ಪ್ರಾಣ ಪಕ್ಷಿಯ ರೆಕ್ಕೆ : ಮಾತು..ಮೌನ..ಕವಿತೆ

Date:

Advertisements

ಇವತ್ತಿನ ಹಲವು ಸಂಕಷ್ಟಗಳಾಚೆ ಮತ್ತು ಲೋಕದ ಸದ್ದುಗದ್ದಲಗಳ ನಡುವೆ ಮನುಷ್ಯ ಮೌನವಾಗುವುದು ಮತ್ತು ಹಗುರಾಗುವುದು ಕಷ್ಟವಾಗುತ್ತಿರುವ ಹೊತ್ತಿನಲ್ಲಿ ಅಗಾದ ಮೌನವನ್ನು ದೇನಿಸುತ್ತಾ ಮೌನದಲ್ಲೇ ಪ್ರಾಣಪಕ್ಷಿಗೆ ರೆಕ್ಕೆ ತೊಡಿಸಿ ಹಾರಿಸುವ ಮೂಲಕ ತಾನು ಹಗುರಾಗಿ ಜಗತ್ತನ್ನು ಹಗುರಾಗಿಸುವ ನಮ್ಮ ಮಧ್ಯದ ಸಂವೇದನಾಶೀಲ ಕವಯತ್ರಿ ಗೀತಾ ವಸಂತ ಅವರು.

ಪ್ರಸ್ತುತ “ಪ್ರಾಣಪಕ್ಷಿಯ ರೆಕ್ಕೆ” ಕವನ ಸಂಕಲನದಲ್ಲಿ ಕವಿಯತ್ರಿ ‘ಲೋಕದ ಸದ್ದುಗಳ ನಾದ’ವಾಗಿಸಿ ನಮ್ಮೊಳಗೆ ಇರುವ ದಿವ್ಯ ಶಿಖರಗಳ ‘ದರ್ಶನ’ ಮಾಡಿಸಿ ಅಮ್ಮ ಮಗನ ನಡುವಿನ ‘ಆವಿಯಾಗದ ಭಾಷೆಯಾಗಿ’ ಗರ್ಭಗುಡಿಗಳಿಂದ ದೇವರುಗಳನ್ನು ‘ಬಿಡುಗಡೆ’ ಮಾಡಿ ಹುಲುಮಾನವರನ್ನಾಗಿಸಿ ನಿರಾಕರಿಸಿದವರ ಮುಂದೆ ನಿನ್ನ ‘ನಿರಾಕರಣೆ’ಯೇ ನನ್ನ ಸಾಕ್ಷಾತ್ಕಾರದ ದಿವ್ಯಗಳಿಗೆ ಎಂದು ಹೊರ ಜಗತ್ತಿನತ್ತ ಮುಖ ಮಾಡಿ ನೀಚ ವ್ಯವಸ್ಥೆಗೆ ‘ನೀವೇನೂ ತಲೆ ಕೆಡಿಸಿಕೊಳ್ಳಬೇಡಿ ಸ್ವಾಮಿ’ ಉಸಿರುಗಟ್ಟಿಸುವ ಈ ಜಗದೊಳಗೆ ‘ಐ ಕಾಂಟ್ ಬ್ರೀದ್’ ಎಂದು ಉದ್ಗರಿಸುತ್ತಾ ಚರಿತ್ರೆಯ ಪ್ರತಿ ತಿರುವುಗಳಲ್ಲೂ ಚಕ್ರದ ಗುರುತಿದೆ ‘ಜೀವದ ಗುರುತು’ಇಲ್ಲ ಆದರೆ ನೀನು ಭವಬೀಜ ನಾನು ಹಸಿ ಭೂಮಿ ಹೇಗೆ ಚಿಗುರದೇ ಇರಲಿ ಎಂಬ ‘ಇರುವ’ನ್ನು ತಿಳಿಸುತ್ತಾ ಪಿಸು ಮಾತುಗಳನ್ನೇ ಉಸಿರಾಡಿ ‘ನಿಲ್ಲಿಸದಿರು ಪಿಸುಗುಡುವುದನ್ನು’ ಎಂದು ಕಳಚಿಕೊಂಡಿರುವವನ ಎದಿರು ಯಾವ ಸ್ನಾನ ಯಾವ ಜ್ಞಾನ ಕಲಿಸಿತು ನಿನ್ನ ‘ಕಳಚುವ ಪರಿಯ’ ಎಂದು ಪ್ರಶ್ನಿಸುತ್ತ ‘ತೊಟ್ಟು ಕಳಚಿದ ಹೂವ’ನ್ನು ತಂದೆಗೆ ಇರಿಸಿ ಅಪ್ಪನ ಅಸ್ತಿತ್ವದ ಗಾಢ ನೆನಪುಗಳನ್ನ ನೆನೆದು ವಿಷಾದ ‘ಹಂಸರಾಗ’ಕ್ಕೆ ಕೊರಳು ಕೊಟ್ಟು ‘ಯೂಸ್ ಅಂಡ್ ಥ್ರೋ’ ಎಂಬ ವಾಸ್ತವತೆ ಮತ್ತು ಸಿನಿಖತನದ ಸಂಬಂಧಗಳನ್ನು ಕವಿತೆಯಾಗಿಸಿ ಸಹೃದಯರ ಮನ ಮುಗಿಲಲ್ಲಿ ಪ್ರಾಣಪಕ್ಷಿಯನ್ನು ಹಾರಿಸಿದ್ದಾರೆ.

