ಪಹಲ್ಗಾಮ್ ದಾಳಿಯ ನಂತರ ಈ ದೇಶದ ಮುಸ್ಲಿಂ ಸಂಘಟನೆಗಳು ಅದನ್ನು ತೀವ್ರವಾಗಿ ಖಂಡಿಸಿವೆ. ಇಡೀ ಮುಸ್ಲಿಂ ಸಮುದಾಯವು ಸರ್ಕಾರದ ಜೊತೆಗಿದೆ ಎಂದು ಸಾರಿ ಹೇಳಿದೆ. ಕಾಶ್ಮೀರದ ಮುಸಲ್ಮಾನರು ಸಂತ್ರಸ್ತರಿಗೆ ಪ್ರೀತಿ, ಕರುಣೆ, ನೆರವು ಎಲ್ಲವೂ ನೀಡಿದರು. ಆದರೂ ಮುಸಲ್ಮಾನರ ಮೇಲೆ ಈ ಬೇಟೆ ಏಕೆ? ಈ ಸಂದರ್ಭದಲ್ಲಿ ಭಾರತೀಯ ಮುಸಲ್ಮಾನರ ವಿರುದ್ಧ ಯಾರೂ ದಾಳಿ ಮಾಡಬಾರದೆಂದು ಪ್ರಧಾನಿ ತಾಕೀತು ಮಾಡಬೇಕಿತ್ತಲ್ಲವೇ?
ಕಾಶ್ಮೀರದ ಪಹಲ್ಗಾಮ್ ಕಣಿವೆಯಲ್ಲಿ ಏಪ್ರಿಲ್ 22ರಂದು ಅಪರಾಹ್ನ ಉರುಳಿದ್ದು 26 ಅಮಾಯಕ ಪ್ರವಾಸಿಗಳ ಮೃತದೇಹಗಳು. ಆ ಪ್ರವಾಸಿಗರಲ್ಲಿ ಒಬ್ಬ ನೇಪಾಳಿಯನ್ನು ಹೊರತುಪಡಿಸಿ ಉಳಿದವರೆಲ್ಲರೂ ದೇಶದ ಹಲವು ರಾಜ್ಯಗಳಿಂದ ತನ್ನ ಕುಟುಂಬದವರೊಂದಿಗೆ ಬಂದವರು. ಜಮ್ಮು-ಕಾಶ್ಮೀರಕ್ಕೆ ಇದ್ದಂತಹ ಸಾಂವಿಧಾನಿಕ ಮನ್ನಣೆಯಾದ 370ನೇ ವಿಧಿಯನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರದ್ದುಪಡಿಸಿದ ನಂತರ ಕಾಶ್ಮೀರ ಕಣಿವೆಯು ಈಗ ಪ್ರವಾಸಿಗರ ಸುರಕ್ಷಿತ ತಾಣವೆಂಬ ಅವಿರತ ಪ್ರಚಾರದ ಬೆನ್ನಲ್ಲೇ ಅಮಾಯಕರು ಪಹಲ್ಗಾಮಿಗೆ ಲಗ್ಗೆ ಹಾಕಿದ್ದು ಎನ್ನುವುದು ವಾಸ್ತವ.
