“ನನ್ನ ಮುದ್ದಿನ ಮಗಳು ಪ್ರೇರಣಾ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 97% ಅಂಕ ಪಡೆದು ಉತ್ತೀರ್ಣಳಾಗಿದ್ದಾಳೆ. ಅಭಿನಂದನೆಗಳು ಮಗಳೇ… ಒಬ್ಬ ವಿಧೇಯ ವಿದ್ಯಾರ್ಥಿನಿಯಾಗಿ ಓದು ಹಾಗೂ ಮುಂದಿನ ಗುರಿಯೆಡೆಗಿನ ನಿನ್ನ ಸ್ಪಷ್ಟತೆಯ ಬಗ್ಗೆ ನಾನು ಹೆಮ್ಮೆ ಪಡುತ್ತೇನೆ”
ಇದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಏಪ್ರಿಲ್ 8ರಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಹಾಕಿದ ಪೋಸ್ಟ್. ಈ ಪೋಸ್ಟ್ಗೆ ಹಲವು ಫೇಸ್ ಬುಕ್ ಬಳಕೆದಾರರು- ಧರ್ಮ ರಕ್ಷಣೆ, ಹಿಂದುತ್ವ, ತ್ರಿಶೂಲ, ಹಿಜಾಬ್ ಪ್ರತಿಭಟನೆ, ಬಡವರ ಮಕ್ಕಳು ಬೀದಿಯಲ್ಲಿ ಬಲಿ, ರಾಜಕೀಯ ಲಾಭ ಮೊದಲಾದ ಪ್ರಶ್ನೆಗಳನ್ನು ಮುಂದಿಟ್ಟು ಕಮೆಂಟ್ ಮಾಡುವ ಮೂಲಕ ಅವರನ್ನು ಕುಟುಕಿದ್ದರು.
97℅ ಅಂಕ ಪಡೆದು ಉತ್ತೀರ್ಣಳಾದ ಮಗಳಿಗೆ ಅಭಿನಂದನೆ ಸಲ್ಲಿಸಿದ ಶಾಸಕರಿಗೆ, ನಿಮ್ಮ ಮಗಳ ಕೈಗೆ ಪೆನ್ನು ಕೊಟ್ಟು, ಕಂಡವರ ಬಡ ಮಕ್ಕಳ ಕೈಗೆ ತ್ರಿಶೂಲ ಕೊಟ್ಟು ಅವರನ್ನು ಬೀದಿ ಹೆಣವಾಗುವಂತೆ ಮಾಡುತ್ತೀರಿ ಎಂದು ಫೇಸ್ ಬುಕ್ ಬಳಕೆದಾರರು ಕಮೆಂಟ್ ಮೂಲಕ ಅಸಮಾಧಾನ ಹೊರ ಹಾಕಿದ್ದರು.
ಮಗಳಿಗೆ ಅಭಿನಂದನೆ ಸಲ್ಲಿಸಿ ಸುನಿಲ್ ಕುಮಾರ್ ಪೋಸ್ಟ್ ಹಾಕಿ ಇನ್ನೂ ತಿಂಗಳು ಕಳೆದಿಲ್ಲ, ಆಗಲೇ ಮಂಗಳೂರಿನಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿದೆ. ಈ ಹತ್ಯೆ ಸಂಬಂಧ ಮೇ 2ರಂದು ಸುನಿಲ್ ಕುಮಾರ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ “ಧರ್ಮ ರಕ್ಷಣೆಯಲ್ಲಿ ತೊಡಗಿಸಿಕೊಂಡು ಹಿಂದುತ್ವಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟ ಮಿತ್ರ ಸುಹಾಸ್ ಶೆಟ್ಟಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ. ಓಂ ಶಾಂತಿ” ಎಂದು ಪೋಸ್ಟ್ ಹಾಕಿದ್ದಾರೆ.
