ಉತ್ತರ ಕರ್ನಾಟಕದಲ್ಲಿ ಒಂದು ಗಾದೆ ಮಾತಿದೆ: "ಕೆಲಸ ಇಲ್ಲದವ ಮಗನ ಮುಕುಳಿ ಕೆತ್ತಿದ್ನಂತೆ!" ಈ ಗಾದೆ ಮಾತನ್ನುಯತ್ನಾಳ್-ಶಿವಾನಂದ್ ಪಾಟೀಲ್ ಕೇಳಿರುತ್ತಾರೆ ಮತ್ತು ಬಳಸಿರುತ್ತಾರೆ. ಗೆಲ್ಲಿಸಿ ಕಳಿಸಿದ ಮತದಾರರಿಗೆ ಅವಮಾನ ಮಾಡಿ, ಚಿಲ್ಲರೆ ರಾಜಕಾರಣದಲ್ಲಿ ಮುಳುಗಿರುವ ಇವರಿಬ್ಬರು, ರಾಜೀನಾಮೆ ಕೊಟ್ಟು ಮನೆಯ ಮಕ್ಕಳ ಮುಕುಳಿ ಕೆತ್ತುವುದೊಳ್ಳೆಯದು!
ಮಂಗಳೂರಿನಲ್ಲಿ ಮೂರು ದಿನಗಳ ಅಂತರದಲ್ಲಿ ಎರಡು ಹತ್ಯೆಗಳು ನಡೆದಿವೆ. ಕೇರಳ ಮೂಲದ ಮುಸ್ಲಿಂ ವಲಸೆ ಕಾರ್ಮಿಕನನ್ನು ಹಿಂದುತ್ವವಾದಿ ಗುಂಪೊಂದು ಹೊಡೆದು ಕೊಂದ ಮೂರೇ ದಿನಗಳಲ್ಲಿ ರೌಡಿಶೀಟರ್ ಸುಹಾಸ್ ಶೆಟ್ಟಿ ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ, ಕೊಲೆ ಮಾಡಲಾಗಿದೆ. ಮಂಗಳೂರು ಪ್ರಕ್ಷುಬ್ಧಗೊಂಡಿದೆ. ಇದು ಕರಾವಳಿ ಕರ್ನಾಟಕದ ಕಥೆಯಾದರೆ ಉತ್ತರ ಕರ್ನಾಟಕದಲ್ಲಿ ಲಿಂಗಾಯತರ ಚಿಲ್ಲರೆ ರಾಜಕಾರಣ.
ಇಲ್ಲೂ ಕೂಡ ಹಿಂದೂ-ಮುಸ್ಲಿಂ ವಿಚಾರವಾಗಿಯೇ ಆರಂಭವಾದ ಕಾಳಗ ಈಗ ”ಅಪ್ಪನಿಗೆ ಹುಟ್ಟಿದ್ದರೆ…” ಎನ್ನುವವರೆಗೂ ಬಂದು ನಿಂತಿದೆ. ಮಹಮ್ಮದ್ ಪೈಗಂಬರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಬಸನಗೌಡ ಪಾಟೀಲ್ ಅವರು ಸಚಿವ ಶಿವಾನಂದ ಪಾಟೀಲ್ ಅವರಿಗೆ ‘ಅಪ್ಪನಿಗೆ ಹುಟ್ಟಿದ್ದರೆ, ರಾಜೀನಾಮೆ ಕೊಟ್ಟು ನನ್ನ ವಿರುದ್ಧ ಸ್ಪರ್ಧಿಸು’ ಎಂದು ಸವಾಲು ಹಾಕಿದ್ದರು.
ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯದ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಬಸವನ ಬಾಗೇವಾಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ್ ಅವರು ಯತ್ನಾಳ್ ಸವಾಲನ್ನು ಗಂಭೀರವಾಗಿ ಪರಿಗಣಿಸಿ, ಶುಕ್ರವಾರ ಸಭಾಧ್ಯಕ್ಷ ಯು ಟಿ ಖಾದರ್ ಅವರನ್ನು ಭೇಟಿಯಾಗಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
ಘಟನೆ ಹಿನ್ನೆಲೆ
ಏ.7 ರಂದು ಹುಬ್ಬಳ್ಳಿಯ ಬಾಣಿ ಓಣಿಯಲ್ಲಿ ನಡೆದ ರಾಮನವಮಿ ಕಾರ್ಯಕ್ರಮದಲ್ಲಿ ಯತ್ನಾಳ್ ಮಾತನಾಡುವ ಸಂದರ್ಭದಲ್ಲಿ ಇಸ್ಲಾಂ ಧರ್ಮ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರ್ ಬಗ್ಗೆ ಪ್ರಚೋದನಕಾರಿ ಹಾಗೂ ಅವಹೇಳನಕಾರಿ ಹೇಳಿಕೆ ನೀಡಿದ್ದರು. “ದಿವಂಗತ ಬಾಳಾಸಾಹೇಬ್ ಠಾಕ್ರೆ ಮನೆಯಲ್ಲಿ ಮಹಮ್ಮದ್ ಪೈಗಂಬರ್ ಹುಟ್ಟಿದ್ದಾನೆ” ಎಂದು ಯತ್ನಾಳ್ ನಾಲಿಗೆ ಹರಿಬಿಟ್ಟಿದ್ದರು.
“ಇದು ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ಆಘಾತ ಉಂಟುಮಾಡಿದೆ” ಎಂದು ದೂರಿ ಈ ಸಂಬಂಧ ವಿಜಯಪುರ ನಗರದ ಗೋಲ್ ಗುಂಬಜ್ ಪೊಲೀಸ್ ಠಾಣೆಯಲ್ಲಿ ಮೊಹಮ್ಮದ್ ಹನ್ನಾನ್ ಎಂಬವರು ದೂರು ದಾಖಲಿಸಿದ್ದರು. ಬಳಿಕ ವಿಜಯಪುರದಲ್ಲಿ ಮುಸ್ಲಿಮ್ ಸಮುದಾಯ ಏ.28ರಂದು ಯತ್ನಾಳ್ ವಿರುದ್ಧ ನಗರದ ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ಆಯೋಜಿಸಿ, “ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಬಗ್ಗೆ ಅಗೌರವ ತೋರುವ ಹೇಳಿಕೆ ನೀಡಿರುವ ಬಸನಗೌಡ ಪಾಟೀಲ ಯತ್ನಾಳ್ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಹುಲ್ ಕಾರ್ಯಸೂಚಿಗೆ ಮೋದಿ ಮಣೆ ಹಾಕಿ ಶರಣಾದ ಗುಟ್ಟೇನು?
ಪ್ರತಿಭಟನೆಯಲ್ಲಿ ಸಚಿವ ಶಿವಾನಂದ ಪಾಟೀಲ್, ಶಾಸಕರಾದ ಯಶ್ವಂತ್‌ರಾಯಗೌಡ ಪಾಟೀಲ್, ಅಶೋಕ್ ಮನಗೂಳಿ, ಮನಗೂಳಿ ಮಠದ ವೀರತಿಶಾನಂದ ಸ್ವಾಮೀಜಿ, ವಿಠಲ ಕಟಕದೊಂಡ ಹಾಗೂ ಪ್ರಮುಖ ಮುಸ್ಲಿಂ ನಾಯಕರು ಭಾಗವಹಿಸಿದ್ದರು. ಪ್ರತಿಭಟನೆ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕರು ಯತ್ನಾಳ್ ಅವರ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿ, “ಯತ್ನಾಳ್ ಅವರ ಹೇಳಿಗೆ ಅಸಂಬದ್ಧ, ಕೋಮು ಸೌಹಾರ್ದತೆಯನ್ನು ನಾಶಪಡಿಸರುವ ಮತ್ತು ಮುಸ್ಲಿಮರ ಧಾರ್ಮಿಕ ಭಾವನೆಗಳನ್ನು ಅವಮಾನಿಸುವ ಗುರಿಯನ್ನು ಹೊಂದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಸಚಿವ ಶಿವಾನಂದ ಪಾಟೀಲ್ ಪ್ರತಿಭಟನೆಯಲ್ಲಿ ಮಾತನಾಡುತ್ತ, “ಯತ್ನಾಳ್ ಅವರು ಅನೇಕ ಸಂತರು ಮತ್ತು ಆಧ್ಯಾತ್ಮಿಕ ನಾಯಕರ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿರುತ್ತಾರೆ. ಇದರಲ್ಲಿ ಆಶ್ಚರ್ಯವೇನಿಲ್ಲ. ಇದೀಗ ಮಹಮ್ಮದ ಪೈಗಂಬರ್ ವಿರುದ್ಧ ಹೇಳಿಕೆ ನೀಡಿದ್ದಾರೆ. ಈ ಹಿಂದೆ 12ನೇ ಶತಮಾನದ ಸಮಾಜ ಸುಧಾರಕ ಬಸವೇಶ್ವರರ ವಿರುದ್ಧವೂ ಇದೇ ರೀತಿಯ ಭಾಷೆ ಬಳಕೆ ಮಾಡಿದ್ದರು. ಯತ್ನಾಳ್ ಪ್ರಜ್ಞೆ ಕಳೆದುಕೊಂಡಿದ್ದಾರೆ. ಹೀಗಾಗಿಯೇ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಸ್ಲಿಂ ವಿರೋಧಿ ಅಥವಾ ಇಸ್ಲಾಮಿಕ್ ವಿರೋಧಿ ಹೇಳಿಕೆಗಳನ್ನು ನೀಡಿದರೆ ಹಿಂದೂ ಬೆಂಬಲ ಸಿಗುತ್ತದೆ ಎಂದು ಯತ್ನಾಳ್ ತಂತ್ರ. ಆದರೆ, ವಾಸ್ತವದಲ್ಲಿ, ಹಿಂದೂಗಳು ಕೂಡ ಯತ್ನಾಳ್ ಅವರ ಕೋಮುವಾದಿ ಹೇಳಿಕೆಗಳಿಗಾಗಿ ಅಸಮಾಧಾನಗೊಂಡಿದ್ದಾರೆ ಮತ್ತು ಅಸಂತೋಷಗೊಂಡಿದ್ದಾರೆ” ಎಂದು ವಾಗ್ದಾಳಿ ನಡೆಸಿದ್ದರು.
ಮುಸ್ಲಿಂ ಸಮುದಾಯದ ಪ್ರತಿಭಟನೆ ಬಗ್ಗೆ ಏ.30 ರಂದು ವಿಜಯಪುರದಲ್ಲಿ ಯತ್ನಾಳ್ ಪ್ರತಿಕ್ರಿಯಿಸಿ, ಸಚಿವ ಶಿವಾನಂದ ಪಾಟೀಲ್ ಮತ್ತು ವಿಜಯಾನಂದ ಕಾಶಪ್ಪನವರ ವಿರುದ್ಧ ವೈಯಕ್ತದ ದಾಳಿಗೆ ಇಳಿದರು. “ಶಿವಾನಂದ ಪಾಟೀಲ್ ಅವರಪ್ಪನಿಗೆ ಹುಟ್ಟಿದ್ದರೆ, ನನ್ನ ವಿರುದ್ಧ ಸ್ಪರ್ಧೆ ಮಾಡಲಿ, ಅವರ ಮನೆ ಹೆಸರು ಪಾಟೀಲ್ ಅಲ್ಲ ‘ಹಚಡದ’ ಎಂದು, ನಿಮ್ಮಪ್ಪ ನೀವು ಸೇರಿ ನಿಮ್ಮ ಅಡ್ಡ ಹೆಸರು ಬದಲಾಯಿಸಿಕೊಂಡಿದ್ದೀರಿ, ರಾಜಕಾರಣಕ್ಕಾಗಿ ಪಾಟೀಲ್ ಎಂದು ಬದಲು ಮಾಡಿಕೊಂಡಿದ್ದೀರಿ. ಜೊತೆಗೆ ಹುನಗುಂದದಲ್ಲಿ ಇನ್ನೊಬ್ಬನಿದ್ದಾನೆ ವಿಜಯಾನಂದ ಕಾಶಪ್ಪನವರ ಅಂತ. ಇವರಿಬ್ಬರು ಅವರ ಅಪ್ಪನಿಗೆ ಹುಟ್ಟಿದ್ದರೆ ಬರುವ ಶುಕ್ರವಾರದೊಳಗೆ (ಮೇ 2) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹೊರಬರಲಿ. ನಾನೂ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರವಾಗಿ ಸ್ಪರ್ಧಿಸುವೆ. ಇವರಿಬ್ಬರು ವಿಜಯಪುರಕ್ಕೆ ಬರುವುದು ಬೇಡ. ನಾನೇ ಪ್ರತ್ಯೇಕವಾಗಿ ಬಸವನ ಬಾಗೇವಾಡಿ ಮತ್ತು ಹುನಗುಂದಕ್ಕೆ ಹೋಗಿ ಸ್ಪರ್ಧೆ ಮಾಡುವೆ” ಎಂದು ಸವಾಲು ಹಾಕಿದ್ದರು.
