ಮೇ 5 ರಿಂದ ಒಳಮೀಸಲಾತಿಗಾಗಿ ಪರಿಶಿಷ್ಟ ಜಾತಿಯವರ ಶೈಕ್ಷಣಿಕ, ಆರ್ಥಿಕ, ಸಾಮಾಜಿಕ ಜನಗಣತಿ ಆರಂಭವಾಗಲಿದ್ದು, ಉಡುಪಿ ಜಿಲ್ಲೆಯ ಆದಿದ್ರಾವಿಡರಿಗೆ ಪರಿಶಿಷ್ಟ ಜಾತಿ ಆದಿದ್ರಾವಿಡ ಎಂದು ಜಾತಿ ಪ್ರಮಾಣ ಪತ್ರ ನೀಡಲಾಗಿದ್ದು, ಈಗ ಒಳ ಮೀಸಲಾತಿ ವರ್ಗೀಕರಣ ಸಮೀಕ್ಷೆ ನಾಳೆಯಿಂದ ಆರಂಭವಾಗಲಿದ್ದು ಆದಿದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದವರು ಅನಿವಾರ್ಯವಾಗಿ ಉಪಜಾತಿ ಯನ್ನು ಸೂಚಿಸಬೇಕಾದ ತುರ್ತು ಬಂದೊದಗಿದೆ, ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿನ 101 ಜಾತಿಗಳ ಪೈಕಿ ಆದಿ ಆಂಧ್ರ, ಆದಿ ಕರ್ನಾಟಕ, ಆದಿದ್ರಾವಿಡ ಈ ಮೂರು ಜಾತಿಗಳನ್ನು ಬಿಟ್ಟು ಉಳಿದ 98 ಜಾತಿಗಳ ಪೈಕಿ ಒಂದನ್ನು ನಮೂದಿಸ ಬಹುದಾಗಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ವಿಭಾಗೀಯ ಸಂಘಟನಾ ಸಂಚಾಲಕರಾದ ಶ್ಯಾಮರಾಜ್ ಬಿರ್ತಿ ಹೇಳಿದ್ದಾರೆ
ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಉಡುಪಿ ಜಿಲ್ಲೆಯ ಆದಿದ್ರಾವಿಡ ಜಾತಿಯವರು ಜನಗಣತಿಗೆ ಬಂದವರ ಬಳಿ ಜಾತಿ ಆದಿದ್ರಾವಿಡ ಎಂದು ಸೂಚಿಸಿದಾಗ, ಉಪಜಾತಿಯ ಕಾಲಂ ತೆರೆದುಕೊಳ್ಳುತ್ತದೆ. ಅಲ್ಲಿ ಉಳಿದ 98 ಜಾತಿಗಳ ಪೈಕಿ ಪಾಣ, ಪರವ, ಪಂಬದ, ಬತ್ತಡ, ಕೂಸ, ದಿಕ್ಕ, ಮುಂಡಾಳ, ಹೀಗೆ ಹಲವಾರು ಉಪಜಾತಿಗಳಿವೆ.
ಉಡುಪಿ ಜಿಲ್ಲೆಗೆ ಸಂಬಂಧಪಟ್ಟಂತೆ ಆದಿದ್ರಾವಿಡರಿಗೆ ಬಬ್ಬುಸ್ವಾಮಿಯ ದೈವ ಆರಾಧಕರಿಗೆ ನಾನು ಮೇಲೆ ಸೂಚಿಸಿದ ಉಪಜಾತಿಗಳ ” ಮುಂಡಾಳ ” ಎಂಬ ಉಪಜಾತಿಯು ಹೆಚ್ಚು ಸಮರ್ಪಕ ಅನಿಸುತ್ತದೆ. ಒಂದುವೇಳೆ ಉಪಜಾತಿ ಸೂಚಿಸದೇ ಇದ್ದಲ್ಲಿ ಒಳಮೀಸಲಾತಿ ವರ್ಗೀಕರಣ ಸಮೀಕ್ಷೆಯು ಅಪೂರ್ಣವಾಗುತ್ತದೆ. ಮುಂದೊಂದು ದಿನ ಆಯೋಗವು ಪುನಃ ಉಪಜಾತಿಯನ್ನು ಕಡ್ಡಾಯವಾಗಿ ಸೂಚಿಸಲು ತಾಕೀತು ಮಾಡಬಹುದು. ಉಪಜಾತಿ ಸೂಚಿಸದ ವ್ಯಕ್ತಿಯ ಪುನಃ ಸಮೀಕ್ಷೆಗೆ ಸೂಚಿಸಬಹುದು.
ಈ ಎಲ್ಲಾ ಗೊಂದಗಳಿರುವುದರಿಂದ ಆದಿದ್ರಾವಿಡ ಜಾತಿ ಪ್ರಮಾಣ ಪತ್ರ ಪಡೆದ ನಾನು ಮುಂಡಾಳ ಎಂದು ಉಪಜಾತಿ ನಮೂದಿಸುತ್ತೇನೆ. ಅಂತೆಯೇ ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಮ್ಮ ತಮ್ಮ ಉಪಜಾತಿಯನ್ನು ಸೂಚಿಸಲು ಸ್ವತಂತ್ರರಾಗಿರುತ್ತಾರೆ. ಉಪಜಾತಿಯನ್ನು ನಮೂದಿಸುವುದು, ಆಯ್ಕೆ ಮಾಡಿಕೊಳ್ಳುವುದು ಅವರವರ ಸ್ವಂತಕ್ಕೆ ಬಿಟ್ಟ ವಿಚಾರ.
ಆದರೆ ಉಪಜಾತಿ ನಮೂದಿಸದೇ ಇರುವುದು ಸೂಕ್ತವಲ್ಲಾ. ಈ ಸಮಸ್ಯೆ ಆದಿದ್ರಾವಿಡ ಎಂದು ಜಾತಿ ಪ್ರಮಾಣ ಪತ್ರ ಪಡೆದವರಿಗೆ ಹೆಚ್ಚು ಕಳವಳಕಾರಿ ಯಾಗಿದೆ ಎಂದು ಹೇಳಿದ್ದಾರೆ.