ಗ್ರಾಮಸಭೆಗೆ ತೆರಳುತ್ತಿದ್ದ ಪಿಡಿಒ ಮೇಲೆ ಗ್ರಾಮ ಪಂಚಾಯಿತಿ ಸದಸ್ಯೆ ಹಾಗೂ ಅವರ ತಮ್ಮನೊಬ್ಬ ಸೇರಿಕೊಂಡು ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿಯಿಂದ ಹೊಡೆದಿದ್ದಾರೆ ಎಂದು ಶನಿವಾರ (ಮೇ 3) ತಾಲ್ಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಆರೋಪಿಸಲಾಗಿದೆ.
ದೋರನಹಳ್ಳಿ ಗ್ರಾಮ ಪಂಚಾಯಿತಿ ಪಿಡಿಒ ದೇವರಾಜ ರಂಗಪ್ಪ ಚಲವಾದಿ ಹಲ್ಲೆಗೆ ಒಳಗಾದವರು. ಗ್ರಾಮ ಪಂಚಾಯಿತಿ ಸದಸ್ಯೆ ತಾಯಮ್ಮ ಶ್ರೀಕಾಂತ ತೆಗನೂರ ಹಾಗೂ ಆಕೆಯ ತಮ್ಮ ಮಂಜುನಾಥ ಬಸಪ್ಪ ಅನ್ವರ ಹಲ್ಲೆ ಮಾಡಿದವರು.
ದೋರನಹಳ್ಳಿ ಗ್ರಾಮದಲ್ಲಿ ಗ್ರಾಮಸಭೆ ಇರುವ ಕಾರಣ ಶನಿವಾರ ಪಿಡಿಒ ಹಾಗೂ ಪಂಪ್ ಅಪರೇಟರ್ ಭೀಮರಾಯ ಕಂಬಾರ ಅವರೊಂದಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದರು. ಅದೇ ಸಮಯಕ್ಕೆ ಸದಸ್ಯೆ ತಾಯಮ್ಮ ಹಾಗೂ ಮಂಜುನಾಥ ಬಂದಿದ್ದಾರೆ. ಗ್ರಾಮಸಭೆ ಬಗ್ಗೆ ನಮಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಸದಸ್ಯೆ ತಾಯಮ್ಮ ಅವರು ಪಿಡಿಒ ಕಣ್ಣಿಗೆ ಖಾರದ ಪುಡಿ ಎರಚಿ, ಚಪ್ಪಲಿ ತೆಗೆದುಕೊಂಡು ಮುಖಕ್ಕೆ ಬೆನ್ನಿಗೆ ಹೊಡೆದು ಗಾಯಗೊಳಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆಂದು ಆರೋಪಿಸಿ ಪಿಡಿಒ ಇಬ್ಬರ ವಿರುದ್ಧ ಶಹಾಪುರ ಠಾಣೆಯಲ್ಲಿ ಶನಿವಾರ ದೂರು ದಾಖಲಿಸಿದ್ದಾರೆ.
ಪ್ರತಿದೂರು ದಾಖಲು:
ವಾರ್ಡ್ ಸಭೆ ಮಾಡದೇ, ಊರಲ್ಲಿ ಡಂಗೂರ ಸಾರಿ ಹೇಳದೇ ಊರ ಹೊರಗಡೆಯ ದೇವಸ್ಥಾನ ಬಳಿ ಗ್ರಾಮಸಭೆ ಏಕೆ ಮಾಡುತ್ತೀರಿ ಎಂದು ಕೇಳಿದಕ್ಕೆ ಪಿಡಿಒ ದೇವರಾಜ ಹಾಗೂ ಇತರ ಏಳು ಜನ ಸೇರಿಕೊಂಡು ತಮಗೆ ಅವಾಚ್ಯ ಶಬ್ದಗಳಿಂದ ಬೈದು, ಜಾತಿನಿಂದನೆ ಹಾಗೂ ಅಪಮಾನ ಮಾಡಿದ್ದಾರೆ ಎಂದು ಗ್ರಾಮ ಪಂಚಾಯಿತಿ ಸದಸ್ಯೆ ತಾಯಮ್ಮ ತೆಗನೂರ, ಮಂಜುನಾಥ ಬಸಪ್ಪ ಅನ್ವರ್ ಅವರು ಶಹಾಪುರ ಠಾಣೆಯಲ್ಲಿ ಪ್ರತಿದೂರು ನೀಡಿದ್ದಾರೆ.
ಅಧ್ಯಕ್ಷೆ ಚಂದ್ರಾವತಿ ದೊರೆ, ಉಪಾಧ್ಯಕ್ಷ ಈರಣ್ಣ ಕಸನ್, ಆರಿಫ್ ಮಠ, ಮಹಾಂತಗೌಡ ನಂದಿಕೋಲ, ವಿಜಯಕುಮಾರ ಮಲಗೊಂಡ, ಮಂಜುನಾಥ ದೊರೆ ಹಾಗೂ ಸಿದ್ದಣ್ಣ ದೇಸಾಯಿ ವಿರುದ್ಧವೂ ದೂರು ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕಲ್ಯಾಣ ಕರ್ನಾಟಕದಲ್ಲಿ 21,381 ಶಿಕ್ಷಕರ ಹುದ್ದೆ ಖಾಲಿ : ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿತಕ್ಕೆ ಕಾರಣಗಳೇನು?