ನೊಂದವರು ಮತ್ತು ಶೋಷಿತರ ಪರವಾಗಿ ನಿಂತ ಪ್ರಾಮಾಣಿಕ ಅಧಿಕಾರಿಗಳಲ್ಲಿ ನಿವೃತ್ತ ಎಎಸ್ಪಿ ಅಬ್ದುಲ್ ಖಾದರ್ ಕೂಡ ಒಬ್ಬರು ಎಂದು ರಾಜಕೀಯ ಮುಖಂಡ ಹೆತ್ತೇನಹಳ್ಳಿ ಮಂಜುನಾಥ್ ಶ್ಲಾಘಿಸಿದರು.
ತುಮಕೂರು ನಗರದ ಕೇಂದ್ರ ಗ್ರಂಥಾಲಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ‘ತುಮಕೂರಿನ ನಿವೃತ್ತ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಖಾದರ್’ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಗಡಿಕಾಯುವ ಸೈನಿಕರಿಗೆ ದೊರೆಯುವ ಸನ್ಮಾನ ಅಬ್ದುಲ್ ಖಾದರ್ ಅವರಿಗೂ ಈ ಜಿಲ್ಲೆಯ ನಾಗರಿಕರಿಂದ ದೊರೆಯುತ್ತಿದೆ. ಜನಪರ ಸೇವೆಯಿಂದಾಗಿ ಅವರು ಜಿಲ್ಲೆಯ ಜನರ ಹೃದಯದಲ್ಲಿದಾರೆ ಎಂದು ಅವರು ಹೇಳಿದರು.
ಅಂಬೇಡ್ಕರ್ ನೀಡಿದಂತ ಕಾನೂನನ್ನು ಎದೆಗಪ್ಪಿಕೊಂಡು, ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿ ಇಂದು ನಿವೃತ್ತಿಯಾಗುತ್ತಿದ್ದಾರೆ. ಇವರು ಅಬ್ದುಲ್ ಖಾದರ್ ಅಲ್ಲ, ಅಬ್ದುಲ್ ಕಾನೂನು ಸಾಹೇಬರು ಎಂದು ಬಣ್ಣಿಸಿದರು.

ಅಧಿಕಾರಿಯಾಗಿದ್ದ ಸಮಯದಲ್ಲಿ ಬಡವರು, ನಿರ್ಗತಿಕರು, ಶೋಷಿತರು, ಮಹಿಳೆಯರ ಪರವಾಗಿ ಗಟ್ಟಿಯಾಗಿ ಹೋರಾಡಿದವರು, ಯಾವ ರಾಜಕಾರಣಿಗಳೂ ಅವರು ಸೊಪ್ಪು ಹಾಕುತ್ತಿರಲಿಲ್ಲ. ಇಂತಹ ದಕ್ಷ ಅಧಿಕಾರಿಯನ್ನು ಪಡೆದದ್ದು ನಮ್ಮ ಜಿಲ್ಲೆಯ ಭಾಗ್ಯ ಎಂದರಲ್ಲದೆ, ಪ್ರಾಮಾಣಿಕ ಪೊಲೀಸ್ ಅಧಿಕಾರಿಗಳ ಪುಸ್ತಕಗಳನ್ನು ಪೊಲೀಸ್ ಇಲಾಖೆ ವತಿಯಿಂದ ಪ್ರಕಟಿಸಬೇಕು ಎಂದು ಅವರು ವಿನಂತಿಸಿದರು.
ಸದೃಢ ಸಮಾಜವನ್ನು ನಿರ್ಮಾಣ ಮಾಡುವಂತಹ ಜವಾಬ್ದಾರಿ ಶಿಕ್ಷಕರ ಮೇಲಿದೆ. ಅಂತೆಯೇ ಆ ಸಮಾಜವನ್ನು ರಕ್ಷಣೆ ಮಾಡುವಂತಹ ಜವಾಬ್ದಾರಿ ಪೊಲೀಸ್ ಇಲಾಖೆ ಮೇಲಿದೆ. ಆ ರೀತಿಯ ದಕ್ಷತೆಯನ್ನು ತೋರಿಸಿಕೊಟ್ಟವರು ಅಬ್ದುಲ್ ಖಾದರ್ ಅವರು ಎಂದು ಹೆತ್ತೇನಹಳ್ಳಿ ಮಂಜುನಾಥ್ ನುಡಿದರು.
ನಿವೃತ್ತರಾದ ಎಎಸ್ಪಿ ಅಬ್ದುಲ್ ಖಾದರ್ ದಂಪತಿಯನ್ನು ಈ ವೇಳೆ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ನಿವೃತ್ತ ಎಡಿಜಿಪಿ ವಝೀರ್ ಅಹಮದ್ ಐಪಿಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಗೋಪಾಲ್, 12 ಬಟಾಲಿಯನ್ ಕೆಎಸ್‌ಆರ್‌ಪಿ ಕಮಾಂಡೆಂಟ್ ಹಂಝಾ ಹುಸೇನ್, ತುಮಕೂರು ಎಸ್ಪಿ ಅಶೋಕ್ ಕೆ.ವಿ, ಡಿಎಸ್ಪಿರವರುಗಳಾದ ಚಂದ್ರಶೇಖರ್, ಶೇಖರ್, ವಿನಾಯಕ್ ಶೆಟಗೇರಿ, ಮಂಜುನಾಥ, ಓಂ ಪ್ರಕಾಶ್, ಡಿಎಆರ್ ಡಿಎಸ್ಪಿ ಪರಮೇಶ್ ಹಾಗೂ ನಗರ ಮತ್ತು ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕರು ಉಪಸ್ಥಿತರಿದ್ದರು.