‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮೇ 5ರಂದು ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಕರವೇ, ಕನ್ನಡಿಗರಿಂದ ಭಯೋತ್ಪಾದಕ ದಾಳಿಗಳು ನಡೆಯುತ್ತಿದೆ ಎಂದು ಹೇಳಿರುವ ವಿಕೃತ ಮನಸ್ಸಿನ ಗಾಯಕ ಸೋನು ನಿಗಮ್ ಬಂಧನಕ್ಕೆ ಒತ್ತಾಯಿಸಿ ಕರವೇ ಬೃಹತ್ ಪ್ರತಿಭಟನೆ ನಡೆಸಲಿದೆ ಎಂದು ತಿಳಿಸಿದೆ.
ಇದನ್ನು ಓದಿದ್ದೀರಾ? ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ಉಗ್ರರ ದಾಳಿ ನಡೆಯಿತು: ವಿವಾದವಾದ ಸೋನು ನಿಗಮ್ ಮಾತು
ಏಪ್ರಿಲ್ 25ರಂದು ಬೆಂಗಳೂರಿನ ಅವಲಹಳ್ಳಿಯ ಖಾಸಗಿ ಕಾಲೇಜೊಂದರಲ್ಲಿ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಕನ್ನಡದಲ್ಲಿ ಹಾಡುವಂತೆ ಕೇಳಿದ ವಿದ್ಯಾರ್ಥಿಗಳ ಮೇಲೆ ಹರಿಹಾಯ್ದ ಸೋನು ನಿಗಮ್, ‘ಕನ್ನಡ ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ಹೇಳಿದ್ದರು.
ಸೋನು ನಿಗಮ್ ಈ ಹೇಳಿಕೆಯ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ಈಗಾಗಲೇ ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದೆ. ಈ ದೂರಿನ ಆಧಾರದಲ್ಲಿ ಗಾಯಕನ ವಿರುದ್ಧ ಎಫ್‌ಐಆರ್ ಕೂಡಾ ದಾಖಲಾಗಿದೆ.
“ಕನ್ನಡಿಗರನ್ನು ಇಷ್ಟು ಕೀಳಾಗಿ ನಿಂದಿಸಿರುವ ಸೋನು ನಿಗಮ್ ಮತ್ತೆ ವಿಡಿಯೋ ಹರಿಬಿಟ್ಟಿದ್ದು. ಕನ್ನಡಿಗರನ್ನು ಗಲೀಜು ಜನರೆಂದು ಹೀಯಾಳಿಸಿದ್ದಾನೆ. ಅವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಕರವೇ ಒತ್ತಾಯಿಸಿ ಪ್ರತಿಭಟನೆ ಹಮ್ಮಿಕೊಂಡಿದೆ.