ಈ ಎರಡೂ ಪೋಸ್ಟ್ ಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿವೆ. ‘’ಮಗಳಿಗೆ ಅಭಿನಂದನೆ. ಇತರರ ಮಕ್ಕಳಿಗೆ ಓಂ ಶಾಂತಿಯ ಮಹಾಪೂರ, ನೀವು ನಾಯಕರೆಲ್ಲಾ ಸೇಫ್ ಆಗಿದ್ದೀರಲ್ಲಾ!? ಸಾಯುವುದು ಬಡಪಾಯಿಗಳು ತಾನೇ? ಬಿಜೆಪಿ ಅವರು ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಿ. ನಿಮ್ಮ ರಾಜಕೀಯಕ್ಕೆ ಇನ್ನೆಷ್ಟು ಕಾರ್ಯಕರ್ತರ ಜೀವ ಬಲಿ ಕೊಡಬೇಕು” ಎಂದು ಹಲವರು ಅಸಮಾಧಾನ ಹೊರ ಹಾಕಿದ್ದಾರೆ.
ಇದನ್ನು ಓದಿದ್ದೀರಾ? ಬಂಟ್ವಾಳ | ಮುಸ್ಲಿಂ ವ್ಯಾಪಾರಿಗಳು ಪ್ರಯಾಣಿಸುತ್ತಿದ್ದ ರಿಕ್ಷಾದ ಮೇಲೆ ಮುಗಿಬಿದ್ದ ಸಂಘಪರಿವಾರದ ಕಾರ್ಯಕರ್ತರು!
ಮಗಳಿಗೆ ಅಭಿನಂದನೆ ಸಲ್ಲಿಸಿದ ಮಾಡಿದ ಪೋಸ್ಟಿಗೆ ಮಾಡಿರುವ ಕೆಲವು ಕಮೆಂಟ್ಸ್ ಗಳು ಹೀಗಿವೆ:
“ಅಭಿನಂದನೆಗಳು. ಹಾಗೆಯೇ ಒಂದು ಪ್ರಶ್ನೆ ನಿಮ್ಮಲ್ಲಿ… ತ್ರಿಶೂಲ, ಖಡ್ಗ ಬಡ ಮಕ್ಕಳ ಕೈಯಲ್ಲಿ. ನಿಮ್ಮ ಮಕ್ಕಳ ಕೈಯಲ್ಲಿ ಪೆನ್ನು ಪುಸ್ತಕ. ವಾವ್… ಇದನ್ನು ಬಡ ಕುಟುಂಬದ ಮಕ್ಕಳು ಅರ್ಥ ಮಾಡ್ಕೋಬೇಕು”

“ನಿಮ್ಮ ಮಕ್ಕಳು 97% ತೆಗೊಂಡು ಪಾಸ್ ಆದ್ರೆ ನಿಮಗೆ ಖುಷಿ. ಅದೆ ಸಾಮಾನ್ಯರ ಮಕ್ಕಳನ್ನು ಮಾತ್ರ ಧರ್ಮ ರಕ್ಷಣೆಯ ಹೆಸರಲ್ಲಿ ಅವರನ್ನು ಸಾಯಿಸಿ, ಆದರ ಮೇಲೆ ರಾಜಕೀಯ ಮಾಡ್ತಿರಲ್ಲೊ”
“ಓ ಹೌದಾ… ಅಭಿನಂದನೆಗಳು ನಿಮ್ಮ ಮಗಳಿಗೆ. ನಿಮ್ಮ ಮಗಳನ್ನು ನಮ್ಮ ಜೊತೆ ಧರ್ಮ ರಕ್ಷಣೆಗೆ ಕರೆತನ್ನಿ ಉತ್ತಮ ವಾಗ್ಮಿಯನ್ನಾಗಿ ಮಾಡುವ. ಜೈ ಶ್ರೀರಾಮ್”
“ಸುನೀಲ್ ರವರೆ, ನೀವು ಬೆಂಕಿ ಕಾರುವ ಮುಸ್ಲಿಂ ಕುಟುಂಬದಲ್ಲಿ ನಿಮ್ಮಂತೆ ಯೋಚಿಸುವ ತಂದೆ ತಾಯಿಗಳು ಇರುತ್ತಾರೆ. ಅವರ ಭಾವನೆಗೆ ನಿಮ್ಮ ಮಾತುಗಳು ನೋವು ಮಾಡುತ್ತವೆ ಅನ್ನುವ ಭಾವನೆ ನಿಮಗೆ ಹುಟ್ಟಲಿ.’’
