ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನ ಮಾದನ ಹಿಪ್ಪರಗಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವಿವಾಹೇತರ ಸಂಬಂಧ ಹೊಂದಿರುವ ಶಂಕೆಯಿಂದ ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ನಡೆದಿದೆ.
ಮಾದನ ಹಿಪ್ಪರಗಾ ಗ್ರಾಮದ ಸೃಷ್ಟಿ ಶ್ರೀಮಂತ ಭಕರೆ (21), ಆಕೆಯ ಪ್ರಿಯಕರ ಖಾಜಪ್ಪ ದುರ್ಗಪ್ಪ ಗಾಡಿವಡ್ಡರ (23) ಎಂಬುವವರನ್ನು ಸೃಷ್ಟಿಯ ಪತಿ ಶ್ರೀಮಂತ ಶಾಂತಮಲ್ಲಪ್ಪ ಭಕರೆ ಕೊಲೆ ಮಾಡಿದ್ದಾನೆ.
ಎರಡು ವರ್ಷಗಳ ಹಿಂದೆ ಸೃಷ್ಟಿ ಮತ್ತು ಶ್ರೀಮಂತ ಅವರ ಮದುವೆ ಆಗಿತ್ತು. ಗ್ರಾಮದ ಯುವಕ ಖಾಜಪ್ಪ ಜತೆ ಸೃಷ್ಟಿ ಅಕ್ರಮ ಸಂಬಂಧ ಹೊಂದಿದ್ದಳು. ರಾತ್ರಿ ಪತಿ ಇಲ್ಲದಿದ್ದಾಗ ಖಾಜಪ್ಪ ಮನೆಗೆ ಬಂದಿದ್ದ. ಪತ್ನಿ ಹಾಗೂ ಪ್ರಿಯಕರ ಮನೆಯಲ್ಲಿ ಇದ್ದುದ್ದನ್ನು ನೋಡಿದ ಶ್ರೀಮಂತ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. ಬಳಿಕ ಮಾದನ ಹಿಪ್ಪರಗಿ ಪೊಲೀಸ್ ಠಾಣೆಗೆ ತೆರಳಿ ತಾನೇ ಕೊಲೆ ಮಾಡಿರುವುದಾಗಿ ಶರಣಾಗಿದ್ದಾನೆ ಎಂದು ವರದಿಯಾಗಿದೆ.
ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು, ಡಿವೈಎಸ್‌ಪಿ ಗೋಪಿ ಆರ್., ಸಿಪಿಐ ಪ್ರಕಾಶ ಭೇಟಿ ನೀಡಿ ಪರಿಶೀಲಿಸಿದರು.