ಮುಂದುವರಿದು, “ಇವರಿಬ್ಬರು ಪಾಕಿಸ್ತಾನಿ ಏಜೆಂಟರು. ಇವರನ್ನು ಮಣ್ಣು ಕೊಡದೇ ಬಿಡುವುದಿಲ್ಲ. ನನ್ನ ವಿರುದ್ಧ ಪ್ರತಿಭಟನೆ ಮಾಡಿದವರೆಲ್ಲರೂ ಹರಾಮ್‌ಕೋರರು. ಮುಂದಿನ ಚುನಾವಣೆಯಲ್ಲಿ ಇವರಿಗೆ ಸರಿಯಾಗಿ ಬುದ್ದಿ ಕಲಿಸುತ್ತೇವೆ. ನೀವು ಸಾಬರ ಬೆನ್ನು ಹತ್ತಿದ್ದೀರಿ. ಹಿಂದೂಗಳ ಒಂದು ಮತ ಸಹ ಮುಂದಿನ ಚುನಾವಣೆಯಲ್ಲಿ ನಿಮಗೆ ಬೀಳಲ್ಲ. ಈಗ ಮುಸ್ಲಿಮರು ಕರೆದ ತಕ್ಷಣ ಹೋಗಿದ್ದೀರಿ. ನಾಳೆ ಹಿಂದೂಗಳಿಗೆ ಏನಾದರೂ ಆದ ವೇಳೆ ನಾವು ಪ್ರತಿಭಟನೆಗೆ ನಿಮ್ಮನ್ನು ಕರೆದಾಗ ನೀವು ಬರದಿದ್ದರೆ ನೀವು ಸಾಬರಿಗೆ ಹುಟ್ಟಿದ್ದೀರಿ ಎಂದು ತಿಳಿಯುತ್ತೇವೆ. ನಿಮ್ಮ ಇಬ್ಬರಿಗೆ ಧಮ್ಮು, ತಾಕತ್ತು ಇದ್ದರೆ ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ವಾರದಲ್ಲಿ ರಾಜೀನಾಮೆ ಕೊಡಿ, ಈ ಯತ್ನಾಳ್ ಪಕ್ಷೇತರ ನಿಂತು ನಿಮ್ಮ ವಿರುದ್ಧ ಗೆದ್ದು ತೋರಿಸುತ್ತಾನೆ” ಎಂದು ಕೀಳುಮಟ್ಟದ ಭಾಷೆ ಬಳಸಿ ಮಾತನಾಡಿದ್ದರು.
ಬಿಜೆಪಿಯ ಉಚ್ಚಾಟಿತ ನಾಯಕ, ಶಾಸಕ ಬಸನಗೌಡ ಪಾಟೀಲ ಯತ್ನಾಳ್ ನೀಡಿರುವ ಸವಾಲನ್ನು ಸ್ವೀಕರಿಸಿರುವ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ಅವರು, ಮೇ 2ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಯತ್ನಾಳ್‌ಗೆ ಪಂಥಾಹ್ವಾನ ನೀಡಿದ್ದಾರೆ. ಬಾಯಿ ಹರುಕ ಯತ್ನಾಳ್ ಅವರ ‘ಅಪ್ಪನಿಗೆ ಹುಟ್ಟಿದ್ದರೆ…’ ಎನ್ನುವ ಸವಾಲು ಸ್ವೀಕರಿಸಿ ವೀಳ್ಯ ಕೊಟ್ಟಿದ್ದಾರೆ. ಯತ್ನಾಳ್ ಈಗ
ಯಾರಿಗೆ ಹುಟ್ಟಿದ್ದಾರೆಂದು ಸಾಬೀತು ಮಾಡಬೇಕಾದ ಅನಿವಾರ್ಯತೆಯನ್ನು ಅವರೇ ತಂದುಕೊಂಡಿದ್ದಾರೆ.