ಈ ಕವನ ಸಂಕಲನ ಕೈಗೆತ್ತಿಕೊಂಡಾಗ ಬಂದ ಪ್ರಶ್ನೆ, ಯಾವುದು ಈ ಹೊತ್ತಿನ ಕವಿತೆ? ಬಹುಷಃ ಯಾವುದು ತನ್ನನ್ನು ಮತ್ತು ಓದುಗರನ್ನು ಹಗುರಾಗಿಸುತ್ತದೆಯೋ ಮತ್ತು ಅಂತಹ ಅಂತಃಕರಣ ಸತ್ವ ಹೊಂದಿರುವುದೋ ಅದೇ ಈ ಹೊತ್ತಿನ ಕವಿತೆ. ಬಾಷಣವೊಂದರಲ್ಲಿ ಬರಗೂರು ರಾಮಚಂದ್ರಪ್ಪನವರು ಹೇಳುತ್ತಾರೆ, ‘ಕಾವ್ಯಕ್ಕೆ/ಕವಿತೆಗೆ ಕರುಳಿರಬೇಕು ಅದು ಸದಾ ಕನಲುತ್ತಿರಬೇಕು’ ಎಂದು. ಹೀಗೆ, ಇಲ್ಲಿನ ಬಹುತೇಕ ಕವಿತೆಗಳು ಸ್ತ್ರೀ ಅಂತಃಸತ್ವದ ರುಜವಾತುಗಳಾಗಿವೆ. ನಿರುಮ್ಮುಳವಾಗಿ, ನಾಜೂಕಾಗಿ ಹೇಳಬೇಕಾದ್ದದನ್ನಿಲಿ ಕವಿ ಹೇಳಿದ್ದಾರೆ.