ಕಾಶ್ಮೀರವನ್ನು ಈಗಲೂ ಕೇಂದ್ರ ಸರ್ಕಾರವು ತನ್ನ ವಶದಲ್ಲೇ ಇಟ್ಟುಕೊಂಡಿದೆ. ಅಲ್ಲಿ ಚುನಾಯಿತ ಸರ್ಕಾರ ಇದ್ದರೂ ಕೂಡಾ ಅಲ್ಲಿನ ಗೃಹಕಾರ್ಯಗಳನ್ನು ಗೃಹಮಂತ್ರಿ ಅಮಿತ್ ಶಾರ ಮೇಲುಸ್ತುವಾರಿಯಲ್ಲಿದೆ. ಒಂದು ನೊಣ ಕೂಡ ನುಸುಳಲು ಅವಕಾಶವಿಲ್ಲದಂತೆ ಸುರಕ್ಷಾ ಸೇನೆಯಿಂದ ಸುತ್ತುವರೆದ ಪಹಲ್ಗಾಮ್ ಎಂಬ ಸೆನ್ಸಿಟೀವ್ ಪ್ರದೇಶದಲ್ಲಿ ಉಗ್ರರು ಪ್ರವೇಶ ಮಾಡಿದ್ದು ಹೇಗೆ ಎನ್ನುವುದು ಪ್ರಜ್ಞಾವಂತ ನಾಗರಿಕರನ್ನು ಕಾಡುವ ಪ್ರಶ್ನೆಯಾಗಿಯೇ ಉಳಿದಿದೆ. ಪಹಲ್ಗಾಮಿನಲ್ಲಿ ನಡೆದ ಉಗ್ರರ ದಿಢೀರ್ ದಾಳಿಯ ಕುರಿತು ಪ್ರಧಾನಿ ಅಥವಾ ಗೃಹ ಮಂತ್ರಿ ಅಥವಾ ಇನ್ನ್ಯಾರಾದರೂ ಪತ್ರಿಕಾ ಗೋಷ್ಠಿ ಕರೆದು ದೇಶದ ತಲ್ಲಣಗೊಂಡ ಜನತೆಗೆ ಹೇಳುತ್ತಾರೆ ಎಂಬ ನಿರೀಕ್ಷೆ ನಮ್ಮಲ್ಲಿ ಇತ್ತು. ಆದರೆ, ಪಹಲ್ಗಾಮ್ ದಾಳಿಯ ಬಗ್ಗೆ ಕೇಂದ್ರ ಸರ್ಕಾರದಿಂದ ಯಾವುದೇ ಹೇಳಿಕೆಗಳು ಹೊರಬರಲಿಲ್ಲ.

ವಿದೇಶದಲ್ಲಿದ್ದ ಪ್ರಧಾನಿ ಕೂಡಲೇ ಭಾರತಕ್ಕೆ ಮರಳಿ ನೇರವಾಗಿ ಹೋಗಿದ್ದು ಬಿಹಾರಕ್ಕೆ. ಅಲ್ಲಿ ರಾಜ್ಯ ಚುನಾವಣೆಯು ಈ
ವರ್ಷಾಂತ್ಯ ನಡೆಯಲಿದೆ. ಅಲ್ಲಿನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿಯು ಪೆಹಲ್ಗಾಮ್ ಬಗ್ಗೆ ತನ್ನ ಹೇಳಿಕೆ ನೀಡಿದರು.
ಈತನ್ಮಧ್ಯೆ, ದಾಳಿ ನಡೆದ ಅದೇ ದಿನ ಪಾಕಿಸ್ತಾನದೊಂದಿಗಿದ್ದ ಎಲ್ಲ ಸಂಬಂಧಗಳನ್ನು ಕಡಿತಗೊಳಿಸಲು ಕೇಂದ್ರ ಸರ್ಕಾರ
