ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮುಂದಿನ ಜನಗಣತಿ ಜೊತೆಗೆ ಜಾತಿಗಣತಿಯನ್ನೂ ನಡೆಸುವುದಾಗಿ ಘೋಷಿಸಿದೆ. ಇದು ತಮ್ಮ ಗೆಲುವು ಎಂದು ಕಾಂಗ್ರೆಸ್ ಆದಿಯಾಗಿ ಕೆಲವು ವಿಪಕ್ಷಗಳು ಸಂಭ್ರಮಿಸುತ್ತಿವೆ. ಆದರೆ, ಕೇಂದ್ರ ಸರ್ಕಾರ ನಿಜಕ್ಕೂ ಜಾತಿಗಣತಿ ನಡೆಸುತ್ತದೆಯೇ ಎಂಬುದು ಪ್ರಶ್ನೆ. ಬಿಜೆಪಿ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ, ಜಾತಿಗಣತಿಯನ್ನು ವಿರೋಧಿಸುತ್ತದೆ ಎಂಬುದು ಜಗಜ್ಜಾಹೀರಾಗಿರುವ ವಿಚಾರ. ಹೀಗಿರುವಾಗ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಜಾತಿಗಣತಿ ನಡೆಸಲು ಸಾಧ್ಯವೇ? ಸರ್ಕಾರದ ಘೋಷಣೆ ಸತ್ಯವೇ?
ಈ ಹಿಂದೆ, ಭಾರತದಲ್ಲಿ ಸಾಮಾಜಿಕ ನ್ಯಾಯವನ್ನು ಸಾಧಿಸುವ ಮತ್ತು ಇತರ ಹಿಂದುಳಿತ ವರ್ಗ (ಒಬಿಸಿ) ಪ್ರಮಾಣವನ್ನು ಗುರುತಿಸಲು ಮಂಡಲ್ ಆಯೋಗವು ಸಮೀಕ್ಷೆ ನಡೆಸಿ ಸಿದ್ದಪಡಿಸಿದ್ದ ‘ಮಂಡಲ್ ವರದಿ’ಯನ್ನು ಬಿಜೆಪಿ ವಿರೋಧಿಸಿತ್ತು. ಮಂಡಲ್ ವರದಿಯು ಹಿಂದುತ್ವದ ಐಕ್ಯತೆಯನ್ನು ನಾಶ ಮಾಡುತ್ತದೆ ಎಂದು ಪ್ರತಿಪಾದಿಸಿತ್ತು. ಮಂಡಲ್ ಆಯೋಗವನ್ನು ಕಮಂಡಲೀಕರಣಗೊಳಿಸಿ, ವರದಿಯನ್ನು ನಗಣ್ಯಗೊಳಿಸಲು ಬಿಜೆಪಿ/ಸಂಘಪರಿವಾರವು ರಾಮಜನ್ಮಭೂಮಿ ವಿಚಾರವನ್ನು ಮುನ್ನೆಲೆಗೆ ತಂದಿತು. ಮಾತ್ರವಲ್ಲದೆ, ಇತ್ತೀಚೆಗೆ, ಬಿಹಾರದಲ್ಲಿ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಸರ್ಕಾರವು ಜಾತಿಗಣತಿ ಮಾಡಿದಾಗ, ಅದನ್ನು ಬಿಜೆಪಿ ವಿರೋಧಿಸಿತು. ಆ ನಂತರ, ಒಪ್ಪಿಕೊಂಡು, ಮೌನಕ್ಕೆ ಜಾರಿತು.
ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ಜಾತಿಗಣತಿ ವಿರುದ್ಧವಿರುವ ತನ್ನ ನಿಲುವನ್ನು ಬಿಜೆಪಿ ಬಹಿರಂಗಪಡಿಸಿತ್ತು. ಜಾತಿಗಣತಿಯನ್ನು ಸಂಪತ್ತಿನ ಹಂಚಿಕೆಗೆ ತಳುಕು ಹಾಕಿ, ಜಾತಿಗಣತಿಗೆ ಒತ್ತಾಯಿಸುವವರನ್ನು ಅರ್ಬನ್ ನಕ್ಸಲರು ಎಂದು ಸ್ವತಃ ಪ್ರಧಾನಿ ಮೋದಿ ಅವರೇ ಹೇಳಿದ್ದರು.
