ಪ್ರೀತಿಯನ್ನು ನಿರಾಕರಿಸಿದ್ದ ಯುವತಿ ಮೇಲೆ ಆಕೆಯ ಮದುವೆಯ ಹಿಂದಿನ ದಿನ ವಿಕೃತ ಯುವಕನೊಬ್ಬ ಆ್ಯಸಿಡ್ ದಾಳಿ ಮಾಡಿರುವ ಘಟನೆ ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ನಡೆದಿದೆ.
ಮೌ ಪ್ರದೇಶದ ನಿವಾಸಿ ರೀಮಾ ಅವರ ಮೇಲೆ ಆರೋಪಿ ರಾಮ್ ಜನಮ್ ಸಿಂಗ್ ಪಟೇಲ್ ಎಂಬಾತ ಆ್ಯಸಿಡ್ ಎರಚಿದ್ದಾನೆ. ‘ನೀನು ನನ್ನವಳಾಗದಿದ್ದರೆ, ಬೇರೆಯವರನ್ನೂ ಮದುವೆಯಾಗಬಾರದು’ ಎಂದು ಹೇಳಿ, ಆ್ಯಸಿಡ್ ದಾಳಿ ಮಾಡಿದ್ದಾನೆ ಎಂದು ವರದಿಯಾಗಿದೆ.
ಯುವತಿ ರೀಮಾ ಅವರಿಗೆ ವಿವಾಹ ನಿಶ್ಚಯವಾಗಿತ್ತು. ಮದುವೆ ತಯಾರಿಗಳು ನಡೆಯುತ್ತಿದ್ದವು. ಮದುವೆಯ ಹಿಂದಿನ ದಿನ ರೀಮಾ ಅವರು ಬ್ಯಾಂಕ್ನಲ್ಲಿ ಹಣ ‘ವಿತ್ಡ್ರಾ’ ಮಾಡಿಕೊಂಡು ಮನೆಗೆ ಮರಳುತ್ತಿದ್ದಾಗ ತನ್ನ ಸ್ನೇಹಿತನೊಂದಿಗೆ ಬೈಕ್ನಲ್ಲಿ ಬಂದ ಆರೋಪಿ, ಆಕೆಯ ಮೇಲೆ ಆ್ಯಸಿಡ್ ಎರಚಿದ್ದಾನೆ.
ಘಟನೆಯಿಂದಾಗಿ ಯುವತಿಯ ಮುಖ, ಭುಜ, ಕುತ್ತಿಗೆ ಹಾಗೂ ದೇಹದ ಮೇಲ್ಭಾಗ ತೀವ್ರವಾಗಿ ಸುಟ್ಟುಹೋಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಪಟೇಲ್ ಮತ್ತು ಆತನ ಸಹಚರರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಬೈಕ್ಅನ್ನು ವಶಕ್ಕೆ ಪಡೆಯಲಾಗಿದೆ. ಆಕೆಯ ಮದುವೆ ರದ್ದಾಗುವಂತೆ ಮಾಡವ ಉದ್ದೇಶದಿಂದ ಆರೋಪಿ ದಾಳಿ ನಡೆಸಿದ್ದಾಗಿ ಹೇಳಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ತಿಂಗಳು, ಉತ್ತರ ಪ್ರದೇಶದ ಶಹಜಹಾನ್ಪುರ ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂಬ ಅನುಮಾನದ ಮೇಲೆ ತನ್ನ ಪತ್ನಿ ಮತ್ತು ಇಬ್ಬರು ಹೆಣ್ಣುಮಕ್ಕಳ ಮೇಲೆ ಆ್ಯಸಿಡ್ ಎರಚಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಇದೀಗ, ಮತ್ತೊಂದು ಆ್ಯಸಿಡ್ ದಾಳಿ ಪ್ರಕರಣ ನಡೆದಿದೆ.