ಬಿಜೆಪಿ ನಾಯಕನೆಂದು ಹೇಳಲಾದ ವ್ಯಕ್ತಿಯೊಬ್ಬ ಬುಡಕಟ್ಟು ಕಾರ್ಮಿಕನ ಮೇಲೆ ಮೂತ್ರ ವಿಸರ್ಜನೆ ಮಾಡಿದ ಘಟನೆಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಈ ಅಮಾನವೀಯ ಕೃತ್ಯದಿಂದ ಆದಿವಾಸಿಗಳು ಮತ್ತು ದಲಿತರ ಮೇಲಿನ ಬಿಜೆಪಿ ದ್ವೇಷದ ನೈಜ ಮುಖ ಬಯಲಾಗಿದೆ. ಬಿಜೆಪಿ ಆಡಳಿತದಲ್ಲಿ ಬುಡಕಟ್ಟು ಸಹೋದರ ಸಹೋದರಿಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ. ಮಧ್ಯಪ್ರದೇಶದ ಬಿಜೆಪಿ ನಾಯಕನ ಅಮಾನವೀಯ ಕೃತ್ಯದಿಂದ ಇಡೀ ಮಾನವ ಸಮುದಾಯ ತಲೆತಗ್ಗಿಸುವಂತಾಗಿದೆ” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಈ ಕೃತ್ಯವನ್ನು ಅಮಾನವೀಯ ಎಂದು ಕರೆದಿರುವ ರಾಹುಲ್ ಗಾಂಧಿ ಸಹೋದರಿ ಹಾಗೂ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಕೇಸರಿ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಧ್ಯ ಪ್ರದೇಶದಲ್ಲಿ ಬುಡಕಟ್ಟು ಯುವಕನ ವಿರುದ್ಧ ಬಿಜೆಪಿ ಶಾಸಕರೊಬ್ಬರ ಆಪ್ತ ವ್ಯಕ್ತಿಯೊಬ್ಬರು ನಡೆಸಿದ ಅಮಾನವೀಯ ಮತ್ತು ಅಸಹ್ಯಕರ ಕೃತ್ಯ ಅತ್ಯಂತ ನಾಚಿಕೆಗೇಡಿನ ಸಂಗತಿ ಎಂದು ಅವರು ಹೇಳಿದ್ದಾರೆ.
“ರಾಜ್ಯದಲ್ಲಿ 18 ವರ್ಷಗಳ ಬಿಜೆಪಿ ಆಡಳಿತದಲ್ಲಿ 30,400 ಆದಿವಾಸಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಮುನ್ನೆಲೆಗೆ ಬಂದಿವೆ. ಬಿಜೆಪಿ ಆಡಳಿತದಲ್ಲಿ ಬುಡಕಟ್ಟು ಹಿತಾಸಕ್ತಿಗಳ ಬಗ್ಗೆ ಕೇವಲ ಪೊಳ್ಳು ಹೇಳಿಕೆಗಳು ಮತ್ತು ಪೊಳ್ಳು ಮಾತುಗಳು ಏಕೆ ನಡೆಯುತ್ತಿವೆ? ಆದಿವಾಸಿಗಳ ಮೇಲಿನ ದೌರ್ಜನ್ಯವನ್ನು ತಡೆಯಲು ಸರ್ಕಾರ ನಿಜವಾದ ಕ್ರಮಗಳನ್ನು ತೆಗೆದುಕೊಳ್ಳುತ್ತದೆಯೇ?” ಎಂದು ಪ್ರಶ್ನಿಸಿದ್ದಾರೆ.
ಘಟನೆ ಬಗ್ಗೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಈ ವ್ಯಕ್ತಿಯ ಕೃತ್ಯ ಹೇಯ, ಖಂಡನೀಯ ಮತ್ತು ಮಾನವೀಯತೆಯ ಮೇಲೆ ಕಳಂಕ. ಕಾಂಗ್ರೆಸ್ ಬೇಡಿಕೆಯಂತೆ ಬುಲ್ಡೋಜರ್ ಕ್ರಮ ಕೈಗೊಳ್ಳುವುದಿಲ್ಲ. ಅತಿಕ್ರಮಣ ನಡೆದಾಗ ಮಾತ್ರ ಬುಲ್ಡೋಜರ್ ಬಳಸಲಾಗುವುದು. ಯಾವುದೇ ಹೆಸರನ್ನು ತೆಗೆದುಕೊಳ್ಳದೆ ಬುಲ್ಡೋಜರ್ ಕ್ರಮದ ಬಗ್ಗೆ ಮಾತನಾಡಿದ್ದರಿಂದ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಮೂತ್ರ ವಿಸರ್ಜಿಸಿದ ಬಿಜೆಪಿ ಆರೋಪಿಯ ಮನೆ ಧ್ವಂಸಗೊಳಿಸಿದ ಮಧ್ಯಪ್ರದೇಶ ಸರ್ಕಾರ
ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 294 (ಅಶ್ಲೀಲ ಕೃತ್ಯಗಳು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶಪೂರ್ವಕ ಅವಮಾನ) ಮತ್ತು ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದರ ಜೊತೆ ಆರೋಪಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್‌ಎಸ್‌ಎ) ಅನ್ನು ಜಾರಿಗೊಳಿಸಲಾಗಿದ್ದು, ಅತಿಕ್ರಮವಾಗಿ ನಿರ್ಮಿಸಲಾಗಿದ್ದ ಆರೋಪಿಯ ಮನೆಯನ್ನು ಕೂಡ ಕೆಡವಲಾಗಿದೆ.
ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಕೂಡ ಟ್ವೀಟ್ ಮಾಡಿ, “ರಾಷ್ಟ್ರೀಯ ಭದ್ರತಾ ಕಾಯಿದೆ (ಎನ್ಎಸ್ಎ) ಅಡಿಯಲ್ಲಿ ಶುಕ್ಲಾ ವಿರುದ್ಧ ಆರೋಪ ಹೊರಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸರ್ಕಾರವು ಆರೋಪಿಗಳಿಗೆ ಕಠಿಣವಾದ ಶಿಕ್ಷೆಯನ್ನು ನೀಡುವ ಒಂದು ನಿದರ್ಶನ” ಎಂದು ತಿಳಿಸಿದ್ದಾರೆ.
ಮಂಗಳವಾರ ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ಬಿಜೆಪಿ ಶಾಸಕ ಕೇದಾರ್ ನಾಥ್ ಶುಕ್ಲಾ ಅವರ ಬೆಂಬಲಿಗ ಪ್ರವೇಶ್ ಶುಕ್ಲಾ ಆದಿವಾಸಿ ಬುಡಕಟ್ಟು ಯುವಕನ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು.