ಸಾರಿಗೆ ನಿಗಮಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಸಚಿವ ಸಂಪುಟದ ಅನುಮೋದನೆ ಪಡೆಯುವಂತೆ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಮನವಿ ಮಾಡಿದೆ.
ಮೇ 3ರಂದು ಸಚಿವರಿಗೆ ಪತ್ರ ಬರೆದಿರುವ ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ, “ತಾವು ಮುಂದಿನ ಕ್ಯಾಬಿನೆಟ್ ಸಭೆಯಲ್ಲಿ ಸಾರಿಗೆ ನಿಗಮಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ನೇಮಕಾತಿಗೆ ಅಗತ್ಯ ಪ್ರಸ್ತಾವನೆಯನ್ನು ಮಂಡಿಸಿ ಅನುಮೋದನೆ ಪಡೆದು ಸಾರಿಗೆ ನಿಗಮಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆಯನ್ನು ನೀಗಿಸಿ, ಸಂಸ್ಥೆಗಳು ಇನ್ನೂ ಹೆಚ್ಚಿನ ದಕ್ಷತೆಯಿಂದ ನಾಡಿನ ಜನತೆಗೆ ಸಾರಿಗೆ ಸೇವೆ ಒದಗಿಸಲು ಅನುವು ಮಾಡಿಕೊಡಬೇಕು” ಎಂದು ವಿನಂತಿಸಿದೆ.
“ನಾಲ್ಕೂ ಸಾರಿಗೆ ನಿಗಮಗಳಲ್ಲಿರುವ ತಾಂತ್ರಿಕ ಸಿಬ್ಬಂದಿಗಳ ಕೊರತೆಯ ಬಗ್ಗೆ ತಾವು ಮಧ್ಯಪ್ರವೇಶಿಸಿ, ಈ ಬಗ್ಗೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಕ್ಯಾಬಿನೆಟ್ ಮುಂದೆ ಮಂಡಿಸಿ ಒಪ್ಪಿಗೆ ಪಡೆಯಬೇಕೆಂದು ತಿಳಿಸಿದಿರಿ. ಮುಖ್ಯಮಂತ್ರಿಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು ಉತ್ತಮ ಬೆಳವಣಿಗೆಯಾಗಿದೆ” ಎಂದು ಸಮಿತಿ ತಿಳಿಸಿದೆ.
“15.04.2025ರಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ತ್ರಿಪಕ್ಷೀಯ ಸಭೆಯಲ್ಲಿ ನಮ್ಮ ಜಂಟಿ ಕ್ರಿಯಾ ಸಮಿತಿಯ ವತಿಯಿಂದ 38 ತಿಂಗಳ ಬಾಕಿ ಪಾವತಿ. 01.01.2024 ರಿಂದ ವೇತನ ಪರಿಷ್ಕರಣೆ, ಹಿಂದಿನ ಮುಷ್ಕರದ ಸಂದರ್ಭದಲ್ಲಿ ವಜಾಗೊಂಡ ನೌಕರರ ಮರು ನೇಮಕಾತಿ, ನೌಕರರ ವಿರುದ್ಧದ ಕ್ರಿಮಿನಲ್ ಮೊಕದ್ದಮೆಗಳ ರದ್ದತಿ, ಸಾರಿಗೆ ನಿಗಮಗಳಲ್ಲಿ ತಾಂತ್ರಿಕ ಸಿಬ್ಬಂದಿಗಳ ಕೊರತೆ ಮುಂತಾದ ಹಲವಾರು ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತಂದೆವು. ಈ ಎಲ್ಲಾ ಬೇಡಿಕೆಗಳನ್ನು ಸಮಾಧಾನವಾಗಿ ಆಲಿಸಿದ ಮುಖ್ಯಮಂತ್ರಿಯವರು ತಮ್ಮೊಂದಿಗೆ ಚರ್ಚಿಸಿ 93 ಶೀಘ್ರದಲ್ಲಿಯೇ ನಮ್ಮೊಂದಿಗೆ ಇನ್ನೊಂದು ಸಭೆ ನಡೆಸಿ ಇತ್ಯರ್ಥಪಡಿಸುವುದಾಗಿ ಭರವಸೆ ನೀಡಿದ್ದರು” ಎಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಪತ್ರದಲ್ಲಿ ವಿವರಿಸಿದೆ.