ತೀರ್ಮಾನಿಸಿದೆ. ಈ ಭೀಕರ ಕೃತ್ಯದ ಹಿಂದೆ ಪಾಕಿಸ್ತಾನ ಎಂದು ಅಂದು ಸಂಜೆಯೇ ನಿರ್ಧಾರವಾಯಿತು! ಯಾವುದೇ ತನಿಖೆ ನಡೆಸದೆ, ದಾಳಿಕೋರರನ್ನು ಪತ್ತೆ ಹಚ್ಚಿದ ನಮ್ಮ ಸರ್ಕಾರದ ಬುದ್ಧಿವಂತಿಕೆಯನ್ನು ಶ್ಲಾಘಿಸಲೇಬೇಕು. ಇನ್ನು ಮುಂದೆ ಪಾಕಿಸ್ತಾನದೊಂದಿಗೆ ನಮ್ಮ ಯಾವುದೇ ವಹಿವಾಟು ಇರುವುದಿಲ್ಲ ಎಂದು ಘೋಷಣೆಯಾಯಿತು. ಉರಿ ಡ್ಯಾಂ ನೀರನ್ನು ಝೆಲಂ ನದಿಗೆ ಏಕಾಏಕಿ ಹರಿಸಿದ ಕಾರಣ ಆಜಾದ್ ಕಾಶ್ಮೀರಿನ ಅಮಾಯಕ ಜನ ಕಷ್ಟಕ್ಕೆ ಸಿಲುಕಿರುವುದು ವರದಿಯಾಗಿದೆ. ಇದಲ್ಲದೆ ದಾಳಿಯ ಮೂರನೇ ದಿನ ಪ್ರಧಾನಿಯು ಸೇನೆಯ ಮುಖ್ಯಸ್ಥರೊಂದಿಗೆ ಸಭೆ ನಡೆಸಿ ಪಾಕಿಸ್ತಾನಕ್ಕೆ ಪಾಠ ಕಲಿಸಲು ಸೇನೆಗಳಿಗೆ ಸಂಪೂರ್ಣ ಸ್ವಾತಂತ್ರ್ಯವನ್ನು ನೀಡಿದ್ದಾರೆ. ದೇಶದಲ್ಲಿ ಈಗ ಯದ್ದೋನ್ಮಾದ ಹರಡುತ್ತಿದೆ.
ಪಹಲ್ಗಾಮ್ ದಾಳಿಯಲ್ಲಿ ಬದುಕುಳಿದ ಸಂತ್ರಸ್ತರು ನೀಡಿದ್ದ ಹೇಳಿಕೆಗಳೇ ಬೇರೆ. ಕೊಲ್ಲಲ್ಪಟ್ಟವರಲ್ಲಿ ಕಾಶ್ಮೀರದ ಕುದುರೆ
ಸವಾರ ಸಯ್ಯದ್ ಆದಿಲ್ ಹುಸೈನ್ ಕೂಡ ಒಬ್ಬ. ಬಂದೂಕು ಹಿಡಿದು ಬಂದ ಉಗ್ರರೊಂದಿಗೆ ಸೆಣೆದಾಡಿ ಆತ ಅಸು ನೀಗಿದ. ಕರ್ನಾಟಕದ ಮಂಜುನಾಥ್‍ರವರನ್ನು ಹೊತ್ತುಕೊಂಡು ಓಡುತ್ತಿದ್ದ ಇನ್ನೊಬ್ಬ ಕಾಶ್ಮೀರಿ ಯುವಕನ ವಿಡಿಯೋ ಕೂಡಾ ವೈರಲ್ ಆಗಿತ್ತು. ಕೇರಳದ ಆರತಿ ಶರತ್ ಎಂಬ ಸಂತ್ರಸ್ತೆ ಹೇಳಿದ್ದು ಈ ದಾಳಿಯಲ್ಲಿ ತಾನು ಪತಿಯನ್ನು ಕಳೆದುಕೊಂಡೆ ಆದರೆ, ತನಗೆ ಇಬ್ಬರು