ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಪಕ್ಷ ಭೇದ ಬಿಟ್ಟು ಒಗ್ಗಟ್ಟಾಗಿ: ಗುರುಮಹಾಂತ ಸ್ವಾಮೀಜಿ ಕರೆ

Date:

Advertisements

ಲಿಂಗಾಯತರನ್ನು ಹಿಂದು ಧರ್ಮದ ಭಾಗ ಎಂಬಂತೆ ಬಿಂಬಿಸಲಾಗುತ್ತಿದೆ. ಆದರೆ, ಲಿಂಗಾಯತರು ಹಿಂದುಗಳಲ್ಲ. ಲಿಂಗಾಯತ ಸ್ವತಂತ್ರ ಧರ್ಮವಾಗಿದ್ದು ಬಸವಣ್ಣ ಪ್ರತಿಪಾದಿಸಿದ ಲಿಂಗಾಯತ ಧರ್ಮವನ್ನು ಸ್ವತಂತ್ರ ಧರ್ಮವಾಗಿ ಅನುಸರಿಸಿ ಉಳಿಸಬೇಕಾಗಿದೆ ಎಂದು ಚಿತ್ತರಂಗಿ ಇಳಕಲ್ ಸಂಸ್ಥಾನ ಮಠದ ಗುರುಮಹಾಂತ ಸ್ವಾಮೀಜಿ ಹೇಳಿದರು.

ಬೆಂಗಳೂರಿನ ಗಾಂಧಿ ಭವನದಲ್ಲಿ ಬಸವಪರ ಸಂಘಟನೆಗಳು ಹಾಗೂ ಉತ್ತರ ಕರ್ನಾಟಕ ನಾಗರಿಕ ಅಭಿವೃದ್ಧಿ ಸಂಘಗಳು ಆಕೃತಿ ಪುಸ್ತಕ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಜಿ.ಬಿ ಪಾಟೀಲ ಅವರ ‘ಲಿಂಗಾಯತ ಚಳವಳಿ 2017-18’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

“ದೇಶದ ವಿಷಯ ಬಂದಾಗ ಎಲ್ಲ ಧರ್ಮಗಳ ಜನರು ಒಟ್ಟು ಸೇರಿ ದೇಶವನ್ನು ಉಳಿಸಬೇಕು. ಧರ್ಮವನ್ನು ಆ ಧರ್ಮದ ಜನರೇ ಉಳಿಸಬೇಕಾಗಿದೆ. ಲಿಂಗಾಯತ ಧರ್ಮವನ್ನು ಲಿಂಗಾಯತರು ಒಟ್ಟು ಸೇರಿ ಉಳಿಸಬೇಕಾಗಿದೆ. ಲಿಂಗಾಯತರಲ್ಲಿ ಯಾವುದೇ ಒಳ ಪಂಗಡಗಳಿದ್ದರೂ ಭಿನ್ನಾಭಿಪ್ರಾಯ ಬಿಟ್ಟು ಒಗ್ಗಟ್ಟಾಗಬೇಕು. ಮುಂದಿನ ಜನಗಣತಿಯಲ್ಲಿ ಲಿಂಗಾಯತರು ಎಲ್ಲರೂ ಧರ್ಮದ ಕಾಲಂನಲ್ಲಿ ಲಿಂಗಾಯತ ಧರ್ಮ ಎಂದೇ ನೊಂದಾಯಿಸಬೇಕು” ಎಂದರು.

Advertisements

“ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ನಮ್ಮಲ್ಲಿರುವ ರಾಜಕೀಯ ಭಿನ್ನಾಭಿಪ್ರಾಯಗಳು ಬಹುದೊಡ್ಡ ಸಮಸ್ಯೆಯಾಗಿದೆ. ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆಗೆ ಎಲ್ಲ ರಾಜಕೀಯ ಪಕ್ಷಗಳ ಲಿಂಗಾಯತ ನಾಯಕರು ಪಕ್ಷಾತೀತವಾಗಿ ಹೋರಾಟದ ಪರ ನಿಲ್ಲಬೇಕು. ಧರ್ಮ ಉಳಿದರೆ ಮಾತ್ರ ನಾವು, ನಮ್ಮ ಮುಂದಿನ ತಲೆಮಾರು ಉಳಿಯಲು ಮತ್ತು ನೆಮ್ಮದಿಯಿಂದ ಇರಲು ಸಾಧ್ಯ” ಎಂದು ಅವರು ಪ್ರತಿಪಾದಿಸಿದರು.

