರಲ್ಲೂ, ಒಬಿಸಿಗಳ ಒಳಗೂ ಮುಂದುವರೆದ ಸಮುದಾಯಗಳಿಗಿಂತ ಹಿಂದುಳಿದ ಸಮುದಾಯಗಳ ಜನಸಂಖ್ಯೆಯೇ ಹೆಚ್ಚು ಎಂಬುದನ್ನು ಒತ್ತಿ ಹೇಳಿತ್ತು.

ಈ ವರದಿಗಳನ್ನು ಬಹಿರಂಗಗೊಳಿಸಿ, ಅದಕ್ಕೆ ತಕ್ಕಂತೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತೇವೆ ಎಂದರೆ, ಅದಕ್ಕೆ ಹಲವಾರು ರೀತಿಯಲ್ಲಿ ಕೆಲಸಗಳು ನಡೆಯಬೇಕು. ಇಲ್ಲದಿದ್ದರೆ, ವರ್ಗಗಳ ಒಳಗೇ ಸಂಘರ್ಷಗಳು ಉಂಟಾಗುತ್ತವೆ. ಉದಾಹರಣೆಗೆ, ಒಬಿಸಿ ವರ್ಗದಲ್ಲಿ ಮುಂದುವರೆದವರು ಮತ್ತು ಹಿಂದುಳಿದವರು ಇದ್ದಾರೆ. ಇಲ್ಲಿ, ಮುಂದುವರೆದವರು ಹಿಂದುಳಿದವರಿಗಾಗಿ ತಾವು ಪಡೆಯುತ್ತಿರುವ ಗರಿಷ್ಠ ಪಾಲಿನಲ್ಲಿ ಒಂದಷ್ಟು ಪಾಲನ್ನು ಬಿಟ್ಟುಕೊಟ್ಟು, ಹಂಚಿಕೊಳ್ಳುವುದಕ್ಕೆ ಸಿದ್ದರಾಗಬೇಕು. ಆ ರೀತಿಯಲ್ಲಿ ಸರ್ಕಾರವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವಂತೆ ಮಾಡಬೇಕು.

ಜೊತೆಗೆ, ಜಾತಿ ಶ್ರೇಣೀಕರಣದ ಆಧಾರದ ಮೇಲೆ ಸಂಪನ್ಮೂಲ ಹಂಚಿಕೆಗೆ ಅಗತ್ಯವಿರುವ ಮಾನದಂಡಗಳು, ಬೇಡಿಕೆಗಳು ಬರಬೇಕು. ಅದಕ್ಕೆ, 50% ಮೀಸಲಾತಿ ಮೇಲ್ಮಿತಿ ರದ್ದಾಗಬೇಕು, ಮೀಸಲಾತಿ ಜಾಸ್ತಿಯಾಗಬೇಕು, ಖಾಸಗೀಕರಣ ರದ್ದಾಗಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ಅನ್ವಯವಾಗಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಸಂಪನ್ಮೂಲದ ಹಂಚಿಕೆ ಆಗಬೇಕು. ಆಗ ವಿತರಣಾ ನ್ಯಾಯ ಬರುತ್ತದೆ.

ಅದನ್ನೇನೂ ಮಾಡದೆ, ಜಾತಿಗಣತಿ ಮಾಡಿ, ಅದನ್ನ ಇಟ್ಟುಕೊಂಡು ನಾವು ನಿಮ್ಮ ಪರವಾಗಿದ್ದೇವೆ ಎನ್ನುವುದು ರಾಜಕೀಯ ಮಾಡುವುದಕ್ಕಷ್ಟೇ ಸೀಮಿತವಾಗುತ್ತದೆ. ಜಾತಿಗಣತಿ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್‌ ಸೇರಿದಂತೆ ಹಲವು ಪಕ್ಷಗಳು ಇದೆಲ್ಲವನ್ನು ಮಾಡಲು ಸಿದ್ದರಿಲ್ಲ. ಮೀನಾಮೇಷ ಎಣಿಸುತ್ತಿವೆ. ಹಿಂದೇಟು ಹಾಕುತ್ತಿವೆ. ಹೀಗಿರುವಾಗ ಬಿಜೆಪಿ ಇದೆಲ್ಲವನ್ನೂ ಮಾಡುತ್ತದೆಯೇ?

ಬಿಜೆಪಿಯಿಂದ ಜಾತಿಗಣತಿ ಸಾಧ್ಯವೇ?

