ಸಾವನದುರ್ಗ ಟ್ರೆಕ್ ಕೇವಲ ದೈಹಿಕ ಸವಾಲಲ್ಲ, ಅದು ಮನಸ್ಸನ್ನು ಸಹ ಬಲಪಡಿಸುತ್ತದೆ. ಪ್ರಕೃತಿಯ ಸೌಂದರ್ಯದೊಂದಿಗೆ ಇತಿಹಾಸದ ಸ್ಪರ್ಶವಿರುವ ಈ ಬೆಟ್ಟ ಸವಿನೆನಪಾಗಿ ಉಳಿದಿದೆ. ಹಿಂತಿರುಗುವ ಮಾರ್ಗದಲ್ಲಿ, ನಾನು ಯೋಚಿಸುತ್ತಿದ್ದೆ: ಜೀವನದಲ್ಲಿ ಕೆಲವು ಗುರಿಗಳು ಸಾವನದುರ್ಗದ ಏರಿನಂತೆ ಕಠಿಣವಾಗಿರುತ್ತವೆ. ಆದರೆ, ನಾವು ಹಿಂತಿರುಗದೆ ಮುನ್ನಡೆದರೆ, ಶಿಖರ ತಲುಪಿ, ಜೀವನದ ಒಂದು ಸವಿನೆನಪನ್ನು ಗಳಿಸಬಹುದು.
ಎಷ್ಟೋ ಬಾರಿ ನಾವು ನಮ್ಮ ಸುತ್ತಮುತ್ತಲಿನ ಸೌಂದರ್ಯವನ್ನು ನಾವು ಗಮನಿಸುವುದೇ ಇಲ್ಲ ಎಂಬ ಮಾತು ಎಲ್ಲರಿಗೂ ಒಂದಲ್ಲ ಒಂದು ನಿಟ್ಟಿನಲ್ಲಿ ಅನ್ವಯಿಸುತ್ತದೆ, ಅನುಭವಕ್ಕೆ ಬರುತ್ತದೆ. ಹಲವಾರು ಸಲ ನಮ್ಮ ಸುತ್ತಮುತ್ತಲಿನ ನಿಸರ್ಗದ ಸೌಂದರ್ಯದ ಬಗ್ಗೆ ನಮಗೆ ಅರಿವೇ ಇರುವುದಿಲ್ಲ. ದೂರದ ದೇಶ, ದೂರದ ಊರು, ದೂರದ ಪ್ರಕೃತಿ ಬಹು ಸುಂದರ ಅನ್ನಿಸುವುದು ಇದೆ. ಎಲ್ಲಿಯವರೋ ಬಂದು ನಮ್ಮ ಸುತ್ತಮುತ್ತಲ ಜಾಗದ ಬಗ್ಗೆ ಮಾತನಾಡಿದಾಗ, ಬರೆದಾಗ, ಅನುಭವವನ್ನು ವಿವರಿಸಿದಾಗ ಮಾತ್ರ – ಹೌದಲ್ಲ, ಓಹ್ ಇಂತಹ ಜಾಗ, ಇಷ್ಟೇ ಹತ್ತಿರದಲ್ಲೇ ಇತ್ತಲ್ಲ, ನಮಗೆ ಗೊತ್ತೇ ಇರಲಿಲ್ಲ ಅನ್ನುವ ಹಾಗೆ. ಬೆಂಗಳೂರಿನಿಂದ ಕೇವಲ ೬೦ ಕಿಲೋಮೀಟರ್ ದೂರದಲ್ಲಿ, ಮಾಗಡಿಯ ಹಸಿರು ಕಣಿವೆಗಳ ನಡುವೆ, ಪ್ರಕೃತಿಯ ಅಪೂರ್ವ ಏಕ ಶಿಲಾ ಬೆಟ್ಟ ಸಾವನದುರ್ಗ. ಏಶಿಯಾದ ಅತಿ ದೊಡ್ಡ ಏಕಶಿಲಾ ಬೆಟ್ಟಗಳಲ್ಲಿ ಒಂದಾದ ಇದರ ವಿಶಾಲತೆ, ಕಡಿದಾದ ಇಳಿಜಾರು, ಸುತ್ತಮುತ್ತಲಿನ ಹಸಿರು, ಬೆಟ್ಟದ ಮೇಲಿಂದ ಕಾಣುವ ಸುತ್ತಮತ್ತಲ ದೃಶ್ಯ, ಎಂತವರನ್ನೂ ಆಕರ್ಷಿಸುತ್ತದೆ.
