ಮಂಗಳೂರಿನ ಪ್ಯಾಲಿಲಾನ್ ಬಾರಿನಲ್ಲಿ ಕುಡಿದು ಗಲಾಟೆ ಮಾಡಿದ್ದ ಸುಹಾಸ್ ಶೆಟ್ಟಿ ಮತ್ತು ಗ್ಯಾಂಗ್.. ಹಿಂದುತ್ವ ಕಾರ್ಯಕರ್ತ ಎನ್ನಲಾದ ಆತ ಮಾಡಿದ್ದೇನು?
ಮಂಗಳೂರು ನಗರದ ಬಜಪೆ ಕಿನ್ನಿಪದವು ಜನನಿಬಿಡ ಪ್ರದೇಶದಲ್ಲಿ ಗುರುವಾರ ರಾತ್ರಿ ದುಷ್ಕರ್ಮಿಗಳಿಂದ ಕೊಲೆಯಾದ ರೌಡಿ ಶೀಟರ್ ಸುಹಾಸ್ ಶೆಟ್ಟಿ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳು ಮುನ್ನೆಲೆಗೆ ಬಂದಿವೆ.
ಕೀರ್ತಿ ಎಂಬವರನ್ನು ಕೊಂದಿದ್ದ ಪ್ರಕರಣದಲ್ಲಿ ದಲಿತ ದೌರ್ಜನ್ಯ ಕೇಸ್ ಕೂಡ ದಾಖಲಾಗಿತ್ತು. ಆ ಪ್ರಕರಣದ ವಿಚಾರಣೆಯೂ ನಡೆಯುತ್ತಿದೆ. ಆದರೆ ಸುಹಾಸ್ ಗ್ಯಾಂಗ್ ಆಗಾಗ್ಗೆ ಕುಡಿದು ಗಲಾಟೆ ಮಾಡುತ್ತಾ ಬಂದಿರುವುದನ್ನು ಸುಹಾಸ್‌ನ ವಿರುದ್ಧ ದಾಖಲಾಗಿದ್ದ ಪ್ರಕರಣಗಳು ಸ್ಪಷ್ಟಪಡಿಸುತ್ತಿವೆ. ರೌಡಿಶೀಟರ್ ಆಗಿ ಗುರುತಿಸಿಕೊಂಡ ವ್ಯಕ್ತಿಯ ಪರ ಬಿಜೆಪಿ ಮತ್ತು ಸಂಘಪರಿವಾರದ ಗುಂಪುಗಳು ಬೀದಿಗಿಳಿದಿವೆ.
ಮಂಗಳೂರಿನ ಬಜಪೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಸಂಖ್ಯೆ 0019/2020 ಹೇಳುವಂತೆ ಸುಭಾಶ್ ಎಂದು ಕೇಸ್‌ನಲ್ಲಿ ಉಲ್ಲೇಖಗೊಂಡಿರುವ ಇದೇ ಸಹಾಸ್ ಶೆಟ್ಟಿ ಮತ್ತು ಗ್ಯಾಂಗ್ ಕುಡಿದು ಮಾಡಿದ್ದ ರಂಪಾಟವು ಈತನ ಕ್ರಿಮಿನಲ್ ವೃತ್ತಾಂತವನ್ನು ಹೇಳುತ್ತದೆ.
ಮಂಗಳೂರಿನ ಕಿನ್ನಿಪದವು ನಿವಾಸಿ ಭಾಸ್ಕರ ಎಂಬವರು ನೀಡಿದ ದೂರಿನ ಆಧಾರದಲ್ಲಿ ಸುಹಾಸ್ ಶೆಟ್ಟಿ ಸೇರಿದಂತೆ ಪಚ್ಚು, ಧನು, ಭವಿತ್ ಎಂಬುವರ ವಿರುದ್ಧ ಐಪಿಎಸ್ ಸೆಕ್ಷನ್ 143, 147, 148, 323, 324, 504, 506 ಅಡಿ ಪ್ರಕರಣ ದಾಖಲಾಗಿತ್ತು.
ದೂರಿನಲ್ಲಿ ಏನಿತ್ತು?
ದಿನಾಂಕ 20.01.2020 ರಂದು ಮಧ್ಯಾಹ್ನ ಸುಮಾರು 3:00 ಗಂಟೆಯ ಸಮಯದಲ್ಲಿ ನಡೆದ ಘಟನೆ ಇದು. ಮಂಗಳೂರಿನ ಬಜಪೆ ಗ್ರಾಮದ, ಕಿನ್ನಿಪದವಿನಲ್ಲಿರುವ ಪಾಪಿಲೋನ್ ಬಾರಿನಲ್ಲಿ ಹರೀಶ್ ಎಂಬವವರೊಂದಿಗೆ ಭಾಸ್ಕರ್ ಅವರು ಊಟ ಮಾಡುತ್ತಿದ್ದರು. ಬದಿಯ ರೂಮಿನಲ್ಲಿದ್ದ ಯುವಕರು ಜೋರು ಬೊಬ್ಬೆ ಹಾಕುತ್ತಿದ್ದರು.