“ಸೂಪರ್ ಸರ್. ಬೇರೆ ಮಕ್ಕಳ ಹಾಗೆ ಹಿಜಾಬ್ ವಿರುದ್ಧ ಪ್ರತಿಭಟನೆ ಮಾಡೋಕೆ ಕಳಿಸಿದ್ದಿದ್ರೆ ಈ ಹುಡುಗಿ ಕೂಡಾ ಫೇಲ್ ಆಗ್ತಾ ಇದ್ಲು. ಅಲ್ಲಿಗೆ ಕಳಿಸದೇ ಒಳ್ಳೇ ಕೆಲ್ಸಾ ಮಾಡಿದಿರಿ ಸಾರ್”
ಇನ್ನು ಸುಹಾಸ್ ಶೆಟ್ಟಿಗೆ ಶ್ರದ್ಧಾಂಜಲಿ ಹೇಳಿ ಹಾಕಿದ ಪೋಸ್ಟ್ ಗೆ ಬಂದ ಪ್ರತಿಕ್ರಿಯೆಗಳು:
“ಸುಹಾಸ್ ಶೆಟ್ಟಿ ಒಬ್ಬ ಹಿಂದೂ ಕಾರ್ಯಕರ್ತನಾಗಿ ಜೈಲಿನಿಂದ ಹೊರಬಂದ ಮೇಲೆ ಅವರ ಪರಿಸ್ಥಿತಿ ಶೋಚನೀಯ ಆಗಿತ್ತು. ಹಿಂದುತ್ವಕ್ಕಾಗಿ ದುಡಿದವನ ಸುರಕ್ಷತೆಯ ಬಗ್ಗೆ ಯೋಚನೇನೂ ಇತ್ತು. ಹಾಗೂ ಹೀಗೂ ನೆಲೆ ಕಂಡುಕೊಳ್ಳುವ ಮಧ್ಯೆ ಈ ರೀತಿಯಾಗಿದೆ. ನಾಯಕರು ಈ ರೀತಿಯ ಪರಿಸ್ಥಿತಿಯ ನಂತರ ಆಸ್ಪತ್ರೆಗೆ ಧಾವಿಸಿ ಹೆಣಗಳನ್ನು ನೋಡುವ ಬದಲು ಅವರು ಬದುಕಿರುವಾಗಲೇ ಅವರ ಜೀವನಮಟ್ಟ ಸುಧಾರಿಸುವ ರೀತಿ ಮಾಡಿ”
“ನೀವು ನಾಯಕರುಗಳೆಲ್ಲಾ ಸೇಫ್ ಆಗಿದ್ದೀರಲ್ಲಾ!? ಸಾಯೋವ್ರು ಬಡಪಾಯಿಗಳು ತಾನೇ?”
“ಏನ್ ಮಾಡ್ತಿದಿರಾ ಬಿಜೆಪಿ ಅವ್ರು? ಶವದ ಮೇಲೆ ರಾಜಕೀಯ ಮಾಡುವುದನ್ನು ಬಿಡಿ, ಇಗಲಾದ್ರೂ ಎಚ್ಚೆತ್ತುಕೊಳ್ಳಿ. ನಿಮ್ಮ ರಾಜಕೀಯಕ್ಕೆ ಇನ್ನೆಷ್ಟು ಕಾರ್ಯಕರ್ತರ ಜೀವ ಬಲಿಕೊಡಬೇಕು ನಿಮಗೆ”
“ಇದಕ್ಕೆ ಕಾರಣ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಹಿಂದೂ ಧರ್ಮದ ಪರ ನಿಲ್ಲದೆ ನಿಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ಹಿಂದೂ ಧರ್ಮದ ಯುವಕರನ್ನು ಬಲಿಪಶು ಮಾಡುವುದು. ನಮ್ಮ ಹಿಂದೂ ಯುವಕರ ಬಲಿ, ನಿಮ್ಮ ಪಾಪದ ಫಲ. ಇದಕ್ಕೆ ಮುಕ್ತಿ ಯಾವಾಗ”
“ಇದಕ್ಕೆಲ್ಲ ಬಿಜೆಪಿಯವರ ರಾಜಕೀಯ ಕಾರಣ. ಏಕೆಂದರೆ ಅಧಿಕಾರದಲ್ಲಿ ಇದ್ದಾಗ ಒಬ್ಬ ಕಾರ್ಯಕರ್ತರನ್ನು ಸರಿಯಾಗಿ ನಡೆಸಿಕೊಂಡಿಲ್ಲ ಮತ್ತು ಅವರಿಗೆ ಯಾವುದೇ ರಕ್ಷಣೆ ನೀಡಲಿಲ್ಲ”
