ದೇಶದ ಹಲವು ಭಾಗಗಳಲ್ಲಿ ಈ ವಾರ ಗುಡುಗು ಸಹಿತ ಆಲಿಕಲ್ಲು ಮಳೆ ಬೀಳುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಉತ್ತರ ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಬಿರುಗಾಳಿ ಬೀಸಿದ್ದು ಮುಂದಿನ ನಾಲ್ಕು ದಿನಗಳವರೆಗೆ ದೆಹಲಿ-ಎನ್‌ಸಿಆರ್ ಪ್ರದೇಶ ಸೇರಿದಂತೆ ವಾಯುವ್ಯ ಭಾರತ, ಪೂರ್ವ ಮತ್ತು ಮಧ್ಯ ಭಾರತದಲ್ಲಿ ಐಎಂಡಿ ಆರೆಂಜ್ ಅಲರ್ಟ್ ಘೋಷಿಸಿದೆ. ಈ ವಾರದಲ್ಲಿ ಮಿಂಚು, ಆಲಿಕಲ್ಲು, ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ.
ಇನ್ನು ಬೆಳೆಗಳು ಮತ್ತು ತೋಟಗಳನ್ನು ರಕ್ಷಿಸಲು ಐಎಂಡಿ ಕೃಷಿ ಹವಾಮಾನ ಸಲಹೆಯನ್ನು ನೀಡಿದೆ. ವಿಶೇಷವಾಗಿ ನಗರ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿನ ದುರ್ಬಲ ಪ್ರದೇಶಗಳ ನಿವಾಸಿಗಳು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂದು ಐಎಂಡಿ ಒತ್ತಾಯಿಸಿದೆ.
ಇದನ್ನು ಓದಿದ್ದೀರಾ? ರಾಜ್ಯದಲ್ಲಿ ಮುಂದಿನ ಐದು ದಿನ ಗುಡುಗು, ಮಿಂಚು ಸಹಿತ ಮಳೆ: ಹವಾಮಾನ ಇಲಾಖೆ
ಕಳೆದ 24 ಗಂಟೆಗಳಲ್ಲಿ ದೆಹಲಿಯ ಸಫ್ದರ್ಜಂಗ್ ನಿಲ್ದಾಣದಲ್ಲಿ 77 ಮಿಮೀ ಮಳೆ ದಾಖಲಾಗಿವೆ. 1901ರ ಮೇ ತಿಂಗಳ ಬಳಿಕ ಇದು ಎರಡನೇ ಅತಿ ಹೆಚ್ಚು ಮಳೆಯಾಗಿದೆ. 2021ರ ಮೇ 20ರಂದು ಸಫ್ದರ್ಜಂಗ್ ವಿಮಾನ ನಿಲ್ದಾಣದಲ್ಲಿ 119.3 ಮಿಮೀ ಮಳೆ ದಾಖಲಾಗಿದೆ.
ಐಎಂಡಿ ವರದಿಗಳ ಪ್ರಕಾರ ದೇಶದ ಹಲವೆಡೆ ನಿರಂತರ ಮಳೆ, ಗುಡುಗು ಮತ್ತು ಮಿಂಚು ಕಾಣಿಸಿಕೊಳ್ಳಲಿದೆ. ರಾಜಸ್ಥಾನ, ಪಂಜಾಬ್ ಮತ್ತು ಹರಿಯಾಣದ ಸಮೀಪದಲ್ಲಿ ಚಂಡಮಾರುತ ಹಾದುಹೋಗುವ ಕಾರಣ ಉತ್ತರ ಭಾರತದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ರಾಜಸ್ಥಾನದ ಕೆಲವು ಭಾಗಗಳಲ್ಲಿ ಧೂಳಿನ ಬಿರುಗಾಳಿ ಮತ್ತು ಪ್ರತ್ಯೇಕ ಆಲಿಕಲ್ಲು ಮಳೆಯಾಗಬಹುದು.
ಒಡಿಶಾ, ಕೇರಳ ಮತ್ತು ಕರ್ನಾಟಕದಲ್ಲಿ ಕೃಷಿ ಪ್ರದೇಶದಲ್ಲಿ ನಿಂತಿರುವ ನೀರನ್ನು ತೆಗೆಯುವಂತೆ ಐಎಂಡಿ ಸಲಹೆ ನೀಡಿದೆ. ಸಿಕ್ಕಿಂ, ಒಡಿಶಾ, ಹಿಮಾಚಲ ಪ್ರದೇಶ, ಪೂರ್ವ ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ವಿದರ್ಭದಲ್ಲಿ ಬೆಳೆಗಳನ್ನು ಕಾಪಾಡಲು ಆಲಿಕಲ್ಲು ಬಲೆಗಳು ಮತ್ತು ಕ್ಯಾಪ್‌ಗಳನ್ನು ಬಳಸುವಂತೆ ಐಎಂಡಿ ಸಲಹೆ ನೀಡಿದೆ. ಆಲಿಕಲ್ಲು ಮಳೆ ಸಂದರ್ಭದಲ್ಲಿ ಪ್ರಾಣಿಗಳನ್ನು ಕೊಟ್ಟಿಗೆಯೊಳಗೆ ಇರಿಸುವಂತೆ, ಆಹಾರ ಮತ್ತು ಮೇವನ್ನು ಸುರಕ್ಷಿತ ಸ್ಥಳದಲ್ಲಿ ಇರಿಸಲು ಸಲಹೆ ನೀಡಿದೆ.
