ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ 28 ಮಂದಿ ಸಾವನ್ನಪ್ಪಿದ ಬಳಿಕ, ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳುವ ಪ್ರವಾಸಿಗರ ಸಂಖ್ಯೆ ತೀವ್ರ ಕುಸಿದಿದೆ. ಕಾಶ್ಮೀರಕ್ಕೆ ತೆರಳಲು ಟಿಕೆಟ್ ಬುಕ್ ಮಾಡಿಕೊಂಡಿದ್ದ ಪ್ರವಾಸಿಗರು, ಬುಂಕಿಂಗ್‌ಅನ್ನು ರದ್ದುಗೊಳಿಸುತ್ತಿದ್ದಾರೆ. ತಮ್ಮ ಪ್ರವಾಸವನ್ನು ಹಿಮಾಚಲ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಹಿಮಾಚಲಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.
ದೇಶೀಯ ಮತ್ತು ಅಂತರರಾಷ್ಟ್ರೀಯ ಬುಕಿಂಗ್‌ಗಳಲ್ಲಿ ಸರಿಸುಮಾರು 15-20% ಪ್ರವಾಸಿಗರು ಕಾಶ್ಮೀರ ಪ್ರವಾಸವನ್ನು ಮನಾಲಿ, ಶಿಮ್ಲಾ ಹಾಗೂ ಧರ್ಮಶಾಲಾ ಸೇರಿದಂತೆ ಹಿಮಾಚಲದ ಜನಪ್ರಿಯ ತಾಣಗಳಿಗೆ ಬದಲಾಯಿಸಿದ್ದಾರೆ. ಆದಾಗ್ಯೂ, ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಮತ್ತು ಹಗೆತನದ ನಡುವೆ ಪ್ರವಾಸಿಗರು ‘ಕಾದು ನೋಡುವ’ ನೀತಿಯನ್ನು ಅನುಸರಿಸುತ್ತಿದ್ದಾರೆ. ಹೀಗಾಗಿ, ಕಾಶ್ಮೀರಕ್ಕೆ ಪ್ರವಾಸಿಗರ ಸಂಖ್ಯೆಯ ಶೀಘ್ರವೇ ಹೆಚ್ಚುವ ನಿರೀಕ್ಷೆಗಳಿಲ್ಲ.
ಪೆಹಲ್ಗಾಮ್ ಭಯೋತ್ಪಾದನಾ ದಾಳಿಯ ನಂತರ, ಪ್ರವಾಸ ನಿರ್ವಾಹಕರು, ಪ್ರವಾಸಿಗರು ಹಿಮಾಚಲ ಮತ್ತು ಉತ್ತರಾಖಂಡ ಪ್ರವಾಸ ಕರಿತು ಬುಕಿಂಗ್‌ಗಾಗಿ ವಿಚಾರಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಗಮನಾರ್ಹವಾಗಿ ಏರಿಕೆಯಾಗುತ್ತಿದೆ ಎಂದು ಕಾಂಗ್ರಾದ ಹೋಟೆಲ್ ಮತ್ತು ರೆಸ್ಟೋರೆಂಟ್ ಅಸೋಸಿಯೇಷನ್‌ನ ಅಧ್ಯಕ್ಷ ಅಶ್ವನಿ ಬಂಬಾ ಹೇಳಿರುವುದಾಗಿ ‘ಟಿಎನ್‌ಐಇ’ ವರದಿ ಮಾಡಿದೆ.
