ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಜನ ಹಿಂದೂಗಳ ಹತ್ಯೆ ನಡೆದರೂ, ಹಿಂದೂಗಳಿಗೆ ಅನ್ಯಾಯವಾದರೂ ಅದು ಅವರಿಗೆ ಮುಖ್ಯ ವಿಷಯ ಅನ್ನಿಸುವುದೇ ಇಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದು ಯುವಕ ಸತ್ತರೇ ಸಾಕು ಧರ್ಮದ ವಿಚಾರದಲ್ಲಿ ಬೆಂಕಿ ಹಚ್ಚಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ.
“ಯುವಕರು ಹಿಂದು-ಹಿಂದು ಎಂದುಕೊಂಡು ಹಿಂದುತ್ವದ ಹಿಂದೆ ಹೋಗುತ್ತಾರೆ. ನಮ್ಮ ಮಗ ಸುಹಾಸ್‌ನಿಗೆ 31 ವರ್ಷ. ಅವನೇ ನಮ್ಮ ಕುಟುಂಬಕ್ಕೆ ಆಧಾರ ಸ್ತಂಭವಾಗಿದ್ದ. ಹಿಂದುತ್ವದ ಬೆನ್ನು ಹತ್ತಿ ಈಗ ಕೊಲೆಯಾಗಿದ್ದಾನೆ. ನಾವೀಗ ಜೀವನ ಪೂರ್ತಿ ಕೊರಗಬೇಕು. ಇಂತಹ ಘಟನೆ ನಡೆದಾಗ ಯಾರೂ ನಮ್ಮ ಜೊತೆ ಇರುವುದಿಲ್ಲ. ಕೆಲವು ಹಿಂದುತ್ವ ಸಂಘಟನೆಯ ಮುಖಂಡರುಗಳು ನಾಲ್ಕೈದು ದಿನ ನಿಮ್ಮ ಜೊತೆ ನಾವಿದ್ದೇವೆ ಎಂದು ಹೇಳಿಕೊಂಡು ಬರುತ್ತಾರೆ. ಎಲ್ಲ ಮುಗಿದ ಮೇಲೆ ಅವರೂ ಇರಲ್ಲ…” ಇವು ಮಂಗಳೂರು ನಗರದ ಬಜಪೆಯಲ್ಲಿ ಗುರುವಾರ (ಮೇ 1) ರಾತ್ರಿ ದುಷ್ಕರ್ಮಿಗಳ ಗುಂಪಿನಿಂದ ಕೊಲೆಗೀಡಾದ ಸಂಘಪರಿವಾರದ ಕಾರ್ಯಕರ್ತ ಮತ್ತು ರೌಡಿಶೀಟರ್ ಸುಹಾಸ್ ಶೆಟ್ಟಿ ಅವರ ತಂದೆ ಮಹೇಶ್ ಶೆಟ್ಟಿ ಅವರ ಮಾತುಗಳು.
ಮಹೇಶ್ ಶೆಟ್ಟಿ ಅವರು ನೊಂದು ಆಡಿದ ನಾಲ್ಕೇ ಮಾತಿನಲ್ಲಿ ಅಪಾರ ಅರ್ಥವಿದೆ. ಹಿಂದುತ್ವದ ಹೆಸರಿನಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿರುವವರ ಹುನ್ನಾರವನ್ನು ಮಗನ ಸಾವಿನ ಮುಂದೆಯೇ ತಂದೆ ಹೀಗೆ ಬಹಿರಂಗಗೊಳಿಸಿದ್ದಾರೆ.