ಇದನ್ನೂ ಓದಿರಿ: ಮಂಗಳೂರು | ಹತ್ಯೆಯ ಹಿಂದಿರುವ ಅಪರಾಧಿಗಳಿಗೆ ಶಿಕ್ಷೆಯಾಗಲಿದೆ: ಸಚಿವ ದಿನೇಶ್ ಗುಂಡೂರಾವ್
ಇದನ್ನು ನೋಡಿದ ಭಾಸ್ಕರ್ ಅವರು ತಮ್ಮ ಪರಿಚಯದ ಹುಡುಗರಾದ ಸುಭಾಶ್ (ಅಂದರೆ ಸುಹಾಸ್ ಶೆಟ್ಟಿ), ಪಚ್ಚು, ಧನು ಮತ್ತು ಭವಿತ್ ಅವರಲ್ಲಿ ‘ಮೆದು ದನಿಯಲ್ಲಿ ಮಾತಾಡಿ’ ಎಂದು ಕೋರಿಕೊಂಡರು. ಆಗ ಸುಹಾಸ್ ಮತ್ತು ಪಚ್ಚು ಏಕಾಏಕಿ ಭಾಸ್ಕರ್ ಅವರನ್ನು ನಿಂದಿಸತೊಡಗಿದರು. ‘ಬೋ*ಮಗನೇ, ಈ ಬಾರ್ ನಿನ್ನ ಅಪ್ಪನದಾ? ನಮ್ಮನ್ನು ಕೇಳಲು ನೀನು ಯಾರು, ಬ್ಯಾವರ್ಸಿ’ ಎಂದು ಬಾಯಿಗೆ ಬಂದಂತೆ ಅವಾಚ್ಯ ಶಬ್ದಗಳಿಂದ ಬೈದರು. ಆರೋಪಿಗಳೆಲ್ಲರೂ ಸೇರಿ ಭಾಸ್ಕರ್ ಅವರಿಗೆ ಕೈಯಿಂದ ಹೊಡೆದು, ನೆಲಕ್ಕೆ ಉರುಳಿಸಿ ಕಾಲಿನಿಂದ ತುಳಿದರು. ಅಲ್ಲದೆ ಆರೋಪಿ ಪಚ್ಚು ಅಲ್ಲೇ ಇದ್ದ ಒಂದು ಕುರ್ಚಿಯಿಂದ ಭಾಸ್ಕರ್ ಅವರಿಗೆ ಹೊಡೆದನು. ನಿನ್ನನ್ನು ಮುಂದಕ್ಕೆ ಕೂಡಾ ಬಿಡುವುದಿಲ್ಲವೆಂದು ಜೀವ ಬೆದರಿಕೆಯನ್ನೂ ಹಾಕಿದರು. ಆರೋಪಿಗಳ ಹಲ್ಲೆಯಿಂದ ಭಾಸ್ಕರ್ ಅವರ ಕಣ್ಣುಗಳು ಬಾತುಕೊಂಡಿದ್ದವು ಮತ್ತು ತಲೆಯಲ್ಲಿ ನೋವು ಜಾಸ್ತಿಯಾಗಿತ್ತು. ಆದ್ದರಿಂದ ದಿನಾಂಕ 22.01.2020 ರಂದು ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು. ಆರೋಪಿಗಳ ಭಯದಿಂದಾಗಿ ಘಟನೆಯ ಕುರಿತು ದೂರು ಕೊಡಲು ವಿಳಂಬವನ್ನೂ ಮಾಡಿದರು. ಇದಿಷ್ಟು ಸುಹಾಸ್ ಮತ್ತು ಗ್ಯಾಂಗ್ ಕುಡಿದು ಮಾಡಿದ್ದರು ಎನ್ನಲಾದ ಕೇಸಿನ ವೃತ್ತಾಂತ. ಆದರೆ ಈ ಪ್ರಕರಣ ನಂತರದಲ್ಲಿ ಖುಲಾಸೆಯಾಗಿತ್ತು.