ಇದರ ಬಗ್ಗೆ ಕೇಳಿದ್ದು ತುಂಬಾ ಕಡಿಮೆ, ಓದಿದ್ದು ಮತ್ತೂ ಕಡಿಮೆ. ಆದರೆ ಒಂದು ಮುಂಜಾವ ಎದ್ದು ಬೆಳೆಗಿನ ಸೂರ್ಯೋದಯ ನೋಡಲು ಹೊರಡೋಣ ಅಂತ ಹೋದಾಗ ಕಣ್ಣಿಗೆ ಕಂಡ ಬೆಟ್ಟ ಬಹು ಚಂದದ ಏಕ ಶಿಲಾ ಬೆಟ್ಟ – ಸಾವನದುರ್ಗ. ದೂರದಿಂದ ಬಹು ಸುಲಭ ಎಂದು ಭಾಸವಾಗುವ ಸಾವನದುರ್ಗ ಚಾರಣ ಅತೀ ಸುಲಭದ ಚಾರಣವೇನಲ್ಲ. ಹಾಗೆಯೇ ತುಂಬಾ ಕಠಿಣವಾದ ಚಾರಣವೂ ಅಲ್ಲ. ಆರಂಭಿಕ ಚಾರಣಿಗರಿಗೆ ಈ ಚಾರಣ ಮಾಡುವುದು ಬಹು ಕಷ್ಟ. ಒಂದಿಷ್ಟು ಟ್ರೆಕಿಂಗ್ ತರಭೇತಿ, ಅನುಭವ ಇರುವ ಚಾರಣಿಗರು ಇದನ್ನು ಪ್ರಯತ್ನಿಸಬಹುದು. ಈ ಬೆಟ್ಟವನ್ನು ಸಾವಿನದುರ್ಗ ಅಂತಲೂ ಇದನ್ನು ಕರೆಯುತ್ತಾರೆ, ಇದಕ್ಕೆ ಮುಖ್ಯ ಕಾರಣ – ಹಲವಾರು ಚಾರಣಿಗರು ಈ ಬೆಟ್ಟದಲ್ಲಿ, ಚಾರಣ ಸಮಯದಲ್ಲಿ ದಾರಿ ತಪ್ಪಿ, ಬಂಡೆಯ ಕಡಿದಾದ ಹಾದಿಯಲ್ಲಿ ಸಿಲುಕಿ ವಿಧಿ ವಶವಾದ ಘಟನೆಗಳೂ ಇವೆ. ಹಾಗಾಗಿಯೇ ಈ ಚಾರಣಕ್ಕೆ ಕರ್ನಾಟಕ ಪರಿಸರ ಪ್ರವಾಸೋದ್ಯಮದಿಂದ ಪರವಾನಗಿ ಪಡೆಯಬೇಕಾಗುತ್ತೆ.
ಇಲ್ಲಿನ ಬೆಳಗಿನ ಸೂರ್ಯೋದಯ ಬಹು ಪ್ರಸಿದ್ದಿ. ಮಾಗಡಿ ಸಮೀಪವಾಗುತ್ತಿದ್ದಂತೆ ಈ ಬೃಹದ್ದಾದ ಏಕಶಿಲೆ ದಾರಿಯುದ್ದಾಕ್ಕೂ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುವುದಲ್ಲಿ ಸಂಶಯವೇ ಇಲ್ಲ. ಸರಿ ಸುಮಾರು ೧,೨೨೬ ಮೀಟರ್ ಎತ್ತರ ಇದ್ದರೂ ಕೂಡ ಬಹಳ ಸಲೀಸಾಗಿ ಹತ್ತಿ ಇಳಿದು ಬರುವ ಬೆಟ್ಟವಲ್ಲ. ಮಧ್ಯಮ ಗತಿಯ ನಡಿಗೆಗೆ ಒಂದು 5-6 ಗಂಟೆ ಸಮಯ ಬೇಕಾಗುವ ಚಾರಣವಿದು. ದೇವಾಲಯದಿಂದ ತಳಭಾಗದಿಂದ ಶಿಖರವನ್ನು ತಲುಪಲು ಮತ್ತು ಶಿಖರದಲ್ಲಿ ಸಮಯ ಕಳೆಯಲು ಮತ್ತು ವಿಶ್ರಾಂತಿ ವಿರಾಮಗಳನ್ನು ನೀವು ಲೆಕ್ಕಹಾಕಿದರೆ, ಒಟ್ಟು ಚಾರಣವು ಪೂರ್ಣಗೊಳ್ಳಲು 6-7 ಗಂಟೆ ತೆಗೆದುಕೊಳ್ಳುತ್ತದೆ. ಹಾಗೆಯೇ ಒಳ್ಳೆಯ grip, ankle support ಇರುವಂತಹ ಶೂ ಅತೀ ಅಗತ್ಯ. ಇನ್ನೂ ಅತೀ ಅಗತ್ಯವೆಂದರೆ – ಮಾನಸಿಕ ಸ್ಥೈರ್ಯ ಮತ್ತು sure footedness . ತುಂಬಾ ಕಡೆ ಕಡಿದಾದ ಇಳಿಜಾರು, ಲಂಬವಾದ ಏರು ಜಾಗವಿರುವುದರಿಂದ ಇದು ತುಂಬಾ ಅವಶ್ಯ. ಹಾಗೆಯೇ ಮಧ್ಯೆ ಎಲ್ಲಿಯೂ ಏನೂ ಸಿಗದ ಕಾರಣ ನೀರು, ಎನರ್ಜಿ ಬಾರ್ ತೆಗೆದು ಕೊಂಡು ಹೋಗುವ ಅಗತ್ಯವೂ ಇದೆ.

ಕರ್ನಾಟಕದ ರಾಜ್ಯ ಅರಣ್ಯವಾಗಿರುವ ಸಾವನದುರ್ಗ ಅರಣ್ಯದ ನಡುವೆ ಸಾವನದುರ್ಗ ಬೆಟ್ಟವಿದೆ. ಈ ಬೆಟ್ಟವು ಕರಿಗುಡ್ಡ (Black Hill) ಮತ್ತು ಬಿಳಿಗುಡ್ಡ(white Hill) ಸೇರಿದಂತೆ ದೊಡ್ಡ ಬೆಟ್ಟಗಳ ಒಂದು ಭಾಗವಾಗಿದೆ. ಆದರೂ ಕೂಡ ಇದರ ವಿಶಾಲತೆ, ಸೌಂದರ್ಯ ಹಾಗೂ ಸುತ್ತಮುತ್ತಲ ಪ್ರಕೃತಿ ನೋಟದಿಂದಾಗಿ, ಈ ಬೆಟ್ಟ ಇತರ ಬೆಟ್ಟಗಳಿಗಿಂತ ಜಾಸ್ತಿ ಪ್ರಸಿದ್ದಿಯಾಗಿದೆ, ಹಾಗೂ ಚಾರಣಿಗರ ಬಹು ನೆಚ್ಚಿನ ತಾಣವೂ ಹೌದು. ಚಾರಣದ ಆರಂಭದಲ್ಲಿ, ಬೆಟ್ಟದ ಪಾದದಲ್ಲಿ ಸಾವಂದಿ ವೀರಭದ್ರಸ್ವಾಮಿ ಮತ್ತು ಶ್ರೀ ಲಕ್ಷ್ಮಿ ನರಸಿಂಹಸ್ವಾಮಿ ದೇವಾಲಯಗಳಿವೆ. ಬಹಳ ಪುರಾತನ ಕಾಲದ ದೇವಸ್ಥಾನಗಳಿವು. ಹೊಯ್ಸಳರ ಕಾಲದ್ದು ಎಂದು ಪ್ರತೀತಿ. ಇದನ್ನು ದಾಟಿ ನಡೆದು ಕೊಂಡು ಹೋದರೆ ಚಾರಣದ ಹಾದಿ ಹಿಡಿಯುತ್ತೀರಿ (ಈ ಹಾದಿ ಬಿಳಿಗುಡ್ಡದ ಮೇಲೆ ಹಾಡು ಹೋಗುವ ಹಾದಿ). ಎಲ್ಲ ಕಡೆಯೂ ಕೂಡ ಹೋಗಬೇಕಾದ ದಾರಿಯನ್ನು ಗುರುತಿಸಲಾಗಿದೆ, ಇದೇ ಹಾದಿಯನ್ನು ಹಿಡಿದು ನಡೆಯಬೇಕು. ಹಾಗೆಯೇ, ಎಲ್ಲಿಯೂ ಕೂಡ ಈ ಗುರುತು ಹಾಕಿರುವ ದಾರಿಯನ್ನು ಬಿಟ್ಟು ಬೇರೆ ದಾರಿ ಹಿಡಿಯಬಾರದು, ಅದು ಅಪಾಯಕಾರಿ, ಆಗಿರುವ ಹಲವಾರು ಆಕಸ್ಮಿಕ ಘಟನೆಗಳು ಈ ತಪ್ಪಿನಂದಾಗಿ ನಡೆದಿವೆ. ಆದುದರಿಂದ ಇದರ ಬಗ್ಗೆ ತುಂಬಾ ಎಚ್ಚರ ಅಗತ್ಯ. ದೇವಸ್ಥಾನದಿಂದ ಬೆಟ್ಟದ ಚಾರಣ ಆರಂಭ ಪಾಯಿಂಟಿಗೆ ತಲುಪಲು ಸರಿ ಸುಮಾರು 20-30 ನಿಮಿಷ ತಗಲುವುದು. ಅದರ ಬಳಿಕ, ನಿಜವಾದ ಬಂಡೆ ಕಲ್ಲಿನ ಮೇಲಿನ ಚಾರಣ ಆರಂಭ. ಇಲ್ಲಿಂದ ನೆರಳಿನ ಜಾಗ ಬಹು ವಿರಳ. ಹಾಗೆಯೇ, ಕೆಲವೊಂದು ಆಯಕಟ್ಟಿನ ಇಳಿಜಾರನ್ನು ಬಹಳ ಜಾಗರೂಕತೆಯಿಂದ ನಡೆಯಬೇಕು. ಇಲ್ಲಿಂದ ಮೇಲೆ ನೋಡಿದರೆ, ಅಯ್ಯೋ ಅಷ್ಟು ದೂರ ಹೋಗುವುದು ಹೇಗೆ ಎನ್ನುವ ಸಂಶಯ ಬರದೇ ಇರದು.
