ಮಣಿಪುರ ಹಿಂಸಾಚಾರ ಆರಂಭವಾಗಿ ಮೇ 3ರಂದು ಎರಡು ವರ್ಷವಾಗಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಣಿಪುರದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. 2023ರ ಮೇ 3ರಂದು ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರ ಆರಂಭವಾಗಿದ್ದು, 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದ್ದಾರೆ.
ಈಗಾಗಲೇ ಇಂಫಾಲ್, ಚುರಾಚಂದ್‌ಪುರ ಮತ್ತು ಕಾಂಗ್‌ಪೋಕ್ಪಿ ಜಿಲ್ಲಾ ಕೇಂದ್ರಗಳ ಪ್ರಮುಖ ಸ್ಥಳಗಳಲ್ಲಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ವಾಹನ ತಪಾಸಣೆಯನ್ನು ತೀವ್ರಗೊಳಿಸಿದ್ದಾರೆ. ಮಣಿಪುರ ಪೀಪಲ್ಸ್ ಕನ್ವೆನ್ಷನ್ (ಮಣಿಪುರ ಜನರ ಸಮಾವೇಶ) ನಡೆಯಲಿರುವ ಇಂಫಾಲ್‌ನ ಖುಮಾನ್ ಲ್ಯಾಂಪಕ್ ಮತ್ತು ಸುತ್ತಮುತ್ತ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಂಗ್ಲಾ ಗೇಟ್ ಮುಂದೆ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಗ್ರಾಹಕ ವ್ಯವಹಾರಗಳ ಸಚಿವರ ಆಪ್ತ ಸಹಾಯಕನ ಅಪಹರಣ
ಮೈತೇಯಿ ಸಾಮಾಜಿಕ ಸಂಘಟನೆಯಾದ COCOMI ಮೇ 3ರಂದು ಎಲ್ಲಾ ಚಟುವಟಿಕೆಗಳನ್ನು ಸ್ಥಗಿತಗೊಳಿಸಿ ಸಮಾವೇಶದಲ್ಲಿ ಭಾಗವಹಿಸುವಂತೆ ಸಾರ್ವಜನಿಕರಿಗೆ ಕರೆ ನೀಡಿದೆ. ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಹಿಂಸಾಚಾರವನ್ನು ನೆನೆಯಲು ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದು ಮುಖಂಡರುಗಳು ತಿಳಿಸಿದ್ದಾರೆ.
ಈ ನಡುವೆ ಕುಕಿ ವಿದ್ಯಾರ್ಥಿಗಳ ಸಂಘಟನೆ (ಕೆಎಸ್‌ಒ) ಮತ್ತು ಜೊಮಿ ವಿದ್ಯಾರ್ಥಿಗಳ ಒಕ್ಕೂಟ (ಝಡ್‌ಎಸ್‌ಎಫ್) ಮೇ 3ರಂದು ಕುಕಿ ಪ್ರಾಬಲ್ಯದ ಎಲ್ಲಾ ಪ್ರದೇಶಗಳಲ್ಲಿ ಬಂದ್‌ಗೆ ಕರೆ ನೀಡಿವೆ. ಚುರಾಚಂದ್‌ಪುರ ಜಿಲ್ಲಾ ಕೇಂದ್ರದಲ್ಲಿ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯು ಯೋಜಿಸಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕರೆ ನೀಡಲಾಗಿದೆ. ಶೋಕಾಚರಣೆಯ ಸಂಕೇತವಾಗಿ ಜನರು ತಮ್ಮ ನಿವಾಸಗಳಲ್ಲಿ ಕಪ್ಪು ಧ್ವಜಗಳನ್ನು ಹಾರಿಸುವಂತೆ ತಿಳಿಸಲಾಗಿದೆ.