Advertisements

ಇಲ್ಲಿರುವ ಹಲವು ಕವಿತೆಗಳಲ್ಲಿ ಅಗಾಧವಾದ ಆಧ್ಯಾತ್ಮ, ಸ್ತ್ರೀ ಸಂವೇದನೆ, ಮೌನ, ಪಿಸುಮಾತು, ಸೌಮ್ಯ ಬಂಡಾಯದ ಧನಿ, ಪ್ರೀತಿ, ವಿಷಾದ ಮೊದಲಾದವು ಕಾಣುತ್ತವೆ. ಎಲ್ಲಿಯೂ ಪ್ರಕಟಗೊಳ್ಳದ ನಾವುಗಳು ಪ್ರಕಟವಾಗುವುದು ಕವಿತೆಯಲ್ಲೊ ಕಥೆಯಲ್ಲೊ..! ಈ ಫ್ಲಾಟ್ ಫಾರ್ಮ್ ಮೂಲಕ ಹೊರ ಜಗತ್ತಿನೊಂದಿಗೆ ನಮ್ಮನ್ನು ನಾವು ತೆರೆದುಕೊಳ್ಳಲು, ಆ ಮೂಲಕ ಬಯಲಲ್ಲಿ ಬೆತ್ತಲಾಗಲು ಸಾಧ್ಯವಾಗುತ್ತದೆ. ಮೌನದಲ್ಲಿ ಜಗತ್ತನ್ನು ನೋಡುವ ಕವಿ, ಕವಿತೆಯ ಮೂಲಕ ಜಗತ್ತಿನೊಂದಿಗೆ ಮಾತನಾಡುತ್ತಾನೆ. ರಂಗಮ್ಮ ಹೊದೆಕಲ್ ಅವರು ಹೇಳುವಂತೆ ‘ಮಾತುಗಳ ಆಚೆಗಿನ ಮೌನ ದಕ್ಕಿದ ದಿನ ಕವಿತೆ ಹೂವಾಯಿತು’ ಎಂಬಂತೆ ಇಲ್ಲಿನ ಬಹುತೇಕ ಅವ್ಯಕ್ತ ಭಾವಗಳು ಕವಿತೆಗಳಲ್ಲಿ ವ್ಯಕ್ತಗೊಂಡಂತೆ ಕಾಣುತ್ತವೆ.

‘ಭವಚಕ್ರ ಪ್ರವರ್ತಿನಿ’ ಎಂಬ ಕವಿತೆಯಲ್ಲಿ ಬರುವ “ಬೆರಳ ತುದಿಯಿಂದಲೇ,  ಬ್ರಹ್ಮಾಂಡಗಳ ಉದುರಿಸುತ್ತಾಳೆ.,ಎಷ್ಟು ಚುಕ್ಕಿ ಎಷ್ಟು ಸಾಲು,ಯಾವ ಕ್ರಮ ಎಂತ ಗಣಿತ ಯಾವುದಾರಂಭ? ಯಾವುದಂತ್ಯ?” ಎಂದು ಪ್ರಶ್ನೆ ಮಾಡುವ ಈ ಕವಿತೆ ಸ್ತ್ರೀಯರ ನಿತ್ಯ ಕರ್ಮವಾದ ರಂಗೋಲಿ ಕೆಲಸವು ಎಷ್ಟು ಧ್ಯಾನಸ್ಥವಾದದ್ದು ಎಂಬುದನ್ನ ಹೇಳುತ್ತಲೇ ಅದನ್ನು ವಿಶ್ವ ಶಕ್ತಿಯೊಂದಿಗೆ ಸಂಪರ್ಕಿಸುವ ಕ್ರಮ ಅಚ್ಚರಿ ಮೂಡಿಸುವಂತಿದೆ. ಇದೇ ತೆರನಾದ ಆಧ್ಯಾತ್ಮ ಮುಂಬರುವ ‘ಭವದ ಸ್ಪ್ರಿಂಗಿನ ಮೇಲೆ’ ‘ದರ್ಶನ’ ‘ಸದಾಶಿವ ಧ್ಯಾನ’ ದಂತಹ ಕವಿತೆಗಳಲ್ಲಿ ಕಾಣುತ್ತೇವೆ.

ಮುಂದೆ ಬರುವ ‘ಮಾಯೆ’ ಕವಿತೆಯಲ್ಲಿ ಸೌಮ್ಯವಾದ ಬಂಡಾಯ ಕಾಣಿಸುತ್ತದೆ. ಸಿದ್ದಮಾದರಿಗಳಾಚೆ ಯೋಚಿಸುತ್ತಾ “ಪ್ರತಿ ಪ್ರತಿಮೆಗಳ ಭಂಜಿಸಿ ಲೀಲೆಯಲಿ, ನಡೆಯುವ ಅವಳು ಅವನು ಠಂಕಿಸಿದ,ಅಕ್ಷರಗಳ ಉಫ್ ಎಂದು ಊದುತ್ತಾಳೆ, ಹಾದರಗಿತ್ತಿ ಎಂದದ್ದು ಅವಳಿಗೆ, ಪಾತರಗಿತ್ತಿ ಎಂದು ಕೇಳಿದಂತೆ. ವ್ಯವಸ್ಥೆ ತಂದ್ದೊಡ್ಡುವ ಸವಾಲುಗಳು ಮತ್ತು ಪುರುಷ ಸಮಾಜ ಮಾಡುವ ಧೋರಣೆಗಳನ್ನು ಕಡೆಗಣಿಸುವುದಲ್ಲದೆ ನಕಾರಾತ್ಮಕತೆಯನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಗಟ್ಟಿತನವು ಇಲ್ಲಿ ಮುಖ್ಯವಾಗುತ್ತದೆ.

