ಭಾರತದಲ್ಲಿ ಸನಾತನ ಧರ್ಮ ಬೆಳಯಲು ಶಂಕರಾಚಾರ್ಯರ ಕೊಡುಗೆ ಅಪಾರವಾಗಿದೆ. ಶಂಕರಾಚಾರ್ಯರಿಂದ ನಮ್ಮ ಸನಾತನ ಸಂಸ್ಕೃತಿ, ಧರ್ಮ ಉಳಿದಿದೆ. ತಮ್ಮ ಚಿಕ್ಕ ವಯಸ್ಸಿನಲ್ಲಿ ಅಖಂಡ ಭಾರತವನ್ನು ಸುತ್ತಿ, ಧರ್ಮ ಪ್ರಚಾರದ ಮೂಲಕ ಒಂದುಗೂಡಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಹುಬ್ಬಳ್ಳಿ-ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಕೀರ್ ಸನದಿ ಹೇಳಿದರು.
ಮೇ.2ರಂದು ನಗರದ ಆಲೂರು ವೆಂಕಟರಾವ್ ಸಭಾಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ್ದ ತತ್ವಜ್ಞಾನಿಗಳ ದಿನಾಚರಣೆ ಅಂಗವಾಗಿ ಶಂಕರಾಚಾರ್ಯರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
ಭಾರತದ ಶ್ರೇಷ್ಠ ಆಧ್ಯಾತ್ಮಿಕ ನಾಯಕರು ಮತ್ತು ತತ್ವಜ್ಞಾನಿಗಳಲ್ಲಿ ಒಬ್ಬರಾದ ಆದ್ಯ ಜಗದ್ಗುರು ಶಂಕರಾಚಾರ್ಯರ ವಿಚಾರಧಾರೆಗಳು, ಸಾಮಾಜಿಕ ಸುಧಾರಣೆಗಳು ಮತ್ತು ಧಾರ್ಮಿಕ ಸುಧಾರಣೆಗಳ ತತ್ತ್ವಗಳನ್ನು ಭಾರತೀಯರು ಅನುಸರಿಸುವಂತೆ ಮಾಡಿ, ಏಕತೆ ದೃಷ್ಠಿಯಿಂದ ಭಾರತಕ್ಕೆ ಅಪಾರ ಕೊಡುಗೆಯನ್ನು ನೀಡಿದ್ದಾರೆ. ಅವರು ಅದ್ವೈತ ಸಿದ್ಧಾಂತ ಮತ್ತು ಉಪನಿಷತ್ತಿನ ಅರ್ಥವನ್ನು ದೇಶಾದ್ಯಂತ ಪ್ರಚಾರ ಮಾಡಿದರು. ಭಾರತದ ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಶಾರದಾ ಪೀಠಗಳನ್ನು ಸ್ಥಾಪಿಸಿದವರು ಎಂದರು.

ಹೆಬ್ಬಳ್ಳಿಯ ಬ್ರಹ್ಮ ಚೇತನ್ಯ ಆಶ್ರಮದ ದತ್ತಾವಧೂತರು ಮಾತನಾಡಿ, 8ನೇ ಶತಮಾನದಲ್ಲಿ ಜಿನಿಸಿದ ಶಂಕರಾಚಾರ್ಯರು ಅತ್ಯಂತ ಪ್ರಮುಖ ವೇದಾಂತ ತತ್ವಜ್ಞಾನಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಅದ್ವೈತ ವೇದಾಂತ ತತ್ವವನ್ನು ಬೋಧಿಸಿ, ಏಕಮೇವಾದ್ವಿತೀಯಂ ಎಂಬ ತತ್ವವನ್ನು ಸಾರಿದರು. ಅವರು ಬೋಧಿಸಿದ ತತ್ವವು ಜ್ಞಾನ, ಭಕ್ತಿ ಮತ್ತು ಧ್ಯಾನದ ಮಹತ್ವವನ್ನು ಒತ್ತಿ ಹೇಳುತ್ತವೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಧಾರವಾಡ ಸಾಹಿತಿ ಡಾ. ಭಾರತಿ ಹೆಗಡೆ ಶಂಕರಾಚಾರ್ಯ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಂಜಲಿ ಮೆಹೆಂದಳೆ ಮತ್ತು ವೃಂದ ಹಾಗೂ ವೀಣಾ ಕದರಮಂಡಲಗಿ ಮತ್ತು ವೃಂದದವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೋಟ್ಟರು. ರವಿ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಇದನ್ನು ಓದಿದ್ದೀರಾ? ಹುಬ್ಬಳ್ಳಿ | ಪಾಕ್ ವಿರುದ್ಧ ಕೇಂದ್ರ ಸರ್ಕಾರದ ಎಲ್ಲ ನಿರ್ಧಾರಕ್ಕೆ ಕಾಂಗ್ರೆಸ್ ಬೆಂಬಲವಿದೆ ಎಂದ ಸಂತೋಷ್ ಲಾಡ್
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮಹಾಪೌರ ಹೆಚ್.ವಿ.ಡಂಬಳ, ಬ್ರಾಹ್ಮಣ ಸಮಾಜದ ಅಧ್ಯಕ್ಷ ಹಾಗೂ ವಕೀಲ ಆರ್.ಡಿ.ಕುಲಕರ್ಣಿ, ಆಲೂರ ವೆಂಕಟರಾವ್ ಟ್ರಸ್ಟ್‌ನ ಸದಸ್ಯ ಡಾ. ದೀಪಕ ಆಲೂರ, ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಮಂಜುನಾಥ ಭೋವಿ, ಮಾಜಿ ಮಹಾಪೌರ ಪೂರ್ಣಾ ಪಾಟೀಲ ವೇದಿಕೆಯಲ್ಲಿ ಇದ್ದರು.