ಜಾತಿ ಜನಗಣತಿ ವಿಚಾರದಲ್ಲಿ ಕಾಂಗ್ರೆಸ್ ವಿರುದ್ಧ ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಶನಿವಾರ ವಾಗ್ದಾಳಿ ನಡೆಸಿದ್ದಾರೆ. “ದಲಿತರು ಮತ್ತು ಒಬಿಸಿಗಳಿಗೆ ಮೀಸಲಾತಿ ಸೇರಿದಂತೆ ಅವರ ಸಾಂವಿಧಾನಿಕ ಹಕ್ಕುಗಳನ್ನು ನಿರಾಕರಿಸುವ ಕರಾಳ ಇತಿಹಾಸವನ್ನು ಕಾಂಗ್ರೆಸ್ ಮರೆತಿದೆ” ಎಂದು ಆರೋಪಿಸಿದ್ದಾರೆ.
ಮುಂಬರುವ ಜನಗಣತಿ ಕಾರ್ಯದಲ್ಲಿ ಜಾತಿ ಜನಗಣತಿಯನ್ನು ಸೇರಿಸಲು ಕೇಂದ್ರ ಸರ್ಕಾರ ಬುಧವಾರ ನಿರ್ಧರಿಸಿದೆ. ಈ ವಿಚಾರದಲ್ಲಿ ಬಿಜೆಪಿ ವಿರುದ್ಧವೂ ಮಾಯಾವತಿ ವಾಗ್ದಾಳಿ ನಡೆಸಿದ್ದಾರೆ. “ಬಿಜೆಪಿ ಕೂಡ ಅಷ್ಟೇನೂ ಕಡಿಮೆಯಲ್ಲ. ಜಾತಿ ಜನಗಣತಿ ನಡೆಸುವ ಬಗ್ಗೆ ಸಾರ್ವಜನಿಕ ಒತ್ತಡಕ್ಕೆ ಮಣಿಯಬೇಕಾಯಿತು” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಸಂವಿಧಾನ ಬದಲಾವಣೆಯ ಆತಂಕ; ‘ಬಿಜೆಪಿ-ಎನ್‌ಡಿಎ’ಯಿಂದ ದೂರ ಸರಿಯುತ್ತಿದೆ ದಲಿತ ಸಮುದಾಯ
ಮಾಯಾವತಿ ತನ್ನ ಎಕ್ಸ್‌ನಲ್ಲಿ ಸರಣಿ ಪೋಸ್ಟ್ ಮಾಡಿದ್ದಾರೆ. “1931 ರ ನಂತರ ಮತ್ತು ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಜಾತಿ ಜನಗಣತಿ ನಡೆಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಮನ್ನಣೆ ಪಡೆಯುವ ಆತುರದಲ್ಲಿ, ಕಾಂಗ್ರೆಸ್ ಕೋಟ್ಯಂತರ ದಲಿತರು ಮತ್ತು ಒಬಿಸಿಗಳ ಸಾಂವಿಧಾನಿಕ ಹಕ್ಕುಗಳನ್ನು ಕಸಿದುಕೊಂಡ ಇತಿಹಾಸದಲ್ಲಿ ತನ್ನ ಒಂದು ಕರಾಳ ಅಧ್ಯಾಯವಿದೆ ಎಂಬುದನ್ನು ಮರೆತಿದೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಅಧಿಕಾರ ಕಳೆದುಕೊಂಡ ನಂತರ ದಲಿತರು ಮತ್ತು ಒಬಿಸಿಗಳ ಬಗ್ಗೆ ಕಾಂಗ್ರೆಸ್‌ಗೆ ಹೊಸದಾಗಿ ಕಂಡುಬಂದಿರುವ ಪ್ರೀತಿಯು ಮತಗಳನ್ನು ಗಳಿಸುವ ಗುರಿಯನ್ನು ಹೊಂದಿದೆ. ಇದು ಅವಕಾಶವಾದಿ ರಾಜಕೀಯವೇ ಹೊರತು ಬೇರೇನೂ ಅಲ್ಲ” ಎಂದು ಆರೋಪಿಸಿದ್ದಾರೆ.
