ದೇಶದ 26 ಮಂದಿ ನಾಗರಿಕರ ಸಾವಿಗೆ ಕಾರಣವಾದ ಕಾಶ್ಮೀರದ ಪಹಲ್ಗಾಮ್ ಉಗ್ರ ಕೃತ್ಯದ ವಿರುದ್ಧ ಭಾರತೀಯ ಸೇನೆ ಪ್ರತೀಕಾರಕ್ಕೆ ಸಜ್ಜಾಗಿದೆ. ದಾಳಿಗೆ ಪ್ರತಿಯಾಗಿ ಭಾರತದ ಮಿಲಿಟರಿ ಪ್ರತಿಕ್ರಿಯೆಯ ವಿಧಾನ, ಗುರಿ ಮತ್ತು ಸಮಯವನ್ನು ನಿರ್ಧರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಸಶಸ್ತ್ರ ಪಡೆಗಳಿಗೆ ಸಂಪೂರ್ಣ ಅಧಿಕಾರಿ ನೀಡಿದ್ದಾರೆ. ರಾಷ್ಟ್ರದ ಭದ್ರತೆಗಾಗಿ ಪ್ರತೀಕಾರದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂಬ ಅವರ ಹೇಳಿಕೆ ಹೊರಬಿದ್ದರೂ, ಮುಂದಾಗುವ ಬೆಳವಣಿಗೆಗಳ ಊಹೆಯು ಭಾರೀ ಚರ್ಚೆಗೆ ಗ್ರಾಸವಾಗಿದೆ.
ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ (ಸಿಡಿಎಸ್) ಅನಿಲ್ ಚೌಹಾಣ್, ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮಹಾನಿರ್ದೇಶಕ ದಲ್ಜಿತ್ ಸಿಂಗ್ ಚೌಧರಿ, ರಾಷ್ಟ್ರೀಯ ಭದ್ರತಾ ಪಡೆ (ಎನ್‌ಎಸ್‌ಜಿ) ಮಹಾನಿರ್ದೇಶಕ ಬೃಘು ಶ್ರೀನಿವಾಸನ್ ಮತ್ತು ಅಸ್ಸಾಂ ರೈಫಲ್ಸ್ ಮಹಾನಿರ್ದೇಶಕ ಲೆಫ್ಟಿನೆಂಟ್ ಜನರಲ್ ವಿಕಾಸ್ ಲಖೇರಾ ಸೇರಿದಂತೆ ಅರೆಸೈನಿಕ ಪಡೆಗಳ ಮುಖ್ಯಸ್ಥರು, ಇತರೆ ಭದ್ರತಾ ಸಂಸ್ಥೆಗಳ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಸೇನೆಗೆ ಸಂಪೂರ್ಣ ಅಧಿಕಾರ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಈ ನಿರ್ಧಾರವು ದೇಶದ ಭದ್ರತಾ ವ್ಯವಸ್ಥೆಯಿಂದ ಹಿಡಿದು ಸಾಮಾನ್ಯ ಜನಜೀವನದಲ್ಲಿ ಉದ್ವಿಗ್ನ ಸ್ಥಿತಿ ನಿರ್ಮಿಸಬಹುದು ಎನ್ನಲಾಗುತ್ತಿದೆ.
ಪೂರ್ಣ ಅಧಿಕಾರ ಪಡೆದ ಭಾರತೀಯ ಸೇನೆಯ ಮುಂದಿನ ಗುರಿಗಳೇನಾಗಬಹುದು?
ಪ್ರಧಾನಿಯವರ ಅಣತಿಯಂತೆ ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಮುಂದಿನ ಮೊದಲ ಬೆಳವಣಿಗೆ ಭಾಗವಾಗಿ ಸೇನೆಯ ಮುಂದಿನ ಗುರಿಗಳೇನು ಎಂದು ನೋಡುವುದಾದದರೆ..