ಆದರೂ ಬಿಜೆಪಿ ಮುಖಂಡರು ಮತ್ತು ಕೆಲವು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಸುಹಾಸ್ ಶೆಟ್ಟಿ ಹತ್ಯೆಯಿಂದ ತಮ್ಮ ಎಂದಿನ ಹೆಣ ರಾಜಕಾರಣ ಆರಂಭಿಸಿ, ಸರ್ಕಾರದ ಜೊತೆಗೆ ಸಂಘರ್ಷಕ್ಕೆ ಇಳಿದಿದ್ದಾರೆ. ಸುಹಾಸ್ ಕೊಲೆಯಿಂದ ಕೇಸರಿ ಪಾಳಯದಲ್ಲಿ ಜೀವ ಸಂಚಾರವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಮುಖಂಡರು, ಸಂಘಪರಿವಾರದವರು ಹಾಗೂ ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಬೀದಿಗಿಳಿಯುವ ಸಿದ್ಧತೆಯಲ್ಲಿದ್ದಾರೆ.
ಬಿಜೆಪಿ ಸರ್ಕಾರ ಇದ್ದಾಗ ಎಷ್ಟು ಜನ ಹಿಂದುಗಳ ಹತ್ಯೆ ನಡೆದರೂ, ಹಿಂದುಗಳಿಗೆ ಅನ್ಯಾಯವಾದರೂ ಅದು ಅವರಿಗೆ ಮುಖ್ಯ ವಿಷಯ ಅನ್ನಿಸುವುದೇ ಇಲ್ಲ. ಕಾಂಗ್ರೆಸ್ ಸರ್ಕಾರವಿದ್ದಾಗ ಹಿಂದು ಯುವಕ ಸತ್ತರೇ ಸಾಕು ಧರ್ಮದ ವಿಚಾರದಲ್ಲಿ ಬೆಂಕಿ ಹಚ್ಚಲು ಕೆಲವರು ತುದಿಗಾಲಲ್ಲಿ ನಿಂತಿರುತ್ತಾರೆ.
ಜನರ ಸಾವನ್ನು ತನ್ನ ರಾಜಕಾರಣಕ್ಕೆ ಬಳಸಿಕೊಳ್ಳುವ ಗುಣ ಬಿಜೆಪಿಗೆ ಹೊಸದಲ್ಲ. ಹಿಂದುತ್ವದ ಪ್ರಯೋಗಶಾಲೆಯಾದ ಕರಾವಳಿಯಲ್ಲಿ ಇದನ್ನು ಬಳಸಿ ಬಿಜೆಪಿ ಯಶಸ್ಸು ಕಂಡಿದೆ. ಈಗ ಅದೇ ಕರಾವಳಿಯಲ್ಲಿ ಸುಹಾಸ್ ಕೊಲೆಯಾಗಿದ್ದು, ಧಾರ್ಮಿಕ ದ್ವೇಷದ ಲೇಪ ನೀಡಲು ಬಿಜೆಪಿಗೆ ಮತ್ತಷ್ಟು ಸುಲಭವಾಗಬಹುದು.

