ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಮತ್ತಷ್ಟು ಹೆಚ್ಚಾಗುತ್ತಿದೆ. ಶನಿವಾರ ಪಾಕಿಸ್ತಾನದ ಎಲ್ಲಾ ಸರಕುಗಳ ಆಮದನ್ನು ಭಾರತ ನಿಷೇಧಿಸಿ ಆದೇಶ ಹೊರಡಿಸಿದೆ. ಇದಾದ ಬೆನ್ನಲ್ಲೇ ಭಾರತೀಯ ಹಡಗುಗಳು ತನ್ನ ಬಂದರು ಪ್ರವೇಶಿಸುವುದನ್ನು ಪಾಕಿಸ್ತಾನ ನಿಷೇಧಿಸಿದೆ.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26ಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಇದರಲ್ಲಿ ಕರ್ನಾಟಕದವರೂ ಸೇರಿ ಬಹುತೇಕರು ಪ್ರವಾಸಿಗರು. ಈ ದಾಳಿ ಹೊಣೆಯನ್ನು ಲಷ್ಕರ್-ಎ-ತೊಯ್ಬಾದ ಪ್ರಾಕ್ಸಿ ಸಂಘಟನೆಯಾದ ರೆಸಿಸ್ಟೆನ್ಸ್ ಫ್ರಂಟ್ ಹೊಣೆ ಹೊತ್ತಿಕೊಳ್ಳುತ್ತಿದ್ದಂತೆ ಭಾರತ-ಪಾಕಿಸ್ತಾನದ ನಡುವಿನ ಬಿಕ್ಕಟ್ಟು ಇನ್ನಷ್ಟು ಹೆಚ್ಚಾಗಿದೆ.
ಇದನ್ನು ಓದಿದ್ದೀರಾ? BREAKING NEWS | ಪಹಲ್ಗಾಮ್ ಭಯೋತ್ಪಾದಕ ದಾಳಿ; ಪಾಕಿಸ್ತಾನದಿಂದ ಸರಕುಗಳ ಆಮದು ನಿಷೇಧಿಸಿದ ಭಾರತ
ಪಾಕಿಸ್ತಾನವು ಶನಿವಾರ ತಡರಾತ್ರಿ ಯಾವುದೇ ಭಾರತೀಯ ಭಾವುಟ ಹೊಂದಿರುವ ನೌಕೆಗಳು ಯಾವುದೇ ಪಾಕಿಸ್ತಾನಿ ಬಂದರಿಗೆ ಪ್ರವೇಶಿಸಲು ಅವಕಾಶ ನೀಡಬಾರದು ಎಂದು ಆದೇಶಿಸಿದೆ ಎಂದು ಪಾಕಿಸ್ತಾನದ ಪತ್ರಿಕೆ ಡಾನ್ ವರದಿ ಮಾಡಿದೆ. ಪಾಕಿಸ್ತಾನದ ಕಡಲ ವ್ಯವಹಾರಗಳ ಸಚಿವಾಲಯದ ಬಂದರು ಮತ್ತು ಹಡಗು ಸಾಗಣೆ ಇಲಾಖೆಯು ಶನಿವಾರ ತಡರಾತ್ರಿ ಈ ಆದೇಶವನ್ನು ಹೊರಡಿಸಿದೆ ಎಂದು ವರದಿ ಉಲ್ಲೇಖಿಸಿದೆ.
ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ನೀತಿಯ ಆಧಾರದ ಮೇಲೆ ಪಾಕಿಸ್ತಾನದಿಂದ ಎಲ್ಲಾ ಸರಕುಗಳ ಆಮದಿನ ಮೇಲೆ ಸಂಪೂರ್ಣ ನಿಷೇಧ ಹೇರಲಾಗಿದೆ ಎಂದು ಶನಿವಾರ ಭಾರತ ಸರ್ಕಾರ ಆದೇಶ ಹೊರಡಿಸಿದೆ. ಸಿಂಧೂ ಜಲ ಒಪ್ಪಂದ ಅಮಾನತು, ಪಾಕಿಸ್ತಾನ ಪ್ರಜೆಗಳ ವೀಸಾ ರದ್ದು ಹೀಗೆ ಕೇಂದ್ರ ಸರ್ಕಾರಗಳ ವಿವಿಧ ಘೋಷಣೆಗಳ ಬೆನ್ನಲ್ಲೇ ಪಾಕಿಸ್ತಾನ, ಭಾರತದೊಂದಿಗೆ ವ್ಯಾಪಾರ ಒಪ್ಪಂದವನ್ನು ರದ್ದುಗೊಳಿಸಿದೆ. ಉಭಯ ದೇಶಗಳು ಪರಸ್ಪರ ನಿಷೇಧ, ಇತರೆ ಕ್ರಮಗಳನ್ನು ಕೈಗೊಳ್ಳುತ್ತಲೇ ಇದೆ.
