- ‘ಸ್ಪೀಕರ್ ಸ್ಥಾನದಲ್ಲಿ ಇರೋ ಒಂದು ಹಂದಿ’ ಎಂದು ಉಲ್ಲೇಖಿಸಿ ಅವಹೇಳನ
- ಕಮೆಂಟ್ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುತ್ತದಾ ಸರ್ಕಾರ?
ವಿಧಾನಸಭೆಯ ಸಭಾಧ್ಯಕ್ಷ ಯು ಟಿ ಖಾದರ್ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಪದ ಬಳಸಿ, ಟ್ವಿಟರ್ನಲ್ಲಿ ಅವಹೇಳನ ಮಾಡಲಾಗಿದೆ.
16ನೇ ವಿಧಾನಸಭೆಯ ಮೊದಲ ಅಧಿವೇಶನಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹಲೋತ್ ಜು.3ರ ಸೋಮವಾರದಂದು ಚಾಲನೆ ನೀಡಿದ್ದರು. ಎರಡನೇ ದಿನದ ಕಲಾಪದ ವೇಳೆ ಸ್ಪೀಕರ್ ಯು ಟಿ ಖಾದರ್, ದಿನಾಂಕಗಳನ್ನು ಕನ್ನಡದಲ್ಲಿ ಉಚ್ಛಾರಣೆ ಮಾಡುವ ಸಂದರ್ಭದಲ್ಲಿ ಎಡವಿದ್ದರು. ಈ ವಿಡಿಯೋ ತುಣುಕನ್ನು ಬಿಜೆಪಿಯಲ್ಲಿ ಗುರುತಿಸಿಕೊಂಡಿರುವವರೂ ಸೇರಿದಂತೆ ಕೆಲವರು ಸೋಷಿಯಲ್ ಮೀಡಿಯಾಗಳಲ್ಲಿ ಹಂಚಿಕೊಂಡು ಟ್ರೋಲ್ ಮಾಡಿದ್ದರು.
ಈ ನಡುವೆ ಇತ್ತೀಚೆಗೆ ಬೆಂಗಳೂರಿನ MG (ಮೋರಿಸ್ ಗ್ಯಾರೇಜ್) ವಾಹನ ಶೋರೋಂನ ಸಿಬ್ಬಂದಿಯೊಬ್ಬರು ಸಂಸ್ಥೆಯ ಕಟ್ಟಡದ ಮೇಲೆ ಕನ್ನಡ ನಾಮಫಲಕ ಹಾಕುವುದಕ್ಕೆ ನಿರಾಕರಿಸಿದ್ದರು. ಆ ಬಳಿಕ ಕನ್ನಡಪರ ಹೋರಾಟಗಾರರು ಎಂಜಿ ಕಾರು ಸಂಸ್ಥೆಗೆ ಮುತ್ತಿಗೆ ಹಾಕಿ, ಪ್ರತಿಭಟಿಸಿದ್ದರಿಂದ ಬಳಿಕ ಕ್ಷಮೆ ಕೋರಿದ್ದರು. ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ವಿ ಕೆ ಕಾರ್ತಿಕ್ ಎಂಬವರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದರು.

ಇದಕ್ಕೆ ‘ಹನುಮಾನ್ ಆರ್ಯ ಹಿಂದೂ’ ಎಂಬ ಹೆಸರಿನ ಟ್ವಿಟರ್ ಖಾತೆಯಿಂದ ಕಮೆಂಟ್ ಮಾಡಲಾಗಿದ್ದು, ಸ್ಪೀಕರ್ ಯು ಟಿ ಖಾದರ್ ಅವರನ್ನು ‘ಸ್ಪೀಕರ್ ಸ್ಥಾನದಲ್ಲಿ ಇರೋ ಒಂದು ಹಂದಿ’ ಎಂದು ಉಲ್ಲೇಖಿಸಿ ಅವಹೇಳನ ಮಾಡಲಾಗಿದೆ.
ಈ ಬಗ್ಗೆ ಮಾಹಿತಿ ಕಲೆ ಹಾಕಲು ಈ ದಿನ.ಕಾಮ್ ಸ್ಪೀಕರ್ ಆಪ್ತ ವಲಯವನ್ನು ಸಂಪರ್ಕಿಸಿದಾಗ, ‘ವಿಧಾನಸಭೆಯ ಸ್ಪೀಕರ್ ಎನ್ನುವುದು ಅತ್ಯಂತ ಗೌರವದ ಸ್ಥಾನ. ಅಲ್ಲಿ ಯಾರೇ ಕೂತಿದ್ದರೂ ಅವರಿಗೆ ಗೌರವ ಕೊಡುವುದು ಪ್ರತಿಯೊಬ್ಬ ನಾಗರಿಕರ ಜವಾಬ್ದಾರಿ. ಈ ಬಗ್ಗೆ ಕೂಡಲೇ ಸಂಬಂಧಪಟ್ಟವರ ಗಮನಕ್ಕೆ ತಂದು ಕ್ರಮ ವಹಿಸುತ್ತೇವೆ’ ಎಂದು ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಸಂಬಂಧವಿಲ್ಲದ ಫೋಟೋ, ಸುಳ್ಳು ಸುದ್ದಿ ಹರಡುವವರಿಗೆ ಕಡಿವಾಣ ಹಾಕಲು, ಸೈಬರ್ ಕಾನೂನಿನಲ್ಲಿ ಸೂಕ್ತ ಕಾನೂನು ಜಾರಿಗೆ ತರಲಾಗುವುದು ಎಂದು ಇತ್ತೀಚೆಗೆ ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ ನೀಡಿದ್ದರು.
ಈಗ ಸ್ಪೀಕರ್ ಯು ಟಿ ಖಾದರ್ ಅವರನ್ನೇ ‘ಹಂದಿ’ಗೆ ಹೋಲಿಸಿ, ಕಮೆಂಟ್ ಮಾಡಲಾಗಿದೆ. ಸೈಬರ್ ಸೆಲ್ ಪೊಲೀಸರು ಅಥವಾ ವಿಧಾನಸೌಧದ ಸಂಬಂಧಪಟ್ಟ ಅಧಿಕಾರಿಗಳು ಅಥವಾ ಸರ್ಕಾರ ಈ ಬಗ್ಗೆ ಏನು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.