ಸುಹಾಸ್ ಶೆಟ್ಟಿ ಅಂತ್ಯ ಸಂಸ್ಕಾರಕ್ಕೆ ದೌಡಾಯಿಸಿದ ಬಿಜೆಪಿ ರಾಜ್ಯ ಘಟದ ಅಧ್ಯಕ್ಷ ಬಿ ವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಧಾರ್ಮಿಕ ದ್ವೇಷದ ಲೇಪಕ್ಕೆ ಮುನ್ನುಡಿ ಬರೆದಿದ್ದಾರೆ. ಸುಹಾಸ್ ಶೆಟ್ಟಿ ಕುಟುಂಬಕ್ಕೆ ಬಿಜೆಪಿ ಪರವಾಗಿ 25 ಲಕ್ಷ ರೂ. ಪರಿಹಾರ ನೀಡಲು ವಿಜಯೇಂದ್ರ ಘೋಷಿಸಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ವಿಜಯೇಂದ್ರ, “ರಾಜ್ಯದ ಜನತೆಗೆ ಹಾಗೂ ಹಿಂದು ಕಾರ್ಯಕರ್ತರಿಗೆ ಕಾಂಗ್ರೆಸ್ ಸರ್ಕಾರದ ಕುರಿತು ವಿಶ್ವಾಸ ಇಲ್ಲದಂತಾಗಿದೆ. ಇಂಥ ಘಟನೆಗಳು ನಡೆದಾಗ ರಾಜ್ಯ ಸರಕಾರ ಯಾವತ್ತೂ ಹಿಂದೂ ಕಾರ್ಯಕರ್ತರ ಪರವಾಗಿ ನಿಂತಿಲ್ಲ. ಸುಹಾಸ್ ಶೆಟ್ಟಿ ಅವರ ಬರ್ಬರ ಹತ್ಯೆ ಪೂರ್ವನಿಯೋಜಿತ ಎಂಬುದು ಸ್ಪಷ್ಟವಾಗಿ ಕಾಣುತ್ತಿದೆ. ಸಿದ್ದರಾಮಯ್ಯರ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಎಸ್‍ಡಿಪಿಐ, ಪಿಎಫ್‍ಐ ಮೇಲಿನ ಪ್ರೀತಿಯು ಸುಹಾಸ್ ಹತ್ಯೆಯಂಥ ದುಷ್ಕೃತ್ಯ, ಹಿಂದುಗಳ ಬೆದರಿಕೆ – ಹಿಂದುಗಳ ಹತ್ಯೆಗೆ ಶಕ್ತಿ ಕೊಟ್ಟಂತಿದೆ” ಎಂದಿದ್ದಾರೆ.
“ಇಡೀ ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆಯಿಂದ ಬೆಚ್ಚಿಬಿದ್ದಿದೆ. ಈ ಥರದ ಘಟನೆಗಳು ಕಾಂಗ್ರೆಸ್ ಸರ್ಕಾರದಲ್ಲೇ ಹೆಚ್ಚಾಗುತ್ತವೆ. ಸಿದ್ದರಾಮಯ್ಯ ಮೊದಲ ಅವಧಿಯಲ್ಲಿ 56 ಹಿಂದೂ ಕಾರ್ಯಕರ್ತರ ಕೊಲೆ ಆಗಿದೆ. ಕಾಂಗ್ರೆಸ್ ಬಂದಾಗೆಲ್ಲ ಪಾಕ್ ಜಿಂದಾಬಾದ್ ಕೂಗುವವರು, ಪಾಕ್ ಬಾವುಟ ಪ್ರದರ್ಶನ ಮಾಡುವವರು ಹೆಚ್ಚಾಗಿದ್ದಾರೆ. ಸುಹಾಸ್ ಹತ್ಯೆಗೂ ಪಾಕಿಸ್ತಾನ ಜಿಂದಾಬಾದ್ ಕಾರಣ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ” ಎಂದು ಆರ್ ಅಶೋಕ್ ಕಿಡಿಕಾರಿದ್ದಾರೆ.
ಹಿಂದು ಕಾರ್ಯಕರ್ತರ ಹತ್ಯೆಯಾದರೆ ಸಾಕು ಅಲ್ಲಿ ಮೊದಲು ಹಾಜರಾಗುವ ಶೋಭಾ ಕರಂದ್ಲಾಜೆ ಸುಹಾಸ್ ಪ್ರಕಣದಲ್ಲೂ ಮುಂದೆ ಬಂದಿದ್ದು, “ಸುಹಾಸ್‌ನನ್ನು ಜನನಿಬಿಡ ರಸ್ತೆಯಲ್ಲಿ ಅಮಾನವೀಯವಾಗಿ ಮತ್ತು ಭೀಕರವಾಗಿ ಹತ್ಯೆ ಮಾಡಲಾಗಿದೆ, ಅಷ್ಟೆಲ್ಲ ಜನ ಓಡಾಡುತ್ತಿದ್ದರೂ ಸಿನಿಮಾಗಳಲ್ಲಿ ತೋರಿಸುವ ಕ್ರೌರ್ಯ ಮತ್ತು ಭೀಭತ್ಸತೆಯೊಂದಿಗೆ ಅವರನ್ನು ಕೊಲ್ಲಲಾಗಿದೆ, ಹತ್ಯೆಗೈದವರು ನಿಸ್ಸಂದೇಹವಾಗಿ ತರಬೇತಿಯನ್ನು ಪಡೆದಿದ್ದಾರೆ” ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ.

