ವೃದ್ಧ ದಂಪತಿಗಳ ವಿರುದ್ಧ ಅವರ ಸೊಸೆ ದಾಖಲಿಸಿದ್ದ ವರದಕ್ಷಿಣೆ ಕಿರುಕುಳ ಪ್ರಕರಣವನ್ನು ನ್ಯಾಯಾಧೀಶರು ರಸ್ತೆಯಲ್ಲೇ ಆಲಿಸಿ, ರದ್ದುಗೊಳಿಸಿದ್ದಾರೆ. ವೃದ್ಧ ದಂಪತಿಗಳು ಅನಾರೋಗ್ಯ ಕಾರಣದಿಂದ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಿ ಬರಲಾಗದ ಸ್ಥಿತಿಯನ್ನು ಕಂಡು ನ್ಯಾಯಾಧೀಶರೇ ಪೀಠದಿಂದ ಇಳಿದುಬಂದು ರಸ್ತೆಯಲ್ಲೇ ವಿಚಾರಣೆ ನಡೆಸಿದ್ದಾರೆ.
ಇಂಥಹದೊಂದು ಅಪರೂಪದ ಘಟನೆ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಬೋಧನ್‌ನಲ್ಲಿ ನಡೆದಿದೆ. ಬೋಧನ್‌ನ ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ (ಜೆಎಫ್‌ಸಿಎಂ) ವೃದ್ಧ ದಂಪತಿಗಳ ವಿರುದ್ಧದ ವರದಕ್ಷಿಣೆ ಕಿರುಕುಳ ಪ್ರಕರಣದ ವಿಚಾರಣೆ ಇತ್ತು. ನ್ಯಾಯಾಲಯಕ್ಕೆ ದಂಪತಿಗಳು ಆಟೋದಲ್ಲಿ ಬಂದಿದ್ದರು. ಆದರೆ, ಅವರಿಗೆ ನ್ಯಾಯಾಲಯದ ಮೆಟ್ಟಿಲುಗಳನ್ನು ಹತ್ತಲು ಸಾಧ್ಯವಿರಲಿಲ್ಲ. ಹೀಗಾಗಿ, ನ್ಯಾಯಾಲಯದ ನ್ಯಾಯಾಧೀಶ ಇ ಸಾಯಿ ಶಿವ ಅವರು ತಮ್ಮ ಪೀಠದಿಂದ ಎದ್ದು ಹೊರಬಂದು ರಸ್ತೆಯಲ್ಲಿ ವೃದ್ಧರ ವಾದವನ್ನು ಆಲಿಸಿದ್ದಾರೆ.
ನಿಜಾಮಾಬಾದ್ ಜಿಲ್ಲೆಯ ರಾಯ್ಕೂರ್ ಗ್ರಾಮದ ವೃದ್ಧ ನಿವಾಸಿಗಳಾದ ಸಾಯಮ್ಮ ಮತ್ತು ಗಂಗಾರಾಮ್ ವಿರುದ್ಧ ಅವರ ಸೊಸೆ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆಗೆ ದಂಪತಿಗಳು ನಿಯಮಿತವಾಗಿ ಹಾಜರಾಗುತ್ತಿದ್ದರು. ಆದರೆ, ಅನಾರೋಗ್ಯಕ್ಕೆ ತುತ್ತಾಗಿದ್ದ ಕಾರಣ, ದೈಹಿಕ ದೌರ್ಬಲ್ಯದಿಂದಾಗಿ, ಅವರಿಗೆ ನ್ಯಾಯಾಲಯದ ಒಳಗೆ ಹೋಗಲು ಸಾಧ್ಯವಾಗಲಿಲ್ಲ.
ಈ ಲೇಖನ ಓದಿದ್ದೀರಾ?: ನಿಜಕ್ಕೂ ಜಾತಿಗಣತಿ ನಡೆಸುತ್ತದಾ ಬಿಜೆಪಿ; ಸಿದ್ಧವಿರುವ ವರದಿ ಜಾರಿ ಮಾಡದೆ ವಿಳಂಬ ಮಾಡುತ್ತಿರುವುದೇಕೆ ಕಾಂಗ್ರೆಸ್?
ಅವರ ಪರಿಸ್ಥಿತಿಯ ಬಗ್ಗೆ ತಿಳಿದ ನ್ಯಾಯಾಧೀಶ ಸಾಯಿ ಶಿವ ಅವರು ನ್ಯಾಯಾಲಯದ ನಿಯಮಗಳಿಗೆ ವಿನಾಯಿತಿ ನೀಡುವುದು ಸೂಕ್ತವೆಂದು ತೀರ್ಮಾಸಿದರು. ನ್ಯಾಯಾಲಯದ ಕೋಣೆಯಿಂದ ಹೊರಬಂದು ಆವರಣದಲ್ಲಿ ವಿಚಾರಣೆ ನಡೆಸಿದರು. ಪರ-ವಿರೋಧ ವಾದವನ್ನು ಆಲಿಸಿದ ನ್ಯಾಯಾಧೀಶರು, ‘ವೃದ್ಧ ದಂಪತಿಗಳ ತಪ್ಪಿಲ್ಲ’ ಎಂದು ಘೋಷಿಸಿ, ಅವರು ವಿರುದ್ಧ ಪ್ರಕರಣವನ್ನು ವಜಾಗೊಳಿಸಿದರು.
ನ್ಯಾಯಾಧೀಶರು ನ್ಯಾಯಾಲಯದ ಆವರಣದಲ್ಲಿಯೇ ವಿಚಾರಣೆ ನಡೆಸಿದ ಅಪರೂಪದ ನಡೆ, ವಿಶಿಷ್ಟ ಮತ್ತು ವಿನಮ್ರತೆಯ ವರ್ತನೆಯನ್ನು ಸಾರ್ವಜನಿಕರು, ನೆಟ್ಟಿಗರು ಪ್ರಸಂಶಿಸಿದ್ದಾರೆ. ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.