- ಉಗ್ರರ ಶಿಬಿರ ಕೇಂದ್ರಗಳು, ತಾಣಗಳು: ಬಲಾಖೋಟ್, ಮುಜಫರಾಬಾದ್, ಕೋಹಾಲ, ಭೀಮ್‌ಬರ್, ಲಿಪ್ಪಾ ವ್ಯಾಲಿ ಮೊದಲಾದ ಪ್ರದೇಶಗಳಲ್ಲಿ ಪಾಕ್ ಬೆಂಬಲಿತ ಉಗ್ರರ ಹಲವು ಶಿಬಿರಗಳಿವೆ. ಜೈಷ್-ಎ-ಮಹ್ಮದ್ (JeM), ಲಷ್ಕರ್-ಎ-ತೈಬಾ (LeT) ಸೇರಿ ಹಲವು ಉಗ್ರ ಸಂಘಟನೆಗಳ ಆಧಾರ ಕೇಂದ್ರಗಳಿವು. ಸೇನೆಯು ಮೊದಲು ಈ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಶಿಬಿರಗಳನ್ನು ನಿರ್ನಾಮ ಮಾಡಬಹುದು. ಸಂಘಟನೆಗಳ ಮುಖಂಡರು ತಂಗಿರುವ ತಾಣಗಳನ್ನು ಸ್ಫೋಟಿಸಬಹುದು.
- ಶಸ್ತ್ರ ಸಂಗ್ರಹ, ಸಾರಿಗೆ ಮಾರ್ಗಗಳು: ಉಗ್ರರಿಗೆ ಪಾಕಿಸ್ತಾನದ ಮಿಲಿಟರಿ ಅಥವಾ ISI ಶಸ್ತ್ರ ಪೂರೈಸುವ ಪೂರೈಕೆ ಮಾರ್ಗಗಳು, ಗಡಿಭಾಗದ ಸುರಂಗ ಮಾರ್ಗಗಳನ್ನು ಬಂದ್ ಮಾಡಬಹುದು ಅಥವಾ ಅವುಗಳ ಮೇಲೆ ನಿಯಂತ್ರಣ ಸಾಧಿಸಬಹುದು.
- ಡಿಜಿಟಲ್ ಮತ್ತು ಕಮ್ಯುನಿಕೇಶನ್ ನೆಟ್‌ವರ್ಕ್: ಸೇನೆಯು ಉಗ್ರರ ನಡುವಿನ ಸಂವಹನಕ್ಕೆ ಆಧಾರವಾಗಿರುವ ಸೈಬರ್ ಮೂಲಗಳನ್ನು ಗುರಿಯಾಗಿಸಬಹುದು. ಇದರಿಂದ ಭವಿಷ್ಯದ ದಾಳಿಗಳಿಗೆ ತಡೆಯೊಡ್ಡಬಹುದು.
- ಕೇವಲ ಭೌತಿಕ ಶಿಬಿರಗಳು ಮಾತ್ರವಲ್ಲ: ಭಾರತೀಯ ಸೇನೆಯ ಗುರಿಗಳು ಕೇವಲ ಭೌತಿಕ ಶಿಬಿರಗಳು ಮಾತ್ರವಲ್ಲ, ಉಗ್ರ ಚಟುವಟಿಕೆಗಳಿಗೆ ಬೆಂಬಲ ನೀಡುವ ಎಲ್ಲ ಮೂಲಸೌಕರ್ಯಗಳು. ಈ ಗುರಿಗಳನ್ನು ಆಯ್ದು ನಿಖರವಾಗಿ ಹೊಡೆದುರುಳಿಸಿದರೆ, ಉಗ್ರ ಸಂಘಟನೆಗಳು ಕಂಗೆಡುತ್ತವೆ ಮತ್ತು ಭವಿಷ್ಯದ ದಾಳಿಗಳನ್ನು ತಡೆಯಬಹುದು.
ಪಾಕಿಸ್ತಾನ ವಿವಿಧ ಮಾರ್ಗಗಳಿಂದ ಪ್ರತಿದಾಳಿ ಮಾಡುವ ಸಾಧ್ಯತೆ ಇದ್ದು, ಭಾರತ ಈ ಎಲ್ಲಾ ಆಯಾಮಗಳಲ್ಲಿ ಸಜ್ಜಾಗಿರುವುದು ಅವಶ್ಯಕ. ಸೇನಾ, ಸೈಬರ್, ಸಮಾಜ ಮತ್ತು ರಾಜತಂತ್ರದ ಮಟ್ಟದಲ್ಲಿ ಸಮನ್ವಯವಾದ ತಂತ್ರಜ್ಞಾನ, ಸರಿಯಾದ ಗುಪ್ತಚರ ಮಾಹಿತಿ ಹೊಂದಿದ್ದರೆ ಮಾತ್ರ ಇಂತಹ ಶತ್ರುತ್ವದ ಪರಿಕಲ್ಪನೆಗೆ ಉತ್ತರ ನೀಡಲು ಸಾಧ್ಯ. ಪ್ರತಿದಾಳಿಯ ಭೀತಿ ಹೇಗಿರಬಹುದೋ ಗೊತ್ತಿಲ್ಲ, ಆದರೆ ಭಯಕ್ಕೆ ಎಡೆ ಮಾಡಿಕೊಡದೆ ಜಾಗೃತರಾಗಿರುವುದು ದೇಶದ ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಹಾಗೂ ಅದು ಇಂದಿಗೆ ಅನಿವಾರ್ಯ.