“ಸುಹಾಸ್ ಪ್ರಕರಣದಿಂದ ಜನರ ಗಮನವನ್ನು ಬೇರೆಡೆ ತಿರುಗಿಸಲು ಸರ್ಕಾರ ಆಗಲೇ ನಿರ್ಧರಿಸಿಬಿಟ್ಟಿದೆ. ವಿಧಾನಸಭಾ ಸ್ಪೀಕರ್ ಯುಟಿ ಖಾದರ್ ತಮಗೆ ಜೀವ ಬೆದರಿಕೆ ಕರೆ ಬಂದಿದೆ ಅಂತ ಹೇಳುತ್ತಾರೆ. ಸಿಎಂ ಸಿದ್ದರಾಮಯ್ಯ ಸುಹಾಸ್ ಶೆಟ್ಟಿ ಹತ್ಯೆಯ ಬಗ್ಗೆ ಮಾತಾಡುವ ಬದಲು ಖಾದರ್ ಅವರಿಗೆ ಜೀವ ಬೆದರಿಕೆ ಕರೆ ಬಂದಿರುವ ಮತ್ತು ಅವರಿಗೆ ಭದ್ರತೆ ಒದಗಿಸುವ ಬಗ್ಗೆ ಮಾತಾಡುತ್ತಾರೆ. ಜನರಿಗೆ ರಕ್ಷಣೆ ಕೊಡುವುದು ಈ ಸರ್ಕಾರಕ್ಕೆ ಸಾಧ್ಯವಿಲ್ಲ” ಎಂದು ಶೋಭಾ ಹೇಳಿದ್ದಾರೆ.
ಹಿಂದುವಿನ ಕೊಲೆ ಮುಸ್ಲಿಮರಿಂದ ಆದಾಗ ಮತ್ತು ಹಿಂದುವಿನ ಕೊಲೆ ಹಿಂದೂ ಕೇಡಿಗಳಿಂದಲೇ ಆದಾಗ ಸಂಘಪರಿವಾರದ ಕರಾಳ ಮುಖ ಅನಾವರಣವಾಗುತ್ತದೆ. ಶವ ರಾಜಕಾರಣ ಮಾಡಲು ಬಿಜೆಪಿ ನಾಯಕರಿಗೆ ತಾವು ಅಧಿಕಾರದಲ್ಲಿ ಇರಲೇ ಬೇಕು ಎಂದೇನಿಲ್ಲ. ಆಡಳಿತ ನಡೆಸುತ್ತಿದ್ದಾಗಲೂ ವಿರೋಧ ಪಕ್ಷದಲ್ಲಿದ್ದಾಗಲೂ ಅವರದು ಒಂದೇ ಅಜೆಂಡ. ಪ್ರತಿ ಹಿಂದು ಯುವಕನ ಸಾವನ್ನು ತಮ್ಮ ರಾಜಕೀಯ ಅಜೆಂಡಕ್ಕೆ ಬಳಸಿಕೊಳ್ಳುವುದೇ ಆಗಿರುತ್ತದೆ.
