ವಾಮಾಚಾರ ಮಾಡಿದ ಆರೋಪ ಮಾಡಿ ಪಾಕಿಸ್ತಾನ ಮಹಿಳೆ ಸೀಮಾ ಹೈದರ್ ಮನೆಗೆ ವ್ಯಕ್ತಿಯೊಬ್ಬ ನುಗ್ಗಲು ಯತ್ನಿಸಿದ ಘಟನೆ ಶನಿವಾರ ನಡೆದಿದೆ. ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು ದೂರು ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ಆರೋಪಿಯನ್ನು ಗುಜರಾತ್‌ನ ಸುರೇಂದರ್ ನಗರದ ನಿವಾಸಿ ತೇಜಸ್ ಎಂದು ಗುರುತಿಸಿದ್ದಾರೆ. ಆತ ಮಾನಸಿಕ ಅಸ್ವಸ್ಥನಂತೆ ತೋರುತ್ತಿದೆ. ಆತ ಸಂಜೆ ಸುಮಾರು 7 ಗಂಟೆಗೆ ಸೀಮಾ ಮನೆಗೆ ನುಗ್ಗಲು ಯತ್ನಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಪಹಲ್ಗಾಮ್ ದಾಳಿ | ಭಾರತದಿಂದ ಪಾಕಿಸ್ತಾನಕ್ಕೆ ತೆರಳುತ್ತಿರುವ ಸಾಮಾನ್ಯರು, ಸಂಕಟದ ಕತೆಗಳು
“ತೇಜಸ್ ಗುಜರಾತ್ ಮೂಲದವನಾಗಿದ್ದು, ಗುಜರಾತ್‌ನಿಂದ ನವದೆಹಲಿಗೆ ಹೋಗುವ ರೈಲಿನ ಸಾಮಾನ್ಯ ಕೋಚ್ ಮೂಲಕ ಪ್ರಯಾಣಿಸಿ ಬಂದಿದ್ದಾನೆ. ನವದೆಹಲಿ ರೈಲ್ವೆ ನಿಲ್ದಾಣದಿಂದ ಬಸ್ ಮೂಲಕ ಸೀಮಾ ನೆಲೆಸಿರುವ ಗ್ರಾಮಕ್ಕೆ ತಲುಪಿದ್ದಾನೆ. ಆತನ ಮೊಬೈಲ್ ಫೋನ್‌ನಲ್ಲಿ ಸೀಮಾ ಸ್ಕ್ರೀನ್‌ಶಾಟ್‌ಗಳಿವೆ” ಎಂದು ರಬುಪುರ ಕೊಟ್ವಾಲಿಯ ಉಸ್ತುವಾರಿ ವಹಿಸಿರುವ ಅಧಿಕಾರಿ ಸುಜೀತ್ ಉಪಧ್ಯಾಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
“ತೇಜಸ್ ಬಂಧನ ಮಾಡಲಾಗಿದೆ. ವಿಚಾರಣೆ ನಡೆಸಿದಾಗ ಸೀಮಾ ತನ್ನ ಮೇಲೆ ಮಾಟಮಂತ್ರ (ವಾಮಾಚಾರ) ಮಾಡಿದ್ದಾರೆ ಎಂದು ತೇಜಸ್ ಪೊಲೀಸರಿಗೆ ತಿಳಿಸಿದ್ದು, ಈ ಬಗ್ಗೆ ಹೆಚ್ಚಿನ ವಿಚಾರಣೆ, ತನಿಖೆ ನಡೆಯುತ್ತಿದೆ” ಎಂದು ಸುಜೀತ್ ತಿಳಿಸಿದ್ದಾರೆ.
ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಜಾಕೋಬಾಬಾದ್ ಮೂಲದ 32 ವರ್ಷದ ಸೀಮಾ ಹೈದರ್ 2023ರಲ್ಲಿ ತೀವ್ರ ಸುದ್ದಿಗೆ ಗ್ರಾಸವಾಗಿದ್ದರು. ತಾನು ಇಷ್ಟಪಟ್ಟ ಭಾರತದ 27 ವರ್ಷದ ಸಚಿನ್ ಮೀನಾ ಅವರನ್ನು ವಿವಾಹವಾಗಲು ಪಾಕಿಸ್ತಾನ ತೊರೆದು ಅಕ್ರಮವಾಗಿ ಸೀಮಾ ಭಾರತ ಪ್ರವೇಶಿಸಿದ್ದರು.
ತನ್ನ ಮಕ್ಕಳನ್ನು ಕರೆದುಕೊಂಡು 2023ರ ಮೇ ತಿಂಗಳಲ್ಲಿ ಕರಾಚಿಯಲ್ಲಿರುವ ಮನೆಯಿಂದ ನೇಪಾಳ ಮೂಲಕ ಭಾರತಕ್ಕೆ ಪ್ರಯಾಣ ಬೆಳೆಸಿದರು. ಆ ವರ್ಷದ ಜುಲೈನಲ್ಲೇ ಗ್ರೇಟರ್ ನೋಯ್ಡಾ ಪ್ರದೇಶದಲ್ಲಿ ಸಚಿನ್ ಮೀನಾ ಜೊತೆ ಸೀಮಾ ನೆಲೆಸಿರುವುದು ಭಾರತೀಯ ಅಧಿಕಾರಿಗಳ ಗಮನಕ್ಕೆ ಬಂದಾಗ ಸುದ್ದಿಯಾದರು. ಅವರಿಬ್ಬರು ಈಗ ವಿವಾಹವಾಗಿರುವುದಾಗಿ ಹೇಳಿಕೊಂಡಿದ್ದಾರೆ.