ಕಾಶ್ಮೀರಿ ಸಹೋದರರು ಸಿಕ್ಕಿದ್ದಾರೆ ಎಂದು. ಆಕೆಯ ಪತಿಯ ಮೃತಹೇಹವನ್ನು ಸಾಗಿಸಿ ಶವಾಗಾರಕ್ಕೆ ತಂದು ಆಕೆಯ ಜೊತೆ ಓಡಾಡಿ ಸಹಾಯ ಮಾಡಿದ್ದಿದ್ದು ಅವರಿಬ್ಬರು. ನೌಕಾಪಡೆ ಅಧಿಕಾರಿ ವಿನಯ್ ನವ್ರಾಲ್‍ರ ಪತ್ನಿ ಹಿಮಾಂಶಿ ಅವರು ಮುಸ್ಲಿಮರ ಅಥವಾ ಕಾಶ್ಮೀರಿಗಳ ವಿರುದ್ಧ ದ್ವೇಷ ಬೇಡ ಎಂದಿದ್ದಾರೆ. ಇನ್ನೊಬ್ಬ ಸಂತ್ರಸ್ತೆ ಹೇಳಿದ್ದು ತನ್ನ ಗಂಡನಿಗೆ ಒಂದುವರೆ ಗಂಟೆ ಜೀವ ಇತ್ತು, ಆದರೆ ಅಲ್ಲಿ ಯಾವ ವೈದ್ಯಕೀಯ ಸೇವೆಯೂ ಲಭ್ಯವಿರಲಿಲ್ಲ ಎಂದು. ಈ ಸಂತ್ರಸ್ತೆಯರು ಯಾರೂ ಕಾಶ್ಮೀರದ ಮುಸಲ್ಮಾನರ ವಿರುದ್ಧ ಯಾವ ಹೇಳಿಕೆಯೂ ನೀಡಲಿಲ್ಲ. ಕಾರಣ ಅವರು ಕಾಶ್ಮೀರಕ್ಕೆ ಹೋದಾಗ ಮುಸ್ಲಿಮರ ಹೋಟೆಲಿನಲ್ಲಿ ತಂಗಿದ್ದರು, ಮುಸ್ಲಿಮರ ಆಟೋಗಳಲ್ಲಿ, ಕ್ಯಾಬುಗಳಲ್ಲಿ ಓಡಾಡಿದ್ದರು, ಅವರ ಕುದುರೆಯ ಮೇಲೆ ಏರಿ ಸವಾರಿ ಮಾಡಿದ್ದರು, ಅವರು ಕೊಟ್ಟ ಚಹಾ, ಊಟ ಸೇವಿಸಿದರು. ಕಾಶ್ಮೀರದ ಮುಸಲ್ಮಾನರ ಪ್ರೀತಿಯನ್ನು ಅನುಭವಿಸಿದ ಪ್ರವಾಸಿಗರು ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.

ಆದರೆ, ದೇಶದಲ್ಲಿ ನಡೆಯುತ್ತಿರುವುದೇ ಬೇರೆ. ಕಾಡಿನೊಳಿಗಿಂದ ಬಂದ ಉಗ್ರಗಾಮಿಗಳು ಗುಂಡು ಹೊಡೆಯುವ ಮೊದಲು ಧರ್ಮ ಕೇಳಿದರು; ಹಿಂದು ಎಂದು ತಿಳಿದ ಮೇಲೆ ಗುಂಡು ಹಾರಿಸಿದರು ಎಂಬ ಅಪಾಯಕಾರಿ ಹೇಳಿಕೆಯನ್ನು ಹರಿಬಿಡಲಾಗಿದೆ. ದೇಶದ ಗೋದಿ ಮಾಧ್ಯಮಗಳು