ಸುಹಾಸ್ ಶೆಟ್ಟಿ ವಿರುದ್ಧ ಎರಡು ಕೊಲೆ, ದಲಿತ ದೌರ್ಜನ್ಯ ಸಹಿತ ಹಲವು ಪ್ರಕರಣಗಳು ಬಿಜೆಪಿ ಅವಧಿಯಲ್ಲೇ ದಾಖಲಾಗಿದ್ದವು ಎಂಬುದು ಗಮನಾರ್ಹ ಸಂಗತಿ. ಎಂದು ಆತನ ಮೇಲಿನ ಎಫ್‌ಐಎರ್ ಆತಮ ಬಗ್ಗೆ ಸಾಕಷ್ಟು ಹೇಳುತ್ತವೆ. ರೌಡಿಶೀಟರ್ ಎಂಬ ಪಟ್ಟ ಸಹ ಬಿಜೆಪಿ ಸರ್ಕಾರದಲ್ಲೇ ಸುಹಾಸ್ ಶೆಟ್ಟಿಗೆ ಸಿಕ್ಕಿದೆ.
ಬಜಪೆ ಪೊಲೀಸ್ ಠಾಣಾ ವ್ಯಾಪ್ತಿಯ ಬಡಗ ಎಕ್ಕಾರು ಗ್ರಾಮದ ದೇವರ ಗುಡ್ಡೆ ಎಂಬಲ್ಲಿ 20 ವರ್ಷದ ಯುವಕ ಕೀರ್ತಿ ಎಂಬವರನ್ನು 2020ರಲ್ಲಿ ಕೊಲೆ ಮಾಡಲಾಗಿತ್ತು. ಇದರಲ್ಲಿ ಸುಹಾಸ್ ಶೆಟ್ಟಿ ಎರಡನೇ ಆರೋಪಿಯಾಗಿದ್ದನು. ಆನಂತರದಲ್ಲಿ ದೀಪೇಶ್, ಸುಹಾಸ್, ಗೌತಮ್, ಉಮಾನಾಥ, ಪ್ರಶಾಂತ್ ಮತ್ತು ಇತರರ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 143, 147, 148, 323, 324, 504, 506, 307, 302, 149 ಮತ್ತು ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ಸುಹಾಸ್ ಶೆಟ್ಟಿ 2022ರಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಸುರತ್ಕಲ್‌ನಲ್ಲಿ ನಡೆದ ಕೃಷ್ಣಾಪುರ ನಿವಾಸಿ ಫಾಝಿಲ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾನೆ. ಜನನಿಬಿಡ ಸುರತ್ಕಲ್ ಪೇಟೆಯಲ್ಲಿದ್ದ ಫಾಝಿಲ್‌ನನ್ನು ರಾತ್ರಿ 8:30ರ ಸುಮಾರಿಗೆ ಸುಹಾಸ್ ಶೆಟ್ಟಿ ತಂಡ ತಲವಾರು ದಾಳಿ ನಡೆಸಿ ಹತ್ಯೆ ಮಾಡಿತ್ತು. ಈ ಪ್ರಕರಣ ವಿಚಾರಣಾ ಹಂತದಲ್ಲಿದೆ. ಬಂಟ್ವಾಳ ತಾಲೂಕಿನ ಕಾರಿಂಜೆ ನಿವಾಸಿಯಾದ ಸುಹಾಸ್ ಶೆಟ್ಟಿ ಎರಡು ಕೊಲೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ರೌಡಿಶೀಟರ್ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಕರಾವಳಿ ಕರ್ನಾಟಕ ಧರ್ಮಕಾರಣದ ಆಟದ ಅಂಗಳ ಎಂಬುದು ಈಗಾಗಲೇ ಸಾಬೀತಾಗಿದೆ. ದ್ವೇಷಾಸೂಯೆಯನ್ನು ಕೋಮು ದಂಗೆಯಾಗಿ ಪರಿವರ್ತಿಸಿ ಅಧಿಕಾರ ಅನುಭವಿಸಿದ ‘ಕೀರ್ತಿ’ ಸಂಘ ಪರಿವಾರದ ನಾಯಕರಿಗೆ ಸಲ್ಲುತ್ತದೆ. 1990ರ ದಶಕದಲ್ಲಿ ಭಟ್ಕಳ ಕೋಮುಗಲಭೆಯ ಬೆಂಕಿಯಲ್ಲಿ ಒಂದಿಡೀ ವರ್ಷ ಹೊತ್ತಿ ಉರಿದಿತ್ತು. ಜನಸಂಘದ ಕಾಲದಿಂದ ಚುನಾವಣೆಗೆ ನಿಂತು-ನಿಂತು ಸೋಲುತ್ತಿದ್ದ ಹಿಂದುತ್ವದ ಪಿತಾಮಹರೆನಿಸಿದ್ದ ಡಾ. ಚಿತ್ತರಂಜನ್ ಈ ಕೋಮು ವೈಷಮ್ಯದ ಕಾವಿನಲ್ಲಿ(1994) ಎಮ್‌ಎಲ್‌ಎ ಆಗಿದ್ದು. ಇದೇ ಹಿಂದುತ್ವ ಯಜ್ಞಕುಂಡದ ಉಪ-ಉತ್ಪನ್ನಗಳೇ ಮಾಜಿ ಸಂಸದ ಅನಂತಕುಮಾರ್ ಹೆಗಡೆ, ಮಾಜಿ ಮಂತ್ರಿ ಶಿವಾನಂದ ನಾಯ್ಕ್, ಮಾಜಿ ಶಾಸಕ ಸುನೀಲ್ ನಾಯ್ಕ್, ಸಿ ಟಿ ರವಿ, ಶೋಭಾ ಕರಂದ್ಲಾಜೆ ಮತ್ತಿತರ ಕೇಸರಿ ಶಾಲಿನ ಸಂಘಕಾರಣಿಗಳು.
ಮುಸಲ್ಮಾನರ ನಂಟಿರುವ ಯಾವುದೇ ಪ್ರಕರಣವಾಗಲಿ ಸದಾ ಕಾತರದಿಂದ ಕಾಯುವ ಸಂಘ-ಬಿಜೆಪಿ ಪರಿವಾರ ಕಾಯುತ್ತಿರುತ್ತದೆ. ಹಿಂದೂ ಯುವಕರ ಕೊಲೆಯಾದಾಗ ಬಿಜೆಪಿಯೊಳಗೆ ‘ಹಬ್ಬ’ದ ಸಡಗರ! ಸಿಬಿಐ ಅಂತಿಮ ವರದಿಯಂತೆ ಆಕಸ್ಮಿಕವಾಗಿ ಸಂಭವಿಸಿದ ಉತ್ತರ ಕನ್ನಡ ಜಿಲ್ಲೆಯ ಪರೇಸ್ ಮೇಸ್ತ ಸಾವಿನ ಶವದ ಮುಂದೆ ರಾಜಕಾರಣ ಮಾಡಿ ಚುನಾವಣೆ ಗೆದ್ದಿದ್ದ ಬಿಜೆಪಿ ವಿರುದ್ಧ ಪರೇಸ್ ಮೇಸ್ತ ತಂದೆ ತಾಯಿ ಮನದಾಳದ ಮಾತುಗಳನ್ನು ಈ ಸಂದರ್ಭದಲ್ಲಿ ಆಲಿಸಬೇಕು.
ಈ ವರದಿ ಓದಿದ್ದೀರಾ?: ‘ಅಪ್ಪನಿಗೆ ಹುಟ್ಟಿದ್ದರೆ…’ | ಅಸಹ್ಯ ಹುಟ್ಟಿಸಿದ ಯತ್ನಾಳ್-ಶಿವಾನಂದ್ ಪಾಟೀಲ್ ಚಿಲ್ಲರೆ ರಾಜಕಾರಣ!