ಮೊದಲ 20 ನಿಮಿಷದ ದಾರಿಯ ನಂತರದ ಭಾಗದಲ್ಲಿ ಬಂಡೆಗಳು ಜಾಸ್ತಿ ಏರುತ್ತಾ ಹೋಗುತ್ತವೆ. ಇಲ್ಲಿಂದ ಮುಂದೆ ಸಾಗಿದರೆ ಕೋಟೆಯ ಗೋಡೆಗಳು ಕಾಣಸಿಗುತ್ತವೆ. ಇದನ್ನು ಮೊದಲ ಕೋಟೆಯ ಗೋಡೆ ಎಂದು ಗುರುತಿಸಲಾಗುತ್ತದೆ. ಇಲ್ಲಿ ನಿಮಗೆ ಒಂದಿಷ್ಟು ನೆರಳಿನ ಜಾಗವಿದೆ. ಇಲ್ಲಿ ಒಂದಿಷ್ಟು ವಿಶ್ರಮಿಸಿ, ಸುತ್ತಮುತ್ತಲಿನ ದೃಶ್ಯವನ್ನು ಸವಿದು, ನಂತರ ಎರಡನೇ ಕೋಟೆಯ ಗೋಡೆಯ ಕಡೆ ನಡೆಯಬೇಕು, ಇದು ನೇರವಾಗಿ ಬೆಟ್ಟದ ಶಿಖರಕ್ಕೆ ತಲುಪಬಹುದಾದ ಹಾದಿ. ಈ ದಾರಿ ಅಷ್ಟೇನೂ ಸುಲಭದ ದಾರಿಯಲ್ಲ, ಇದು ಸಾದಾರಣ 2-3 ಗಂಟೆ ತೆಗೆದು ಕೊಳ್ಳಬಹುದು. ಇದನ್ನು ದಾಟಿ ಮುಂದೆ ನಡೆದರೆ ಬೆಟ್ಟದ ಶಿಖರದಲ್ಲಿರುವ ನಂದಿಯನ್ನು ಕಾಣಬಹುದು. ಶಿಖರ ತಲುಪುವ ಮುನ್ನ ಒಂದು 500 ಮೀಟರ್ ದೂರದಲ್ಲಿ ಕಡಿದಾದ ಆರೋಹಣವಿದೆ. ಅದನ್ನು ದಾಟಲು ಸುಮರು 25 -45 ನಿಮಿಷ ತೆಗೆದುಕೊಳ್ಳುತ್ತದೆ. ಚಾರಣದ ಈ ಭಾಗ ನಿಮ್ಮ ದೈಹಿಕ ಹಾಗೂ ಮಾನಸಿಕ ಫಿಟ್ನೆಸ್ ಅನ್ನು ಖಂಡಿತವಾಗಿ ಪರೀಕ್ಷಿಸುತ್ತದೆ. ಕೆಲವು ಪ್ರದೇಶಗಳಲ್ಲಿ ಕಲ್ಲಿನ ಮೆಟ್ಟಿಲುಗಳು ಸಹಾಯಕ್ಕೆ ಬರುತ್ತವೆ. ಆದರೆ ಇಲ್ಲಿ ನಿಧಾನವಾಗಿ ಪ್ರತೀ ಹೆಜ್ಜೆಯನ್ನೂ ಗಮನದಲ್ಲಿಟ್ಟು ಸಾಗಬೇಕಾಗುತ್ತದೆ. ಆದರೂ ಮುಂದೆ ಸಿಗುವ ದೃಶ್ಯವನ್ನು ಮನದಲ್ಲಿಟ್ಟುಕೊಂಡು ಸಾಗಿದರೆ ಬೆಟ್ಟ ಏರಿದ್ದೇ ತಿಳಿಯುವುದಿಲ್ಲ. ಒಂದು ಸ್ಥಳದಲ್ಲಿ, ಬಂಡೆಯ ಒಂದು ಭಾಗವು ಬಹು ಲಂಬವಾಗಿ ಇದೆ. ಈ ಜಾಗದಲ್ಲಿ ಎಂತವರಿಗೂ ಒಂದಿಷ್ಟು ಹೃದಯ ಬಡಿತ ವೇಗವಾಗುವುದು ಸಹಜ.