ವಿವೇಕರಹಿತವಾಗಿ, ನಿರಂತರವಾಗಿ ಅದನ್ನು ಪ್ರಸಾರ ಮಾಡುತ್ತಾ ಕೇಳುಗರ ಮಿದುಳನ್ನು ಕಲುಷಿತಗೊಳಿಸಿವೆ. ಇದರ ಬೆನ್ನಲ್ಲಿ ದೇಶದ ಹಲವೆಡೆ ಮುಸಲ್ಮಾನರ ಮೇಲೆ ದಾಳಿಗಳು ನಡೆಯುತ್ತಿವೆ. ಕಾಶ್ಮೀರಿ ವಿದ್ಯಾರ್ಥಿಗಳ ಮೇಲೆ ಆಕ್ರಮಣಗಳ ನಡೆದಿವೆ. ಮಂಗಳೂರಿನಲ್ಲಿ ಒಬ್ಬ ಮಲಯಾಳಿ ಮುಸ್ಲಿಂ ಯುವಕನನ್ನು ಸಂಘಪರಿವಾರದವರೆಂದು ಶಂಕಿಸಲ್ಪಡುವ ಗುಂಪೊಂದು ಹೊಡೆದು ಸಾಯಿಸಿದೆ. ರಾಜಸ್ಥಾನದಲ್ಲಿ ಬಿಜೆಪಿ ಶಾಸಕನ ನೇತೃತ್ವದಲ್ಲಿ ಮಸೀದಿಯ ಗೋಡೆ ಮೇಲೆ ಕೊಲೆ ಬೆದರಿಕೆಯ ಭಿತ್ತಿಚಿತ್ರವನ್ನು ಅಂಟಿಸಲಾಗಿದೆ. ಅವರೆಲ್ಲರನ್ನೂ ಪಾಕಿಸ್ತಾನಿಗಳೆಂದು ತೆಗಳಿದ್ದಾರೆ. ಕರ್ನಾಟಕದ ಹೆದ್ದಾರಿಯಲ್ಲಿ ಪಾಕಿಸ್ಥಾನದ ಬಾವುಟ ಅಂಟಿಸಿದ ನಂತರ ಕೆಲವು ಸಂಘಪರಿವಾರ ಸದಸ್ಯರನ್ನು ಪೊಲೀಸ್ ಬಂಧಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮುಖಂಡ ನಿತೀಶ್ ರಾಣೆ ಮುಸಲ್ಮಾನರನ್ನು ‘ದೇಶದ್ರೋಹಿಗಳು’ ಎಂದು ಕರೆದಿದ್ದಾರೆ. ‘ತುಮ್ ಧರ್ಮ್ಪೂಛ್ ಕೆ ಮಾರೆ ಥೇ ಹಮ್ ಧರ್ಮ್ ಬತಾಕೆ ಮಾರೇಂಗೆ’ ಎಂಬ ಪ್ರಚೋದನಕಾರಿ ವಿಡಿಯೋ ಯೂಟ್ಯೂಬ್‍ನಲ್ಲಿ ಹರಿದಾಡುತ್ತಿದೆ. ಮಹಾಯದ್ಧ ನಡೆಯಲಿ ಎಂದು ಸಾರುವ ಈ ವಿಡಿಯೋ ನೋಡುಗರನ್ನು ಕೆರಳಿಸುತ್ತದೆ. ಯುದ್ದೋನ್ಮಾದದಲ್ಲಿ ನಮ್ಮ ದೇಶದ ಸಹೋದರ ಪ್ರಜೆಗಳಾದ ಮುಸಲ್ಮಾನರ ವಿರುದ್ಧ ಈ ರೀತಿಯ ದಾಳಿಯನ್ನು ನಡೆಸುವುದು ದೇಶಸ್ನೇಹವೇ?