“ದಲಿತರು ಮತ್ತು ಒಬಿಸಿಗಳ ಮೇಲಿನ ಈ ಪ್ರೀತಿ ನಿಜವಾದದ್ದಲ್ಲ, ಬದಲಾಗಿ ಮತದಾರರನ್ನು ಓಲೈಸಲು ಉದ್ದೇಶದಿಂದ ಮಾಡುವ ರಾಜಕೀಯ ವಂಚನೆಯಾಗಿದೆ. ಮೀಸಲಾತಿಯನ್ನು ನಿಷ್ಪರಿಣಾಮಕಾರಿಯನ್ನಾಗಿ ಮಾಡುವ ಮೂಲಕ ಅಂತಿಮವಾಗಿ ದುರ್ಬಲಗೊಳಿಸುವ ಮತ್ತು ಕೊನೆಗೊಳಿಸುವ ಅವರ ದುಷ್ಟ ಉದ್ದೇಶವನ್ನು ಯಾರು ಮರೆಯಲು ಸಾಧ್ಯ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
1. सन् 1931 व आज़ादी के बाद पहली बार देश में जातीय जनगणना कराने के केन्द्र के निर्णय का श्रेय लेने में कांग्रेस यह भूल गयी कि दलित व ओबीसी समाज के करोड़ों लोगों को आरक्षण सहित उनके संवैधानिक हक़ से वंचित रखने में उसका इतिहास काला अध्याय है व इस कारण उसे सत्ता भी गंवानी पड़ी है।
— Mayawati (@Mayawati) May 3, 2025
ಇನ್ನು ಮೀಸಲಾತಿಯ ಸಾಂವಿಧಾನಿಕ ಉದ್ದೇಶಗಳನ್ನು ದುರ್ಬಲಗೊಳಿಸುವ ವಿಷಯದಲ್ಲಿ ಬಿಜೆಪಿ ಕಾಂಗ್ರೆಸ್‌ಗಿಂತ ಕಡಿಮೆಯೇನಿಲ್ಲ ಎಂದು ಬಿಎಸ್‌ಪಿ ನಾಯಕಿ ಹೇಳಿದ್ದಾರೆ. “ವಾಸ್ತವವಾಗಿ, ಎರಡೂ ಪಕ್ಷಗಳು ಒಂದೇ ನಾಣ್ಯದ ಎರಡು ಬದಿಗಳಾಗಿವೆ. ಜನರ ಒತ್ತಡ ಮತ್ತು ಮತ ರಾಜಕೀಯದಿಂದಾಗಿ, ಬಿಜೆಪಿಯು ಜಾತಿ ಜನಗಣತಿ ನಡೆಸುವ ಜನರ ಬೇಡಿಕೆಯ ಮುಂದೆ ತಲೆಬಾಗಬೇಕಾಯಿತು. ಇದು ಸ್ವಾಗತಾರ್ಹ” ಎಂದು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಹೇಳಿದ್ದಾರೆ.
“ಬಾಬಾಸಾಹೇಬ್ ಡಾ.ಭೀಮ್‌ರಾವ್ ಅಂಬೇಡ್ಕರ್ ಅವರಿಗೆ ಭಾರತ ರತ್ನ ನೀಡುವುದನ್ನು ವಿಳಂಬ ಮಾಡುವುದರಿಂದ ಹಿಡಿದು 340ನೇ ವಿಧಿಯ ಅಡಿಯಲ್ಲಿ ಒಬಿಸಿಗಳಿಗೆ ಮೀಸಲಾತಿ ನೀಡುವ ಬಗ್ಗೆ ಅವರ ಜಾತಿವಾದಿ ಮತ್ತು ಪ್ರತಿಕೂಲ ನಿಲುವಿನವರೆಗೆ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳ ವಿಧಾನವು ತಾರತಮ್ಯದಿಂದ ಕೂಡಿದೆ. ಆದರೆ ಮತ ರಾಜಕೀಯವು ಮುಂದುವರೆದಿದೆ. ಜನರು ಜಾಗರೂಕರಾಗಿರಬೇಕು” ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