ಕೊನೆಯ ಹಂತದಲ್ಲಿ, ಬಂಡೆಗಳ ನಡುವೆ ಸಣ್ಣ ಗುಹೆಯಂತಹ ಮಾರ್ಗವಿದೆ. ಅದನ್ನು ದಾಟಿದ ನಂತರ—ಶಿಖರ! ಸುಮಾರು 2-3 ಗಂಟೆಗಳ ನಂತರ, ಶಿಖರದ ಕೊನೆಯನ್ನು ತಲುಪಿ ಅಲ್ಲಿನ ನಂದಿಯನ್ನು ವೀಕ್ಷಿಸಬಹುದು. ಅಲ್ಲಿಂದ ಕಾಣುವ ವಿಶಾಲವಾದ ಆಕಾಶ, ಮತ್ತು ಕೆಳಗೆ ಹಸಿರು ಕಣಿವೆಗಳು, ಜಲಾಶಯ, ಮತ್ತು ದೂರದ ಗ್ರಾಮಗಳ ದೃಶ್ಯ ನಿಮ್ಮ ಕಾಲುಗಳ ದಣಿವನ್ನು ಮರೆಯಾಗಿಸುತ್ತವೆ. ಇಲ್ಲಿಂದ ಕಾಣಸಿಗುವ ಸೂರ್ಯೋದಯ ಬಹು ಅಮೋಘ. ಬೆಟ್ಟದ ಮೇಲಿಂದ ಕಾಣುವ ಮಂಚಿನಬೆಲೆ ಜಲಾಶಯದ ನೋಟ ಕೂಡ ಬಹು ಸುಂದರ. ನೀವು ಅದೃಷ್ಟಶಾಲಿಯಾಗಿದ್ದರೆ, ಒಂದೊಮ್ಮೆ ಇಡೀ ಬೆಟ್ಟವನ್ನೇ ಮೋಡಗಳು ಆವರಿಸಿದಂತೆ, ನೀವು ಮೋಡಗಳ ಕಡಲಿನಲ್ಲಿ ತೇಲುವಂತೆ ಭಾಸವಾದರೆ ಆಶ್ಚರ್ಯವೇನಿಲ್ಲ. ಇಂತಹ ದೃಶ್ಯ ಪ್ರತೀ ಬಾರಿಯೂ ಲಭ್ಯವಿಲ್ಲ. ಒಂದಿಷ್ಟು ಮೋಡ ಕವಿದು, ಸೂರ್ಯ ಮೇಲೆ ಬಂದ ಮೇಲೆ, ಸುತ್ತಲೂ ಪಕ್ಷಿಗಳ ಕಲರವ ಮತ್ತು ಗಾಳಿಯ ಶಬ್ದ ಮಾತ್ರ ಕೇಳಿಸುತ್ತದೆ. ಹಾಗೆಯೇ, ಇಲ್ಲಿನ ಶಿಖರದ ಮೇಲಿನ ಸೂರ್ಯೋದಯ ಸವಿಯಬೇಕಾದರೆ, ಬೆಳಗಾತ 4-4.30 ಗೆ ಚಾರಣ ಶುರು ಮಾಡಬೇಕಾಗುತ್ತದೆ. ಹೆಡ್ ಲ್ಯಾಂಪ್, ಟಾರ್ಚ್ ಬಹು ಅವಶ್ಯ. ಹಾಗೆಯೇ GPS ಮ್ಯಾಪ್ ಇದ್ದರೆ ಒಳ್ಳೆಯದು, ಇಲ್ಲವಾದರೆ, ಗುರುತು ಹಾಕಿದ ದಾರಿಯಲ್ಲಿಯೇ ನಡೆಯಬೇಕು. ಒಕ್ಟೋಬರ್‌ನಿಂದ ಈ ಚಾರಣವನ್ನು ಮಾಡಲು