ಪಹಲ್ಗಾಮ್ ದಾಳಿಯ ನಂತರ ಈ ದೇಶದ ಮುಸ್ಲಿಂ ಸಂಘಟನೆಗಳು ಅದನ್ನು ತೀವ್ರವಾಗಿ ಖಂಡಿಸಿವೆ. ಇಡೀ ಮುಸ್ಲಿಂ ಸಮುದಾಯವು
ಸರ್ಕಾರದ ಜೊತೆಗಿದೆ ಎಂದು ಸಾರಿ ಹೇಳಿದೆ. ಕಾಶ್ಮೀರದ ಮುಸಲ್ಮಾನರು ಸಂತ್ರಸ್ತರಿಗೆ ಪ್ರೀತಿ, ಕರುಣೆ, ನೆರವು ಎಲ್ಲವೂ ನೀಡಿದರು. ಆದರೂ ಮುಸಲ್ಮಾನರ ಮೇಲೆ ಈ ಬೇಟೆ ಏಕೆ? ಈ ಸಂದರ್ಭದಲ್ಲಿ ಭಾರತೀಯ ಮುಸಲ್ಮಾನರ ವಿರುದ್ಧ ಯಾರೂ ದಾಳಿ ಮಾಡಬಾರದೆಂದು ಪ್ರಧಾನಿ ತಾಕೀತು ಮಾಡಬೇಕಿತ್ತಲ್ಲವೇ? ತನ್ನ ಮೌನದ ಮೂಲಕ ಪ್ರಧಾನಿಗಳು ಇಂತಹ ದಾಳಿಗಳಿಗೆ ಅನುಮತಿ ಕೊಟ್ಟಂತೆ ಆಗುವುದಿಲ್ಲವೇ? ಇದು ಪಾಕಿಸ್ತಾನದ ವಿರುದ್ಧದ ಹೋರಾಟವೋ ಯಾ ದೇಶದೊಳಗಿನ ಮುಸಲ್ಮಾನರ ವಿರುದ್ಧದ ಒಳ ಯುದ್ದವೋ? ಇಡೀ ದೇಶದಲ್ಲಿ ಯುದ್ಧಭೀತ ಮತ್ತು ಭಯದ ವಾತಾವರಣವನ್ನು ಸೃಷ್ಟಿ ಮಾಡುವುದು ಏಕೆ?
ಪಹಲ್ಗಾಮ್ ದಾಳಿಯ ಬಗ್ಗೆ ಕೆಲವು ಪ್ರಶ್ನಿಗಳನ್ನೆತ್ತಿದ ಜನಪದ ಗಾಯಕಿ ನೇಹಾ ಸಿಂಗ್ ರಾಥೋಡ್ ಮತ್ತು ಕವಿ ಅಭಯ್ ಪ್ರಸಾದ್ ಸಿಂಗ್ ಅವರ ಮೇಲೆ ಎಫ್‍ಐಆರ್ ದಾಖಲಿಸಿದ್ದು ಏಕೆ? ಕೇಂದ್ರ ಇಂಟಲಿಜೆನ್ಸಿ ಭಾಗವು ಪಹಲ್ಗಾಮಿನಲ್ಲಿ ಎಡವಿದೆ ಎಂದು ವರದಿ ಮಾಡಿದ ‘4 ಪಿಎಂ’ ಎಂಬ ದೇಶದ ಅತಿದೊಡ್ಡ ಯುಟ್ಯೂಬ್ ಚಾನಲ್‍ನ್ನು ನಿಷೇಧಿಸಿದ್ದು ಏಕೆ? ಪಹಲ್ಗಾಮ್ ದಾಳಿಯ ಬಗ್ಗೆ ಪ್ರಜ್ಞಾವಂತರಲ್ಲಿ ಅನೇಕ ಪ್ರಶ್ನೆಗಳಿವೆ. ಆದರೆ, ಪರಿಸ್ಥಿತಿ ಹೀಗಿರುವಾಗ ಪ್ರಶ್ನೆಗಳನ್ನೆತ್ತುವುದಾದರೂ ಹೇಗೆ?
ಇದನ್ನೂ ಓದಿ ಉಗ್ರರ ದಾಳಿಗೆ ಹತ್ತು ದಿನ: ‘ಹುಡುಕಿ ಹುಡುಕಿ ಬೇಟೆ’ಯಾಡುತ್ತಿರುವುದು ಯಾರನ್ನು?

ಬಾಬುರಾಜ್ ಪಲ್ಲದನ್
ಮೈಸೂರಿನಲ್ಲಿ ವಕೀಲರು ಮತ್ತು ಪೀಪಲ್ಸ್ ಲೀಗಲ್ ಫೋರಂನ ನಿರ್ದೇಶಕ