ಸ್ಪೀಕರ್ ಅವರಿಗೆ ರಾಜೀನಾಮೆ ಸಲ್ಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಿವಾನಂದ ಪಾಟೀಲ್, “ವೈಯಕ್ತಿಕ ಕಾರಣಕ್ಕೆ ರಾಜೀನಾಮೆ ನೀಡಿದ್ದೇನೆ. ಯತ್ನಾಳ್ ಪ್ರತಿ ಸಲವೂ ನನಗೆ ‘ಅಪ್ಪನಿಗೆ ಹುಟ್ಟಿದ್ದರೆ…’ ಅಂತ ಮಾತನಾಡುತ್ತಿದ್ದಾರೆ. ಇದಕ್ಕೆ ತಾರ್ಕಿಕ ಅಂತ್ಯ ಹಾಡಬೇಕು. ಒಂದು ನಾನು ರಾಜಕಾರಣದಲ್ಲಿ ಇರಬೇಕು. ಇಲ್ಲ ಅವರು ರಾಜಕಾರಣದಲ್ಲಿ ಇರಬೇಕು. ನನ್ನ ಈ ನಿರ್ಧಾರಕ್ಕೂ ಪಕ್ಷಕ್ಕೂ ಸಂಬಂಧವಿಲ್ಲ. ಇದು ವೈಯಕ್ತಿಕ ತೀರ್ಮಾನ. ಯತ್ನಾಳ ರಾಜೀನಾಮೆ ನೀಡಿ ನನ್ನ ವಿರುದ್ಧ ಚುನಾವಣೆ ಎದುರಿಸಲಿ. ವಿಜಯಪುರಕ್ಕೂ ಸಿದ್ದನಿದ್ದೇನೆ. ಬಸನವ ಬಾಗೇವಾಡಿಗೂ ಸಿದ್ದನಿದ್ದೇನೆ. ಯತ್ನಾಳ್ ಸವಾಲು ಸ್ವೀಕರಿಸಿ ಸಭಾಧ್ಯಕ್ಷರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವೆ. ಯತ್ನಾಳ್ ರಾಜೀನಾಮೆ ಪತ್ರ ಸಲ್ಲಿಸಿದರೆ ಅವರಿಗಿಂತಲೂ ಒಂದು ತಾಸು ಮೊದಲೇ ನನ್ನ ರಾಜೀನಾಮೆ ಅಂಗೀಕರಿಸುವಂತೆ ಕೋರಿದ್ದೇನೆ” ಎಂದು ತಿಳಿಸಿದರು.
ಶಿವಾನಂದ ಪಾಟೀಲ್ ಅವರು ವಿಜಯಪುರ ಮೂಲದ ರಾಜಕಾರಣಿ. 2018 ಮತ್ತು 2023ರ ಚುನಾವಣೆಗಳಲ್ಲಿ ಬಸವನ ಬಾಗೇವಾಡಿಯಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದವರು. ಅವರು 2018ರ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿದ್ದರು. ಇದಕ್ಕೂ ಮೊದಲು 1994ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಜನತಾ ದಳದಿಂದ ಆಯ್ಕೆಯಾಗಿದ್ದರು.
1999ರಲ್ಲಿ ತಿಕೋಟಾ ವಿಧಾನಸಭೆ ಕ್ಷೇತ್ರದಿಂದ ಪಕ್ಷ ಬದಲಿಸಿ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾದವರು.