ಬಿಜೆಪಿಯ ವರ್ತನೆಗಳನ್ನು ಗಮನಿಸಿದರೆ, ಬಿಜೆಪಿಗೆ ಜಾತಿಗಣತಿ ಮಾಡುವ ಯಾವುದೇ ಉದ್ದೇಶ ಇಲ್ಲ. ಈಗ ಜನಗಣತಿಗಾಗಿ 530 ಕೋಟಿ ರೂ. ಕೊಡಲಾಗಿದೆ. ಈ ಮೊತ್ತದಲ್ಲಿ ಜನಗಣತಿ ಮಾಡುವುದೇ ಕಷ್ಟ. ಇನ್ನು, ಜಾತಿಗಣತಿಯನ್ನೂ ಅದರೊಳಗೆ ಸೇರಿಸಬೇಕೆಂದರೆ, ಅದಕ್ಕಾಗಿ ಬಹಳಷ್ಟು ಕೆಲಸ ಮಾಡಬೇಕು. 11 ಲಕ್ಷ ಉಪಜಾತಿಗಳನ್ನು ಗಣತಿಯೊಳಗೆ ಉಲ್ಲೇಖಿಸಬೇಕು. ಅವುಗಳನ್ನು ವರ್ಗೀಕರಣ ಮಾಡಬೇಕು. ಪರಿಶೀಲಿಸಬೇಕು. ಇದಕ್ಕೆಲ್ಲ ಮತ್ತಷ್ಟು ಹಣ ಬೇಕಾಗುತ್ತದೆ. ಮಾತ್ರವಲ್ಲ, ಸಮಯವೂ ಬೇಕಾಗುತ್ತದೆ.

ಇದೆಲ್ಲವನ್ನೂ ಮಾಡಬೇಕೆಂದರೆ, ಜನಗಣತಿಯೇ ತಡವಾಗುತ್ತದೆ. ‘ಜಾತಿಗಣತಿ ನಡೆಸುತ್ತೇವೆ, ಅದಕ್ಕಾಗಿ ಕೆಲಸಗಳು ನಡೆಯುತ್ತಿವೆ’ ಎಂಬುದನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ಜನಗಣತಿಯನ್ನೂ ಕನಿಷ್ಠ 2 ವರ್ಷ ಮುಂದೂಡಬಹುದು. ಪರಿಣಾಮವಾಗಿ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ತಡವಾಗುತ್ತದೆ. ಇದರಿಂದ, ರಾಜಕೀಯದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವುದು ನನೆಗುದಿಗೆ ಬೀಳುತ್ತದೆ. ಇದೆಲ್ಲವೂ ವಿಳಂಬವಾಗಬೇಕು ಎಂಬುದೇ ಬಿಜೆಪಿಯ ಹುನ್ನಾರವಾಗಿರಲೂಬಹುದು.

”ಜನಗಣತಿ, ಜಾತಿಗಣತಿ ಹಾಗೂ ಮಹಿಳಾ ಮೀಸಲಾತಿ ಇದಾವುದನ್ನೂ ಮಾಡದೆಯೇ 2029ರ ಲೋಕಸಭಾ ಚುನಾವಣೆಯನ್ನು ಮುಗಿಸಬೇಕು ಎಂಬುದೇ ಬಿಜೆಪಿಯ ಉದ್ದೇಶ. ಜನಗಣತಿ ನಡೆಸುವುದು ಮತ್ತು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಈಗ ಜಾತಿಗಣತಿ ವಿಚಾರವನ್ನು ಮುಂದೆ ತಂದಿದೆ” ಎಂಬುದು ಶಿವಸುಂದರ್ ಅವರ ಅಭಿಪ್ರಾಯ.

ಕಾಂಗ್ರೆಸ್‌ ಸಂಭ್ರಮದ ಹಿಂದಿನ ಹಿಪಾಕ್ರಸಿ ಮತ್ತು ಅದು ಬಯಸುತ್ತಿರುವುದೇನು?

ಮೋದಿ ಸರ್ಕಾರ ಜಾತಿಗಣತಿ ಮಾಡುತ್ತೇವೆ ಎಂದಿರುವುದನ್ನು ತಮ್ಮ ಗೆಲುವು ಎಂದು ಕಾಂಗ್ರೆಸ್‌ ತನ್ನ ರಾಜಕೀಯ ಬೂಟಾಟಿಕೆಯ (ಹಿಪಾಕ್ರಸಿ) ಭಾಗವಾಗಿ ಸಂಭ್ರಮಿಸುತ್ತಿದೆ. ಕೇಂದ್ರ ಸರ್ಕಾರ ಜಾತಿಗಣತಿ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವಲ್ಲಿ ವೈಯಕ್ತಿಕವಾಗಿ ರಾಹುಲ್‌ ಗಾಂಧಿ ಅವರ ಸ್ಪಷ್ಟ ನಿಲುವು, ಹೋರಾಟಗಳ ಪಾತ್ರವಿದೆ. ಆದರೆ, ಪಕ್ಷವಾಗಿ ಕಾಂಗ್ರೆಸ್‌ನದ್ದು ಗೌಣ.

ಇದನ್ನೂ ಓದಿ: ಜಾತಿ ಗಣತಿ ವರದಿ ವಿರೋಧಿಸುತ್ತಿರುವ ಶಾಮನೂರು ಹುನ್ನಾರವೇನು? ಕಾಂಗ್ರೆಸ್‌ನಲ್ಲಿ ಕ್ರಮ ಯಾಕಿಲ್ಲ?

ನಮ್ಮ ಹೋರಾಟದ ಕಾರಣದಿಂದಲೇ ಕೇಂದ್ರ ಒಪ್ಪಿಕೊಂಡಿತೆಂದು ಹೇಳಿಕೊಂಡು ಕಾಂಗ್ರೆಸ್‌, ಕಾಂಗ್ರೆಸ್‌ನ ಒತ್ತಡದಿಂದಲೇ ಮೋದಿ ಸರ್ಕಾರ ಮಂಡಿಯೂರಿತು ಎಂಬುದನ್ನು ಇತರರು ಬಿಜೆಪಿಯನ್ನು ಟೀಕಿಸುವುದಕ್ಕೆ ಬಳಸಿಕೊಳ್ಳಬಹುದು. ಆದರೆ, ಇದನ್ನು ಮೀರಿ, ಒಬಿಸಿ ಸಮುದಾಯವನ್ನು ಮತಬ್ಯಾಂಕ್ ಮಾಡಿಕೊಳ್ಳುತ್ತೇವೆ. ಹಿಂದುತ್ವಕ್ಕೆ ಪೆಟ್ಟುಕೊಡುತ್ತೇವೆ ಎಂಬುದೆಲ್ಲ ಸುಳ್ಳು.

ಏಕೆಂದರೆ, ಬಹುತೇಕ ಒಬಿಸಿಗಳು ಈಗಾಗಲೇ ನವಬ್ರಾಹ್ಮಣರಾಗಿದ್ದಾರೆ. ಬಿಜೆಪಿ ಜೊತೆಗಿದ್ದಾರೆ. ಒಬಿಸಿ ಸಮುದಾಯದಲ್ಲಿ ಅತ್ಯಂತ ಹಿಂದುಳಿದ ವರ್ಗವನ್ನೂ ನಾನಾ ರೀತಿಯಲ್ಲಿ ಬಿಜೆಪಿ ತನ್ನಡೆಗೆ ಸೆಳೆದುಕೊಂಡಿದೆ. ಉತ್ತರ ಪ್ರದೇಶ, ಬಿಹಾರ, ಕರ್ನಾಟಕದಲ್ಲಿಯೂ ಅದು ಎದ್ದು ಕಾಣುತ್ತದೆ.

ಕರ್ನಾಟಕದಲ್ಲಿನ ಒಬಿಸಿ ಸಮುದಾಯದ ಬಹುತೇಕ 70-75% ಜನರು ಬ್ರಾಹ್ಮಣೀಕರಣಗೊಂಡಿದ್ದಾರೆ. ಬಿಜೆಪಿ ಜೊತೆಯಲ್ಲಿದ್ದಾರೆ. ರಾಜ್ಯದ ಒಕ್ಕಲಿಗರಲ್ಲಿ 30-40% ಹಾಗೂ ಲಿಂಗಾಯತರಲ್ಲಿ 30% ಮಾತ್ರವೇ ಕಾಂಗ್ರೆಸ್‌ ಜೊತೆಗಿದ್ದಾರೆ. ರಾಜ್ಯದಲ್ಲಿ ಹೆಚ್ಚಾಗಿ ಕಾಂಗ್ರೆಸ್‌ ಜೊತೆಗಿರುವುದು ಮುಸ್ಲಿಮರು ಮತ್ತು ದಲಿತರು ಮಾತ್ರ.

ಜಾತಿಗಣತಿ ಹೆಸರಿನಲ್ಲಿ ಒಬಿಸಿ, ಒಕ್ಕಲಿಗರು ಹಾಗೂ ಲಿಂಗಾಯತರನ್ನು ತಮ್ಮತ್ತ ಸೆಳೆಯುತ್ತೇವೆ ಎಂಬ ವಿಶ್ವಾಸ ಕಾಂಗ್ರೆಸ್‌ ನಾಯಕರಲ್ಲಿತ್ತು. ಆದರೆ, ಈಗ ಅದು ಅಸಾಧ್ಯವೆಂದು ರಾಜ್ಯ ಕಾಂಗ್ರೆಸ್ಸಿಗರಿಗೆ ಅರ್ಥವಾಗಿದೆ. ಜಾತಿಗಣತಿ ವರದಿ ಜಾರಿಯಾದರೆ, ಒಬಿಸಿ ಸಮುದಾಯ ತಮ್ಮಿಂದ ದೂರವಾಗಬಹುದು ಎಂಬ ಆತಂಕವೂ ಕಾಂಗ್ರೆಸ್‌ನಲ್ಲಿದೆ. ಹೀಗಾಗಿಯೇ, ವಿಳಂಬ ಮಾಡುತ್ತಿದ್ದಾರೆ.

ಕಾಂಗ್ರೆಸ್‌ನ ಈ ವಿಳಂಬಕ್ಕೆ ಜಾತಿಗಣತಿ ನಡೆಸುತ್ತೇವೆ ಎಂಬ ಕೇಂದ್ರದ ನಿರ್ಧಾರವು ಮತ್ತಷ್ಟು ನೆರವಾಗಲಿದೆ. ‘ಕಾಂತರಾಜ ವರದಿಗೆ 10-12 ವರ್ಷಗಳಾಗಿವೆ. ಅದನ್ನು ಅನುಷ್ಠಾನಕ್ಕೆ ತರುವುದಕ್ಕಿಂತ ಇನ್ನು 2 ವರ್ಷ ಇದ್ದರೆ, ಹೊಸ ಜಾತಿಗಣತಿ ವರದಿಯೇ ಬರುತ್ತದೆ. ಅದರ ಆಧಾರದ ಮೇಲೆ ಮೀಸಲಾತಿ, ಸಂಪನ್ಮೂಲ ಹಂಚಿಕೆ ಮಾಡಿ’ ಎಂಬ ವಾದ ಒಬಿಸಿ ಸಮುದಾಯಗಳಲ್ಲಿ ಭುಗಿಲೇಳುವಂತೆ ಮಾಡಬಹುದು. ಈ ವಾದ ಮುನ್ನೆಲೆಗೆ ಬಂದಂತೆ, ಅದನ್ನೇ ಬಳಸಿಕೊಂಡು, ಕಾಂಗ್ರೆಸ್‌ ಸರ್ಕಾರವು ಜಾತಿಗಣತಿ ವರದಿ ಅನುಷ್ಠಾನ ಮತ್ತು ಸಂಬಂಧಿತ ಪ್ರಕ್ರಿಯೆಗಳನ್ನು ಮುಂದೆ ಹಾಕಬಹುದು. ಅಲ್ಲಿಗೆ, ಕಾಂತರಾಜ ವರದಿಯ ಕತೆ ಮುಗಿಯುತ್ತದೆ. ಕಾಂಗ್ರೆಸ್‌ಗೂ ಇದೇ ಬೇಕಾಗಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

ಕ್ರಿಮಿನಲ್ ಪ್ರಕರಣಗಳಲ್ಲಿ ಪ್ರಧಾನಿ, ಸಿಎಂ ಪದಚ್ಯುತಿಗೆ ಅನುವು ಮಾಡಿಕೊಡುವ ಮಸೂದೆ ಸಂಸತ್ತಿನಲ್ಲಿ ಮಂಡನೆ

ಗಂಭೀರ ಕ್ರಿಮಿನಲ್ ಪ್ರಕರಣಗಳಲ್ಲಿ ಬಂಧಿಸಲ್ಪಟ್ಟ ಅಥವಾ ಬಂಧನದಲ್ಲಿರುವ ಚುನಾಯಿತ ಪ್ರತಿನಿಧಿಗಳನ್ನು ಅಧಿಕಾರದಿಂದ...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗದಗ | ಮುಶಿಗೇರಿ ವಸತಿ ನಿಲಯಕ್ಕೆ ಮೂಲ ಸೌಕರ್ಯಗಳ ಕೊರತೆ; ವಿದ್ಯಾರ್ಥಿಗಳ ಗೋಳು ಕೇಳೋರ್ಯಾರು?

ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ವಸತಿ...

Download Eedina App Android / iOS

X