ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ಬಳಿಕ ಭಾರತದಲ್ಲಿರುವ ಪಾಕಿಸ್ತಾನಿ ಪ್ರಜೆಗಳನ್ನು ವಾಪಸ್ ಕಳಿಸಲಾಗಿದೆ. ಪಾಕಿಸ್ತಾನದಿಂದ ಭಾರತಕ್ಕೆ ಬಂದು ನೆಲೆಸಿರುವವರಲ್ಲಿ ಕೆಲವರು ಭಾರತೀಯರನ್ನು ವಿವಾಹವಾಗಿದ್ದು, ಅವರು ಪಾಕ್‌ಗೆ ಮರಳಲು ನಿರಾಕರಿಸಿದ್ದಾರೆ. ಈ ನಡುವೆ, ಪಾಕಿಸ್ತಾನ್ ಮೂಲದ ಮಹಿಳೆಯನ್ನು ವಿವಾಹವಾಗಿದ್ದ ಕಾರಣಕ್ಕೆ ಸಿಆರ್‌ಪಿಎಫ್ ಯೋಧನನ್ನು ಸೇವೆಯಿಂದ ವಜಾಗೊಳಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ಘರೋಟಾ ನಿವಾಸಿಯಾಗಿರುವ ಮುನೀರ್ ಅಹ್ಮದ್ ಅವರನ್ನು ಕೇಂದ್ರ ಮೀಸಲು ಪೊಲೀಸ್ ಪಡೆಯಿಂದ (ಸಿಆರ್‌ಪಿಎಫ್) ವಜಾಗೊಳಿಸಲಾಗಿದೆ. ಮುನೀರ್ ಅವರು 2017ರಿಂದ ಸಿಆರ್‌ಪಿಎಫ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅವರು ಪಾಕಿಸ್ತಾನಿ ಮಹಿಳೆ ಮಿನಾಲ್ ಖಾನ್ ಅವರನ್ನು 2023ರ ಮೇ ತಿಂಗಳಿನಲ್ಲಿ ಆನ್‌ಲೈನ್‌ನಲ್ಲಿ ಮದುವೆಯಾಗಿದ್ದರು. ಬಳಿಕ, ಮಿನಾಲ್ ಅವರು ಭಾರತಕ್ಕೆ ಬಂದಿದ್ದರು. ಆದರೆ, ಪಹಲ್ಗಾಮ್ ದಾಳಿಯ ಬೆನ್ನಲ್ಲೇ ಅವರನ್ನು ಸೇವೆಯಿಂದ ತೆಗೆದುಹಾಕಲಾಗಿದೆ.
ಮುನೀರ್ ಅವರು ತಮ್ಮ ಮದುವೆಯನ್ನು ಮರೆಮಾಚಿದ್ದರು. ಅಲ್ಲದೆ, ಮಿನಾಲ್ ಅವರ ವೀಸಾ ಅವಧಿ ಮುಗಿದ ಬಳಿಕವೂ ಅವರು ಭಾರತದಲ್ಲಿಯೇ ಉಳಿದಿದ್ದರು. ಅವರನ್ನು ಮುನೀರ್ ತನ್ನ ಮನೆಯಲ್ಲಿ ಬಚ್ಚಿಟ್ಟಿದ್ದರು ಎಂದು ಆರೋಪಿಸಲಾಗಿದೆ.ಇದು ಗಂಭೀರ ದುಷ್ಕೃತ್ಯ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದಿರುವ ಸಿಆರ್‌ಪಿಎಫ್ ಸೇವೆಯಿಂದ ವಜಾಗೊಳಿಸಿದೆ.
ಈ ವರದಿ ಓದಿದ್ದೀರಾ?: ಉಗ್ರರ ದಾಳಿಗೆ ಹತ್ತು ದಿನ: ‘ಹುಡುಕಿ ಹುಡುಕಿ ಬೇಟೆ’ಯಾಡುತ್ತಿರುವುದು ಯಾರನ್ನು?
“ವಿವಾಹಕ್ಕೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ, ಸಿಆರ್‌ಪಿಎಫ್‌ನಿಂದ ಅನುಮತಿ ಪಡೆದುಕೊಂಡೇ ವಿವಾಹವಾಗಿದ್ದೇನೆ. ನಮ್ಮ ಮದುವೆಗೆ 2023ರ ಏಪ್ರಿಲ್ 30ರಂದು ಸಿಆರ್‌ಪಿಎಫ್ ಅನುಮತಿ ನೀಡಿತ್ತು. ಆದರೆ, ಇದೀಗ ನನ್ನನ್ನು ವಜಾಗೊಳಿಸಲಾಗಿದೆ. ಇದು ನಮಗೆ ಆಘಾತ ಉಂಟುಮಾಡಿದೆ. ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತೇನೆ” ಎಂದು ಮುನೀರ್ ಹೇಳಿದ್ದಾರೆ.