ತರುವಾಯ ಪೌರಕಾರ್ಮಿಕ ಹೆಣ್ಣುಮಗಳೊಬ್ಬಳು ‘ರಾತ್ರಿಯೆಲ್ಲ ಝಗಮಗಿಸಿ ಉರಿವ ಲೋಕದ ಸೂತಕ ಕಳೆಯುವ’ ‘ಮಹಾನಗರದ ಮಹಾಮಾಯೆ’ ಎಂದು ಈ ಕವಿತೆಯ ಮೂಲಕ ಆ ವೃತ್ತಿಗೆ ಮತ್ತು ಆ ವೃತ್ತಿ ಮಾಡುವ ಅದೆಷ್ಟೋ ಸೋತ ಮನಸುಗಳಿಗೆ ಸಾರ್ಥಕ್ಯದ ಭಾವವನ್ನೂ ಮತ್ತು ಘನತೆಯನ್ನು ಒದಗಿಸಿದ್ದಾರೆ.

ಪ್ರತಿದಿನ ಎದಿರುಗೊಳ್ಳುವ ಪ್ರಾಥಮಿಕ ಸಂಬಂಧಗಳ ಜೊತೆ ನಮ್ಮ ಮನಸ್ಸು ಸದಾ ತುಡಿಯುತ್ತದೆ. ಒಂದರೆಕ್ಷಣ ಇಲ್ಲಿ ಏನಾದರೂ ವ್ಯತ್ಯಾಸವಾದರೆ ಅದರ ಸಂಕಟವೇ ಬೇರೆ ಅಂತಹ ಸೂಕ್ಷ್ಮತೆಯ ತಂತುವೊಂದು ‘ಆವಿಯಾಗಿದೆ ಭಾಷೆ’ ಎಂಬ ಕವಿತೆಯಲ್ಲಿ ಅಮ್ಮ- ಮಗನ ಸಂಬಂಧವಾಗಿ ‘ಜೀವದ ಗುರುತು’ ಕವಿತೆಯಲ್ಲಿ ಪ್ರೇಮ- ಸಂವೇದನೆಯಾಗಿ ‘ತೊಟ್ಟು ಕಳಚಿದ ಹೂ’ ಮತ್ತು ‘ಅಪ್ಪ ಅಂಗಿ ಅಸ್ತಿತ್ವ’ ಎಂಬ ಕವಿತೆಗಳಲ್ಲಿ ಅಪ್ಪ-ಮಗಳ ಭಾಂಧವ್ಯದ ಮರೆಯಲಾಗದ ನೆನಪಾಗಿ ಓದುಗರನ್ನು ಆರ್ದ್ರಗೊಳಿಸುತ್ತದೆ.

