ಲೋಕಾಯುಕ್ತ ದಾಳಿ ಇತ್ತೀಚೆಗೆ ಭ್ರಷ್ಟ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿದೆ. ಅಂತೆಯೇ ಹಾಸನ ನಗರಸಭೆ ವಾರ್ಡ್ ಅಧಿಕಾರಿ ದುಬ್ಬೇಗೌಡ ಎಂಬಾತ ಇ-ಸ್ವತ್ತು ಮಾಡಿಕೊಡಲು ₹25,000 ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.
ಲೋಕಾಯುಕ್ತ ಇನ್ಸ್‌ಪೆಕ್ಟರ್ ಬಾಲು ನೇತೃತ್ವದಲ್ಲಿ ದಾಳಿ ಮಾಡಲಾಗಿದ್ದು, ನಗರಸಭೆ ಅಧಿಕಾರಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಭ್ರಷ್ಟ ಅಧಿಕಾರಿಗಳ ಮೇಲೆ ರಾಜ್ಯಾದ್ಯಂತ ಲೋಕಾಯುಕ್ತ ದಾಳಿ
ಕಳೆದ ಜೂನ್ 28ರಂದು ಕರ್ನಾಟಕದ 62 ಕಡೆಗಳಲ್ಲಿ ಲೋಕಾಯುಕ್ತ ದಾಳಿ ಮಾಡಿ ಕೋಟ್ಯಾಂತರ ರೂಪಾಯಿ ಚಿನ್ನಾಭರಣ, ನಗದು, ಅಕ್ರಮ ಆಸ್ತಿಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಬೆಂಗಳೂರು ಸೇರಿದಂತೆ ರಾಜ್ಯದ 62ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ದಾಳಿ ನಡೆದಿದೆ.
ಚಿಕ್ಕಮಗಳೂರಿನಲ್ಲಿ ಒಟ್ಟು 4 ಕಡೆ ಲೋಕಾಯುಕ್ತ ದಾಳಿ ನಡೆದಿತ್ತು. ಜಿಲ್ಲಾ ನಿರ್ಮಿತಿ ಕೇಂದ್ರಗಳ ಯೋಜನಾ ವ್ಯವಸ್ಥಾಪಕ ಗಂಗಾಧರ್ ಅವರ ಮನೆ, ಹೊಟೇಲ್ ಮತ್ತು ಆತನಿಗೆ ಸಂಬಂಧಪಟ್ಟ ಪೆಟ್ರೋಲ್ ಬಂಕ್ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ ಕೋಟ್ಯಂತರ ಮೌಲ್ಯದ 16 ಮನೆಗಳು, 1 ರೆಸಾರ್ಟ್, ಚಿನ್ನ, ಬೆಳ್ಳಿ ಸಿಕ್ಕಿತ್ತು. ಈ ಮೂಲಕ ಒಟ್ಟು 3.76 ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು.
ಈ ಸುದ್ದಿ ಓದಿದ್ದೀರಾ? ರಾಮನಗರ | ಹಾರೋಹಳ್ಳಿ ಪಟ್ಟಣ ಪಂಚಾಯತಿ ಆದಾಯ ಕುಸಿತ; ಅಧಿಕಾರಿಗಳ ನಿರ್ಲಕ್ಷ್ಯ ಆರೋಪ
ಬಾಗಲಕೋಟೆಯಲ್ಲೂ ಲೋಕಾಯುಕ್ತ ಅಧಿಕಾರಿಗಳು ಭರ್ಜರಿ ಬೇಟೆಯಾಡಿದ್ದು, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಚೇತನಾ ಪಾಟೀಲ್ ಮನೆ ಮೇಲೆ ದಾಳಿ ಮಾಡಿ, ಬರೊಬ್ಬರಿ 32 ಲಕ್ಷ ನಗದು, ಚಿನ್ನಾಭರಣ, 31 ವ್ಯಾನಿಟಿ ಬ್ಯಾಗ್, ಬೆಳ್ಳಿ ಫ್ರೇಮ್ಯಿರುವ ಫೋಟೋ, 10ಕ್ಕೂ ಹೆಚ್ಚು ಲಗೇಜ್ ಬ್ಯಾಗ್, ಚಿನ್ನದ ಬಳೆ, ಸರ, ಎರಡು ಆಮೆಗಳು ಪತ್ತೆ ಆಗಿದ್ದವು. ಅಷ್ಟೇ ಅಲ್ಲದೇ ಬೀಳಗಿ ಸಹಾಯಕ ಕೃಷಿ ನಿರ್ದೇಶಕ ಕೃಷ್ಣಾ ಶಿರೂರು ಅವರಿಗೆ ಸೇರಿದ 4 ಕಡೆ ದಾಳಿ ಮಾಡಲಾಗಿತ್ತು. ಆತನ ಬಳಿ ₹71.88 ಲಕ್ಷ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿತ್ತು.