“ಲಿಂಗಾಯತರು ಹಿಂದುಗಳ ವಿರೋಧಿಯಲ್ಲ. ಲಿಂಗಾಯತರನ್ನು ಹಿಂದು ಧರ್ಮದ ಭಾಗ ಎಂದು ಬಿಂಬಿಸುವ ಕೆಲಸ ಕೆಲವು ಶಕ್ತಿಗಳಿಂದ ನಡೆಯುತ್ತಿದೆ. ಆದರೆ, ನಾವು ಬ್ರಾಹ್ಮಣ, ಕ್ಷತ್ರೀಯ, ವೈಶ್ಯ, ಶೂದ್ರ ವರ್ಗಕ್ಕೆ ಸೇರಿದವರಲ್ಲ. ಚಾರ್ತುವರ್ಣವನ್ನು ಧಿಕ್ಕರಿಸಿ ಪ್ರತ್ಯೇಕಗೊಂಡ ಧರ್ಮವಾಗಿದೆ ಲಿಂಗಾಯತ ಧರ್ಮ. ಆದರೂ ನಮ್ಮನ್ನು ಶೂದ್ರ ವರ್ಗಕ್ಕೆ ಸೇರಿಸಲಾಗಿದೆ. ಇದನ್ನು ಸಮಾಜದ ಜನರು ಅರ್ಥ ಮಾಡಿಕೊಳ್ಳಬೇಕು” ಎಂದು ಅವರು ಹೇಳಿದರು.

ಕೃತಿ ಬಿಡುಗಡೆ ಮಾಡಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, “ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಮುಂದೆ ನಾವೇನು ಮಾಡಬೇಕು, ಯಾವ ರೀತಿಯ ಹೋರಾಟ ಮಾಡಬೇಕು ಎಂದು ನಮಗೆ ಗೊತ್ತಾಗಬೇಕಾದರೆ ನಮಗೆ ಹಿಂದಿನ ಹೋರಾಟದ ಪರಿಚಯವಾಗಬೇಕು. ‘ಇತಿಹಾಸ ಮರೆತರೆ ಇತಿಹಾಸ ಸೃಷ್ಟಿಸಲು ಸಾಧ್ಯವಿಲ್ಲ’ ಎಂಬ ಅಂಬೇಡ್ಕರ್ ನುಡಿಯಂತೆ, ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಇತಿಹಾಸವನ್ನು ನೆನೆಪಿಸುವ ಕಾರ್ಯವನ್ನು ಜಿ.ಬಿ ಪಾಟೀಲ್ ಅವರು ಈ ಕೃತಿ ಮೂಲಕ ಮಾಡಿದ್ದಾರೆ. ಇದು ಲಿಂಗಾಯತರ ಮುಂದಿನ ಹೋರಾಟಕ್ಕೆ ದಾರಿದೀಪವಾಗಲಿ” ಎಂದರು.

ಧಾರ್ಮಿಕ ಅಲ್ಪಸಂಖ್ಯಾತರು ಎಂದು ಘೋಷಿಸಿ ಅಲ್ಪಸಂಖ್ಯಾತರಿಗೆ ನೀಡುವ ಎಲ್ಲ ಸವಲತ್ತುಗಳನ್ನು ನೀಡಲು ಲಿಂಗಾಯತ ಧರ್ಮ ಅರ್ಹವಾಗಿದೆ. ಈ ಬಗ್ಗೆ ಲಿಂಗಾಯತ ಸ್ವತಂತ್ರ ಧರ್ಮದ ಆಯೋಗ ಸರಕಾರಕ್ಕೆ ಶಿಫಾರಸು ಮಾಡಿದೆ. ರಾಜ್ಯ ಸರ್ಕಾರ ಇದನ್ನು ಪರಿಗಣಿಸಿದರೆ ಕೇಂದ್ರ ಸರ್ಕಾರ ಇದನ್ನು ಪರಿಗಣಿಸಿಲ್ಲ. ಹೋರಾಟಗಳು ಏಳುಬೀಳನ್ನು ಕಾಣುತ್ತದೆ. ಜನಪರ ಚಳವಳಿಗೆ ಜನಪರ ಹೋರಾಟವೇ ಮದ್ದು. ಹೋರಾಟದಲ್ಲಿ ಜನಸಾಮಾನ್ಯರು ಭಾಗವಹಿಸುವಿಕೆ ಅತೀ ಮುಖ್ಯ” ಎಂದರು.

ಈ ಸುದ್ದಿ ಓದಿದ್ದೀರಾ?: ಎಟಿಎಂ ಶುಲ್ಕ ಹೆಚ್ಚಳದಿಂದ ರೈಲ್ವೆ ಟಿಕೆಟ್‌ ಬುಕ್ಕಿಂಗ್‌ ಅವಧಿ ಇಳಿಕೆವರೆಗೆ: ಆರ್ಥಿಕ ಬದಲಾವಣೆಗಳ ಪರಿಣಾಮಗಳೇನು?