ಕೀರ್ತಿ ಕೊಲೆ ಪ್ರಕರಣ
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿ 20 ವರ್ಷದ ಯುವಕ ಕೀರ್ತಿ ಎಂಬವರನ್ನು 2020ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ಸುಹಾಸ್ ಶೆಟ್ಟಿ ಎರಡನೇ ಆರೋಪಿಯಾಗಿದ್ದನು. ಆನಂತರದಲ್ಲಿ ದೀಪೇಶ್, ಸುಹಾಸ್, ಗೌತಮ್, ಉಮಾನಾಥ, ಪ್ರಶಾಂತ್ ಮತ್ತು ಇತರರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 323, 324, 504, 506, 307, 302, 149 ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಏನಿದು ಕೇಸ್?
ಕೀರ್ತಿ, ಮನೀಶ್ ಜೋಗಿ ಮತ್ತು ನಿತಿನ್ ಪೂಜಾರಿ ಅವರು ಈ ಪ್ರಕರಣದ ಸಂತ್ರಸ್ತರು. ಜೋಗಿ ಸಮುದಾಯದ ಮನೀಶ್ ಜೋಗಿಯವರು ನೀಡಿದ್ದ ದೂರಿನ ಅನ್ವಯ ಪ್ರಕರಣ ದಾಖಲಾಗಿತ್ತು.
ಮನೀಶ್ ಜೋಗಿಯವರ ಸ್ನೇಹಿತನಾದ ಪ್ರಸಾದ್ ಎಂಬವರು ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ಗಾಯಗೊಂಡಿದ್ದರು. ಜೊತೆಗೆ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಪ್ರಸಾದ್ ಅವರ ಬಗ್ಗೆ ಆರೋಪಿ ದೀಪೇಶ್ ಅಪಪ್ರಚಾರ ಮಾಡುತ್ತಿದ್ದನು. ಇದನ್ನು ತಿಳಿದ ಮನೀಶ್ ಜೋಗಿ, ನಿತಿನ್ ಪೂಜಾರಿ ಮತ್ತು ಕೀರ್ತಿ – ಈ ರೀತಿಯಲ್ಲಿ ಅಪಪ್ರಚಾರ ಮಾಡಬಾರದು ಎಂದು ದಿನಾಂಕ 31/05/2020ರ ಸಂಜೆ 19.30ರ ಸುಮಾರಿಗೆ ಫೋನ್ ಮುಖೇನ ದೀಪೇಶ್‌ಗೆ ವಿನಂತಿಸಿದ್ದರು. ಇಷ್ಟಕ್ಕೆ ರೊಚ್ಚಿಗೆದ್ದ ದೀಪೇಶ್ ತನ್ನ ಸ್ನೇಹಿತರಾದ ಸುಹಾಸ್, ಉಮನಾಥ್, ಪ್ರಶಾಂತ್, ಗೌತಮ್ ಮತ್ತು ಇನ್ನಿತರೊಂದಿಗೆ 4-5 ಬೈಕ್‌ಗಳಲ್ಲಿ ಅಂದು ಸಂಜೆ 7.45ರ ಸುಮಾರಿಗೆ ಮನೀಶ್ ಅವರನ್ನು ಹುಡುಕಿ ಬಂದಿದ್ದರು. ಮಂಗಳೂರು ತಾಲ್ಲೂಕು ಬಡಗ ಎಕ್ಕಾರು ಗ್ರಾಮದ ದೇವರಗುಡ್ಡೆ ಎಂಬಲ್ಲಿರುವ ನಿತಿನ್ ಪೂಜಾರಿ ಅವರ ಮನೆಯ ಬಳಿಗೆ ಈ ಗ್ಯಾಂಗ್ ತಲುಪಿತ್ತು.
ಇದನ್ನೂ ಓದಿರಿ: ಸುಹಾಸ್ ಹತ್ಯೆ | ಎಸ್‍ಡಿಪಿಐ, ಪಿಎಫ್‍ಐ ಮೇಲೆ ಸರ್ಕಾರದ ಪ್ರೀತಿ, ದುಷ್ಟರಿಗೆ ಆನೆ ಬಲ: ವಿಜಯೇಂದ್ರ, ಅಶೋಕ್ ಟೀಕೆ
ಅಲ್ಲಿಯೇ ಮನೀಶ್ ಜೋಗಿ, ಕೀರ್ತಿ, ನಿತಿನ್ ಪೂಜಾರಿ ಇದ್ದರು. ಈ ಮೂವರನ್ನು ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಿ ಮರದ ದೊಣ್ಣೆ, ಬಿಯರ್ ಬಾಟಲ್ ಮತ್ತು ಚೂರಿಯಿಂದ ಹಲ್ಲೆ ನಡೆಸಿದರು. ಪರಿಣಾಮವಾಗಿ ಮನೀಶ್ ಜೋಗಿ ಮತ್ತು ನಿತಿನ್ ಪೂಜಾರಿ ಗಾಯಗೊಂಡಿದ್ದರು. ಗಂಭೀರ ಸ್ವರೂಪದ ಗಾಯಾಳುವಾಗಿದ್ದ ಕೀರ್ತಿಯವರು ಮೃತಪಟ್ಟಿದ್ದರು.