ಹೀಗಿರುವಾಗ, ಈಗ ದಿಢೀರನೆ ಜಾತಿಗಣತಿ ನಡೆಸುತ್ತೇವೆಂದು ಬಿಜೆಪಿ ಹೇಳುತ್ತಿದೆ. ಈ ಘೋಷಣೆಯ ಹಿಂದೆ ಚುನಾವಣಾ ಹೊಸ್ತಿಲಿನಲ್ಲಿರುವ ಬಿಹಾರ ಇರಬಹುದು. ಬಿಹಾರದ ಜನರನ್ನು ಬಿಜೆಪಿಯತ್ತ ಸೆಳೆಯಲು ಇಂತಹದ್ದೊಂದು ಘೋಷಣೆ ಮಾಡಿರಲೂಬಹುದು. ಆದರೂ, ಬಿಜೆಪಿ ನಡೆಸುವ ಜಾತಿಗಣತಿ ಹೇಗಿರಲಿದೆ? ಕಾಂಗ್ರೆಸ್ ಹೇಳುತ್ತಿರುವ ಅಥವಾ ಸಾಮಾಜಿಕ ನ್ಯಾಯದ ಉದ್ದೇಶಗಳಿಗೆ ಪೂರಕವಾಗಿರುತ್ತದೆಯೇ? ಈ ಪ್ರಶ್ನೆ ಕೇಳಿಕೊಳ್ಳದೆ ಸಂಭ್ರಮಿಸುವುದು ಮುಟ್ಟಾಳತನ.
ಇದನ್ನೂ ಓದಿ: ದಲಿತ ಸಂಘಟನೆ ಮತ್ತು ರಾಜಕೀಯ ಅಸ್ಮಿತೆ
ಬಹುಮುಖ್ಯ ವಿಚಾರವೆಂದರೆ, ಜಾತಿಗಣತಿ ಯಾಕೆ ಮಾಡಲಾಗುತ್ತದೆ? ಸಾಪೇಕ್ಷವಾದ ಹಿಂದುಳಿದಿರುವಿಕೆಯನ್ನು ಗುರುತಿಸಿ, ಅದಕ್ಕೆ ತಕ್ಕಂತೆ ಸಮುದಾಯಗಳಿಗೆ ಸಂಪನ್ಮೂಲ ಹಂಚುವುದಕ್ಕಾಗಿ. ಒಂದು ಸಮುದಾಯವು ಸಾಪೇಕ್ಷವಾಗಿ ಎಷ್ಟು ಹಿಂದುಳಿದಿದೆ ಎಂಬುದನ್ನು ತಿಳಿದುಕೊಳ್ಳಲು ಆರ್ಥಿಕ, ಸಾಮಾಜಿಕ ವರ್ಗೀಕರಣಕ್ಕೆ ನಿಮಯಗಳು, ಮಾನದಂಡಗಳು ಅಗತ್ಯ. ಅಂತಹ ಮಾನದಂಡಗಳನ್ನು ರೂಪಿಸದೆ, ಸಂಪನ್ಮೂಲ ಹಂಚಿಕೆಗೆ ಅಜೆಂಡಾಗಳೇ ಇಲ್ಲದೆ, ಜಾತಿಗಣತಿ ಮಾಡುವುದರಿಂದ ಉಪಯೋಗವಿಲ್ಲ ಎನ್ನುತ್ತಾರೆ ಚಿಂತಕ ಶಿವಸುಂದರ್.
ಇನ್ನೊಂದು ವಿಚಾರವೆಂದರೆ, ಬಿಹಾರ, ತೆಲಂಗಾಣ ಹಾಗೂ ಕರ್ನಾಟಕದಲ್ಲಿ ರಾಜ್ಯಗಳ ಮಟ್ಟಿಗೆ ಜಾತಿಗಣತಿ ನಡೆದಿದೆ. ಇವುಗಳ ಸಾರ ಆಯಾ ರಾಜ್ಯಗಳಲ್ಲಿ ಒಬಿಸಿ ಮತ್ತು ದಲಿತರ ಸಂಖ್ಯೆ ಪ್ರಬಲ ಜಾತಿಗಳಿಗಿಂತ ಹೆಚ್ಚಿದೆ. ಈ ಸಮುದಾಯಗಳೇ ಬಹುಸಂಖ್ಯಾತರು ಎಂಬುದಾಗಿತ್ತು. ಅದರಲ್ಲೂ, ಒಬಿಸಿಗಳ ಒಳಗೂ ಮುಂದುವರೆದ ಸಮುದಾಯಗಳಿಗಿಂತ ಹಿಂದುಳಿದ ಸಮುದಾಯಗಳ ಜನಸಂಖ್ಯೆಯೇ ಹೆಚ್ಚು ಎಂಬುದನ್ನು ಒತ್ತಿ ಹೇಳಿತ್ತು.