ಪುಲ್ವಾಮಾ ದಾಳಿಯ ವಿರುದ್ಧ ಭಾರತೀಯ ಸೇನೆ ನಡೆಸಿದ ಬಾಲಾಕೋಟ್ ಪ್ರತಿದಾಳಿ..- ಹೀಗೆ ಇಂಡೋ-ಪಾಕ್ ನಡುವಿನ ವೈಮಾನಿಕ ದಾಳಿಗಳು ತಡೆಯಿಲ್ಲದೆ ನಡೆಯುತ್ತಲೇ ಇವೆ. ಈ ದಾಳಿಗಳ ನಂತರ ಭಾರತ–ಪಾಕಿಸ್ತಾನ ಸಂಬಂಧವು ಬಹಳಷ್ಟು ಹದಗೆಟ್ಟಿರುವುದು ಜಗಜ್ಜಾಹೀರು. ಅದು ಇಂದಿಗೂ ಬಹುತೇಕ ದುರವಸ್ಥೆಯಲ್ಲಿಯೇ ಇದೆ. ಇದು ಹೀಗೆ ಮುಂದುವರೆದರೆ ಎರಡೂ ದೇಶಗಳು ಮಾನವ ಹಾನಿಗಳನ್ನು ಎದುರಿಸಬೇಕಾಗಬಹುದು ಎನ್ನುತ್ತವೆ ವಿಶ್ಲೇಷಣೆಗಳು.
2019ರ ನಂತರವಂತೂ ಭಾರತ–ಪಾಕಿಸ್ತಾನ ಸಂಬಂಧ ಶೀತಲ ಯುದ್ಧದ ಸ್ಥಿತಿಗೆ ತಲುಪಿದೆ. ಈ ಸ್ಥಿತಿಯಲ್ಲಿ ಶಾಂತಿ ಸಾಧ್ಯವೋ? ಸಾಧ್ಯವಿದ್ದರೂ, ಎರಡೂ ರಾಷ್ಟ್ರಗಳೂ ರಾಜಕೀಯವಾಗಿ ಅದರತ್ತ ಹೆಜ್ಜೆ ಇಡುವ ಸ್ಥಿತಿಯಲ್ಲಂತೂ ಇಲ್ಲ. ಭಾರತ ಮತ್ತು ಪಾಕಿಸ್ತಾನ ಗಡಿಯಲ್ಲಿ ಸುದೀರ್ಘ ಕಾಲದಿಂದಲೂ ಬೂದಿ ಮುಚ್ಚಿದ ಕೆಂಡದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಕೆಂಡ ಆಗಾಗ ಬೆಂಕಿ ರಾಚುತ್ತಲೂ ಇದೆ. ಇದರಿಂದಾಗಿ, ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಮತ್ತಷ್ಟು ಹಳಸಲಿದೆ ಎನ್ನಲಾಗಿದೆ. ಅಂತಾರಾಷ್ಟ್ರೀಯ ಸಮುದಾಯವು ಈ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.
ಸಂಭವನೀಯ ಇಂಡೋ-ಪಾಕ್ ಯುದ್ಧದ ಕುರಿತು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಹೀಗೆನ್ನುತ್ತಾರೆ: “ಪಾಕಿಸ್ತಾನವು ಭಾರತಕ್ಕೆ ಸಹಕರಿಸಿ, ತನ್ನ ಭೂಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಉಗ್ರರ ವಿರುದ್ಧ ಕ್ರಮ ಕೈಗೊಳ್ಳಬೇಕು. ಜೊತೆಗೆ ಪ್ರಾದೇಶಿಕ ಯುದ್ಧವನ್ನು ತಪ್ಪಿಸಲು ಎಚ್ಚರಿಕೆಯನ್ನು ಭಾರತ ವಹಿಸಬೇಕು”.
