ಮೈಸೂರಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ‘ ವಕ್ಫ್ ತಿದ್ದುಪಡಿ ಕಾಯ್ದೆ – 2025 ‘ ವಿರೋಧಿಸಿ ಶನಿವಾರ ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮವನ್ನುದ್ದೇಶಿಸಿ ಮಾತನಾಡಿದ ಜಾಗೃತ ಕರ್ನಾಟಕ ಸಂಘಟನೆಯ ಡಾ. ಎಚ್. ವಿ. ವಾಸು ‘ವಕ್ಫ್ ಆಸ್ತಿಯನ್ನು ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಕಸಿದುಕೊಳ್ಳಲು ಸಾಧ್ಯವಿಲ್ಲ’ ಎಂದರು.
” 226 ವರ್ಷಗಳ ಹಿಂದೆ ಇದೇ ಮಣ್ಣಿನಲ್ಲಿ ಸ್ವಾತಂತ್ರ್ಯ ಹೋರಾಟ ನಡೆದಿತ್ತು. ಟಿಪ್ಪು ಸುಲ್ತಾನ್ ಹೋರಾಟ ನಡೆಸಿದ್ದರು.ಅದುವೇ ಮೇ.4 ರಂದು ಹುತಾತ್ಮರಾದ ದಿನ. ಟಿಪ್ಪು ಕೇವಲ ತನ್ನ ರಾಜ್ಯದ ಉಳಿವಿಗಾಗಿ ಹೋರಾಟ ಮಾಡಿದ್ದಲ್ಲ. ಅವರ ತಂದೆ ಹೈದರ್ ಅಲಿ ಬರೆದ ಪತ್ರದಲ್ಲಿ ಇಡೀ ದೇಶದಿಂದ ಬ್ರಿಟಿಷರನ್ನು ಹೊರಗಟ್ಟಬೇಕು ಮಿಕ್ಕವರನ್ನೆಲ್ಲ ಒಗ್ಗೂಡಿಸಬೇಕು ಅನ್ನುವುದಾಗಿತ್ತು.
2014 ರಲ್ಲಿ ದೇಶದ ಸ್ವಾಂತ್ರ್ಯವನ್ನ ಬುಡಮೇಲು ಮಾಡುವಂತ ಸರ್ಕಾರ ಬಂತು ಅದುವೇ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ. ದೇಶದಲ್ಲಿ 2 ನೆಯ ಸ್ವಾತಂತ್ರ್ಯ ಸಂಗ್ರಾಮದ ಮಾದರಿಯಲ್ಲಿ ಸಿಎಎ ಹಾಗೂ ಎನ್ಆರ್ಸಿ ಹೋರಾಟ ನಡೆಯಿತು. ಅದರಲ್ಲೂ, ಮಹಿಳೆಯರು ಬೀದಿಗಿಳಿದಾಗ ನರೇಂದ್ರ ಮೋದಿಯವರು ಸಹ ಮಣಿಯುವಂತ ಕೆಲಸವಾಯ್ತು. ಕಳೆದ 25 ವರ್ಷಗಳಲ್ಲಿ ಅಂತಹ ಹೋರಾಟ ಕಂಡಿರಲಿಲ್ಲ “.

” ಸಿಎಎ ಹೋರಾಟದಲ್ಲಿ ಬೀದಿಗೆ ಇಳಿದ ಮಹಿಳೆಯರ ಕೈಯಲ್ಲಿ ಹಸಿರು ಬಾವುಟ ಇರಲಿಲ್ಲ ತ್ರಿವರ್ಣ ದ್ವಜವಿತ್ತು. ಮಹಾತ್ಮ ಗಾಂಧಿ ಹಾಗೂ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಹಾಗೆ ಸಂವಿಧಾನದ ಪೀಠಿಕೆ ಇತ್ತು. ಇದೇ ವಿಶೇಷವಾದದ್ದು . ಮುಸ್ಲೀಮರು ಬೀದಿಗೆ ಬಂದಾಗ ಹಸಿರು ಬಾವುಟ ಹಿಡಿದು ಬರ್ತಾರೆ, ಅಲ್ಲಾಹು ಅಕ್ಬರ್ ಘೋಷಣೆ ಮೊಳಗಿಸುತ್ತಾರೆ ,ಜೊತೆಗೆ ದೊಂಬಿ, ದಂಗೆ ಏಳ್ತಾರೆ ಎಂದು ಭಾವಿಸಿದ್ದರು. ಅತ್ಯಂತ ಶಾಂತಿಯಿಂದ, ಸಂಯಮದಿಂದ ಜಾಮಿಯಾದಿಂದ ಜಂತರ್ ಮಂತರ್ ವರೆಗೂ ಮೆರವಣಿಗೆ ಹೊರಟಿದ್ದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದರು ಸಹಿತ ಶಾಂತ ರೀತಿಯಲ್ಲಿ ಲಕ್ಷಾಂತರ ಜನ ಸಮೂಹ ದೊಡ್ಡ ಹೋರಾಟ ನಡೆಸಿತು. ಅದು ನನ್ನ ಮಟ್ಟಿಗೆ ಮತ್ತೊಂದು ಸ್ವಾತಂತ್ರ್ಯ ಹೋರಾಟ ಸಂಗ್ರಾಮ. ವಕ್ಫ್ ಎಂದರೆ ಅಲ್ಲಾಹನ ಹೆಸರಿನಲ್ಲಿ ಧಾರ್ಮಿಕ ಕೆಲಸಗಳಿಗಾಗಿ ಮೀಸಲಿಡುವ, ಶಾಶ್ವತವಾಗಿ ಕೊಟ್ಟುಬಿಡುವಂತಹ ಚಿರಾಸ್ತಿ ಅಥವಾ ಚರಾಸ್ತಿಯನ್ನು ವಕ್ಫ್ ಎನ್ನುತ್ತಾರೆ. ಯಾಕಂದ್ರೆ ಇದು ಸಮುದಾಯದ ಒಳಿತಿಗಾಗಿ ಕೊಟ್ಟಿರುವಂತಹ ವಿಚಾರ ” ಎಂದರು.