ಸಾಣೇಹಳ್ಳಿ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, “ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟ ಸ್ವಾಮೀಜಿಗಳು, ರಾಜಕಾರಣಿಗಳು, ಸಮುದಾಯದ ಪ್ರಮುಖರಿಗೆ ಮಾತ್ರ ಸೀಮಿತವಾಗಬಾರದು. ಈ ಹೋರಾಟದಲ್ಲಿ ಸಮುದಾಯದ ಪ್ರತೀಯೊಬ್ಬರು ಕೂಡ ಭಾಗವಹಿಸಬೇಕು. ಸಮುದಾಯದ ಸಾಮಾನ್ಯ ಜನರು ಕೂಡ ಹೋರಾಟದಲ್ಲಿ ಭಾಗವಹಿಸಿದರೆ ಹೋರಾಟವು ನಿರ್ಣಾಯಕ‌ ಪ್ರಭಾವ ಬೀರುತ್ತದೆ” ಎಂದರು.

ವಿಧಾನ ಪರಿಷತ್ತಿನ ಸಭಾಪತಿಯೂ ಆದ, ಜಾಗತಿಕ ಲಿಂಗಾಯತ ಮಹಾಸಭಾದ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಬಿ ಹೊರಟ್ಟಿ ಮಾತನಾಡಿ, “ನಮ್ಮ ನಡುವಿನ ಒಗ್ಗಟ್ಟಿನ ಕೊರತೆಯಿಂದ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಯಶಸ್ವಿ ಕಾಣಲು ಸಾಧ್ಯವಾಗಿಲ್ಲ. ಮುಂದಿನ ಪೀಳಿಗೆ ನೆಮ್ಮದಿಯಿಂದ ಬದುಕಬೇಕಾದರೆ ಲಿಂಗಾಯತ ಪ್ರತ್ಯೇಕ ಧರ್ಮವಾಗಲೇಬೇಕು. ಯಾವುದೇ ಭಿನ್ನಾಭಿಪ್ರಾಯಗಳು ಇದ್ದರೂ ಪ್ರತ್ಯೇಕ ಧರ್ಮದ ಹೋರಾಟದಲ್ಲಿ ಎಲ್ಲರೂ ಸಂಘಟಿತರಾಗಬೇಕು” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಎಸ್.ಎಂ ಜಾಮದಾರ, “ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟಕ್ಕೆ ಶತಮಾನದ ಇತಿಹಾಸ ಇದೆ. 2017-18ರಲ್ಲಿ ನಡೆದ ಚಳವಳಿಯ ಪ್ರತಿಯೊಂದು ಘಟನೆಯನ್ನು ಜಿ.ಬಿ ಪಾಟೀಲ್ ಅವರು ಯಥಾವತ್ತಾಗಿ ಈ ಕೃತಿಯಲ್ಲಿ ದಾಖಲಿಸಿದ್ದಾರೆ. ಇದೊಂದು ಐತಿಹಾಸಿಕ ದಾಖಲೆ ಗ್ರಂಥವಾಗಿದೆ. ಮುಂದಿನ ಹೋರಾಟಕ್ಕೆ ಇದು ದಾರಿದೀಪವಾಗಲಿದೆ” ಎಂದರು.

ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಜಿ.ಪ್ರಶಾಂತ ನಾಯಕ ಕೃತಿಯ ಬಗ್ಗೆ ಮಾತನಾಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಶಾಸಕ ಬಿ.ಆರ್.ಪಾಟೀಲ್ ಉಪಸ್ಥಿತರಿದ್ದರು. ಮಾಜಿ ಸಚಿವ, ಜಾಗತಿಕ ಲಿಂಗಾಯತ ಮಹಾಸಭೆಯ ಸಂಸ್ಥಾಪಕ ಎ.ಬಿ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ನಾವು ಯಾರ ಪರವೂ ಇಲ್ಲ; ನ್ಯಾಯದ ಪರ: ಡಿಸಿಎಂ ಡಿ.ಕೆ.ಶಿವಕುಮಾರ್

"ನಾವು ಧರ್ಮಸ್ಥಳದವರ ಪರವೂ ಇಲ್ಲ, ಇವರ ಪರವೂ ಇಲ್ಲ. ನಾವು ನ್ಯಾಯದ...

ಆಗಸ್ಟ್ 23ರಿಂದ ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು...

ಬೀದರ್‌ | ಈ ತಾಂಡಾಕ್ಕೆ ದಾರಿ ಯಾವುದಯ್ಯಾ?

ʼನಾವು ಹುಟ್ಟಿನಿಂದ ಅಲ್ಲ, ಈ ತಾಂಡಾ ಹುಟ್ಟಿನಿಂದಲೂ ರಸ್ತೆಯೇ ಕಂಡಿಲ್ಲ. ಸ್ವಲ್ಪ...

ಕರಾವಳಿಯಲ್ಲಿ ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ: ಡಿಸಿಎಂ ಡಿ ಕೆ ಶಿವಕುಮಾರ್

"ಕರಾವಳಿ ಭಾಗದಲ್ಲಿ ಉದ್ಯೋಗ ಸೃಷ್ಟಿಗೆ ಹಾಗೂ ಪ್ರವಾಸೋದ್ಯಮ ಬೆಳವಣಿಗೆಗೆ ಪ್ರತ್ಯೇಕ ನೀತಿ...

Download Eedina App Android / iOS

X