ಮುಂದುವರೆಯುತ್ತಾ, ‘ಕನ್ನಡಿ ಹೇಳಿದ ಹಸೀಸುಳ್ಳು ನಿನ್ನ ಅಸ್ತಿತ್ವ’ ಎಂದು ನಿರಾಕರಿಸಿದವರ ಮುಂದೆ ದಿಟ್ಟತನದ ಉತ್ತರ ನೀಡುವ ಕವಿಯತ್ರಿ ಕೊನೆಯಲ್ಲಿ “ಈಗ ಬಿಂಬವಿಲ್ಲ ಪ್ರತಿಬಿಂಬವಿಲ್ಲ, ಕಳವಳವಿಲ್ಲ ಕನ್ನಡಿಯೂ ಇಲ್ಲ, ಕಳವಾಗುವ ಭಯವಿಲ್ಲ, ಬೇಲಿಯಿಲ್ಲ ಬಾಗಿಲೂ ಇಲ್ಲ, ಇದ್ದೇನೆ ನಾನು ಅಸೀಮ ಅನಂತ”.. ಎಂಬ ಸಾಲುಗಳಲ್ಲಿ ನಿರಾಕರಣೆ ಒಂದಡೆಯಾದರೆ ಅದನ್ನು ಮೀರಿ ನಿರಾಕರಣೆಯ ನಂತರ ಸಿಗುವ ನಿಜವಾದ ಸ್ವಾತಂತ್ರ್ಯದ ಬಗ್ಗೆ ದ್ವನಿಸುತ್ತವೆ. ಸೃಷ್ಟಿಯ ಆದಿಯಿಂದಲೂ ಹೆಣ್ಣಿಗೆ ಸಿಗಬೇಕಾದ ಸ್ಥಾನಮಾನ ಸಿಗಲೇ ಇಲ್ಲ ಅವಳೊಂದು ಭೋಗದ ವಸ್ತುವಷ್ಟೇ ಎಂದು ಕಾಣುವ ಜಗತ್ತಿಗೆ, ವ್ಯವಸ್ಥೆಗೆ ‘ನೀವೇನು ತಲೆಕೆಡಿಸಿಕೊಳ್ಳಬೇಡಿ ಸ್ವಾಮಿ’ ಎಂಬ ಕವಿತೆಯ ಮೂಲಕ ಅಹವಾಲು ಎತ್ತುತ್ತಾ 

“ಕರಳುಬಳ್ಳಿಯ ಕೊಳವೆಯಲ್ಲುಸಿರು ಊದಿ, ಪ್ರಾಣದಿಂದಾ ಪ್ರಾಣಾಗ್ನಿಯ ಹೊತ್ತಿಸಿ, ಹೆತ್ತತಾಯಿ ಮರುಗುತ್ತಿದ್ದಾಳೆ ಒಳಗೆ, ಹುಟ್ಟಬಾರದು ಹೆಣ್ಣು ಜಾತಿಯೊಳಗೆ”. ಎಂಬ ಸಾಲುಗಳು ಸಮಾಜದ ಕ್ರೌರ್ಯಕ್ಕೆ ಸಿಕ್ಕ ಹೆಣ್ಣಿನ ಆಂತರ್ಯದ ಸಂಕಟವಾಗಿ ಇಲ್ಲಿ ಪ್ರಕಟವಾಗಿವೆ. ಇದೆ ವ್ಯವಸ್ಥೆಯನ್ನು ಕುರಿತು ಹೇಳುವ ಕವಿಯತ್ರಿ ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಮಾತಿನಂತೆ ಕೆಲವು ಸತ್ಯಗಳು ನಮ್ಮ ಅರಿವಿಗೆ ಗೋಚರವಾದಾಗ ಅವುಗಳನ್ನು ನೆನೆದು ‘ಐ‌ ಕಾಂಟ್ ಬ್ರೀದ್’ ಎಂದು ‘ಉಸಿರಾಡಬೇಕಾಗಿದೆ ಒಮ್ಮೆ ನಿರಾಳವಾಗಿ ದಾರಿಬಿಡಿ’ ಎಂದು ಕೇಳುತ್ತಾರೆ. ಮುಂದುವರೆಯುತ್ತಾ ‘ಪರಿಮಳದ ಕಣ್ಣು’ ಕವಿತೆಯಲ್ಲಿ ತೀವ್ರ ವೇದನೆಯೊಂದರ ಅಮಲಿನಲ್ಲಿ ಅದರ ಹಿಂದೆ ಸಾಗುವ ಮನಸ್ಸು ಪರಿಮಳದ ಜಾಡು ಹಿಡಿದು ನಡೆಯುತ್ತದೆ. ‘ಅಳಸಿಹೋದ ಅವನ ಪರಿಮಳವ ಅರಸಿ ಹೊರಟಿರುವೆ ಗಾಳಿಯಲ್ಲಿ’.. ಎಂಬ ಸಾಲು ಪುರಾಣದ ಶಕುಂತಲೆ, ಸೀತೆ, ಗೌತಮಿ ಅಂತಹ ಸ್ತ್ರೀಯರನ್ನು ಕಣ್ಣಮುಂದೆ ತರುತ್ತದೆ. ಮುಂಬರುವ ‘ಇರುವು’ ‘ಅರ್ಧ ಬರೆದ ಪ್ರೇಮಪತ್ರ’ ‘ಕಳಚವ ಪರಿ’, ಈ ಕವಿತೆಗಳಲ್ಲಿ ಗಾಢವಾದ ಪ್ರೇಮ ಮತ್ತು ವಿರಹ ವೇದನೆಗಳು ಮುಖಾಮುಖಿಯಾಗುತ್ತವೆ.