ಸಮಾವೇಶದಲ್ಲಿ ಮಾಜಿ ಪೊಲೀಸ್ ಅಧಿಕಾರಿ ಸುಹೆಲ್ ಅಹಮದ್ ಮರೂರು ಸಂವಿಧಾನ ಪೀಠಿಕೆ ಭೋದಿಸಿ ‘ ಯಾರಿಂದಲೂ ವಕ್ಫ್ ಆಸ್ತಿ ಕಸಿದು ಕೊಳ್ಳಲು ಸಾಧ್ಯವಿಲ್ಲ. ಎಷ್ಟೇ ಹುನ್ನಾರ ನಡೆಸಿದರು, ಆಸ್ತಿ ಕಬಳಿಸಲು ಯತ್ನಿಸಿದರು ಹೋರಾಟದ ಮೂಲಕ ಅದನ್ನೆನಲ್ಲ ಎದುರಿಸಲಿದ್ದೇವೆ. ಕಾನೂನಾತ್ಮಕ ಹೋರಾಟಕ್ಕೆ ಸನ್ನದ್ಧರಾಗಿದ್ದೇವೆ.ಮುಸ್ಲೀಮರ ಆಸ್ತಿ ಕಬಳಿಸುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಲಿದೆ. ಮುಕೇಶ್ ಅಂಬಾನಿ ಕುಟುಂಬ ವಾಸಿಸುತ್ತಿರುವ 38 ಅಂತಸ್ತಿನ ಅಂಟಿಲಿಯ ಕೂಡ ವಕ್ಫ್ ಆಸ್ತಿಯಾಗಿದ್ದು ಅದರ ರಕ್ಷಣೆ ಮಾಡುವ ನಿಟ್ಟಿನಲ್ಲಿ ಇಂತಹ ಹೆಜ್ಜೆ ಇಟ್ಟಿದ್ದಾರೆ ‘ ಎಂದು ಆರೋಪಿಸಿದರು.

ಜಮಾಅತೆ ಇಸ್ಲಾಮಿ ಹಿಂದ್ ನ ಮುಖಂಡರಾದ ಅಕ್ಬರ್ ಆಲಿಯವರು ಮಾತನಾಡಿ ‘ ವಕ್ಫ್ ದಾನ ಮಾಡ ಬೇಕಿದ್ದರೆ ಅದು ಪವಿತ್ರವಾದ ಸಂಪತ್ತು ಆಗಿರಬೇಕು. ಹರಾಮ್ ಆಗಿದ್ದರೆ ಅದು ಸ್ವೀಕಾರ್ಹವಲ್ಲ. ವಕ್ಫ್ ಆಸ್ತಿ ಪವಿತ್ರವಾದದ್ದು ಯಾವುದೇ ಲೋಪ, ದೋಷ ಹೊಂದಿಲ್ಲ. ಆಸ್ತಿಯ ದುರುಪಯೋಗ ಹಿಂದಿನಿಂದಲೂ ಎಲ್ಲರಿಂದಲೂ ಆಗಿದೆ. ಮುಸ್ಲೀಮ್ ನಾಯಕರಿಂದಲೂ ಆಗಿದೆ ಇದನ್ನೆಲ್ಲಾ ಬಿಡಿಸುವ ಕೆಲಸವಾಗಬೇಕು. ಅಲ್ಲಾ ಯಾರಿಂದಲೂ ಏನನ್ನು ಕೇಳುವುದಿಲ್ಲ, ಬಯಸುವುದಿಲ್ಲ. ಅಲ್ಲಾನಿಗೆ ಸೇರಿದ್ದು ಅಂದರೆ ಅಲ್ಲಾನಿಗೆ ಕೊಟ್ಟಿದ್ದು ಅನ್ನುವುದಲ್ಲ. ಅಲ್ಲಾ ಎಲ್ಲರಿಗೂ ಕೊಡುವವನು ‘ ಎಂದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ವಖ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಮಾವೇಶ : ಅಯೂಬ್ ಖಾನ್
ಕಾರ್ಯಕ್ರಮದಲ್ಲಿ ಶಾಸಕರಾದ ತನ್ವಿರ್ ಶೇಟ್, ಹರೀಶ್ ಗೌಡ, ವಸ್ತು ಪ್ರಾಧಿಕಾರ ಅಧ್ಯಕ್ಷ ಅಯೂಬ್ ಖಾನ್, ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ದಸಂಸ ಮುಖಂಡ ಬೆಟ್ಟಯ್ಯ ಕೋಟೆ, ಮೌಲಾನ ಮುಫ್ತಿ ತಾಜುದ್ದಿನ್, ಮೌಲಾನ ಉಷ್ಮಾನ್ ಷರೀಫ್, ಜಾಫವುಲ್ಲ, ಅಯೂಬ್ ಅನ್ಸಾರಿ, ಫಾರೂಕ್ ನಸ್ಟರ್, ಉಗ್ರ ನರಸಿಂಹೇ ಗೌಡ, ಸವಿತಾ ಪಾ ಮಲ್ಲೇಶ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್, ಜಿಲ್ಲಾಧ್ಯಕ್ಷ ರಫಾತುಲ್ಲ, ಕಲೀಮ್ ಅಹಮದ್ ಸೇರಿದಂತೆ ಇನ್ನಿತರರು ಇದ್ದರು.