ಯುಎನ್ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರೆಸ್ ಅವರು, ಭಾರತ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳನ್ನು ಅತ್ಯಂತ ಸಂಯಮ ವಹಿಸಲು ಮತ್ತು ರಾಜತಾಂತ್ರಿಕ ಮಾರ್ಗಗಳಿಂದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕರೆ ನೀಡಿದ್ದಾರೆ .
ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ತಿಳಿಸಿದ್ದಾರೆ.
ಇರಾನ್ ಭಾರತ ಮತ್ತು ಪಾಕಿಸ್ತಾನ ನಡುವಿನ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಮಧ್ಯಸ್ಥಿಕೆ ನೀಡಲು ತಯಾರಿದೆ ಎಂದು ಘೋಷಿಸಿದೆ.
ಇಂದಿನ ತಂತ್ರಜ್ಞಾನ ಜಗತ್ತಿನಲ್ಲಿ, ಯಾವುದೇ ರಾಷ್ಟ್ರ ಪರಿಹಾರವಾಗಿ ಯುದ್ಧವನ್ನು ಆಯ್ಕೆ ಮಾಡುವಷ್ಟು ಬುದ್ಧಿಹೀನವಲ್ಲ. ಪಹಲ್ಗಾಮ್‌ನಂತಹ ಕ್ರೂರ ಉಗ್ರ ದಾಳಿಗೆ ತೀವ್ರ ಪ್ರತಿಕ್ರಿಯೆ ತರುವುದರ ಅವಶ್ಯಕತೆ ಇದ್ದರೂ, ಅದು ಭೀಕರ ಯುದ್ಧದ ಮೂಲಕವಲ್ಲ ಎಂಬುದು ಭಾರತ ಹಾಗೂ ಜಾಗತಿಕ ಸಮುದಾಯದ ಏಕೈಕ ನಿಲುವಾಗಿದೆ.
ಯುದ್ಧ ಎಂದರೆ ಸಾವಿರಾರು ನಿರಪರಾಧಿ ಜೀವಗಳ ನಾಶ, ಕೋಟ್ಯಂತರ ರೂಪಾಯಿ ಆರ್ಥಿಕ ಹಾನಿ ಮತ್ತು ದಶಕಗಳಿಂದ ನಿರ್ಮಿಸಲಾಗಿದ್ದ ಅಭಿವೃದ್ಧಿಯ ಸಂಪೂರ್ಣ ಕುಸಿತ. ಭಾರತ ಹಾಗೂ ಪಾಕಿಸ್ತಾನ ಎರಡೂ ಅಣು ಬಾಂಬ್ ಹೊಂದಿರುವ ರಾಷ್ಟ್ರಗಳಾಗಿರುವುದರಿಂದ ಎಡವಟ್ಟಾದ ತೀರ್ಮಾನವೊಂದು ದಕ್ಷಿಣ ಏಷ್ಯಾ ಮಾತ್ರವಲ್ಲ, ಇಡೀ ಜಗತ್ತನ್ನು ನಾಶದ ಅಂಚಿಗೆ ಒಯ್ಯಬಹುದು. ಅಮೆರಿಕ, ಯುಎನ್, ಯುರೋಪ್, ಚೀನಾ ಮುಂತಾದ ರಾಷ್ಟ್ರಗಳು ಪರಸ್ಪರ ಶಾಂತಿ, ಸಂವಹನ ಮತ್ತು ತಾಳ್ಮೆಯ ಮಾರ್ಗವನ್ನೇ ಶಿಫಾರಸು ಮಾಡಿವೆ.