“ಯಾವುದೇ ರಾಜಕೀಯ ಪಕ್ಷವಾಗಲಿ ನಮ್ಮ ಮಕ್ಕಳ ಸಾವನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿದ್ದೇ ಹೆಚ್ಚಿದೆ. ನಮ್ಮ ಮಗ ಪರೇಸ್ ಮೇಸ್ತ ಸಾವಾದಾಗ ಎಷ್ಟು ಪ್ರತಿಭಟನೆಗಳು ನಡೆದವು, ಈಗ ನಮ್ಮ ಜೊತೆ ಯಾರೂ ಇಲ್ಲ. ನಾವು ಕಷ್ಟ ಪಟ್ಟು ಕೂಲಿ ಕೆಲಸ ಮಾಡಿ ಬದುಕುತ್ತಿದ್ದೇವೆ. ದೇವರು ಅವರಿಗೆ ಒಳ್ಳೆಯದು ಮಾಡಲ್ಲ” ಎಂದು ಆಕ್ರೋಶದ ಮಾತುಗಳನ್ನು ಮಾಧ್ಯಮಗಳ ಮುಂದೆ ಪರೇಸ್ ಮೇಸ್ತ ತಂದೆ ತಾಯಿ ಹೊರಹಾಕಿದ್ದಾರೆ.
ಈಗ ಕಾಂಗ್ರೆಸ್ ಸರ್ಕಾರವಿದೆ. ರೌಡಿಶೀಟರ್ ಸುಹಾಸ್ ಶೆಟ್ಟಿ ಕೊಲೆಯಾಗಿದೆ. ಧರ್ಮವನ್ನು ಮುಂದೆ ಮಾಡಿ ಬೆಂಕಿ ಹಚ್ಚುವ ಕಾರ್ಯಕ್ಕೆ ಬಿಜೆಪಿ ಮತ್ತು ಸಂಘಪರಿವಾರದ ನಾಯಕರು ಯೋಜನೆ ರೂಪಿಸಲು ಆರಂಭಿಸಿರುತ್ತಾರೆ. ಸುಹಾಸ್ ಶೆಟ್ಟಿ ಅವರ ತಂದೆ ಮಹೇಶ್ ಶೆಟ್ಟಿ ಅವರಿಂದ ಸರ್ಕಾರದ ವಿರುದ್ಧ ಮಾತುಗಳನ್ನು ಹೇಳಿಸಿ, ಹೆಣ ರಾಜಕಾರಣಕ್ಕೆ ಜೀವ ತುಂಬುತ್ತಾರೆ.
ಜನರ ಸಾವಿನ ವಿಷಯ ಇಟ್ಟುಕೊಂಡು ಅದನ್ನು ರಾಜಕಾರಣದ ದಾಳವನ್ನಾಗಿ ಬಳಸುವ ಪಕ್ಷಗಳು, ಸಂಘಟನೆಗಳು ಹಾಗೂ ವ್ಯಕ್ತಿಗಳ ಬಗ್ಗೆ ಸರ್ಕಾರವು ನಿರ್ದಾಕ್ಷಿಣ್ಯವಾಗಿ ಹಾಗೂ ಕಠಿಣವಾಗಿ ವರ್ತಿಸಬೇಕು. ಈ ವಿಚಾರದಲ್ಲಿ ದ್ವೇಷ ಭಾಷಣ ಮಾಡುವ ಮುಖಂಡರ ವಿರುದ್ಧ, ಸತ್ಯವನ್ನು ಮರೆಮಾಚಿ ಸುಳ್ಳನ್ನು ಬಿತ್ತುವ ಕೂಗು ಮಾರಿ ಮಾಧ್ಯಮಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಹಾಗೆ ಮಾಡದೇ ಕಾಂಗ್ರೆಸ್ ಮೃದು ಹಿಂದುತ್ವದ ಮೊರೆ ಹೋದರೆ, ಯಾವ ಪ್ರಯೋಜನವೂ ಇಲ್ಲ.

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.