ಈ ವರದಿಗಳನ್ನು ಬಹಿರಂಗಗೊಳಿಸಿ, ಅದಕ್ಕೆ ತಕ್ಕಂತೆ ಸಾಮಾಜಿಕ ನ್ಯಾಯವನ್ನು ಒದಗಿಸುತ್ತೇವೆ ಎಂದರೆ, ಅದಕ್ಕೆ ಹಲವಾರು ರೀತಿಯಲ್ಲಿ ಕೆಲಸಗಳು ನಡೆಯಬೇಕು. ಇಲ್ಲದಿದ್ದರೆ, ವರ್ಗಗಳ ಒಳಗೇ ಸಂಘರ್ಷಗಳು ಉಂಟಾಗುತ್ತವೆ. ಉದಾಹರಣೆಗೆ, ಒಬಿಸಿ ವರ್ಗದಲ್ಲಿ ಮುಂದುವರೆದವರು ಮತ್ತು ಹಿಂದುಳಿದವರು ಇದ್ದಾರೆ. ಇಲ್ಲಿ, ಮುಂದುವರೆದವರು ಹಿಂದುಳಿದವರಿಗಾಗಿ ತಾವು ಪಡೆಯುತ್ತಿರುವ ಗರಿಷ್ಠ ಪಾಲಿನಲ್ಲಿ ಒಂದಷ್ಟು ಪಾಲನ್ನು ಬಿಟ್ಟುಕೊಟ್ಟು, ಹಂಚಿಕೊಳ್ಳುವುದಕ್ಕೆ ಸಿದ್ದರಾಗಬೇಕು. ಆ ರೀತಿಯಲ್ಲಿ ಸರ್ಕಾರವು ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ಅರ್ಥೈಸಿಕೊಳ್ಳುವಂತೆ ಮಾಡಬೇಕು.
ಜೊತೆಗೆ, ಜಾತಿ ಶ್ರೇಣೀಕರಣದ ಆಧಾರದ ಮೇಲೆ ಸಂಪನ್ಮೂಲ ಹಂಚಿಕೆಗೆ ಅಗತ್ಯವಿರುವ ಮಾನದಂಡಗಳು, ಬೇಡಿಕೆಗಳು ಬರಬೇಕು. ಅದಕ್ಕೆ, 50% ಮೀಸಲಾತಿ ಮೇಲ್ಮಿತಿ ರದ್ದಾಗಬೇಕು, ಮೀಸಲಾತಿ ಜಾಸ್ತಿಯಾಗಬೇಕು, ಖಾಸಗೀಕರಣ ರದ್ದಾಗಬೇಕು, ಖಾಸಗಿ ವಲಯದಲ್ಲಿ ಮೀಸಲಾತಿ ಅನ್ವಯವಾಗಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಸಂಪನ್ಮೂಲದ ಹಂಚಿಕೆ ಆಗಬೇಕು. ಆಗ ವಿತರಣಾ ನ್ಯಾಯ ಬರುತ್ತದೆ.
ಅದನ್ನೇನೂ ಮಾಡದೆ, ಜಾತಿಗಣತಿ ಮಾಡಿ, ಅದನ್ನ ಇಟ್ಟುಕೊಂಡು ನಾವು ನಿಮ್ಮ ಪರವಾಗಿದ್ದೇವೆ ಎನ್ನುವುದು ರಾಜಕೀಯ ಮಾಡುವುದಕ್ಕಷ್ಟೇ ಸೀಮಿತವಾಗುತ್ತದೆ. ಜಾತಿಗಣತಿ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಇದೆಲ್ಲವನ್ನು ಮಾಡಲು ಸಿದ್ದರಿಲ್ಲ. ಮೀನಾಮೇಷ ಎಣಿಸುತ್ತಿವೆ. ಹಿಂದೇಟು ಹಾಕುತ್ತಿವೆ. ಹೀಗಿರುವಾಗ ಬಿಜೆಪಿ ಇದೆಲ್ಲವನ್ನೂ ಮಾಡುತ್ತದೆಯೇ?
