ಗ್ರಾಮೀಣ ಜನರು ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದೇಶದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಗರ ಪ್ರದೇಶದ ಜನರು ಚುನಾವಣಾ ದಿನದಂದು ಮತದಾನ ಮಾಡದೆ, ಪ್ರವಾಸಿ ತಾಣಗಳಿಗೆ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಚುನಾವಣಾ ಆಯೋಗದ ಆಯುಕ್ತ ಜಿ.ಎಸ್. ಸಂಗ್ರೇಶಿ ಕಳವಳ ಹೊರಹಾಕಿದರು.
ನಗರದ ಕರ್ನಾಟಕ ಕಲಾ ಕಾಲೇಜಿನ ಫ್ಯಾರನ್ ಸಭಾಂಗಣದಲ್ಲಿ ರಾಜ್ಯಶಾಸ್ತ್ರ ವಿಭಾಗ ಮತ್ತು ಐಕ್ಯುಎಸಿ ಘಟಕದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ‘ನೀನಾದ’ ವಾರ್ಷಿಕ ಸಂಚಿಕೆ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ಗಟ್ಟಿಗೊಳಿಸಲು ಚುನಾವಣೆಗಳು ಬುನಾದಿಯಾಗಿವೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಪಾತ್ರ ಮಹತ್ವದ್ದಾಗಿದೆ. ಪ್ರತಿಯೊಬ್ಬರೂ ಚುನಾವಣೆಯ ಮಹತ್ವ ತಿಳಿದು, ಮತದಾನ ಮಾಡುವ ಮೂಲಕ ಅರ್ಹ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು. ಇದು ದೇಶಕ್ಕೆ ನೀಡುವ ಬಹುದೊಡ್ಡ ಕೊಡುಗೆಯಾಗಿದೆ. ಮತದಾರರು ಯಾವುದೇ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದೆ ನ್ಯಾಯಸಮ್ಮತವಾಗಿ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕು ಎಂದರು.
ಕವಿವಿ ಕುಲಸಚಿವ ಎ.ಚನ್ನಪ್ಪ ಮಾತನಾಡಿ, ವಿದ್ಯಾರ್ಥಿಗಳು ದೇಶದ ಸಂವಿಧಾನ, ಪ್ರಜಾಪ್ರಭುತ್ವ ಮತ್ತು ಚುನಾವಣಾ ಪ್ರಕ್ರಿಯೆಯ ಕುರಿತು ತಿಳಿದುಕೊಳ್ಳಬೇಕು. ಪ್ರಜಾಪ್ರಭುತ್ವ ಸದೃಢವಾಗಲು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಅವಶ್ಯ ಎಂದರು.
ಇದನ್ನು ಓದಿದ್ದೀರಾ? ಧಾರವಾಡ | ಬೀದಿ ನಾಯಿಗಳ ಹಾವಳಿ; ಸಂತಾನಶಕ್ತಿ ಹರಣ ಕೇಂದ್ರ ಸ್ಥಾಪನೆಗೆ ಮುಂದಾದ ಎಚ್‌ಡಿಎಂಸಿ
ಈ ಸಂದರ್ಭದಲ್ಲಿ ಭಾರತೀಯ ಸಂವಿಧಾನ ಪೀಠೀಕೆ ಫಲಕವನ್ನು ಅನಾವರಣ ಮಾಡಿದರು. ಕಾಲೇಜಿನ ಪ್ರಾಚಾರ್ಯ ಡಿ.ಬಿ. ಕರಡೋಣಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.