ಕೊನೆಗೆ‌ ‘ಯೂಸ್ ಅಂಡ್ ಥ್ರೋ’ ಎಂಬ ಕವಿತೆಯಲ್ಲಿ ಪರಿಸರ ಕಾಳಜಿ, ವಾಸ್ತವ ಜಗತ್ತು, ಮತ್ತೂ ಆಧುನಿಕತೆಯಲ್ಲಿ ಸಂಬಂಧ ಇಂತಹ ಅಂಶಗಳನ್ನು ಇಟ್ಟುಕೊಂಡು “ನಾ ಪೆನ್ನು ಬಳಸಿದೇನೋ ಪೆನ್ನು ಬಳಸಿತೋ ನನ್ನ!” ಎಂದು ಬರೆಯುತ್ತಾರೆ. ಕವಯತ್ರಿಯ ಸೂಕ್ಷ್ಮ ಸಂವೇದನೆ ಅನುಭವ ಒಳಗೊಂಡು ರಚನೆಯಾದ ಈ ಕವಿತೆಗಳು ಆತ್ಮಕವಿತೆಗಳಂತೆ ಭಾಸವಾಗುತ್ತವೆ ಮತ್ತೂ ಈ ಮೂಲಕ ಆತ್ಮಕಥೆಯಷ್ಟೇ ಅಲ್ಲ ಆತ್ಮ ಕವಿತೆಗಳನ್ನೂ ಬರೆಯಬಹುದು ಎಂಬುದು ಇದರಿಂದ ತಿಳಿಯುತ್ತದೆ.

ಆಧುನಿಕತೆಯ ಭರಾಟೆಯಲ್ಲಿ ಸಿಕ್ಕಿ ಸಂವೇದನೆಗಳೇ ಇಲ್ಲದೆ ಮನುಷ್ಯನು ಒಳಗೊಂಡಂತೆ ಎಲ್ಲವೂ ಯಂತ್ರಸ್ಥವಾಗಿರುವ ಈ ಹೊತ್ತಿನಲ್ಲಿ ಎದೆನೆಲವನ್ನು ತೇವವಾಗಿಸುವ ಆ ಮೂಲಕ ನಿರ್ಜೀವವಾಗುತ್ತಿರುವ ಜೀವತಂತುಗಳನ್ನು ಜೀವವಾಗಿಸುವ ಒರತೆ ಈ ಕವಿತೆಗಳಿಗಿದೆ ಇವುಗಳನ್ನು ಎದೆಗಿಳಿಸಿಕೊಳ್ಳುವ ಸಹೃದಯತೆ ನಮ್ಮದಾಗಲಿ ಇಂತಹ ಮತ್ತಷ್ಟು ಪ್ರಾಣ ಪಕ್ಷಿಗಳು ರೆಕ್ಕೆ ಧರಿಸುವಂತಾಗಲಿ.

ಬರಹ – ದರ್ಶನ್ ಎಸ್ ಆರ್, ಪ್ರಥಮ ಎಂ.ಎ, ಡಿ.ವಿ.ಜಿ ಕನ್ನಡ ಅಧ್ಯಯನ ಕೇಂದ್ರ, ತುಮಕೂರು ವಿಶ್ವವಿದ್ಯಾನಿಲಯ, ತುಮಕೂರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X