ಯುದ್ಧ ನಡೆದರೆ ತೈಲ ಬೆಲೆಗಳು ಏರಲಿದೆ, ಜಾಗತಿಕ ಷೇರು ಮಾರುಕಟ್ಟೆ ಕುಸಿಯಲಿದೆ ಮತ್ತು ಭಾರತ–ಪಾಕಿಸ್ತಾನ ಮಾತ್ರವಲ್ಲ, ಇಡೀ ಜಗತ್ತಿಗೆ ಹಾನಿಯಾಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಯುದ್ಧಕ್ಕೆ ಯಾವುದೇ ಬೆಂಬಲವಿಲ್ಲ. ಭಾರತ ಈಗ ಜಗತ್ತಿನ ಮುಂಚೂಣಿಯ ಆರ್ಥಿಕತೆಗಳಲ್ಲಿ ಒಂದಾಗಿದೆ. ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟಿನಲ್ಲಿ ತತ್ತರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಯುದ್ಧವು ಎರಡೂ ದೇಶಗಳ ಜನರ ಗತಿವ್ಯವಸ್ಥೆಗೆ ತೀವ್ರ ಹೊಡೆತ ನೀಡುತ್ತದೆ. ಮೌಲ್ಯಾಧಾರಿತ ರಾಜತಂತ್ರ, ಸರ್ಜಿಕಲ್ ಸ್ಟ್ರೈಕ್ ಮುಂತಾದ ನಿಯಂತ್ರಿತ ಕ್ರಮಗಳ ಮೂಲಕ ತೀರ್ಮಾನಿತವಾಗಿ, ಜವಾಬ್ದಾರಿಯುಕ್ತವಾಗಿ ನಡೆದುಕೊಳ್ಳುವುದು ಇಂದು ಎಲ್ಲಕ್ಕಿಂತ ಹೆಚ್ಚು ಅಗತ್ಯವಾಗಿದೆ.
ಭದ್ರತೆ ಬೇಕಾದರೆ ಶಾಂತಿ ಗಟ್ಟಿ ಆಗಬೇಕು. ಯುದ್ಧ ನಿಲ್ಲಿಸಲು ಶಸ್ತ್ರಾಸ್ತ್ರಕ್ಕಿಂತ ಸುಭದ್ರ ರಾಜತಾಂತ್ರಿಕ ತಂತ್ರಗಳು ಬಹಳ ಪರಿಣಾಮಕಾರಿ. ಇಂದಿನ ಭಾರತವು ತಾಂತ್ರಿಕವಾಗಿ ಶಕ್ತಿಯುತವಾಗಿದೆ; ಆದರೆ ಅದನ್ನು ತನ್ನ ಶಕ್ತಿಯ ಪ್ರಾತ್ಯಕ್ಷಿಕೆಗೆ ಬದಲು, ಶಾಂತಿಯ ನಿರ್ವಹಣೆಗೆ ಉಪಯೋಗಿಸಬೇಕಾಗಿದೆ.
ಇದನ್ನೂ ಓದಿ: ಪಹಲ್ಗಾಮ್ ದಾಳಿ | ತನ್ನ ಕುಟುಂಬವನ್ನು ರಕ್ಷಿಸಿದ ಕಾಶ್ಮೀರಿ ಮುಸ್ಲಿಮರಿಗೆ ಬಿಜೆಪಿ ನಾಯಕನ ಕೃತಜ್ಞತೆ
ಪಹಲ್ಗಾಮ್ ದಾಳಿ ನಮ್ಮ ಕಣ್ಣಾಲಿಗಳನ್ನು ತೇವಗೊಳಿಸಿದೆ. ಒಳಗೊಂದು ಕಿಚ್ಚು ಹಚ್ಚಿದೆ ನಿಜ. ಆದರೆ ʼಯುದ್ಧ ಬೇಕಾ?ʼ ಎಂದು ನಮ್ಮ ಅಂತರಾತ್ಮವನ್ನು ಪ್ರಶ್ನಿಸಿಕೊಳ್ಳಬೇಕಿದೆ. ಭಾರತ, ಒಂದು ಶಕ್ತಿಶಾಲಿ ಮತ್ತು ಶಾಂತಿಯುತ ರಾಷ್ಟ್ರವಾಗಿ ಉಗ್ರತೆಯನ್ನು ಜವಾಬ್ದಾರಿಯಾಗಿ ಎದುರಿಸಬೇಕು. ಯುದ್ಧದಲ್ಲಿ ಶೌರ್ಯವಿರಬಹುದು, ಆದರೆ ಶಾಂತಿಯಲ್ಲಿ ಮಾನವೀಯತೆ, ಪ್ರಜ್ಞೆ, ಭವಿಷ್ಯವಿರುತ್ತದೆ ಎನ್ನುವುದನ್ನು ಮರೆಯಬಾರದು.