ಬಸನಗೌಡ ಪಾಟೀಲ್ ಯತ್ನಾಳ್, ಶಿವಾನಂದ ಪಾಟೀಲ ಹಾಗೂ ವಿಜಯಾನಂದ ಕಾಶಪ್ಪನವರ ಮೂವರು ನಾಯಕರು ಪಂಚಮಸಾಲಿ ಸಮುದಾಯದಿಂದ ಬಂದವರು. 2023ರ ವಿಧಾನಸಭೆ ಚುನಾವಣೆಗೂ ಮುನ್ನ ಪಂಚಮಸಾಲಿ 2ಎ ಮೀಸಲಾತಿ ಹೋರಾಟದಲ್ಲಿ ಯತ್ನಾಳ್ ಮತ್ತು ಕಾಶಪ್ಪನವರ ಹೆಚ್ಚು ಸಕ್ರಿಯರಾಗಿದ್ದರು. ಆಗ ಶಿವಾನಂದ ಪಾಟೀಲ್ ಮೀಸಲಾತಿ ಹೋರಾಟದೊಂದಿಗೆ ಅಂತರ ಕಾಯ್ದುಕೊಂಡಿದ್ದರು. ನಂತರ ಮೀಸಲಾತಿ ಹೋರಾಟ ಬಿಜೆಪಿ ಅಂಟಿಕೊಂಡಂತೆ ಭಾಸವಾಗುತಿದ್ದಂತೆ ಕಾಶಪ್ಪನವರ ಸಹ ಮೀಸಲಾತಿ ಹೋರಾಟದಿಂದ ದೂರ ಉಳಿದರು. ಅಂದಿನಿಂದ ಯತ್ನಾಳ್ ಕಾಂಗ್ರೆಸ್‌ನ ಈ ಇಬ್ಬರೂ ನಾಯಕರ ಮೇಲೆ ಮನಬಂದಂತೆ ಮಾತಿನ ಸಮರ ನಡೆಸುತ್ತಲೇ ಬರುತ್ತಿದ್ದಾರೆ.
ಹಿಂದೂ ಧರ್ಮದ ರಕ್ಷಣೆಯ ಗುತ್ತಿಗೆ ಪಡೆದವರಂತೆ ವರ್ತಿಸುವ ಯತ್ನಾಳ್ ಬಾಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಯಾವಾಗಲೂ ಕೊಳಕು ಪದಗಳೇ ಉದುರುತ್ತವೆ. ಈಗ ‘ಅಪ್ಪನಿಗೆ ಹುಟ್ಟಿದ್ದರೆ…’ ಎನ್ನುವ ಪದಕ್ಕೆ ಜೋತು ಬಿದ್ದು ತನ್ನ ವಿರುದ್ಧವಿರುವ ನಾಯಕರ ಮೇಲೆ ಬಿದ್ದಿದ್ದಾರೆ. ಹಿಂದೂ ಧರ್ಮವು ಮಹಿಳೆಯರನ್ನು ಪೂಜ್ಯಭಾವನೆಯಿಂದ ಕಾಣುತ್ತದೆ ಎನ್ನುವ ಯತ್ನಾಳ್, ‘ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ…’ ಎನ್ನುವ ಮೂಲಕ ಒಬ್ಬ ತಾಯಿಯನ್ನು ನಿಂದಿಸುತ್ತಿದ್ದೇನೆ ಎನ್ನುವ ಪರಿಜ್ಞಾನ ಕೂಡ ಇಲ್ಲವಾಗಿದೆ.
ಸಚಿವ ಶಿವಾನಂದ ಪಾಟೀಲ್ ಅವರಿಗೆ ಯತ್ನಾಳ್ ಮಾತು ನಿಜಕ್ಕೂ ಘಾಸಿ ಮಾಡಿರಬಹುದು. ಹಾಗಂತ ಮನಸ್ಸಿಗೆ ಬಂದಾಗೆಲ್ಲ ರಾಜೀನಾಮೆ ಕೊಡುವುದೇ? ಅವರನ್ನು ಗೆಲ್ಲಿಸಿದ ಮತದಾರರ ನಿರ್ಧಾರಕ್ಕೆ ಬೆಲೆಯೇ ಇಲ್ಲವೇ? ಇವರಿಬ್ಬರೂ ಸಹ ರಾಜೀನಾಮೆ ಬಗ್ಗೆ ಮಾತನಾಡಿರುವುದು ಮತದಾರರ ನಿರ್ಧಾರವನ್ನು ತಮ್ಮ ಕಾಲಕಸ ಎಂದು ತಿಳಿದಂತಿದೆ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.