ಮಾಧವ ಗಾಡ್ಗೀಳ್ ವರದಿಗೆ ಎದುರಾದ ವಿರೋಧವನ್ನು ತಣ್ಣಗಾಗಿಸಲು ತರಲಾದ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅದಾಗಲೇ ತಿರಸ್ಕರಿಸಿಯಾಗಿದೆ. ಕೇಂದ್ರ ಸರ್ಕಾರ ಕೂಡ ಬಹುತೇಕ ಅದನ್ನು ಕಸದ ಬುಟ್ಟಿಗೆ ತಳ್ಳಬಹುದಾದ ಸೂಚನೆಗಳು ಕಾಣಿಸುತ್ತಿವೆ. ಸ್ಥಳೀಯ ಜನವಿರೋಧದ ಹಿನ್ನಲೆಯಲ್ಲಿ ಅದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಯಾರಿಗೂ ಇದ್ದಂತಿಲ್ಲ.
ಇತ್ತೀಚೆಗೆ ನಿಧನರಾದ ಪ್ರೊ. ಕೆ ಕಸ್ತೂರಿ ರಂಗನ್ ಇಸ್ರೋದ ಮಾಜಿ ಅಧ್ಯಕ್ಷ, ರಾಜ್ಯ ಸಭೆಯ ಮಾಜಿ ಸದಸ್ಯ, ಭಾರತ ಸರ್ಕಾರದ ಯೋಜನಾ ಆಯೋಗದ ಸದಸ್ಯ, ನೂತನ ಶಿಕ್ಷಣ ನೀತಿಯ ಕರಡು ಸಮಿತಿಯ ಅಧ್ಯಕ್ಷ ಹೀಗೆ ಹತ್ತು ಹಲವು ಸಮಿತಿಗಳ ಭಾಗವಾಗಿದ್ದರೂ, ಅವರ ಹೆಸರು ಎಲ್ಲರಿಗೂ ಚಿರಪರಿಚಿತವಾಗಿರುವುದು ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ನೀಡಿದ ʻಕಸ್ತೂರಿ ರಂಗನ್ʼ ವರದಿಯಿಂದಾಗಿ. ಕಸ್ತೂರಿ ರಂಗನ್ ವರದಿ ಹವಾಮಾನ ಬದಲಾವಣೆಗೆ ಸಂಬಂಧಿಸಿದಂತೆ ಒಂದು ಪ್ರತ್ಯೇಕ ಅಧ್ಯಾಯವನ್ನೇ ಹೊಂದಿದೆ. ಆದರೆ ಅದರ ಬಗ್ಗೆ ನಮ್ಮಲ್ಲಿ ಹೆಚ್ಚು ಚರ್ಚೆಯಾಗಿಲ್ಲ. ಅವರ ನಿಧನದ ಸಂದರ್ಭದಲ್ಲಿ ಪಶ್ಚಿಮ ಘಟ್ಟಗಳ ಕುರಿತಂತೆ ಅವರ ವರದಿಯ ಒಂದು ಅವಲೋಕನ.
ಮಾಧವ ಗಾಡ್ಗೀಳ್ ವರದಿಗೆ ಎದುರಾದ ವಿರೋಧವನ್ನು ತಣ್ಣಗಾಗಿಸಲು ತರಲಾದ ಕಸ್ತೂರಿ ರಂಗನ್ ವರದಿಯನ್ನು ರಾಜ್ಯ ಸರ್ಕಾರ ಅದಾಗಲೇ ತಿರಸ್ಕರಿಸಿಯಾಗಿದೆ. ಕೇಂದ್ರ ಸರ್ಕಾರ ಕೂಡ ಬಹುತೇಕ ಅದನ್ನು ಕಸದ ಬುಟ್ಟಿಗೆ ತಳ್ಳಬಹುದಾದ ಎಲ್ಲ ಸೂಚನೆಗಳು ಕಾಣಿಸುತ್ತಿವೆ. ಸ್ಥಳೀಯ ಜನವಿರೋಧದ ಹಿನ್ನಲೆಯಲ್ಲಿ ಅದನ್ನು ಜಾರಿಗೊಳಿಸುವ ಇಚ್ಚಾಶಕ್ತಿ ಯಾರಿಗೂ ಇದ್ದಂತಿಲ್ಲ.
ತ್ವರಿತಗತಿಯಲ್ಲಿ ಅವನತಿಯೆಡೆಗೆ ಸಾಗುತ್ತಿರುವ ಪಶ್ಚಿಮ ಘಟ್ಟ ಶ್ರೇಣಿಯ ಪರಿಸರವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಭಾರತ ಸರ್ಕಾರದ ಪರಿಸರ ಮತ್ತು ಅರಣ್ಯ ಸಚಿವಾಲಯವು, ಈ ಪ್ರದೇಶದ ಪರಿಸರ ಸೂಕ್ಷ್ಮತೆ, ಜೈವಿಕ ವ್ಯವಸ್ಥೆಯಲ್ಲಿ ಇದರ ಪ್ರಾಮುಖ್ಯತೆ, ವಿವಿಧ ರಾಜ್ಯಗಳನ್ನು ಒಳಗೊಂಡು ಸಂಕೀರ್ಣವಾಗಿ ಹೆಣೆಯಲ್ಪಟ್ಟಿರುವ ಘಟ್ಟ ಶ್ರೇಣಿಯ ಭೌಗೋಳಿಕ ರಚನೆ ಹಾಗೂ ಹವಾಮಾನ ಬದಲಾವಣೆಯು ಈ ಪ್ರದೇಶದ ಮೇಲೆ ಬೀರಬಲ್ಲ ಸಂಭಾವ್ಯ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, ಈ ಪರಿಸರವನ್ನು ಅಧ್ಯಯನ ಮಾಡಲು ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನೇತೃತ್ವದಲ್ಲಿ ಪರಿಸರ ತಜ್ಞರ ಸಮಿತಿಯನ್ನು ರಚಿಸಿತು.
ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ನೇತೃತ್ವದ ಸಮಿತಿ ಕೊಟ್ಟಿದ್ದ ವರದಿ ಸಾಕಷ್ಟು ʻಕಟ್ಟು ನಿಟ್ಟಾದʼ ನಿಯಮಗಳನ್ನು ಒಳಗೊಂಡಿದೆ ಎಂಬ ಕಾರಣಕ್ಕೆ ತೀವ್ರ ಚರ್ಚೆಗೆ ಗ್ರಾಸವಾಯಿತು ಮತ್ತು ಸಾಕಷ್ಟು ವಿರೋಧಗಳನ್ನೂ ಎದುರಿಸಿತು. ಪಶ್ಚಿಮ ಘಟ್ಟಗಳನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಕೇಂದ್ರ ಸರ್ಕಾರ ಮತ್ತೆ ಕಸ್ತೂರಿ ರಂಗನ್ ನೇತೃತ್ವದ ಸಮಿತಿ ರಚಿಸಿ ಅದರ ಮೊರೆ ಹೋಯಿತು.
ಆದರೆ ಪರಿಸರ ನಾಶದಿಂದ ವಿನಾಶದಂಚಿಗೆ ಸರಿಯುತ್ತಿರುವ ಪಶ್ಚಿಮ ಘಟ್ಟಗಳನ್ನು ಸಂರಕ್ಷಿಸುವ ಸಲುವಾಗಿ ಸರ್ಕಾರವೇ ರಚಿಸಿದ ಹೈ ಲೆವೆಲ್ ವರ್ಕಿಂಗ್ ಗ್ರೂಪ್ ನ ಮುಖ್ಯಸ್ಥರಾಗಿದ್ದ ಕಸ್ತೂರಿರಂಗನ್ ನೀಡಿದ ವರದಿಯೂ ಸಾಕಷ್ಟು ವಿವಾದಕ್ಕೀಡಾಯಿತು. ಕಸ್ತೂರಿ ರಂಗನ್ ಪರಿಸರ ವಿಜ್ಞಾನಿ ಅಲ್ಲ. ಅವರೊಬ್ಬ ಬಾಹ್ಯಾಕಾಶ ವಿಜ್ಞಾನಿ ಹಾಗು ತಂತ್ರಜ್ಞ. ಅವರಿಗೂ ಪಶ್ಚಿಮ ಘಟ್ಟಕ್ಕೂ ʻಎತ್ತಣಿಂದೆತ್ತ ಸಂಬಂಧʼ ಎಂಬ ಹಲವಾರು ಕುಹಕಗಳು ಅವರ ವಿರುದ್ಧ ಕೇಳಿಬಂದವು. ಗಾಡ್ಗೀಳ್ ವರದಿಯಲ್ಲಿ ಹೇಳಲಾದ ಅದೇ ನಿಯಮಗಳನ್ನು ತುಸು ʻಸಡಿಲಿಸಿʼ, ʻಸರಳೀಕೃತʼಗೊಳಿಸಿ ನೀಡಿದ್ದಾರೆ ಎಂಬ ಟೀಕೆಗೂ ಕಸ್ತೂರಿ ರಂಗನ್ ಗುರಿಯಾದರು.

ಕಸ್ತೂರಿ ರಂಗನ್ ತಮ್ಮ ವರದಿಯನ್ನು ಯಾವುದೇ ಜನಪ್ರತಿನಿಧಿಗಳು, ಅಧಿಕಾರಿಗಳು, ಸ್ಥಳಿಯ ಸಮುದಾಯಗಳು ಮತ್ತು ಎನ್‌ಜಿಒಗಳ ಜೊತೆ ಯಾವುದೇ ಮಾತುಕತೆ ನಡೆಸದೆ ರೂಪಿಸಿದರು. ಹೆಚ್ಚಾಗಿ ಈ ವರದಿ ದತ್ತಾಂಶಗಳನ್ನು ಒಳಗೊಂಡಿತ್ತೇ ಹೊರತು ಜನರೊಂದಿಗೆ ಮಾತುಕತೆಗಳನ್ನು ಆಧರಿಸಿರಲಿಲ್ಲ. ಹೀಗಾಗಿ ಇದು ಕೃಷಿ ಮತ್ತು ಕಾಮಗಾರಿಗಳ ಮೇಲೆ ಅಷ್ಟೇನು ಬಿಗಿಯಾದ ನಿಯಮಗಳನ್ನು ಹೇರಿಲ್ಲವಾದರೂ ವಿಫಲಗೊಂಡಿತು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.
ಹವಾಮಾನ ಬದಲಾವಣೆ ಕುರಿತ ಕಸ್ತೂರಿ ರಂಗನ್ ವರದಿಯ ಪ್ರಮುಖ ಅಂಶಗಳು
ಹವಾಮಾನ ಬದಲಾವಣೆಯ ಕುರಿತಂತೆ ರಾಷ್ಟ್ರಮಟ್ಟದಲ್ಲಿ ನಡೆಸಲಾದ ಸಮೀಕ್ಷೆಗಳು ದೇಶಾದ್ಯಾಂತ 45 ಶೇಕಡಾ ಅರಣ್ಯ ಪ್ರದೇಶ ವಿವಿಧ ರೀತಿಯ ಬದಲಾವಣೆಗಳಿಗೆ ಒಳಗಾಗಲಿವೆ ಎಂದು ಹೇಳುತ್ತವೆ. ದೇಶದಾದ್ಯಂತ ಎಲ್ಲೆಡೆಯೂ ಅರಣ್ಯಗಳು ಅಪಾಯವನ್ನು ಎದುರಿಸುತ್ತಿವೆ ಅದರಲ್ಲೂ ಈ ಅಪಾಯದ ಮಟ್ಟ ಹಿಮಾಲಯದ ತುದಿಯಲ್ಲಿ, ಮಧ್ಯ ಭಾರತ ಮತ್ತು ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿ ಹೆಚ್ಚಿದೆ. ಏಕ ಪ್ರಬೇಧದ ಸಸ್ಯಗಳ ನೆಡುವಿಕೆ ಅರಣ್ಯದ ದಟ್ಟಣೆಯನ್ನು ಕಡಿಮೆ ಮಾಡಿದೆ ಎಂದು ವರದಿಗಳು ಉಲ್ಲೇಖಿಸುತ್ತವೆ.
ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ರೂಪಿಸಲಾದ ಕಸ್ತೂರಿ ರಂಗನ್ ವರದಿಯು ಕ್ಷೀಣಿಸುತ್ತಿರುವ ವೃಕ್ಷಗಳ ಸಂಖ್ಯೆ, ನಶಿಸುತ್ತಿರುವ ಜೀವ ವೈವಿಧ್ಯತೆ ಮತ್ತು ಅರಣ್ಯಗಳ ವಿಭಜನೆ ಅರಣ್ಯಗಳಿಗೆ ಎದುರಾಗಬಲ್ಲ ಅಪಾಯವನ್ನು ಹೆಚ್ಚಿಸುತ್ತಿವೆ. ಪಶ್ಚಿಮ ಘಟ್ಟಗಳು ಜೀವವೈವಿಧ್ಯತೆಯ ಹಾಟ್‌ಸ್ಪಾಟ್ ಆಗಿದ್ದರೂ, ಇದರ ಉತ್ತರಭಾಗದಲ್ಲಿ ಅರಣ್ಯಗಳು ಹೆಚ್ಚು ಹೆಚ್ಚು ವಿಭಜನೆಗೊಂಡಿವೆ. ಇದು ಆ ಅರಣ್ಯಗಳು ಹವಾಮಾನ ಬದಲಾವಣೆಯ ಪರಿಣಾಮಗಳಿಗೆ ತೀವ್ರವಾಗಿ ಒಳಗಾಗುವಂತೆ ಮಾಡುತ್ತದೆ. ಇದರೊಂದಿಗೆ ಕಾಳ್ಗಚ್ಚಿನ ಮತ್ತು ಕೀಟಗಳ ಧಾಳಿಯ ಅಪಾಯವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಆತಂಕ ವ್ಯಕ್ತಪಡಿಸುತ್ತದೆ.
ಪಶ್ಚಿಮ ಘಟ್ಟಗಳಲ್ಲಿ ಹವಾಮಾನ ಬದಲಾವಣೆಯು ಅಲ್ಲಿ ಸಸ್ಯ ಪ್ರಬೇಧಗಳನ್ನು ನಾಶಮಾಡಲಿವೆ ಎಂದು ವರದಿಯಲ್ಲಿ ಅಂದಾಜಿಸಲಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಆಯಾ ಋತುಮಾನಗಳಿಗೆ ಅನುಗುಣವಾಗಿ ಸಸ್ಯಗಳ ಜೀವನಚಕ್ರದಲ್ಲಿ ನಡೆಯುವ ಬದಲಾವಣೆಗಳು ಏರುಪೇರಾಗಲಿವೆ ಎಂದು ವರದಿಯು ಹೇಳುತ್ತದೆ. ದೀರ್ಘಕಾಲದಿಂದಲೂ ಸ್ಥಳೀಯವಾಗಿಯೇ ಕಂಡುಬರುವ ಪ್ರಬೇಧಗಳೇ ಪ್ರಾಬಲ್ಯ ಹೊಂದಿರುವ ಈ ಪರಿಸರ ವ್ಯವಸ್ಥೆಯು ಹವಾಮಾನ ಸಂಬಂಧಿತ ಒತ್ತಡದಿಂದ ಚೇತರಿಸಿಕೊಳ್ಳಬೇಕೆಂದರೆ, ಏಕಪ್ರಬೇಧದ ಸಸ್ಯಗಳಿಗೆ ಬದಲಾಗಿ ಸ್ಥಳೀಯ ಪ್ರಬೇಧಗಳನ್ನೇ ಇಲ್ಲಿ ಬೆಳೆಸುವುದು ಒಳಿತು ಎಂಬುದಾಗಿ ವರದಿಯು ಸೂಚಿಸುತ್ತದೆ.
ಈ ವರದಿಯ ಪ್ರಕಾರ ಪಶ್ಚಿಮ ಘಟ್ಟ ಶ್ರೇಣಿಯಲ್ಲಿ ಪ್ರದೇಶವಾರು ಭತ್ತದ ಇಳುವರಿ +5 ರಿಂದ -11 ಶೇಕಡಾದವರೆಗೆ ಏರಿಳಿತ ಕಾಣಬಹುದು ಎಂದು ಅಂದಾಜಿಸಲಾಗಿದೆ. ಹೆಚ್ಚಿನ ಪ್ರದೇಶಗಳು 4 ಶೇಕಡಾದವರೆಗೆ ಇಳುವರಿ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭತ್ತದ ಜೊತೆಗೆ ಮೆಕ್ಕೆ ಜೋಳ ಮತ್ತು ಬಿಳಿ ಜೋಳದ ಇಳುವರಿಯು ಶೇಕಡಾ 50 ರಷ್ಟು ಕಡಿಮೆಯಾಗುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ವರದಿಯ ಪ್ರಕಾರ ಕರ್ನಾಟಕದ ದಕ್ಷಿಣಭಾಗ ಮತ್ತು ಕೇರಳದ ಉತ್ತರ ಭಾಗದ ಜಿಲ್ಲೆಗಳು ಈ ಹವಾಮಾನ ಬದಲಾವಣೆಯ ಲಾಭ ಪಡೆಯಬಲ್ಲವು. ತಮಿಳುನಾಡಿನ ವಾಯುವ್ಯ ಭಾಗ, ಕೇರಳದ ಉತ್ತರ ಭಾಗ ಮತ್ತು ಕರ್ನಾಟಕದ ಕೆಲವು ಭಾಗಗಳಲ್ಲಿ ಬೆಳೆ ನಿರ್ವಹಣಾ ವಿಧಾನದ ತಂತ್ರಜ್ಞಾನ ಮತ್ತು ಹವಾಮಾನ ಸಹಿಷ್ಣು ತಳಿಗಳನ್ನು ಬೆಳೆಯುವ ಮೂಲಕ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸಬಹುದು.
ಕೋಕೋವನ್ನು ಅಡಿಕೆ ಅಥವಾ ತೆಂಗಿನಕಾಯಿಯ ಅಡಿಯಲ್ಲಿ ಅಂತರ ಬೆಳೆಯಾಗಿ ಬೆಳೆಯಲಾಗುತ್ತದೆ. ನೆರಳು ಬೆಳೆಯಾಗಿರುವ ಕೋಕೋಗೆ, ವಾತಾವರಣದ ಉಷ್ಣತೆ 1 ಡಿಗ್ರಿ ಸೆಲ್ಸಿಯಸ್‌ನಷ್ಟು ಹೆಚ್ಚಳವಾದರೆ ಬೆಳೆ ಉತ್ಪಾದಕತೆಗೆ ಪ್ರಯೋಜನಕಾರಿಯಾಗುತ್ತದೆ. ಅದೇ ತಾಪಮಾನವು 3 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದರೆ ಕೋಕೋ ಇಳುವರಿಯು ಕಡಿಮೆಯಾಗುತ್ತದೆ ಎಂಬುದಾಗಿ ವರದಿಯು ಅಭಿಪ್ರಾಯಪಡುತ್ತದೆ.

ಹವಾಮಾನ ಬದಲಾವಣೆ ತೆಂಗು ಬೆಳೆಯ ಮೇಲೆ ಯಾವ ರೀತಿಯಾಗಿ ಪರಿಣಾಮ ಬೀರಬಹುದು ಎಂಬುದನ್ನು ವಿವರಿಸುತ್ತ ವರದಿಯು, 2030 ರ ವೇಳೆಗೆ ಪಶ್ಚಿಮ ಘಟ್ಟದ ಹೆಚ್ಚಿನ ಭಾಗಗಳಲ್ಲಿ ತೆಂಗಿನಕಾಯಿ ಇಳುವರಿ ಶೇಕಡಾ 30 ರಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎನ್ನುತ್ತದೆ. ತೆಂಗಿನಕಾಯಿ ಇಳುವರಿಯಲ್ಲಿನ ಹೆಚ್ಚಳಕ್ಕೆ ಮುಖ್ಯವಾಗಿ ಬೀಳುವ ಮಳೆಯ ಪ್ರಮಾಣದಲ್ಲಿ ಹೆಚ್ಚಳ ಮತ್ತು ತಾಪಮಾನದಲ್ಲಿ ಇಳಿಕೆ ಕಾರಣವಾಗಿರಬಹುದು. ಆದರೂ, ನೈಋತ್ಯ ಕರ್ನಾಟಕ, ತಮಿಳುನಾಡಿನ ಕೆಲವು ಭಾಗಗಳು ಮತ್ತು ಮಹಾರಾಷ್ಟ್ರದ ಕೆಲವು ಪ್ರದೇಶಗಳಲ್ಲಿ ತೆಂಗು ಇಳುವರಿಯು ಶೇಕಡಾ 24 ರಷ್ಟು ಇಳಿಕೆ ಕಾಣಬಹುದು ಎಂದು ವರದಿಯಲ್ಲಿ ಅಂದಾಜಿಸಲಾಗಿದೆ.
ಕೃಷಿಯಲ್ಲಿ ಬೆಳೆಗಳ ವೈವಿಧ್ಯತೆ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇವು ಕೀಟಗಳು,ಹಾಗು ರೋಗಗಳನ್ನು ತಡೆಯಲು ಮತ್ತು ಹವಾಮಾನದಲ್ಲಿ ಉಂಟಾಗುವ ವೈಪರೀತ್ಯಗಳನ್ನು ಎದುರಿಸಲು ಸಹಾಯ ಮಾಡುತ್ತವೆ ಎಂಬುದಾಗಿ ವರದಿಯು ಉಲ್ಲೇಖಿಸುತ್ತದೆ.
2030 ರ ದಶಕದಲ್ಲಿ ಪಶ್ಚಿಮ ಘಟ್ಟಗಳಲ್ಲಿ ತಾಪಮಾನ – ಆರ್ದ್ರತೆ ಸೂಚ್ಯಂಕ (THI/ಟಿಎಚ್‌ಐ) 80 ಕ್ಕಿಂತ ಹೆಚ್ಚಾಗುವ ನಿರೀಕ್ಷೆ ಇದೆ. ಈ ಸೂಚ್ಯಾಂಕ ಹೆಚ್ಚಿದಂತೆಲ್ಲ ವಾರ್ಷಿಕವಾಗಿ ಎದುರಾಗುವ ಅಧಿಕ ತಾಪಮಾನದ ಒತ್ತಡದಿಂದ ಕೂಡಿದ ದಿನಗಳು ಹೆಚ್ಚಾಗುವ ಸಾಧ್ಯತೆಯಿದೆ. ಇದು ಜಾನುವಾರುಗಳಲ್ಲಿ ಹೆಚ್ಚಿನ ಉಷ್ಣತೆಯಿಂದಾಗಿ ತೀವ್ರಸ್ವರೂಪದ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಮತ್ತು ಅವುಗಳ ಉತ್ಪಾದಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ವರದಿಯು ಎಚ್ಚರಿಸುತ್ತದೆ.
ಪ್ರತಿ ವರ್ಷವೂ ಪಶ್ಚಿಮ ಘಟ್ಟಗಳಲ್ಲಿರುವ ಗೋದಾವರಿ ಮತ್ತು ಕೃಷ್ಣಾ ನದಿ ಜಲಾನಯನ ಪ್ರದೇಶಗಳಿಂದ ಗರಿಷ್ಠ ನೀರು ತೆಗೆದುಕೊಳ್ಳಲಾಗುತ್ತದೆ. ಸಧ್ಯದವರೆಗೆ ನೀರಿನ ಲಭ್ಯತೆ, ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮನ್ವಯ ಸಾಧ್ಯವಾಗುತ್ತಿದೆ. ಆದರೆ ಹವಾಮಾನ ಬದಲಾವಣೆಯಿಂದಾಗಿ, ನದಿಗಳ ನೀರಿನ ಮಟ್ಟದಲ್ಲಿ ವ್ಯತ್ಯಾಸಗಳಾಗಬಹುದು ನೀರಿನ ಸಮಸ್ಯೆ ಉಲ್ಬಣಿಸಬಹುದು ಎಂದು ವರದಿಯು ಊಹಿಸುತ್ತಿದೆ. ನೀರಿನ ಅಭಾವದಂತಹ ಸಮಸ್ಯೆಗಳು ಉಲ್ಬಣಗೊಳ್ಳುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಹವಾಮಾನ ಬದಲಾವಣೆಯ ಕುರಿತಾದ ಎರಡನೇ ರಾಷ್ಟ್ರೀಯ ಸಂವಹನ (NATCOM, 2012) ಪ್ರಕಾರ, ಪಶ್ಚಿಮ ಘಟ್ಟಗಳು ತಾಪಮಾನದಲ್ಲಿ ಹೆಚ್ಚಳ, ಮಳೆ ಮತ್ತು ಹವಾಮಾನ ಬದಲಾವಣೆಯಿಂದಾಗಿ ಪ್ರಕೃತಿ ವಿಕೋಪದಂತಹ ಘಟನೆಗಳನ್ನು ಎದುರಿಸಬಹುದು. ಇದರೊಂದಿಗೆ ಮಳೆ ಬೀಳುವ ಅವಧಿಯಲ್ಲಿ ಗಮನಾರ್ಹ ಇಳಿಕೆಯ ಸಾಧ್ಯತೆಯೂ ಹೆಚ್ಚಿದೆ. ಇದು ಪಶ್ಚಿಮ ಘಟ್ಟಗಳ ಪರಿಸರ ವ್ಯವಸ್ಥೆಗಳ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದು ಸುತ್ತಲಿನ ಪರಿಸರ ವ್ಯವಸ್ಥೆಯಲ್ಲಿ ತೇವಾಂಶ ಕಡಿಮೆಮಾಡುತ್ತದೆ ಈ ರೀತಿಯಾಗಿ ತೇವಾಂಶ ಕಡಿಮೆಯಾಗುವುದರಿಂದ ಕಾಡ್ಗಿಚ್ಚಿನಂತಹ ಘಟನೆಗಳು ತಲೆದೋರಬಹುದು ಎಂದು ಕಸ್ತೂರಿ ರಂಗನ್ ವರದಿ ಎಚ್ಚರಿಸುತ್ತದೆ.
ಹವಾಮಾನ ಬದಲಾವಣೆ ಕುರಿತ ಮಾಧವ ಗಾಡ್ಗೀಳ್ ವರದಿಯ ಪ್ರಮುಖ ಅಂಶಗಳು
ಹಸಿರು ಕ್ರಾಂತಿಯ ನಂತರ ದೇಶವು ತನ್ನ ಅನೇಕ ಸಾಂಪ್ರದಾಯಿಕ ಸ್ಥಳೀಯ ತಳಿಗಳನ್ನು ಮತ್ತು ಕೃಷಿ-ಪರಿಸರ ವ್ಯವಸ್ಥೆಯ ಒಳಗೊಂಡಿರುವ ಅನೇಕ ಅಂಶಗಳನ್ನು ಕಳೆದುಕೊಂಡಿದೆ. ಅದರಲ್ಲೂ ಹೆಚ್ಚಾಗಿ ಈ ಅವನತಿ ಪಶ್ಚಿಮ ಘಟ್ಟಗಳ ಪ್ರದೇಶಗಳಲ್ಲಿ ಕಂಡುಬರುತ್ತದೆ. ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಸ್ಥಳೀಯವಾಗಿ ಹೊಂದಿಕೊಳ್ಳುವ ಪ್ರಬೇಧಗಳನ್ನು ಸಂರಕ್ಷಿಸುವುದು ಅತ್ಯಂತ ಪ್ರಸ್ತುತವಾದುದು ಎಂದು ಸೂಚಿಸುವುದರೊಂದಿಗೆ ಗಾಡ್ಗೀಳ್ ವರದಿ ಈ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕಾರ್ಯ ಪ್ರವೃತ್ತರಾಗಬಹುದು ಎಂಬುದನ್ನೂ ವಿವರಿಸುತ್ತದೆ.

ಈ ಪ್ರದೇಶವು ವೈವಿಧ್ಯಮಯ ಧಾನ್ಯಗಳು, ತರಕಾರಿಗಳು, ಗೆಡ್ಡೆಗಳು ಮತ್ತು ಹಣ್ಣುಗಳ ಉಗ್ರಾಣವಾಗಿದೆ. ಪರ್ವತ ಪರಿಸರ ವ್ಯವಸ್ಥೆಗಳಲ್ಲಿನ ತಳಿಗಳು ಸ್ವಾಭಾವಿಕವಾಗಿಯೇ ಸ್ಥಳೀಯ ಪರಿಸರಕ್ಕೆ ಹೊಂದಿಕೊಳ್ಳಬಲ್ಲ ಅಂಶವನ್ನು ಹೊಂದಿವೆ ಮತ್ತು ಆದ್ದರಿಂದ ಇತರ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಿದ ಬೀಜಗಳು ಸಾಮಾನ್ಯವಾಗಿ ಈ ಪ್ರದೇಶದಲ್ಲಿ ವಿಫಲಗೊಳ್ಳುತ್ತ ವೆ. ಹೀಗಾಗಿ ಇಲ್ಲಿ ದೊರಕುವ ಈ ಆನುವಂಶಿಕ ಸಂಪನ್ಮೂಲಗಳನ್ನು ಸಂರಕ್ಷಿಸಲು ಪ್ರಯತ್ನಗಳನ್ನು ಮಾಡಬೇಕಾಗಿದೆ. ಸಾಂಪ್ರದಾಯಿಕ ಪ್ರಭೇದಗಳನ್ನು ಪುನಃ ಬೆಳೆಸಲು ಮತ್ತು ಪ್ರತಿ ಪ್ರದೇಶಕ್ಕೆ ಸೂಕ್ತವಾದ ಪ್ರಭೇದಗಳನ್ನು ಅಭಿವೃದ್ಧಿಪಡಿಸಲು ಮಹಿಳೆಯರು ಸೇರಿದಂತೆ ರೈತರೊಂದಿಗೆ ಪಂಚಾಯತ್ ಮಟ್ಟದಲ್ಲಿ ಕಾರ್ಯಕ್ರಮವನ್ನು ಪ್ರಾರಂಭಿಸಬೇಕು ಎಂಬುದಾಗಿ ವರದಿಯು ಸೂಚಿಸಿದೆ.
ಹವಾಮಾನ ಬದಲಾವಣೆಯ ಸಂದರ್ಭದಲ್ಲಿ ಮಿಶ್ರತಳಿಗಳಿಗೆ ಹೊಂದಿಕೊಳ್ಳಲು ಸಾಧ್ಯವಾಗುವುದಿಲ್ಲ ಎನ್ನುತ್ತಾ ಗಾಡ್ಗೀಳ್ ವರದಿಯು ಸ್ಥಳೀಯವಾಗಿ ಹೊಂದಿಕೊಳ್ಳಬಲ್ಲ ತಳಿಗಳ ರಕ್ಷಣೆ ಸಾಧ್ಯ ಅವುಗಳ ಸಾಕಣಿಕೆಯನ್ನು ಪ್ರೋತ್ಸಾಹಿಸಬೇಕು ಎನ್ನುತ್ತದೆ. ಸ್ಥಳೀಯ ಹಸುಗಳನ್ನು ಸಾಕುವುದರಿಂದ ಮಾಡುವ ಹೈನುಗಾರಿಕೆ ಆರ್ಥಿಕವಾಗಿ ಲಾಭದಾಯಕ ವ್ಯಾಪ್ತಿಯಲ್ಲಿ ಬರುವುದಿಲ್ಲವಾದ್ದರಿಂದ, ಸ್ಥಳೀಯ ದನಗಳನ್ನು ಸಾಕಲು ಮುಂದೆ ಬರುವ ರೈತರಿಗೆ ಬೆಂಬಲ ನೀಡಬೇಕು. ಅವರು ಉತ್ಪಾದಿಸುವ ಸಾವಯವ ಉತ್ಪನ್ನಗಳಿಗೆ ವಿಶೇಷ ಬೆಲೆ ನಿಗದಿಪಡಿಸಿ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸಬೇಕು. ಪ್ರತಿಕೂಲ ಕೃಷಿ-ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಬಲ್ಲ ತಳಿಗಳ ಸಾಕಣಿಕೆಗೆ ಮಾತ್ರ ಈ ಪ್ರದೇಶಗಳಲ್ಲಿ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯಲ್ಲಿ ಬರುವ (ಮತ್ತು ಇತರ) ರಾಜ್ಯಗಳಲ್ಲಿ ಕೆಲವು ರಾಜ್ಯಗಳು ಇಂಧನವನ್ನು ಅತಿಯಾಗಿ ಬಳಸುತ್ತಿದ್ದರೆ, ಇನ್ನು ಕೆಲವು ಜನರಿಗೆ ಅಗತ್ಯಕ್ಕೆ ತಕ್ಕಷ್ಟು ಇಂಧನ ದೊರಕುತ್ತಿಲ್ಲ. ಈ ಸಂದರ್ಭದಲ್ಲಿ ಇಂಧನ ಸಮಾನತೆಯ ಪರಿಕಲ್ಪನೆಯನ್ನು ಪುನರ್‌ವಿಮರ್ಶಿಸುವ ಅಗತ್ಯತೆ ಇದೆ ಎಂಬುದಾಗಿ ವರದಿಯು ಕಾಳಜಿಯನ್ನು ವ್ಯಕ್ತಪಡಿಸುತ್ತದೆ. ಜಾಗತಿಕ ಮಟ್ಟದಲ್ಲಿ ಮಾತ್ರವಲ್ಲದೆ, ಇಂಧನ ಉತ್ಪಾದನೆ ಮತ್ತು ಬಳಕೆಗೆ ಸಂಬಂಧಿಸಿದಂತೆ ಸ್ಥಳೀಯ ಪರಿಸರ ಮತ್ತು ಸಾಮಾಜಿಕ ಸಮಸ್ಯೆಗಳ ಸಂದರ್ಭದಲ್ಲಿಯೂ, ಸುಸ್ಥಿರತೆ ಮತ್ತು ಸಮಾನತೆಯ ಅಂಶಗಳನ್ನು ಸ್ಪಷ್ಟವಾಗಿ ಪ್ರತಿಬಿಂಬಿಸುವ ಇಂಧನ ನೀತಿಯ ಅವಶ್ಯಕತೆಯಿದೆ. ಈ ಕುರಿತಂತೆ ಅಧ್ಯಯನಗಳು ನಡೆಯಬೇಕು ಎಂಬ ಅಂಶವನ್ನು ವರದಿಯು ಮುನ್ನಲೆಗೆ ತರುತ್ತದೆ.
ಭಾರತದಲ್ಲಿ ವಾತಾವರಣದಲ್ಲಿ ಹಸಿರು ಹೊದಿಕೆಯನ್ನು ಹೆಚ್ಚಿಸಲು ರಾಷ್ಟ್ರಮಟ್ಟದಲ್ಲಿ ಹಲವಾರು ನೀತಿಗಳು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಗ್ರೀನ್ ಮಿಷನ್ ಎಂಬುದು ಹವಾಮಾನ ಬದಲಾವಣೆಗಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ(ಎನ್‌ಎಪಿಸಿಸಿ) ಯಲ್ಲಿ ರೂಪಿಸಲಾಗಿರುವ ಎಂಟು ಮಿಷನ್‌ಗಳಲ್ಲಿ ಒಂದಾಗಿದೆ.
ಈ ಮಿಷನ್ ಹವಾಮಾನ ಬದಲಾವಣೆಗೆ ಹೊಂದಾಣಿಕೆ ಮತ್ತು ಅದರ ಪರಿಣಾಮವನ್ನು ತಗ್ಗಿಸುವ ವಿಧಾನವನ್ನು ಅಳವಡಿಸಿಕೊಳ್ಳುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಸೂಚಿಸುತ್ತದೆ. ಇವು ಸುಸ್ಥಿರವಾಗಿ ಅರಣ್ಯಗಳನ್ನು ನಿರ್ವಹಿಸುವ ಮೂಲಕ ಅಲ್ಲಿನ ಕಾರ್ಬನ್ ಸಿಂಕ್ ಅಥವಾ ಇಂಗಾಲವನ್ನು ಹೀರಿಕೊಳ್ಳುವ ಗುಣವನ್ನು ಹೆಚ್ಚಿಸುವುದು, ಹವಾಮಾನ ಬದಲಾವಣೆಗೆ ಒಗ್ಗಿಕೊಳ್ಳಬಲ್ಲ ಪ್ರಬೇಧಗಳನ್ನು ಬೆಳೆಸುವುದು ಮತ್ತು ಅರಣ್ಯವನ್ನು ಆಶ್ರಯಿಸಿರುವ ಸಮುದಾಯಗಳನ್ನು ಒಳಗೊಳ್ಳುವುದನ್ನು ಒಳಗೊಂಡಿದೆ.

ಮಿಷನ್, ಅರಣ್ಯ ಸಂರಕ್ಷಣೆಯಲ್ಲಿ ಸ್ಥಳೀಯ ಸಮುದಾಯಗಳಿಗೆ ಸ್ಪಷ್ಟವಾದ ಪಾತ್ರ ಮತ್ತು ಅಧಿಕಾರ ವಿಕೇಂದ್ರೀಕರಣಕ್ಕೆ ಒತ್ತು ನೀಡುತ್ತದೆ. ಗ್ರಾಮ ಮಟ್ಟದಲ್ಲಿ ಕಾರ್ಯಯೋಜನೆಗಳ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಗ್ರಾಮ ಸಭೆಗೆ ಅಧಿಕಾರ ನೀಡುತ್ತದೆ. ಜಂಟಿ ಅರಣ್ಯ ನಿರ್ವಹಣಾ ಸಮಿತಿಗಳು, ವನ ಪಂಚಾಯತ್‌ಗಳು, ಜೀವವೈವಿಧ್ಯ ನಿರ್ವಹಣಾ ಸಮಿತಿಗಳು ಇತ್ಯಾದಿಗಳ ಅಡಿಯಲ್ಲಿ ಸ್ಥಾಪಿಸಲಾದ ಸಮಿತಿಗಳನ್ನು ಒಳಗೊಂಡಂತೆ ಗ್ರಾಮ ಸಭೆಯಿಂದ ಸ್ಥಾಪಿಸಲಾದ ಸಮಿತಿಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಅರಣ್ಯ ಆಡಳಿತದ ಅಧಿಕಾರದ ವಿಕೇಂದ್ರೀಕರಣದಲ್ಲಿ ಪ್ರಾಥಮಿಕ ಸಂಸ್ಥೆಗಳಾಗಿ ಬಲಪಡಿಸುತ್ತದೆ. ಹವಾಮಾನ ಬದಲಾವಣೆಯ ಪರಿಹಾರ ಕ್ರಮಗಳನ್ನು ಕಾರ್ಯಗತಗೊಳಿಸುವಲ್ಲಿ ಇದೇ ಮಾರ್ಗೋಪಾಯಗಳನ್ನು ವರದಿಯು ಪ್ರಸ್ತಾಪಿಸುತ್ತದೆ.
ವರದಿಯ ಸಾರಾಂಶ
ಕಸ್ತೂರಿ ರಂಗನ್ ತಮ್ಮ ವರದಿಯಲ್ಲಿ ಒಂದು ಅಧ್ಯಾಯವನ್ನು ಪಶ್ಚಿಮ ಘಟ್ಟಗಳ ಹವಾಮಾನ ಬದಲಾವಣೆಯ ಕುರಿತಾಗಿಯೇ ಹೇಳುತ್ತಾರೆ. ಕೃಷಿಯ ಮೇಲೆ ಅದರಲ್ಲೂ ಈ ಭಾಗದಲ್ಲಿ ಪ್ರಮುಖವಾಗಿರುವ ಭತ್ತ, ತೆಂಗು, ಕೋಕೋ ಮುಂತಾದ ಬೆಳೆಗಳ ಮೇಲೆ ಹವಾಮಾನ ಬದಲಾವಣೆ ಯಾವ ರೀತಿಯಾಗಿ ಪರಿಣಾಮ ಬೀರಬಲ್ಲುದು ಎಂಬುದನ್ನು ಅಂಕಿಅಂಶಗಳ ಸಮೇತ ನಮ್ಮ ಮುಂದಿಡುತ್ತಾರೆ. ಅರಣ್ಯನಾಶದಿಂದ ಹವಾಮಾನ ಬದಲಾವಣೆ ತರಬಹುದಾದ ಸಂಕಷ್ಟಗಳು, ಹೈನುಗಾರಿಕೆ ಮೇಲೆ ಇದು ಬೀರಬಹುದಾದ ಪರಿಣಾಮ, ಮಳೆಯ ಮಾದರಿಗಳಲ್ಲಿನ ವ್ಯತ್ಯಾಸ ಇವೆಲ್ಲವನ್ನೂ ವಿವರಿಸುತ್ತಾರೆ.
ಗಾಡ್ಗೀಳ್ ವರದಿಯಲ್ಲಿ ಹವಾಮಾನ ಬದಲಾವಣೆ ಕುರಿತ ಅಧ್ಯಯನಕ್ಕೆಂದೇ ಮೀಸಲಾದ ಅಧ್ಯಾಯವೇನಿಲ್ಲ. ಆದರೆ ವರದಿಯಲ್ಲಿ ಅಲ್ಲಲ್ಲಿ ಹವಾಮಾನ ಬದಲಾವಣೆಯ ಕುರಿತಾದ ಅಂಶಗಳನ್ನು ತುಸು ದೀರ್ಘವಾಗಿಯೇ ವಿವರಿಸುತ್ತಾರೆ. ಜತೆ ಜತೆಗೆ ಈಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸ್ಥಳೀಯ ಸಮುದಾಯ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಗಳನ್ನೊಳಗೊಂಡಂತೆ ಸ್ಥಳೀಯವಾಗಿಯೇ, ಸರ್ವಕಾಲಕ್ಕೂ ಸಲ್ಲಬಹುದಾದ ದೀರ್ಘಾವಧಿಯ ಪರಿಹಾರೋಪಾಯಗಳನ್ನು ಸೂಚಿಸುತ್ತಾರೆ.
ಗಾಡ್ಗೀಳ್ ವರದಿ ಹವಾಮಾನ ಬದಲಾವಣೆಯಂತಹ ಸಮಸ್ಯೆ ಜಾಗತಿಕ ಸಮಸ್ಯೆಯಾಗಿದ್ದರೂ, ತಳಮಟ್ಟದಿಂದಲೇ ಅದನ್ನು ಎದುರಿಸಲು ಹೇಗೆ ಕಾರ್ಯ ತತ್ಪರವಾಗಬೇಕು ಎಂಬುದಕ್ಕೆ ಸ್ಥಳೀಯವಾಗಿಯೇ ಪರಿಹಾರ ಸೂಚಿಸುತ್ತದೆ.
***
ಕಸ್ತೂರಿ ರಂಗನ್ ತಾನು ಸಮಿತಿಯ ನೇತೃತ್ವವನ್ನು ವಹಿಸಿಕೊಂಡ ಬಳಿಕ ಪ್ರಥಮವಾಗಿ ಗಾಡ್ಗೀಳ್ ವರದಿ ಯಾವ ಕಾರಣಕ್ಕೆ ವಿರೋಧವನ್ನು ಎದುರಿಸುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಅಲ್ಲಿ ಯಾವ ವಿಷಯದ ಬಗ್ಗೆ ವಿರೋಧ ವ್ಯಕ್ಯವಾಗುತ್ತಿತ್ತೋ ಆ ಅಂಶಗಳನ್ನು ಗಮನಿಸಿ ಅದರಲ್ಲಿ ಮಾರ್ಪಾಡುಗಳನ್ನು ತರಲು ಯತ್ನಿಸಿದರು. ಕೊನೇ ಪಕ್ಷ ಸರ್ಕಾರ ಕಸ್ತೂರಿ ರಂಗನ್ ವರದಿಯನ್ನಾದರೂ ಅನುಷ್ಠಾನಗೊಳಿಸಿದ್ದಿದ್ದರೆ ಪಶ್ಚಿಮ ಘಟ್ಟ ಶ್ರೇಣಿ ತುಸುವಾದರೂ ಸುಧಾರಿಸಿಕೊಳ್ಳುತ್ತಿತ್ತೋ ಏನೋ, ಕೊಡಗು ಹಾಗು ವಯ್‌ನಾಡು ದುರಂತಗಳಾದರೂ ತಪ್ಪುತ್ತಿತ್ತೋ ಏನೋ ಆದರೆ ಸರ್ಕಾರ ಈ ವರದಿಗಳನ್ನು ಅನುಷ್ಠಾನಕ್ಕೆ ತರಲು ಇನ್ನೂ ಮೀನಮೇಷ ಎಣಿಸುತ್ತಿದೆ. ಪಶ್ಚಿಮ ಘಟ್ಟದ ಸೆರಗಿನಲ್ಲಿ ಜಲಪ್ರಳಯದಂತಹ ದುರಂತಗಳು ಸಂಭವಸಿದ ಮೇಲೆ ಈ ಎರಡೂ ವರದಿಗಳು ಮತ್ತೆ ಮುನ್ನಲೆಗೆ ಬಂದರೂ, ಸರಕಾರ ಅದನ್ನು ನಿರ್ಲಕ್ಷಿಸುತ್ತಿದೆ. ಆದರೆ ಈ ನಿರ್ಲಕ್ಷ್ಯಕ್ಕೆ ಪ್ರಕೃತಿ ನಮ್ಮನ್ನು ದಂಡ ತೆರುವಂತೆ ಮಾಡುವ ದಿನ ದೂರವಿಲ್ಲ.

ಡಾ ಶ್ರೀನಿಧಿ ಅಡಿಗ
ಹುಟ್ಟೂರು ಉಡುಪಿ. ಪ್ರಸ್ತುತ ಮೈಸೂರು ನಿವಾಸಿ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಎಂ.ಎ., ʻಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪರಿಸರ ಚಳವಳಿಗಳು ಮತ್ತು ಮುದ್ರಣ ಮಾಧ್ಯಮʼ ಕುರಿತಂತೆ ಡಾಕ್ಟರೇಟ್ ಮಾಡಿದ್ದಾರೆ. ವಿವಿಧ ಸಂಸ್ಥೆಗಳಲ್ಲಿ ಸ್ವತಂತ್ರ ಮಾಧ್ಯಮ ಸಮಾಲೋಚಕಿಯಾಗಿದ್ದಾರೆ