ಜಾತಿ ಗಣತಿ ನಡೆಸಲು ಕೆಂದ್ರ ಸರ್ಕಾರ 500 ಕೋಟಿ ರೂ. ನೀಡುವುದಾಗಿ ಹೇಳಿದೆ. ರಫೆಲ್ ಯುದ್ದ ವಿಮಾನಗಳಿಗೆ 35 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ. ನಮ್ಮ ದೇಶವನ್ನು ಕಾಯಲು ವಿಮಾನಗಳ ಅಗತ್ಯವಿದೆ. ಇಷ್ಟಾದರೂ ಸೈನ್ಯಕ್ಕೆ ಕಳೆದ ಎರಡು ವರ್ಷಗಳಿಂದ ಹುದ್ದೆಗಳನ್ನು ಭರ್ತಿ ಮಾಡಕೊಳ್ಳದ ಕಾರಣಕ್ಕೆ ಕಾಶ್ಮೀರದಲ್ಲಿ ಏನಾಗಿದೆ ಎಂದು ನಮಗೆ ತಿಳಿದಿದೆ. ಈ 500 ಕೋಟಿ ಹಣ ಯಾವುದಕ್ಕೂ ಸಾಲುವುದಿಲ್ಲ. ಈ ಹಣವನ್ನು ಹೆಚ್ಚು ಮಾಡಬೇಕು ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಗ್ರಹಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, “ರಾಹುಲ್ ಗಾಂಧಿ ಅವರು ಜಾತಿ ಗಣತಿಯಾಗಬೇಕು ಎಂದು ಸದಾ ಆಗ್ರಹ ಮಾಡುತ್ತಿದ್ದರು. ಅವರ ಮಾತಿಗೆ ಕೇಂದ್ರ ಮಣಿದಿದೆ. ಕೇಂದ್ರದ ಈ ನಿರ್ಧಾರ ಕಾಂಗ್ರೆಸ್ ಪಕ್ಷದ ಗೆಲುವು. ಸಮಾಜದಲ್ಲಿ ಸಮಾನತೆ ತರಬೇಕು ಎಂದರೆ ಜಾತಿಗಣತಿ ಅತಿ ಅವಶ್ಯಕ. ನಮ್ಮ ಕಾಂಗ್ರೆಸ್ ಸರ್ಕಾರ ಬಡವ, ಶ್ರೀಮಂತ ಎಲ್ಲರಿಗೂ ಯೋಜನೆಗಳನ್ನು ನೀಡಿದೆ. ಇದನ್ನು ಆಧರಿಸಿ ಯಾರು ಉಪಯೋಗ ಪಡೆದಿದ್ದಾರೆ ಎಂಬುದನ್ನು ನೋಡಬೇಕಲ್ಲವೇ. ಜಾತಿಗಣತಿ ನಡೆದರೆ ನಾವು ಕಟ್ಟುವ ತೆರಿಗೆ ಹಣ ಸಮಾನವಾಗಿ ಹಂಚಿಕೆಯಾಗುತ್ತದೆ” ಎಂದರು.
“ನಾವು ಒಂದಷ್ಟು ವಿಚಾರದಲ್ಲಿ ಮಾತ್ರ ಸಮಾನತೆ ಬೇಕು ಎಂದು ಹೇಳುವುದಿಲ್ಲ. ತೆರಿಗೆ ಹಂಚಿಕೆಯಲ್ಲಿಯೂ ಇದೇ ಸಮಾನತೆ ಬರಬೇಕು. ಗುಜರಾತಿಗೆ ಹಣ ನೀಡಿ ಎಂದು ಮೋದಿಯವರು ಅಲ್ಲಿನ ಮುಖ್ಯಮಂತ್ರಿಗಳಾಗಿದ್ದಾಗ ಆಗ್ರಹಿಸಿದ್ದರು. ಇದೇ ಮಾತನ್ನು ಅವರಿಗೆ ಈಗ ನೆನಪಿಸಬಹುದಲ್ಲವೇ? ನಮ್ಮ ಪ್ರಣಾಳಿಕೆಯಲ್ಲಿ ಹೇಳಿದಂತೆ ರಾಜ್ಯದಲ್ಲಿ ಈ ಹಿಂದೆ ನಡೆಸಿದ್ದ ಜಾತಿಗಣತಿಯನ್ನು ಈಗ ಬಹಿರಂಗಗೊಳಿಸಿದ್ದೇವೆ. ಈ ಜಾತಿ ಗಣತಿ ಬಗ್ಗೆ ನೂರಾರು ಪ್ರಶ್ನೆಗಳು ಇರಬಹುದು. ಇದಕ್ಕೆ ಉತ್ತರ ಕೊಡುವ ಕರ್ತವ್ಯ ನಮ್ಮದು. ಸಂಸತ್ ಸೇರಿದಂತೆ ಪ್ರತಿ ಹಂತದಲ್ಲಿಯೂ ಜಾತಿಗಣತಿ ಬಗ್ಗೆ ಜನರ ಹಾಗೂ ಕೇಂದ್ರ ಸರ್ಕಾರ ಗಮನ ಸೆಳೆದ ರಾಹುಲ್ ಗಾಂಧಿ ಅವರಿಗೆ ಹಿಂದುಳಿದ ವರ್ಗಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಭಿನಂದನೆಗಳು” ಎಂದು ಹೇಳಿದರು.
“ಜಾತಿಗಣತಿ ಜೊತೆಗೆ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆಯನ್ನು ನಡೆಸಬೇಕು. ನಮ್ಮ ರಾಜ್ಯದ ಬೆವರಿನ ಪಾಲನ್ನು ನೀಡಬೇಕು. ದೇಶದ ಎಲ್ಲಾ ಭಾಗಗಳಿಗೂ ಸಮಾನ ಅನುದಾನ ನೀಡಬೇಕು. ಉತ್ತರಪ್ರದೇಶಕ್ಕೆ ನೀಡಬೇಡಿ ಎಂದು ಹೇಳುತ್ತಿಲ್ಲ. ಅವರೂ ಭಾರತೀಯರೇ. ಆದರೆ ಎಲ್ಲರಿಗೂ ಸಮಾನ ಹಣ ಸಂಚಿಕೆ ಮಾಡಬೇಕು” ಎಂದು ಒತ್ತಾಯಿಸಿದರು.
“ಭಾರತ್ ಜೋಡೋ ಸಮಯದಿಂದಲೂ ದೇಶದಲ್ಲಿ ಜಾತಿಗಣತಿ ನಡೆಯಬೇಕು ಎಂದು ರಾಹುಲ್ ಗಾಂಧಿ ಅವರು ಪ್ರತಿಪಾದನೆ ಮಾಡುತ್ತಾ ಬಂದಿದ್ದರು. ಈಗ ಅವರ ಮಾತಿಗೆ ಕೇಂದ್ರ ತಲೆಬಾಗಿದೆ. ನಮ್ಮ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿಯೂ ಸಹ ಈ ಅಂಶವನ್ನು ಸೇರಿಸಿದ್ದೆವು. ನಮ್ಮ ಪಕ್ಷ ಹಾಗೂ ಸರ್ಕಾರದ ವತಿಯಿಂದ ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತೇವೆ” ಎಂದರು.