ಸೂಕ್ತ ಸಮಯ ಅಕ್ಟೋಬರ್ ನಿಂದ ಫೆಬ್ರವರಿ ನಡುವೆ. ಮಳೆಗಾಲದಲ್ಲಿ, ಅಂದರೆ ಮಾನ್ಸೂನ್ ತಿಂಗಳಿನಲ್ಲಿ ನೀರಿನ ನಿರಂತರ ಹರಿವಿನ ಕಾರಣ ಬಂಡೆ ಜಾರುವುದು ಜಾಸ್ತಿ. ಈ ಸಮಯದಲ್ಲಿ ಚಾರಣ ಮಾಡುವುದು ಸೂಕ್ತವಲ್ಲ, ಮತ್ತು ಅಪಾಯಕಾರಿ ಕೂಡಾ. ಹಾಗೇನೇ ಬೇಸಿಗೆಯ ತಿಂಗಳುಗಳಲ್ಲಿ, ತಾಪಮಾನವು ಹೆಚ್ಚಾಗಿ, ಬಂಡೆಯು ಬಿಸಿಯೇರುತ್ತದೆ. ಇದರಿಂದ ಕಡು ಬೇಸಿಗೆಯ ಕಾಲದಲ್ಲೂ ಕೂಡ ಚಾರಣ ಮಾಡುವುದು ತುಂಬಾ ಕಷ್ಟಕರ.
ನಾವು ಒಂದಿಷ್ಟು ವಿಶ್ರಮಿಸಿ, ತಂದಿದ್ದ ಚಹಾವನ್ನು , ತಿಂಡಿಯನ್ನು ತಿಂದು, ಫೋಟೋಗಳನ್ನು ತೆಗೆದುಕೊಂಡು, ಶಿಖರದಿಂದ ಇಳಿಯಲು ತಯಾರಾದೆವು. ಸಾವನದುರ್ಗ ಬೆಟ್ಟದಿಂದ ಕೆಳಕ್ಕೆ ಇಳಿಯುವುದು ಏರುವುದಕ್ಕಿಂತ ಕಷ್ಟಕರ ಎನ್ನಿಸುತ್ತದೆ, ಇದು ನಿಜವೂ ಹೌದು. ಇಳಿಯುವಾಗ ಜಾರಿಬೀಳುವ ಸಾಧ್ಯತೆಗಳು ಹೆಚ್ಚು ಆದ್ದರಿಂದ ಜಾಗರೂಕರಾಗಿರುವುದು ಮತ್ತು ನಿಧಾನವಾಗಿ ಹೆಜ್ಜೆ ಹಾಕುವುದು ಬಹಳ ಮುಖ್ಯ. ಕೆಲವು ಸ್ಥಳಗಳಲ್ಲಿ ನೀವು ಬಂಡೆಯ ಮೇಲೆ ಕುಕ್ಕರಿಸಿ ಜಾರಿಕೊಂಡೇ ಕೆಳಗೆ ಇಳಿಯಬೇಕಾಗುತ್ತದೆ. ಕೆಳಗೆ ಇಳಿದ ನಂತರ, ದೇವಾಲಯದ ಹತ್ತಿರ ನಾವು ತಂಪು ಪಾನೀಯಗಳನ್ನು ಕುಡಿದು, ಒಂದಿಷ್ಟು ಮುಳ್ಳುಸೌತೆಕಾಯಿ ತಿಂದು, ನಮ್ಮ ಬೆವರು ಮತ್ತು ಧೂಳಿನ ಮುಖ, ಆದರೆ ಉಲ್ಲಸಿತ ಹೃದಯದೊಂದಿಗೆ ಬೆಂಗಳೂರಿನತ್ತ ದಾರಿ ಹಿಡಿದೆವು.