ಆದಾಗ್ಯೂ, “ವಾಸ್ತವವಾಗಿ ಕೇವಲ 15-20% ಪ್ರವಾಸಿಗರು ಮಾತ್ರ ಜಮ್ಮು ಮತ್ತು ಕಾಶ್ಮೀರದಿಂದ ಹಿಮಾಚಲಕ್ಕೆ ತಮ್ಮ ಪ್ರವಾಸವನ್ನು ಬದಲಿಸಿದ್ದಾರೆ. ಹೆಚ್ಚಿನವರು ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ ಈ ಭಾಗದ ಪ್ರವಾಸಕ್ಕೆ ತೆರಳಲು ಹಿಂದೆ ಸರಿದಿದ್ದಾರೆ. ಗುಜರಾತ್ ಮತ್ತು ಇತರ ರಾಜ್ಯಗಳಿಂದ ಪ್ರಯಾಣಿಸುವ ಪ್ರವಾಸಿಗರ ಬುಕಿಂಗ್‌ಗಳನ್ನು ಬದಲಾಯಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಈ ವರದಿ ಓದಿದ್ದೀರಾ?: ನಿಜಕ್ಕೂ ಜಾತಿಗಣತಿ ನಡೆಸುತ್ತದಾ ಬಿಜೆಪಿ; ಸಿದ್ಧವಿರುವ ವರದಿ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ ಕಾಂಗ್ರೆಸ್?
“ಎಲ್ಲರ ಮನಸ್ಸಿನಲ್ಲಿ ಒಂದೇ ಒಂದು ಪ್ರಶ್ನೆ ಇದೆ: ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ಏನು ಮಾಡುತ್ತದೆ ಎಂಬ ವಿಚಾರದಲ್ಲಿ ಸಾಮಾನ್ಯ ಜನರು ಎದುರು ನೋಡುತ್ತಿದ್ದಾರೆ. ದುರದೃಷ್ಟಕರ ಘಟನೆಯ ನಂತರ ಕಾಶ್ಮೀರ ಕಣಿವೆಯಿಂದ ಪ್ರವಾಸಿಗರು ಬೇರೆಡೆಗೆ ತಿರುಗಿದ ಕಾರಣ, ಅಲ್ಲಿನ ಬುಕಿಂಗ್‌ಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಮೇ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಸಾಮಾನ್ಯಕ್ಕಿಂತ 40% ಹೆಚ್ಚಾಗುತ್ತಿತ್ತು. ಆದರೆ, ಈ ಬಾರಿ ತೀವ್ರ ಕುಸಿತವಾಗಿದೆ. ಹೀಗಾಗಿ, ಹಿಮಾಚಲ ಪ್ರದೇಶದಲ್ಲಿ ಪ್ರವಾಸಿಗರ ಸಂಖ್ಯೆ 60-70% ಹೆಚ್ಚಾಗಿದೆ” ಎಂದು ಹಿಮಾಚಲ ಪ್ರದೇಶದ ಪ್ರವಾಸೋದ್ಯಮ ಪಾಲುದಾರರ ಸಂಘದ ಅಧ್ಯಕ್ಷ ಮೊಹಿಂದರ್ ಸೇಠ್ ಹೇಳಿದ್ದಾರೆ.
ಪ್ರವಾಸೋದ್ಯಮವು ಹಿಮಾಚಲ ಪ್ರದೇಶದ ಒಟ್ಟು ಜಿಡಿಪಿಗೆ 7.78% ಕೊಡುಗೆ ನೀಡುತ್ತದೆ. 2024-25ರ ಹಿಮಾಚಲ ಪ್ರದೇಶದ ಆರ್ಥಿಕ ಸಮೀಕ್ಷೆಯ ವರದಿಯ ಪ್ರಕಾರ, 2021ರಲ್ಲಿ 56.32 ಲಕ್ಷ ಇದ್ದ ದೇಶೀಯ ಪ್ರವಾಸಿಗರ ಸಂಖ್ಯೆ 2024ರಲ್ಲಿ 1.8 ಕೋಟಿಗೆ ಏರಿದೆ. 2021ರಲ್ಲಿ 5,000 ಇದ್ದ ವಿದೇಶಿ ಪ್ರವಾಸಿಗರ ಸಂಖ್ಯೆ 2024ರಲ್ಲಿ 83,000ಕ್ಕೆ ಏರಿಕೆಯಾಗಿದೆ.