ಮಹಮ್ಮದ್ ಫಾಝಿಲ್ ಹತ್ಯೆ ಪ್ರಕರಣ
ಸುಹಾಸ್ ಶೆಟ್ಟಿ 2022ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ನಡೆದ ಕೃಷ್ಣಾಪುರ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಜನನಿಬಿಡ ಸುರತ್ಕಲ್ ಪೇಟೆಯಲ್ಲಿದ್ದ ಫಾಝಿಲ್‌ನನ್ನು ರಾತ್ರಿ 8:30ರ ಸುಮಾರಿಗೆ ಸುಹಾಸ್ ಶೆಟ್ಟಿ ತಂಡ ತಲವಾರು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಈ ಪ್ರಕರಣದ ಕುರಿತು ಮಾಧ್ಯಮಗಳು ಸಾಕಷ್ಟು ವರದಿ ಮಾಡಿರುವುದು ಗೊತ್ತೇ ಇದೆ.
ಬಂಟ್ವಾಳ ತಾಲೂಕಿನ ಕಾರಿಂಜೆ ನಿವಾಸಿಯಾದ ಸುಹಾಸ್ ಶೆಟ್ಟಿ ಎರಡು ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿ ಶೀಟರ್ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
ಸುಹಾಸ್ ಶೆಟ್ಟಿ ಮೇಲಿರುವ ಪ್ರಕರಣಗಳ ವಿವರ:
1) ಬಜ್ಪೆ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ ಸೆಕ್ಷನ್ 143, 47, 323, 447, 504, 506, 149ರ ಅಡಿ ದಾಖಲಾಗಿದ್ದು ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
2) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ 2016ರಲ್ಲಿ ಐಪಿಸಿ 160ರಡಿ ದಾಖಲಾದ ಪ್ರಕರಣದಲ್ಲಿ ಆತನಿಗೆ ಶಿಕ್ಷೆಯಾಗಿದೆ.
3) ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506ರಡಿ ದಾಖಲಾದ ಪ್ರಕರಣದಲ್ಲಿ ಆತ ಖುಲಾಸೆಯಾಗಿದ್ದಾನೆ.
4) ಬಜ್ಪೆ ಪೊಲೀಸ್ ಠಾಣೆಯಲ್ಲಿ 2020ರಲ್ಲಿ ಐಪಿಸಿ 143, 147, 148, 323, 324, 504, 506, 307, 302, 149ರಡಿ ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ದಾಖಲಾದ ಪ್ರಕರಣವು ಈಗಾಗಲೇ ವಿಚಾರಣಾ ಹಂತದಲ್ಲಿದೆ.
5) 2022ರಲ್ಲಿ ಸುರತ್ಕಲ್ ಠಾಣೆಯಲ್ಲಿ ಐಪಿಸಿ 143, 147, 148, 326, 302, 504, 506, 120(B) 201, 202, 204, 212, 118, 149ರಡಿ ದಾಖಲಾದ ಫಾಝಿಲ್ ಕೊಲೆ ಪ್ರಕರಣವು ವಿಚಾರಣಾ ಹಂತದಲ್ಲಿದೆ.
ಹಿಂದೂ ಯುವಕ ಕೀರ್ತಿ ಮತ್ತು ಮುಸ್ಲಿಂ ಯುವಕ ಫಾಝಿಲ್ ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿಯಾಗಿದ್ದ ಸುಹಾಸ್ ಶೆಟ್ಟಿ ಹತ್ಯೆಯಾದ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂದ್‌ಗೆ ಹಿಂದುತ್ವ ಸಂಘಟನೆಗಳು ಕರೆ ನೀಡಿವೆ. ಬಿಜೆಪಿ ನಾಯಕರು ಸುಹಾಸ್ ಶೆಟ್ಟಿ ಹತ್ಯೆಯ ಹಿನ್ನೆಲೆಯಲ್ಲಿ ಸರ್ಕಾರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಪ್ರಕರಣದ ತನಿಖೆ ನಡೆದು ಸತ್ಯಾಸತ್ಯತೆ ಹೊರಬೀಳಬೇಕಾಗಿದೆ. ದಕ್ಷಿಣ ಕನ್ನಡ ಜನತೆ ಈ ವಿಚಾರಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕಾಗುತ್ತದೆ.