ಬಿಜೆಪಿಯಿಂದ ಜಾತಿಗಣತಿ ಸಾಧ್ಯವೇ?
ಬಿಜೆಪಿಯ ವರ್ತನೆಗಳನ್ನು ಗಮನಿಸಿದರೆ, ಬಿಜೆಪಿಗೆ ಜಾತಿಗಣತಿ ಮಾಡುವ ಯಾವುದೇ ಉದ್ದೇಶ ಇಲ್ಲ. ಈಗ ಜನಗಣತಿಗಾಗಿ 530 ಕೋಟಿ ರೂ. ಕೊಡಲಾಗಿದೆ. ಈ ಮೊತ್ತದಲ್ಲಿ ಜನಗಣತಿ ಮಾಡುವುದೇ ಕಷ್ಟ. ಇನ್ನು, ಜಾತಿಗಣತಿಯನ್ನೂ ಅದರೊಳಗೆ ಸೇರಿಸಬೇಕೆಂದರೆ, ಅದಕ್ಕಾಗಿ ಬಹಳಷ್ಟು ಕೆಲಸ ಮಾಡಬೇಕು. 11 ಲಕ್ಷ ಉಪಜಾತಿಗಳನ್ನು ಗಣತಿಯೊಳಗೆ ಉಲ್ಲೇಖಿಸಬೇಕು. ಅವುಗಳನ್ನು ವರ್ಗೀಕರಣ ಮಾಡಬೇಕು. ಪರಿಶೀಲಿಸಬೇಕು. ಇದಕ್ಕೆಲ್ಲ ಮತ್ತಷ್ಟು ಹಣ ಬೇಕಾಗುತ್ತದೆ. ಮಾತ್ರವಲ್ಲ, ಸಮಯವೂ ಬೇಕಾಗುತ್ತದೆ.
ಇದೆಲ್ಲವನ್ನೂ ಮಾಡಬೇಕೆಂದರೆ, ಜನಗಣತಿಯೇ ತಡವಾಗುತ್ತದೆ. ‘ಜಾತಿಗಣತಿ ನಡೆಸುತ್ತೇವೆ, ಅದಕ್ಕಾಗಿ ಕೆಲಸಗಳು ನಡೆಯುತ್ತಿವೆ’ ಎಂಬುದನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವು ಜನಗಣತಿಯನ್ನೂ ಕನಿಷ್ಠ 2 ವರ್ಷ ಮುಂದೂಡಬಹುದು. ಪರಿಣಾಮವಾಗಿ, ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ತಡವಾಗುತ್ತದೆ. ಇದರಿಂದ, ರಾಜಕೀಯದಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡುವುದು ನನೆಗುದಿಗೆ ಬೀಳುತ್ತದೆ. ಇದೆಲ್ಲವೂ ವಿಳಂಬವಾಗಬೇಕು ಎಂಬುದೇ ಬಿಜೆಪಿಯ ಹುನ್ನಾರವಾಗಿರಲೂಬಹುದು.
”ಜನಗಣತಿ, ಜಾತಿಗಣತಿ ಹಾಗೂ ಮಹಿಳಾ ಮೀಸಲಾತಿ ಇದಾವುದನ್ನೂ ಮಾಡದೆಯೇ 2029ರ ಲೋಕಸಭಾ ಚುನಾವಣೆಯನ್ನು ಮುಗಿಸಬೇಕು ಎಂಬುದೇ ಬಿಜೆಪಿಯ ಉದ್ದೇಶ. ಜನಗಣತಿ ನಡೆಸುವುದು ಮತ್ತು ಮಹಿಳಾ ಮೀಸಲಾತಿಯನ್ನು ಜಾರಿಗೊಳಿಸುವುದನ್ನು ತಡೆಯಲು ಕೇಂದ್ರ ಸರ್ಕಾರ ಈಗ ಜಾತಿಗಣತಿ ವಿಚಾರವನ್ನು ಮುಂದೆ ತಂದಿದೆ” ಎಂಬುದು ಶಿವಸುಂದರ್ ಅವರ ಅಭಿಪ್ರಾಯ.