ಸಾವನದುರ್ಗ ಟ್ರೆಕ್ ಕೇವಲ ದೈಹಿಕ ಸವಾಲಲ್ಲ, ಅದು ಮನಸ್ಸನ್ನು ಸಹ ಬಲಪಡಿಸುತ್ತದೆ. ಪ್ರಕೃತಿಯ ಸೌಂದರ್ಯದೊಂದಿಗೆ ಇತಿಹಾಸದ ಸ್ಪರ್ಶವಿರುವ ಈ ಬೆಟ್ಟ ಸವಿನೆನಪಾಗಿ ಉಳಿದಿದೆ. ಹಿಂತಿರುಗುವ ಮಾರ್ಗದಲ್ಲಿ, ನಾನು ಯೋಚಿಸುತ್ತಿದ್ದೆ: ಜೀವನದಲ್ಲಿ ಕೆಲವು ಗುರಿಗಳು ಸಾವನದುರ್ಗದ ಏರಿನಂತೆ ಕಠಿಣವಾಗಿರುತ್ತವೆ. ಆದರೆ, ನಾವು ಹಿಂತಿರುಗದೆ ಮುನ್ನಡೆದರೆ, ಶಿಖರ ತಲುಪಿ, ಜೀವನದ ಒಂದು ಸವಿನೆನಪನ್ನು ಗಳಿಸಬಹುದು. ಇದೆ ಕಾರಣಕ್ಕಾಗಿ ಸಾವನದುರ್ಗವನ್ನು ಮತ್ತೆ ವೀಕ್ಶಿಸಲು ಹಲವು ಬಾರಿ ಇಲ್ಲಿಗೆ ಹೋಗಿದ್ದು ಇದೆ, ಅಷ್ಟು ಸುಂದರವಾದ ಜಾಗವಿದು.
ಸಾವನದುರ್ಗ ಒಂದು ಸಣ್ಣ ಟ್ರೆಕಿಂಗ್ ಅನುಭವವಾದರೂ ಈ ಟ್ರೆಕ್ಕಿಂಗ್ ಪ್ರಯಾಣವು ನನ್ನ ಜೀವನದ ಅತ್ಯುತ್ತಮ ಅನುಭವಗಳಲ್ಲಿ ಒಂದಾಗಿದೆ. ಇದು ನನಗೆ ಪ್ರಕೃತಿಯ ಮಹತ್ವ, ಮತ್ತು ಸ್ವಂತ ಸಾಮರ್ಥ್ಯಗಳ ಮೇಲೆ ನಂಬಿಕೆಯನ್ನು ಕಲಿಸಿತು ಎಂದರೆ ತಪ್ಪಿಲ್ಲ. ಹಾಗೆಯೇ, ಇತರ ಬಹು ಕಠಿಣ ಟ್ರೆಕಿಂಗ್ ಗಳಿಗೆ ಬೇಕಾದ ತರಬೇತಿ ಟ್ರೆಕಿಂಗ್ ಅಂತ ಇದನ್ನು ಹಲವಾರು ಬಾರಿ ಚಾರಣ ಮಾಡಿದ್ದು ಇದೆ. ಆದುದರಿಂದಲೇ ಸಾವನದುರ್ಗದ ಮೇಲೆ ವಿಶೇಷ ನಂಟು. ಅಲ್ಲಿನ ಸೂರ್ಯೋದಯ ಬಲು ನೆಚ್ಚಿನ ಸೂರ್ಯೋದಯ ಕೂಡ.

ಸುಚಿತ್ರಾ ಎಸ್ ಎ
ಮೂಲತಃ ಉಡುಪಿಯವರು. ಸ್ವಲ್ಪ ಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕೀಲಿ ವೃತ್ತಿ ಮಾಡಿದ್ದಾರೆ. ಸದ್ಯ ಜರ್ಮನಿಯ ಮ್ಯೂನಿಚ್ ಟೆಕ್ನಿಕಲ್ ಯುನಿವರ್ಸಿಟಿಯಲ್ಲಿ ಪಿಎಚ್‌ಡಿ ಮಾಡುತ್ತಿದ್ದಾರೆ.