ಸಕಲೇಶಪುರ ತಾಲೂಕಿನ ಬೈಕೆರೆ ಗ್ರಾಮದಲ್ಲಿ ಇತ್ತೀಚೆಗೆ ಆನೆ ದಾಳಿಯಿಂದ ಮೃತಪಟ್ಟ ಷಣ್ಮುಖ ಅವರ ಮನೆಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭೇಟಿ ನೀಡಿ ಸಾಂತ್ವನ ಹೇಳಿದರು.
“ಆನೆ-ಮಾನವ ಸಂಘರ್ಷದಿಂದ ಹೆಚ್ಚಿನ ಸಾವು ಸಂಭವಿಸುತ್ತಿದ್ದು, ನಿಯಂತ್ರಣಕ್ಕೆ ಸರ್ಕಾರ ಸಕಲ ಪ್ರಯತ್ನ ಮಾಡುತ್ತಿದೆ. ಆದರೂ ಜೀವಹಾನಿ ಸಂಭವಿಸುತ್ತಿರುವುದು ವಿಷಾದನೀಯ. ವನ್ಯಜೀವಿ ಸಂರಕ್ಷಣಾ ಕಾಯಿದೆಯ ಕಠಿಣ ಅನುಷ್ಠಾನದಿಂದ ಆನೆಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಆದರೆ ಅದಕ್ಕೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗಿದ್ದಲ್ಲದೇ ಸಮಸ್ಯೆ ಉಲ್ಬಣಿಸಿದೆ” ಎಂದರು.
“ಬಿಕ್ಕೋಡಿನಲ್ಲಿ ಆನೆ ಕಾರ್ಯಪಡೆಯ ಘಟಕ ಸ್ಥಾಪಿಸಿ ಸ್ಥಳೀಯರಿಗೆ ಆನೆಗಳ ಚಲನವಲನದ ಬಗ್ಗೆ ಸಕಾಲಿಕ ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿ ಹಾಗೂ ಆನೆಗಳ ಉಪಟಳ ತಡೆಯುವ ನಿಟ್ಟಿನಲ್ಲಿ ಅವುಗಳ ಚಲನವಲನ ಗಮನಹರಿಸಿ ರೈತರಿಗೆ ಮಾಹಿತಿ ನೀಡುವುದು, ರೈಲ್ವೆ ಬ್ಯಾರಿಕೇಡ್ ನಿರ್ಮಾಣ, ಇಟಿಎಫ್ ಸಿಬ್ಬಂದಿ ನೇಮಕ, ಅಗತ್ಯ ವಾಹನಗಳ ಸೌಲಭ್ಯ ಸೇರಿದಂತೆ ಉತ್ತಮ ಅಧಿಕಾರಿಗಳನ್ನು ನೇಮಿಸಲಾಗಿದ್ದರೂ ಪ್ರಕೃತಿಯಲ್ಲಿ ಕೈಮೀರಿ ಕೆಲವು ಘಟನೆಗಳು ಸಂಭವಿಸುತ್ತಿವೆ. ಇಂತಹ ಘಟನೆಗಳು ನಮಗೂ ನೋವುಂಟು ಮಾಡಿದೆ” ಎಂದರು.
“ಈ ಬಾರಿ ಬಜೆಟ್‌ನಲ್ಲಿ ವನ್ಯಜೀವಿ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರದ ಮೊತ್ತವನ್ನು ₹15 ಲಕ್ಷದಿಂದ ₹20 ಲಕ್ಷಕ್ಕೆ ಹೆಚ್ಚಳ ಮಾಡಿದ್ದು, ಷಣ್ಮುಖ ಅವರ ಕುಟುಂಬಕ್ಕೂ ₹20 ಲಕ್ಷ ಪರಿಹಾರ ನೀಡಲಾಗಿದೆ. ಕುಟುಂಬದವರು ಸರ್ಕಾರಿ ನೌಕರಿ ಕೇಳುತ್ತಿದ್ದಾರೆ. ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು. ಮಾನವ ಮತ್ತು ವನ್ಯಜೀವಿಗಳ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಭದ್ರ ಅಭಯಾರಣ್ಯದಲ್ಲಿ ಸಾಫ್ಟ್ ರಿಲೀಸ್ ಸೆಂಟರ್ ಮಾಡಲು ಪ್ರಕ್ರಿಯೆ ಪ್ರಾರಂಭಿಸಲಾಗಿದೆ” ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಇದನ್ನೂ ಓದಿದ್ದೀರಾ?ಹಾಸನ l ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ: ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ; ಸಚಿವ ಈಶ್ವರ್ ಖಂಡ್ರೆ
ಈ ಸಂದರ್ಭದಲ್ಲಿ ಸಂಸತ್ ಸದಸ್ಯ ಶ್ರೇಯಸ್ ಪಟೇಲ್, ಶಾಸಕ ಸಿಮೆಂಟ್ ಮಂಜು, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲ, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್, ಕಾಂಗ್ರೆಸ್ ಮುಖಂಡ ಮುರಳಿ ಮೋಹನ್, ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು.
